ಶನಿವಾರ, ಜೂನ್ 19, 2021
27 °C

ಟರ್ಫ್ ಕ್ಲಬ್‌ನಲ್ಲಿ ಚಿನ್ನದ ಓಟ

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಟಕ್... ಟಕ್... ಟಕ್... ಎಂದು ಹಸಿರು ಹುಲ್ಲುಹಾಸಿನ ಮೇಲೆ ಶರವೇಗದಲ್ಲಿ ಸಾಗುವ ಕುದುರೆಗಳು ಏಕಕಾಲದಲ್ಲಿ ಲಕ್ಷಾಂತರ ಜನರ ಹೃದಯ ಬಡಿತದ ಏರಿಳಿತಕ್ಕೆ ಕಾರಣವಾಗಬಲ್ಲವು. ಅಂತಹ ಶಕ್ತಿ ಅಶ್ವಗಳಿಗಿದೆ. ರೇಸ್‌ನಲ್ಲಿ ತನ್ನ ನೆಚ್ಚಿನ ಕುದುರೆ ಮೇಲೆ ಲಕ್ಷಾಂತರ ಹಣ ಹೂಡುವ ಜನರೂ ಇದ್ದಾರೆ. ಜಂಟಲ್‌ಮನ್ ಸ್ಫೋರ್ಟ್ಸ್ ಎನಿಸಿಕೊಂಡಿರುವ ಹಾರ್ಸ್‌ರೇಸ್‌ನಲ್ಲಿ ಹಣದ ಹೊಳೆಯೇ ಹರಿಯುತ್ತದೆ.ಬೆಂಗಳೂರು ರೇಸ್‌ಪ್ರಿಯರಿಗೆ ವಾರಾಂತ್ಯದಲ್ಲಿ ಸುಗ್ಗಿ. ಯಾಕಂದ್ರೆ ಬೆಂಗಳೂರು ಟರ್ಫ್ ಕ್ಲಬ್‌ಗೆ ಈಗ 50 ವರ್ಷ ತುಂಬಿದೆ. ಇದು ತನ್ನ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಕೊಳ್ಳಬೇಕು ಎಂದು ಮಾರ್ಚ್ 3 ಮತ್ತು 4ರಂದು `ದಿ ಗೋಲ್ಡನ್ ಜ್ಯೂಬಿಲಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್~ ಆಯೋಜಿಸಿದೆ. ಗೆದ್ದ ಕುದುರೆಗೆ ಶಹಬ್ಬಾಸ್‌ಗಿರಿಯಾದರೆ, ಕುದುರೆ ಜಾಕಿ, ಮಾಲೀಕ ಹಾಗೂ ಆ ಕುದುರೆ ಮೇಲೆ ಹಣ ಹೂಡಿದ ಜನರಿಗೆ ಹಣದ ಸುರಿಮಳೆ. ಅಂದಹಾಗೆ ಖೇಣಿ ಒಡೆತನದ ಎಕೆಕೆ ಎಂಟರ್ಟೈನ್‌ಮೆಂಟ್ ಸಂಸ್ಥೆ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್ ಆಯೋಜಿಸಿದೆ.ಇನ್ವಿಟೇಶನ್ ಕಪ್‌ನಲ್ಲಿ ಭಾಗವಹಿಸಲಿರುವ ಕುದುರೆಗಳು ಯಾವ ಗೇಟ್‌ನಿಂದ ಸ್ಪರ್ಧೆಗಿಳಿಯಬೇಕು ಎಂಬುದನ್ನು ಡ್ರಾ ಮೂಲಕ ಆಯ್ಕೆ ಮಾಡುವ ಸಲುವಾಗಿ ಟರ್ಫ್ ಕ್ಲಬ್‌ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ಯಾಂಬ್ಲಿಂಗ್ ಕ್ರೀಡೆಗೆ ಗ್ಲಾಮರ್ ತುಂಬಿದ್ದು ಕಿಚ್ಚ ಸುದೀಪ್ ಮತ್ತು ನಟಿ ಮಾಧುರಿ ಭಟ್ಟಾಚಾರ್ಯ.