ಬುಧವಾರ, ಏಪ್ರಿಲ್ 21, 2021
30 °C

ಟಾಟಾ ಆಯುರ್ವೇದ ಆಸ್ಪತ್ರೆ ಕಾರ್ಯಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖ್ಯಾತ ಉದ್ಯಮಿ ರತನ್ ಟಾಟಾ ಅವರ ಆರ್ಥಿಕ ಸಹಾಯದಿಂದ ನಿರ್ಮಾಣಗೊಂಡ ಆಯುರ್ವೇದ ಆಸ್ಪತ್ರೆ ‘ಇನ್ಸ್‌ಟಿಟ್ಯೂಟ್ ಆಫ್ ಆಯುರ್ವೇದ ಅಂಡ್ ಇಂಟೆಗ್ರೇಟಿವ್ ಮೆಡಿಸಿನ್ (ಐಎಐಎಂ) ಹೆಲ್ತ್ ಕೇರ್ ಸೆಂಟರ್’ ಯಲಹಂಕ ಬಳಿಯ ಜಾರಕಬಂಡೆ ಕಾವಲ್‌ನಲ್ಲಿ ಗುರುವಾರ ಕಾರ್ಯಾರಂಭಿಸಿತು. ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಟಾಟಾ ಅವರು, ವಿದೇಶಿ ವೈದ್ಯಕೀಯ ಪದ್ಧತಿಗಿಂತ ದೇಶೀಯ ಪಾರಂಪರಿಕ ವೈದ್ಯಪದ್ಧತಿಯಾದ ಆಯುರ್ವೇದದ ಚಿಕಿತ್ಸಾ ಪದ್ಧತಿಯೇ ಮೇಲು. ಇದು ಜನರಿಗೆ ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಉತ್ತಮ ಜೀವನ ಪದ್ಧತಿಯನ್ನೂ ನೀಡುತ್ತದೆ’  ಎಂದು ಅವರು ಹೇಳಿದರು.‘ಆಯುರ್ವೇದ ಪದ್ಧತಿ ಬಗ್ಗೆ ನಾವು ಇನ್ನಷ್ಟು ಮುಕ್ತಭಾವನೆಯನ್ನು ಹೊಂದಬೇಕಾಗಿದೆ. ಹಲವು ಬಗೆಯ ರೋಗಗಳಿಗೆ ಆಯುರ್ವೇದದಲ್ಲಿಯೇ ಅತ್ಯುತ್ತಮ ಪರಿಹಾರಗಳಿವೆ. ಮುಂದಿನ 20 ವರ್ಷಗಳಲ್ಲಿ ಆಯುರ್ವೇದ ಪದ್ಧತಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚು ಮಹತ್ವ ಬರಲಿದೆ’ ಎಂದು ನುಡಿದರು. ಐಎಐಎಂ ಸ್ಥಾಪಕ ಅಧ್ಯಕ್ಷ ಸ್ಯಾಮ್ ಪಿತ್ರೋಡ ಮಾತನಾಡಿ, ‘ವಿಶ್ವಕ್ಕೆ ಮಾದರಿಯಾಗಿದ್ದ ನಳಂದ ವಿಶ್ವವಿದ್ಯಾಲಯದ ಮಾದರಿಯಲ್ಲಿ ಐಎಐಎಂ ಸಂಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. 21ನೇ ಶತಮಾನವು ಆಧುನಿಕ ವಿಜ್ಞಾನ ಹಾಗೂ ಪರಂಪರೆ ಮೌಲ್ಯಗಳ ಸಮ್ಮಿಲನವಾಗಿದೆ’ ಎಂದರು.‘ಶೇ 9ರ ದರದಲ್ಲಿ ದೇಶದ ಅಭಿವೃದ್ಧಿ ಆಗುತ್ತಿರುವುದು ಉತ್ತಮ ಬೆಳವಣಿಗೆ. ಇನ್ನೊಂದೆಡೆ ಶೇ 50ರಷ್ಟು ಜನರು ಬಡವರಾಗಿದ್ದು, ಇವರನ್ನು ಮೇಲಕ್ಕೆ ಎತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಇವರಿಗೆ ಉದ್ಯೋಗ ಹಾಗೂ ಉತ್ತಮ ಆರೋಗ್ಯ ಸೇವೆಗಳನ್ನು ನೀಡಬೇಕಾಗಿದೆ’ ಎಂದು ಹೇಳಿದರು. ಆಸ್ಪತ್ರೆ ಪರಿಚಯ: ಬೆಂಗಳೂರಿನ ಯಲಹಂಕದಿಂದ ದೊಡ್ಡಬಳ್ಳಾಪುರಗೆ ಹೋಗುವ ಮಾರ್ಗ ಮಧ್ಯೆದಲ್ಲಿ ಸುಮಾರು 18 ಎಕರೆ ಭೂಮಿಯಲ್ಲಿ ಆಯುರ್ವೇದ ಆಸ್ಪತ್ರೆ ಸ್ಥಾಪನೆಯಾಗಿದೆ. ಇಲ್ಲಿ ಒಳ ಮತ್ತು ಹೊರ ರೋಗಿಗಳ ಚಿಕಿತ್ಸಾ ಘಟಕ, ಯೋಗ, ಮಕ್ಕಳ ವಿಭಾಗ, ಮಹಿಳಾ ವಿಭಾಗಗಳು ಇವೆ. ಇದಲ್ಲದೇ, ಅಲ್ಟ್ರಾಸೌಂಡ್, ಇಸಿಜಿಯಂತಹ ಆಧುನಿಕ ಉಪಕರಣಗಳೂ ಇಲ್ಲಿವೆ.  100 ಹಾಸಿಗೆ ಸಾಮರ್ಥ್ಯ ಹೊಂದಿದೆ. ಆಸಕ್ತರು 080- 28567000/ 32022857 ಇಲ್ಲಿಗೆ ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.