ಗುರುವಾರ , ಮೇ 19, 2022
21 °C
ಹೆಸರಿಗಷ್ಟೇ ಇದ್ದಲಹೊಂಡ ರೈಲು ನಿಲ್ದಾಣ

ಟಿಕೆಟ್ ನೀಡುವವರೇ ಇಲ್ಲಣ್ಣ...!

ಪ್ರಜಾವಾಣಿ ವಾರ್ತೆ/ಪ್ರಸನ್ನಕುಮಾರ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಖಾನಾಪುರ: ಕಳೆದ ಎರಡು ತಿಂಗಳುಗಳಿಂದ ತಾಲ್ಲೂಕಿನ ಇದ್ದಲಹೊಂಡ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ಕೌಂಟರ್ ತೆರೆಯದಿರುವ ಕಾರಣ ಇದ್ದಲಹೊಂಡ ನಿಲ್ದಾಣದ ಆಸುಪಾಸಿನಲ್ಲಿರುವ ಇದ್ದಲಹೊಂಡ, ಶಿಂಗಿನಕೊಪ್ಪ, ಗರ್ಲಗುಂಜಿ, ನಿಡಗಲ್, ಸಣ್ಣಹೊಸೂರ, ಭಂಡರಗಾಳಿ ಮುಂತಾದ ಗ್ರಾಮಗಳ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.ಪ್ರತಿನಿತ್ಯ ನೂರಾರು ಪ್ರಯಾಣಿಕರು ಈ ನಿಲ್ದಾಣದಲ್ಲಿ ನಿಲುಗಡೆಗೊಳ್ಳುವ ಕ್ಯಾಸಲರಾಕ್ ಮೀರಜ್, ಲೋಂಡಾ ಮೀರಜ್, ಹುಬ್ಬಳ್ಳಿ-ಮೀರಜ್ ಪ್ಯಾಸೆಂಜರ್ ರೈಲುಗಳ ಮೂಲಕ ಬೆಳಗಾವಿ, ಘಟಪ್ರಭಾ, ಸುಳಧಾಳ, ಮೀರಜ್, ಪಂಢರಪುರ, ರಾಯಬಾಗ, ಕುಡಚಿ, ಗೋಕಾಕ ರೋಡ್ ಮುಂತಾದೆಡೆ ಹಾಗೂ ಮೀರಜ್-ಕ್ಯಾಸಲರಾಕ್, ಮೀರಜ್ ಹುಬ್ಬಳ್ಳಿ ಹಾಗೂ ಮೀರಜ್ ಲೋಂಡಾ ರೈಲುಗಳ ಮೂಲಕ ಖಾನಾಪುರ, ಗುಂಜಿ, ದೇವರಾಯಿ, ಧಾರವಾಡ, ಹುಬ್ಬಳ್ಳಿ, ಲೋಂಡಾ, ಅಳ್ನಾವರ ಮತ್ತಿತರ ಕಡೆಗೆ ಪ್ರಯಾಣಿಸುತ್ತಾರೆ. ಆದರೆ ಕಳೆದ ಎರಡು ತಿಂಗಳುಗಳಿಂದ ಈ ರೈಲು ನಿಲ್ದಾಣದಲ್ಲಿ ಟಿಕೆಟ್ ವಿತರಿಸಲಾಗುತ್ತಿಲ್ಲ. ಹೀಗಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.ಈ ಬಗ್ಗೆ ಬೆಳಗಾವಿ ಹಾಗೂ ಖಾನಾಪುರ ರೈಲು ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿದರೆ ಇದ್ದಲಹೊಂಡ ನಿಲ್ದಾಣದ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಗುತ್ತಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಯೋಬ್ಬರಿಗೆ ನೀಡಿದೆ. ಕಳೆದ ಹಲವಾರು ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಖಾಸಗಿ ಈ ವ್ಯಕ್ತಿ ಈಗ ಯಾರಿಗೂ ಹೇಳದೇ ಕೇಳದೇ ನಾಪತ್ತೆಯಾಗಿರುವ ಕಾರಣ ಈ ರೀತಿಯ ತೊಂದರೆಯಾಗಿದೆ. ಇಲಾಖೆಯ ವತಿಯಿಂದಲೂ ಈ ವ್ಯಕ್ತಿಯ ಶೋಧಕಾರ್ಯ ನಡೆದಿದೆ. ಈ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದು, ಶೀಘ್ರದಲ್ಲಿ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡುವ ಮೂಲಕ ಟಿಕೆಟ್ ವಿತರಣೆಯನ್ನು ಪುನರಾರಂಭಿಸುತ್ತೇವೆ ಎಂದಿದ್ದಾರೆ.ಈ ನಿಲ್ದಾಣದಲ್ಲಿ ಟಿಕೆಟ್ ವಿತರಣೆ ಇಲ್ಲದ ಕಾರಣ ಅನಿವಾರ್ಯವಾಗಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ ಈ ಭಾಗದ ಜನರನ್ನು ರೈಲ್ವೆ ತಪಾಸಣಾ ಅಧಿಕಾರಿಗಳು ತಪಾಸಣೆಗೊಳಪಡಿಸಿ ನೂರಾರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಹೀಗಾಗಿ ತಮ್ಮದಲ್ಲದ ತಪ್ಪಿಗಾಗಿ ಜನರು ದಂಡ ತೆರಬೇಕಾದ ಸಂದರ್ಭ ಮೇಲಿಂದ ಮೇಲೆ ಒದಗಿ ಬರುತ್ತಿದ್ದು, ರೈಲ್ವೆ ಇಲಾಖೆ ಕೂಡಲೇ ಈ ನಿಲ್ದಾಣದಲ್ಲಿ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಬೇಕು ಎಂದು ಸಂಬಂಧಪಟ್ಟವರನ್ನು ಇದ್ದಲಹೊಂಡ, ನಿಡಗಲ್, ಭಂಡರಗಾಳಿ, ಶಿಂಗಿನಕೊಪ್ಪ, ಗರ್ಲಗುಂಜಿ ಗ್ರಾಮಸ್ಥರು ಒತ್ತಾಯಿಸುತ್ತಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.