`ನನಗೆ ರೇಸ್ ಕಿಂಚಿತ್ತೂ ಗೊತ್ತಿಲ್ಲ. ನಾನು ಯಾವತ್ತು ರೇಸ್‌ಕೋರ್ಸ್‌ಗೆ ಕಾಲಿಟ್ಟಿಲ್ಲ. ರೇಸ್ ಇಷ್ಟಪಡುವ ಜನ ನಮ್ಮ ನಡುವೆ ತುಂಬಾ ಇದ್ದಾರೆ. ನಾನು ಕೂಡ ಒಮ್ಮಮ್ಮೆ ಟೀವಿಯಲ್ಲಿ ರೇಸ್ ನೋಡುತ್ತಿರುತ್ತೇನೆ. ಹಾರ್ಸ್ ರೇಸ್ ಅಂದ್ರೆ ಕೇವಲ ಗ್ಯಾಂಬ್ಲಿಂಗ್ ಅಲ್ಲ. ನನ್ನ ಪ್ರಕಾರ ಅದೊಂದು ಜಂಟಲ್ ಮನ್ ಸ್ಫೋರ್ಟ್ಸ್~ ಎಂದರು ಸುದೀಪ್.ಖೇಣಿ ಕ್ರೀಡಾ ಪ್ರೋತ್ಸಾಹಕರು. ಸಿಸಿಎಲ್‌ನಲ್ಲಿ ಕ್ರಿಕೆಟ್, ಡಬ್ಲ್ಯೂಎಸ್‌ಎಚ್‌ನಲ್ಲಿ ಹಾಕಿ ಈಗ ಇನ್ವಿಟೇಷನ್ ಕಪ್‌ನಲ್ಲಿ ರೇಸ್ ಪ್ರೋತ್ಸಾಹಿಸಲು ಮುಂದಾಗಿದ್ದಾರೆ.  ಖೇಣಿ ಒಡೆತನದ ಕರ್ನಾಟಕ ಬುಲ್ಡೋಝರ್ಸ್‌ ತಂಡದವರಾದ್ದರಿಂದ ನಾನು ಇಲ್ಲಿಗೆ ಬಂದೆ. ರೇಸ್ ನಡೆಯುವ ದಿನ ನಮ್ಮ ಇಡೀ ತಂಡ ಇಲ್ಲಿರುತ್ತದೆ. ಖೇಣಿ ಮುಂದೆ ಟರ್ಫ್ ಕ್ಲಬ್ ಕಟ್ಟುವ ಯೋಚನೆ ಕೂಡ ಇರಿಸಿಕೊಂಡಿದ್ದಾರೆ. ಹಾಗಾಗಿ ಅವರು ಟರ್ಫ್ ಕ್ಲಬ್‌ಗೆ ಮಾಗಡಿ ರಸ್ತೆ, ಕೆಂಗೇರಿ ಹಾಗೂ ಬಿಡದಿ ಬಳಿಯಲ್ಲಿ ಜಾಗ ಕೂಡ ನೋಡಿ ಟರ್ಫ್ ಕ್ಲಬ್‌ನೊಂದಿಗೆ ಮಾತನಾಡಿದ್ದಾರೆ. ಇದು ರೇಸ್‌ಗೊಂದು ಹೊಸತನದ ಸ್ಪರ್ಶ ನೀಡಲಿದೆ~ ಎಂದರು ಸುದೀಪ್.ಆನಂತರ ಕುದುರೆಗಳು ಯಾವ ಗೇಟ್‌ನಿಂದ ಕಣಕ್ಕೆ ಇಳಿಯಬೇಕು ಎಂಬುದನ್ನು ಡ್ರಾ ಮೂಲಕ ಸುದೀಪ್ ಆಯ್ಕೆ ಮಾಡಿದರು. ಅವರು ಕುದುರೆ ಹೆಸರು ಹೇಳಿದಾಗ ಕುದುರೆ ಮಾಲೀಕ ಅಥವಾ ತರಬೇತುದಾರ ಬಂದು ಟೇಬಲ್ ಮೇಲಿರಿಸಿದ್ದ ಬಾಟಲಿಗಳಿಂದ ವೈನ್ ಬಾಟಲ್ ಒಂದನ್ನು ತೆಗೆಯುತ್ತಿದ್ದರು. ಅದರ ಅಡಿಯಲ್ಲಿದ್ದ ನಂಬರ್‌ಗೆ ಅನುಗುಣವಾಗಿ ಕುದುರೆ ಯಾವ ಗೇಟ್‌ನಿಂದ ಸ್ಪರ್ಧಿಸಬೇಕು ಎಂದು ತಿಳಿಸಲಾಗುತ್ತಿತ್ತು. ಸುದೀಪ್ ಆಯ್ಕೆ ಮಾಡಿದ ಕುದುರೆಗಳಲ್ಲಿ ಗೋಲ್ಡನ್ ರೂಲ್ ಪ್ರಥಮ ಗೇಟ್‌ನಿಂದ ಸ್ಪರ್ಧೆಗಿಳಿವ ಅವಕಾಶ ಪಡೆದುಕೊಂಡಿತು. ಆನಂತರದ ಸ್ಥಾನಗಳನ್ನು ಟೋರೊಲೊಕೊ, ಪ್ರೊಂನ್ಟೊ ಪ್ರೊಂನ್ಟೊ, ಸದರನ್ ಬೇ, ರಿಡ್ಜ್‌ವೇ, ಸ್ಮಾಶಿಂಗ್, ಇನ್ ದಿ ಫಾರ್ ಎವೆರ್ ಗ್ಲೋರಿ, ಸೂರ್ಯಲಕ್ಷ್ಮಿ ಹಾಗೂ ಸ್ಪಾಟ್‌ಲೈಟ್ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡವು.ಇದಾದ ಮೇಲೆ ಮೆಲ್ಲಮೆಲ್ಲನೆ ವೇದಿಕೆ ಹತ್ತಿದ ಮಾಧುರಿ ಭಟ್ಟಾಚಾರ್ಯ ಆಯೋಜಕರ ಕಿವಿಯಲ್ಲಿ ಪಿಸುಗುಟ್ಟಿದರು. ತುಂಟ ನಗೆ ಸೂಸುತ್ತ ಆ ಆಯೋಜಕ ಸುಮ್ಮನಿರದೇ, ಮೈಕ್ ಹಿಡಿದು ಸ್ಟೇಜ್‌ನ ನೆತ್ತಿ ಮೇಲೆ ಸುತ್ತುತ್ತಿರುವ ಫ್ಯಾನ್ ಆಫ್ ಮಾಡಿ ಎಂದು ಕೂಗಿದರು. ಕುಳಿತವರೆಲ್ಲಾ ಗೊಳ್ಳನೆ ನಕ್ಕರು. ಆಗ ಮಾಧುರಿ ಕೂಡ ಪೆಚ್ಚು ನಗೆ ನಗುತ್ತಾ ಆತನ ಮೇಲೆ ಕೆಂಗಣ್ಣು ಬೀರಿದರು.ಕಾರಣ ಇಷ್ಟೆ! ಮಾಧುರಿ ನೀಲಿ ಬಣ್ಣದ ತುಂಡುಡುಗೆ ತೊಟ್ಟು ಬಂದಿದ್ದರು. ಅದು ಸ್ವಲ್ಪ ಅಗಲವೂ ದೊಗಳೆಯಾಗಿಯೂ ಇತ್ತು. ಬೀಸುಗಾಳಿಗೆ, ಅಂಗಿಯ ಅಲೆಗಳು ಮೇಲೇರಿದರೆ...  ಎಂಬ ಭಯದಿಂದ ಆಕೆ ಹಾಗೆ ಹೇಳಿದ್ದರು. ಮಾತಿಗೆ ಮುನ್ನ ನಡೆದ ಈ ಘಟನೆ ಫನ್ನಿಯಾಗಿತ್ತು. ಆನಂತರ ಮಾತಿಗಿಳಿದ ಮಾಧುರಿ `ನನಗೂ ರೇಸ್ ಬಗ್ಗೆ ತಿಳಿದಿಲ್ಲ. ಆದರೆ ನಾನು ಮಾತ್ರ ರೇಸ್‌ನಲ್ಲಿ ಪಾಲ್ಗೊಂಡು ಅದರ ಖುಷಿಯನ್ನು ಅನುಭವಿಸುತ್ತೇನೆ. ಗೆದ್ದ ಕುದುರೆಯನ್ನು ನೋಡಿ ಚಪ್ಪಾಳೆ ತಟ್ಟಿ ಗಾಳಿಯಲ್ಲಿ ಹೂ ಮುತ್ತು ತೇಲಿ ಬಿಡುತ್ತೇನೆ~ ಎಂದರು.ಖೇಣಿ ಒಡೆತನದ ಎಕೆಕೆ ಎಂಟರ್ಟೈನ್‌ಮೆಂಟ್‌ನ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್‌ನ ರೇಸ್  ಭಾನುವಾರ 4.40ಕ್ಕೆ ನಡೆಯಲಿದೆ. ಇದು 2400 ಮೀಟರ್ ಸ್ಪರ್ಧೆ.ಶನಿವಾರದಿಂದಲೇ ರೇಸ್ ಪ್ರಾರಂಭಗೊಳ್ಳುವುದರಿಂದ ಅದರ ಹವಾ ಕೂಡ ನಗರದೆಲ್ಲೆಡೆ ಹಬ್ಬಲಿದೆ.-

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.