ಮಂಗಳವಾರ, ಜೂನ್ 15, 2021
25 °C

ಜಿಲ್ಲೆಯಾದ್ಯಂತ ಸಂಭ್ರಮದ ಹೋಳಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಒಂದೆಡೆ ಚುನಾವಣೆ, ಇನ್ನೊಂದೆಡೆ ಪರೀಕ್ಷೆಯ ಗುಂಗು. ಇದೆಲ್ಲದರ ಮಧ್ಯೆ ಸುಡುವ ಬಿಸಿಲು. ಸೋಮವಾರ ಮಾತ್ರ ನಗರ­ದಲ್ಲಿ ಇದಾವುದೂ ಲೆಕ್ಕಕ್ಕೇ ಇರಲಿಲ್ಲ. ಚಿಣ್ಣರು, ಹಿರಿಯರು, ಮಹಿಳೆ­ಯರು ಸೇರಿದಂತೆ ಎಲ್ಲ ವರ್ಗದ ಜನರೂ ಬಣ್ಣದಲ್ಲಿ ಮಿಂದೆದ್ದರು. ಪರಸ್ಪರ ಬಣ್ಣ ಎರಚಿ ಹಬ್ಬದ ಸಂಭ್ರಮವನ್ನು ಸವಿದರು.ಬಿಸಿಲಿನ ಧಗೆ ಶುರವಾಗಿರುವ ಸಂದರ್ಭ­ದಲ್ಲಿ ಬರುವ ಹೋಳಿ ಹಬ್ಬ, ನಗರದಾದ್ಯಂತ ತಂಪಾದ ವಾತಾವರಣ ಸೃಷ್ಟಿಸಿತು. ಹಿರಿ­ಯರು, ಕಿರಿಯರು ಎನ್ನದೇ ಎಲ್ಲರೂ ಬಣ್ಣಗಳ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಬೆಳಿಗ್ಗೆಯಿಂದಲೇ ಯುವಕರು, ಮಕ್ಕಳು, ಹಿರಿಯರು, ಚಿಕ್ಕಮಕ್ಕಳು ಓಕುಳಿಯಾಟದಲ್ಲಿ ಮುಳುಗಿದ್ದರು. ವಿಶಿಷ್ಟವಾಗಿರುವ ಯಾದವ­ಗಿರಿಯ ಹೋಳಿ ಹಬ್ಬದ ಸಂಭ್ರಮ ಸೋಮ­ವಾರ ಇಮ್ಮಡಿಸುವಂತಾಗಿತ್ತು. ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಣ್ಣದ ಹೊಳೆಯೇ ಹರಿಯಿತು.ವಿಶಿಷ್ಟ ಹೋಳಿ: ನಗರದಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವುದು ಸಂಪ್ರದಾಯ. ಬೆಳಿಗ್ಗೆ ಇಲ್ಲಿಯ ನಗರ ಪೊಲೀಸ್‌ ಠಾಣೆಯಲ್ಲಿ ಭಾವೈಕ್ಯತಾ ಸಮಿತಿ ವತಿಯಿಂದ ನಡೆಯುವ ಸೌಹಾರ್ದ ಹೋಳಿ ಹಬ್ಬವು, ಬಣ್ಣದಾಟಕ್ಕೆ ಹಸಿರು ನಿಶಾನೆ ತೋರುತ್ತದೆ. ಸೋಮವಾರ ಬೆಳಿಗ್ಗೆ ಕೂಡ ನಗರದ ಪೊಲೀಸ್‌ ಠಾಣೆಯಲ್ಲಿ ಸಹಾಯಕ ಆಯುಕ್ತ ಬಿ.ಪಿ.ವಿಜಯ, ಡಿವೈಎಸ್ಪಿ ಬಸರಿಗಿಡ ಹಾಗೂ ನಗರದ ಪ್ರಮುಖ ನಾಗರಿಕರು ಪಾಲ್ಗೊಂಡಿದ್ದ ಸೌಹಾರ್ದ ಹೋಳಿಯಲ್ಲಿ ಎಲ್ಲ ವರ್ಗದ ಜನರೂ ಪಾಲ್ಗೊಂಡಿದ್ದರು. ವಿವಿಧ ಸಮುದಾಯಗಳ ಪ್ರಮುಖರು, ನಗರದ ಜನರು, ಯುವಕರು, ಪರಸ್ಪರ ಬಣ್ಣ ಹಚ್ಚಿ, ಹಬ್ಬದ ಸಂಭ್ರಮವನ್ನು ವಿನಿಮಯ ಮಾಡಿಕೊಂಡರು. ನಂತರ ಹಾಲು, ತಿಂಡಿ ಸೇವಿಸಿ, ಬಣ್ಣದಾಟವನ್ನು ಆರಂಭಿಸಿದರು.ಗಾಂಧಿ ವೃತ್ತದಲ್ಲಿ ಯುವಕರ ಗುಂಪು ಕೇಕೇ ಹಾಕುತ್ತ, ಹಲಿಗೆ ಬಾರಿಸಿ, ಕುಣಿದು ಕುಪ್ಪಳಿಸಿದರು. ಸ್ಟೇಷನ್‌ ಬಜಾರ್‌ನಲ್ಲಿ ವಿನಾಯಕ ಸೇವಾ ಸಮಿತಿ, ಹಿಂದೂ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯ­ಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಬಣ್ಣ ಎರಚಿ ಸಂಭ್ರಮಿಸಿದರು.ವಿಶಿಷ್ಟ ಬಂಡಿಯ ಮೆರವಣಿಗೆ: ನಗರದ ಸಂಪ್ರದಾಯದಂತೆ ಮಧ್ಯಾಹ್ನ 12 ಗಂಟೆಯ ನಂತರ ಬಣ್ಣದ ಬಂಡಿಯ ಮೆರವಣಿಗೆ ಆರಂಭವಾಯಿತು. ಮೈಲಾಪುರ ಅಗಸಿ ಹಾಗೂ ಸ್ಟೇಷನ್‌ನಿಂದ ಎರಡು ಪ್ರತ್ಯೇಕ ಬಂಡಿಗಳ ಮೆರವಣಿಗೆ ನಡೆಯಿತು. ರತಿ ಕಾಮಣ್ಣರ ಮೂರ್ತಿಗಳನ್ನು ಹೊತ್ತ ಬಂಡಿಗಳಲ್ಲಿ ಬಣ್ಣದ ಬ್ಯಾರೆಲ್‌ಗಳನ್ನು ಇರಿಸಲಾಗುತ್ತಿದ್ದು, ಮೆರವಣಿಗೆಯುದ್ದಕ್ಕೂ ಅಕ್ಕಪಕ್ಕದ ಜನರಿಗೆ ಹೋಳಿ ಹಬ್ಬದ ಕೊನೆಯ ಬಣ್ಣವನ್ನು ಎರಚಲಾಗುತ್ತದೆ. ವಡಗೇರಾ: ಗ್ರಾಮದ ಬಸವೇಶ್ವರ ವೃತ್ತದಲ್ಲಿ ಮುಸ್ಲಿಂ ಬಾಂಧವರು ಹಾಗೂ ಹಿಂದುಗಳು ಸೇರಿ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.ಹೋಳಿ ಹಬ್ಬದ ಹಾಡುಗಳನ್ನು ಹಾಡುತ್ತಾ, ಪರಸ್ಪರ ಬಣ್ಣವನ್ನು ಎರಚಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಭಾನುವಾರ ರಾತ್ರಿ ಬಸವೇಶ್ವರ ವೃತ್ತದಲ್ಲಿ ಗ್ರಾಮದ ಎಲ್ಲ ಪ್ರಮುಖರು ಸೇರಿ ಕಾಮದಹನವನ್ನು ಮಾಡಿ­ದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ, ಫಕೀರ್‌ ಅಹ್ಮದ್‌, ಸಂಗಮೇಶ, ವಿಶ್ವನಾಥ, ಕೃಷ್ಣಾ ಟೇಲರ್‌, ಮಲ್ಲು ಬೊಜ್ಜಿ, ಮಹ್ಮದ್‌ ಖುರೇಸಿ, ವಿಶ್ವನಾಥ, ಮಲ್ಲು ಮಡಿವಾಳ, ರಾಮು, ಮೆಹಬೂಬ್‌, ಸಿದ್ದು ಡಿ., ಜಗದೀಶ, ಮೆಹಬೂಬ್‌ ಅರಕೇರಿ ಹಾಗೂ ಗ್ರಾಮದ ಯುವಕರು ಪಾಲ್ಗೊಂಡಿದ್ದರು.ಸೈದಾಪುರ: ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡರು. ಪುಟಾಣಿ ಮಕ್ಕಳು ತಾವೇನೂ ಕಮ್ಮಿಯಿಲ್ಲ ಎನ್ನುವ ರೀತಿಯಲ್ಲಿ ಬಣ್ಣದ ಓಕುಳಿಯಲ್ಲಿ ಮಿಂದೆದ್ದರು.

