ಮಂಗಳವಾರ, ಜೂನ್ 15, 2021
27 °C

ಜಿಗಜಿಣಗಿ ಕುಟುಂಬದ ಜಮೀನು 150 ಎಕರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಮೀಸಲು ಲೋಕ­ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರದ್ದು ‘ಜಮೀನ್ದಾರಿ’ ಕುಟುಂಬ. ರಮೇಶ ಹಾಗೂ ಪುತ್ರರಾದ ವಿನೋದ ಮತ್ತು ಆನಂದ ಹೆಸರಿನಲ್ಲಿ 150.32 ಎಕರೆ ಜಮೀನು ಇದೆ.



ರಮೇಶ ಅವರು ಬೆಂಗಳೂರು ಉತ್ತರ ತಾಲ್ಲೂಕು ಶಾಮರಾಜ­ಪುರ­ದಲ್ಲಿ 5 ಎಕರೆ ಮತ್ತು ವಿಜಾಪುರ ತಾಲ್ಲೂಕು ಭೂತನಾಳ, ಅರಕೇರಿ, ಇಂಡಿ ತಾಲ್ಲೂಕಿನ ಅಥರ್ಗಾಗಳಲ್ಲಿ ಒಟ್ಟು 50.25 ಎಕರೆ ಹೀಗೆ ಒಟ್ಟಾರೆ 55.25 ಎಕರೆ ಕೃಷಿ ಜಮೀನು ಹೊಂದಿ­ದ್ದಾರೆ. ಅವರ ಪುತ್ರ ವಿನೋದ 55.37 ಎಕರೆ ಮತ್ತು ಆನಂದ 39.10 ಎಕರೆ ಕೃಷಿ ಭೂಮಿಯ ಒಡೆಯರು. ಈ ಎಲ್ಲ ಕೃಷಿ ಜಮೀನುಗಳ ಮೌಲ್ಯ ₨1.85 ಕೋಟಿ ಎಂದು ಉಲ್ಲೇಖಿ­ಸಿ­ದ್ದಾರೆ.



ನಾಮಪತ್ರದ ಜೊತೆ  ಸಲ್ಲಿಸಿರುವ ಪ್ರಮಾಣಪತ್ರದಲ್ಲಿ  ಮಾಹಿತಿ ನೀಡಿ­ದ್ದಾರೆ. ರಮೇಶ ಜಿಗಜಿಣಗಿ ಉದ್ದಿಮೆ­ದಾ­ರರೂ ಹೌದು. ಹಂಪಿ ಹೆರಿಟೇಜ್‌ ವೈನ್‌ ತಯಾರಿಕಾ ಕಾರ್ಖಾನೆಯಲ್ಲಿ ₨2.31 ಕೋಟಿ ಹೂಡಿಕೆ ಮಾಡಿದ್ದಾರೆ. ಬೆಂಗ­ಳೂ­ರಿನ ಆರ್‌.ಟಿ. ನಗರ ಮತ್ತು ಗಂಗೇನ­ಹಳ್ಳಿಯಲ್ಲಿ ತಲಾ ಒಂದು ಮನೆ, ಸಂಜಯ ನಗರದಲ್ಲಿ ಎರಡು ಫ್ಲ್ಯಾಟ್‌, ವಿಜಾಪುರದಲ್ಲಿ ಎರಡು ನಿವೇಶನ ಹೊಂದಿ­­ದ್ದಾರೆ. ಆದರೆ, ಅವುಗಳ ವಿಸ್ತೀರ್ಣ ಎಷ್ಟು ಎಂಬುದು ಗೊತ್ತಿಲ್ಲ ಎಂದು ನಮೂದಿಸಿದ್ದಾರೆ. ಇವರ ವಾರ್ಷಿಕ ಸಂಪಾದನೆ ₨24.73 ಲಕ್ಷ.



ತಂದೆಗೆ ಹೋಲಿಸಿದರೆ ಮಕ್ಕಳೇ ಬಡವರು!: ರಮೇಶ ಒಟ್ಟಾರೆ ₨5.43 ಕೋಟಿ ಆಸ್ತಿ ಹೊಂದಿದ್ದರೆ ಅವರ ಇಬ್ಬರ ಮಕ್ಕಳ ಆಸ್ತಿಯ ಮೌಲ್ಯ ₨1.58 ಕೋಟಿ. ತಂದೆಯ ಬಳಿ ₨2.48 ಲಕ್ಷ ಮೌಲ್ಯದ 7 ತೊಲ ಚಿನ್ನ, ₨1.16 ಲಕ್ಷ ಮೌಲ್ಯದ ಎರಡು ಕೆ.ಜಿ. ಬೆಳ್ಳಿ ಇದ್ದರೆ, ಮಕ್ಕಳಲ್ಲಿ ಯಾವುದೇ ಆಭರಣ ಇಲ್ಲ. ತಂದೆ ಇತರರಿಗೆ ₨51.07 ಲಕ್ಷ ಸಾಲ ನೀಡಿದ್ದಾರೆ.  ₨37.05 ಲಕ್ಷ ಸಾಲ­ವನ್ನೂ ಮಾಡಿದ್ದಾರೆ. ಆದರೆ, ಮಕ್ಕಳ ಹೆಸರಿನಲ್ಲಿ ಸಾಲ ಇಲ್ಲ.



ಈ ಕುಟುಂಬದ ಬಳಿ ಒಂದು ಜೀಪು, ಎರಡು ಕಾರು, ಒಂದು ಸ್ಕೂಟರ್‌ ಹೀಗೆ ₨19.12 ಲಕ್ಷ ಮೌಲ್ಯದ ವಾಹನಗಳಿವೆ.

ಬಿ.ಎ. ಪದವೀಧರರಾಗಿದ್ದರೂ ರಮೇಶ ಜಿಗಜಿಣಗಿ ಅವರು ಇ–ಮೇಲ್‌ ಐಡಿ ಹೊಂದಿಲ್ಲ! ಯಾವುದೇ ಜೀವ ವಿಮೆ ಮಾಡಿಸಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.