ಬುಧವಾರ, ಜನವರಿ 22, 2020
20 °C
ಉಷ್ಣಾಂಶ ಕನಿಷ್ಠ 9.7 ಡಿಗ್ರಿ ಸೆೆಲ್ಸಿಯಸ್ ದಾಖಲು

ಜೋಳ,ಕಡಲೆ, ಹತ್ತಿಗೆ ‘ಚಳಿ’ವರ

ರಾಮರಡ್ಡಿ ಅಳವಂಡಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಳ,ಕಡಲೆ, ಹತ್ತಿಗೆ ‘ಚಳಿ’ವರ

ರಾಯಚೂರು: ರಾಜ್ಯದಲ್ಲಿ ಗರಿಷ್ಠ ತಾಪ­ಮಾನ ದಾಖಲಾಗುವ ರಾಯಚೂರು ಜಿಲ್ಲೆಯಲ್ಲಿ ಈ ವರ್ಷ ಚಳಿಯೂ ಹೆಚ್ಚಿನ ಪ್ರಮಾಣದಲ್ಲಿದೆ.

ಮೂರು ವರ್ಷದ ಹಿಂದೆ ಇದೇ ರೀತಿಯ ಚಳಿಗೆ ಜಿಲ್ಲೆಯ ಜನ ನಡು­ಗಿದ್ದರು. ಈಗ ನಾಲ್ಕಾರು ದಿನದಿಂದ ಮತ್ತೆ ಚಳಿ ಶುರುವಾಗಿದೆ.ಆದರೆ, ಜಿಲ್ಲೆಯ ಪ್ರಮುಖ ಬೆಳೆ ಜೋಳ, ಕಡಲೆ, ಕುಸುಬಿ  ‘ಚಳಿ’ಗೆ ನಳ ನಳಿಸುತ್ತಿವೆ. ಅಷ್ಟೇ ಅಲ್ಲ, ಮುಂಗಡವಾಗಿ ಬೀಜ ಊರಿದ್ದ ಹತ್ತಿ ಬೆಳೆಗಾರರು ಮೊದಲ ಹಂತದ ಹತ್ತಿ ಬಿಡಿಸಿದ್ದಾರೆ. ಇನ್ನೇನು ಅಲ್ಪಸ್ವಲ್ಪ ಬೆಳೆ ಅಷ್ಟೇ ಎಂದು­ಕೊಂಡಿದ್ದ ರೈತರು ಈಗ ಖುಷಿಪಡುತ್ತಿ­ದ್ದಾರೆ. ಕಾರಣ, ಕೊರೆಯುವ ಚಳಿಗೆ ಹತ್ತಿ ಗಿಡದಲ್ಲಿ ತಲಾ ಒಂದು ಗಿಡದಲ್ಲಿ ಕನಿಷ್ಠ 30ರಿಂದ 40 ಕಾಯಿ ಕಟ್ಟಿವೆಯಂತೆ. ಹೀಗೆ ಚಳಿ ಜನತೆಗೆ ನಡುಕು ತಂದಿದ್ದರೆ, ಬೆಳೆಗೆ ವರವಾಗಿ ಪರಿಣಮಿಸಿದೆ. ಸಂಜೆ 4 ಗಂಟೆಯಿಂದಲೇ ಪ್ರಾರಂಭವಾಗುವ ಚಳಿ ಬೆಳಿಗ್ಗೆ 9 ಗಂಟೆಯವರೆಗೂ ಕಾಣಿಸಿಕೊಳ್ಳುತ್ತದೆ.ಕನಿಷ್ಠ ತಾಪಮಾನ