ಮಾರುಕಟ್ಟೆ ಬಂದ್ ಹಿನ್ನೆಲೆಯಲ್ಲಿ ಭಾನುವಾರ ಹಾಗೂ ಹೋಳಿ ಹಬ್ಬದ ಅಂಗವಾಗಿ ಸೋಮವಾರ ಈ ಎರಡೂ ದಿನ ಸೈದಾಪುರ ಪಟ್ಟಣದಲ್ಲಿ ಅಘೋಷಿತ ಬಂದ್ ಆಚರಿಸಲಾಯಿತು. ಇದರಿಂದಾಗಿ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿತ್ತು.ಖಾನಾಪುರ, ನಾಯ್ಕಲ್‌: ಸಮೀಪದ ಖಾನಾಪುರ ಗ್ರಾಮದಲ್ಲಿ ಯುವಕರು ಹೋಳಿ ಹಬ್ಬವನ್ನು ಬಣ್ಣದಾಟ ಆಡುವ ಮೂಲಕ ಸಂಭ್ರಮದಿಂದ ಆಚರಿಸಿದರು. ಖಾನಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಸಾಹುಕಾರ, ಮಾಜಿ ಅಧ್ಯಕ್ಷ ಗೋವಿಂದಪ್ಪ ಕೊಂಚೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ರಂಗಪ್ಪ ಕೊಂಚೆಟ್ಟಿ, ಪರಶುರಾಮ ಪದ್ಮಾಕರ್, ಪಾಂಡುರಂಗ ಪೂಜಾರಿ, ಮರಿಲಿಂಗಪ್ಪ ಕೊಂಚೆಟ್ಟಿ, ನೀಲಕಂಠ ಅಂಗಡಿ, ಅಬ್ಬಣ್ಣ ಉಳ್ಳೆಸುಗೂರ, ರಮೇಶ, ಬಸವ­ರಾಜ ಹೂಗಾರ, ರಾಮು ಹೂಗಾರ, ಅರುಣ ಕುಮಾರ ಯಲ್ಹೇರಿ, ರೆಡ್ಡಿ ಗಡ್ಡೆಸುಗೂರ, ಹುಲಗಪ್ಪ ಕುರೋಳಿ, ಮರಿಲಿಂಗ ದಿಡ್ಡಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ನಾಯ್ಕಲ್ ಗ್ರಾಮದಲ್ಲಿ ಹೋಳಿ ಹಬ್ಬ­ವನ್ನು ಸಂಭ್ರಮದಿಂದ ಆಚರಿಸಲಾಯಿತು.ಹುಣಸಗಿ ವರದಿ