ರಾಯಚೂರು ಜಿಲ್ಲೆಯಲ್ಲಿ ಡಿಸೆಂಬರ್ 7ರಂದು 11.4 ಡಿಗ್ರಿ ಸೆಲ್ಸಿಯಸ್, 8ರಂದು 11.4 ಡಿಗ್ರಿ ಸೆಲ್ಸಿಯಸ್‌, 9 ರಂದು 11.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮಂಗಳವಾರ ಅಂದರೆ ಡಿಸೆಂಬರ್ 10ರಂದು ಕನಿಷ್ಠ ತಾಪಮಾನ 9.7 ಡಿಗ್ರಿ ಸೆಲ್ಸಿಯಸ್‌ ಇಳಿಕೆಯಾಗಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ತಜ್ಞ ಡಾ.ಮಹದೇವರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರುಹೈದಾರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿಯೇ ಅತ್ಯಂತ ಕನಿಷ್ಠ ತಾಪಮಾನ 9.7 ಡಿಗ್ರಿ ಸೆಲ್ಸಿಯಸ್ ರಾಯಚೂರು ಜಿಲ್ಲೆಯಲ್ಲಿ ಈ ದಿನ ದಾಖಲಾಗಿದೆ ಎಂದು ತಿಳಿಸಿದರು.ಇದೇ ರೀತಿ ಕನಿಷ್ಠ ತಾಪಮಾನ ಇನ್ನೂ ಕೆಲ ದಿನ ಇರುತ್ತದೆ. ಕನಿಷ್ಠ ತಾಪಮಾನ 11 ಅಥವಾ 12 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಸಮಸ್ಯೆ ಇಲ್ಲ. ಜೋಳ, ಕಡಲೆ, ಕುಸುಬೆ ಬೆಳೆಗೆ ಈ ರೀತಿ ಚಳಿ ಉತ್ತಮ ಫಸಲು ಬರಲು ಉಪಯುಕ್ತ ಆಗುತ್ತದೆ. ಈಗ 9.7 ನಷ್ಟು ದಾಖಲಾಗಿದೆ. ಇದಕ್ಕಿಂತ ಕನಿಷ್ಠ ಪ್ರಮಾಣದ ತಾಪಮಾನ ದಾಖಲಾದರೆ ಮಾವಿನ ಗಿಡದಲ್ಲಿ ಬಿಟ್ಟ ಹೂವು  ಉದುರುತ್ತವೆ. ಇದರಿಂದ ನಷ್ಟ ಆಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.ರೈತನ ಹೇಳಿಕೆ:

ಚಳಿ ಹೆಚ್ಚಾಗಿ ಬೆಳಿಗ್ಗೆ ಇಬ್ಬನಿಯೂ ಜಾಸ್ತಿ ಆಗಿರುವುದು ಜೋಳ, ಕಡಲೆ, ಹತ್ತಿ ಬೆಳೆಗೆ ಒಳ್ಳೆಯದಾಗಿದೆ. ಬೆಳಿಗ್ಗೆ ಹೊಲದಲ್ಲಿ ಸಂಚರಿಸಿದರೆ ಇಬ್ಬನಿಯ ನೀರಿಗೆ ತೋಯ್ದಂತಾಗುತ್ತದೆ. ಒಂದು ರೀತಿ ತುಂತುರು ಮಳೆ ಇದ್ದಂತೆ. ಇದೇ ಚಳಿ ಕೆಲ ದಿನ ಇದ್ದರೆ ಬೆಳೆ ಉತ್ತಮವಾಗಿ ಬರುತ್ತದೆ. ಹತ್ತಿ ಗಿಡದಲ್ಲಿ ಈಗಾಗಲೇ ಒಂದು ಬಾರಿ ಹತ್ತಿ ಬಿಡಿಸಿದ್ದು, ಮತ್ತೆ ಅದೇ ಗಿಡದಲ್ಲಿ ಚಳಿಗೆ ಕನಿಷ್ಠ 30 ಕಾಯಿ ಕಟ್ಟುತ್ತಿವೆ. ಜೋಳಕ್ಕೆ ಧಾರಣೆ ಕಡಿಮೆ ಎಂಬ ಕಾರಣಕ್ಕೆ ಈಚೆಗೆ ಬೆಳೆಯುವುದು ಕಡಿಮೆ ಆಗಿದೆ.  ಈ ವರ್ಷ ಚಳಿಗೆ ಜೋಳ ಒಳ್ಳೆಯ ರೀತಿ ಬೆಳೆದರೆ ಹೆಚ್ಚು ಬೆಳೆ ಜತೆಗೆ ದನಕರುಗಳಿಗೆ ಮೇವೂ ಆಗುತ್ತದೆ ಎಂದು ಯಕ್ಲಾಸಪುರ ಗ್ರಾಮದ ರೈತ ನಬೀಸಾಬ್ ಬಡಿಗೇರ ಹೇಳಿದರು.

ಪ್ರತಿಕ್ರಿಯಿಸಿ (+)