ವಜ್ಜಲ ಗ್ರಾಮದಲ್ಲಿ ಚಿಣ್ಣರು ಹೋಳಿ ಹಬ್ಬವನ್ನು ಸಂಭ್ರಮ ಸಡಗರಿದಂದ ಆಚರಿಸಿದರು. ಚಿಕ್ಕ ಮಕ್ಕಳು ಬಣ್ಣದ ಆಟದಲ್ಲಿ ತೊಡಗಿ ಸಂಭ್ರಮಿಸಿದರು. ಕೆಲವು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಕಾಮ­ದಹನ ಮಾಡಿ ರಾತ್ರಿಯಿಂದಲೆ ಬಣ್ಣದ ಆಟದಲ್ಲಿ ತೊಡಗಿರುವುದು ಕಂಡು ಬಂತು.ಕೆಂಭಾವಿ ವರದಿ

ಹುಣ್ಣಿಮೆಯ ದಿನವಾದ ಭಾನುವಾರ ರಾತ್ರಿ ಉತ್ತರಾದಿ ಮಠದ ಬೀದಿಯಲ್ಲಿ ನಡೆದ ಕಾಮದಹನ ಎಲ್ಲರ ಮನಸೂರೆಗೊಂಡಿತು. ಸೋಮವಾರ ಬೆಳಿಗ್ಗೆಯಿಂದಲೇ ಯುವ­ಕರು, ಮಕ್ಕಳು, ಹಿರಿಯರು ಗುಂಪುಗುಂಪಾಗಿ ಬಣ್ಣದಾಟದಲ್ಲಿ ನಿರತರಾಗಿದ್ದರು.

ಉತ್ತರಾದಿ ಮಠ ಬೀದಿ, ಸಂಜೀವ ನಗರ, ಬಜಾರ್‌, ಬಸವೇಶ್ವರ ವೃತ್ತ, ಸೊನ್ನದ ಬಡಾವಣೆ, ಹನುಮಾನ ಚೌಕ್‌, ಯುಕೆಪಿ ಕ್ಯಾಂಪ್, ಹಿಲ್ಟಾಪ್ ಕಾಲೋನಿ ಸೇರಿದಂತೆ ಹಲವೆಡೆ ಯುವಕರ ಗುಂಪು ಕೇಕೇ ಹಾಕುತ್ತಾ ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು. ರಸ್ತೆ ಬದಿಯಲ್ಲಿ ನಿಂತು ಹೋಗುವ ಜನರಿಗೆ ಬಣ್ಣ ಎರಚಿ ಸಂತಸಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.