ಮಂಗಳವಾರ, ಮೇ 11, 2021
25 °C

ಟೊಮೆಟೊಗೆ ಹೆಚ್ಚಿದ ಬೆಲೆ: ರೈತರಲ್ಲಿ ಸಂತಸ

ವಿಶೇಷ ವರದಿ / ಪ್ರಜಾವಾಣಿ ವಾರ್ತೆ -ಮಂಡಿಕಲ್ ಪುರುಷೋತ್ತಂ Updated:

ಅಕ್ಷರ ಗಾತ್ರ : | |

ಮುಳಬಾಗಲು: ತಾಲ್ಲೂಕಿನ ಎನ್.ವಡ್ಡಹಳ್ಳಿಯಲ್ಲಿರುವ ಆರ್‌ಎಂಸಿ ಮಾರುಕಟ್ಟೆಯಲ್ಲಿ ಈಗ ಟೊಮೆಟೊ ಸುಗ್ಗಿಕಾಲ. ಫಸಲು ಇರುವ ರೈತರಿಗೂ ಜೇಬು ತುಂಬ ಹಣ.ಸಮಾಧಾನಕರವಾದ ಸಂಗತಿ ಎಂದರೇ ಬೆಲೆ ಹೆಚ್ಚಿರುವ ಸಂದರ್ಭದಲ್ಲಿ ತಾಲ್ಲೂಕಿನ ಹಲವು ಪ್ರದೇಶಗಳ ರೈತರು  ಟೊಮೆಟೊ ಬೆಳೆದಿದ್ದಾರೆ ಎಂಬುದು. ಸಾಮಾನ್ಯವಾಗಿ ಬೆಲೆ ಏರಿದ ಸಂದರ್ಭಗಳಲ್ಲಿ ತಾಲ್ಲೂಕಿನ ರೈತರ ಜಮೀನುಗಳಲ್ಲಿ ಟೊಮೆಟೊ ಬೆಳೆದಿರುವುದಿಲ್ಲ.  ಆದರೆ ಈ ಬಾರಿ ಅಂಥ ಸನ್ನಿವೇಶವಿಲ್ಲ.ವಡ್ಡಹಳ್ಳಿ ಮಾರುಕಟ್ಟೆಗೆ ನೆರೆಯ ಆಂಧ್ರಪ್ರದೇಶದ ಪುಂಗನೂರು. ಪಲಮನೇರಿನಿಂದ ಅಷ್ಟೇ ಅಲ್ಲದೆ, ಜಿಲ್ಲೆಯ ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆಯ ರೈತರೂ ಟೊಮೆಟೊ ತರುತ್ತಿದ್ದಾರೆ.ಈ ಮಾರುಕಟ್ಟೆಯಿಂದ ಆಂಧ್ರಪ್ರದೇಶದ ಪ್ರಮುಖ ನಗರಗಳು, ತಮಿಳುನಾಡಿನ ಚೆನ್ನೈ, ಮಧುರೈ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಗೆ ಟೊಮೆಟೊ ಸಾಗಿಸಲಾಗುತ್ತಿದೆ.ಟೊಮೆಟೊಗೆ ಹೆಚ್ಚಿನ ಬೇಡಿಕೆ ಇರುವ ಕಾಲದಲ್ಲಿ ಮತ್ತು ಫಸಲಿನ ಏರಿಳತವಿದ್ದಲ್ಲಿ ಪ್ರತಿ ದಿವಸ ಕನಿಷ್ಠ 70 ಲೋಡ್ ಹೋಗುವುದು. ಹೆಚ್ಚಿನ ಸರಬರಾಜು ಇದ್ದ ಸಂದರ್ಭಗಳಲ್ಲಿ ನೂರಕ್ಕೂ ಹೆಚ್ಚು ಲೋಡ್‌ಗಳು ಹೋಗುತ್ತದೆ.

ಈಗ 18ಕೆಜಿಯ ಒಂಟು ಟೊಮೆಟೋ ಬಾಕ್ಸ್‌ನಿಂದ ರೈತರಿಗೆ 400 ರೂಪಾಯಿ ದೊರಕುತ್ತಿದೆ. ರೈತರ ಪ್ರಕಾರ ಇದು ಬಂಪರ್ ಬೆಲೆ.  ಗಮನಾರ್ಹ ಸಂಗತಿ ಎಂದರೆ ಕಳೆದ ವಾರಗಳಲ್ಲಿ ಇದೇ ಬಾಕ್ಸ್‌ಗೆ 600 ರೂಪಾಯಿಗೂ ಹೆಚ್ಚು ಬೆಲೆ ಸಿಕ್ಕಿದೆ.ಟೊಮೆಟೊಗೆ ಹೆಚ್ಚಿನ ಬೇಡಿಕೆ ಸಿಗುವುದು ಏಪ್ರಿಲ್, ಮೇ, ಜೂನ್,ಜುಲೈ ತಿಂಗಳಲ್ಲಿ ಮಾತ್ರ. ಆಗಸ್ಟ್, ಸೆಪ್ಟೆಂಬರ್,ಅಕ್ಟೋಬರ್ ತಿಂಗಳಲ್ಲಿ ತಮಿಳುನಾಡು ರಾಜ್ಯದಲ್ಲಿ ಹೇರಳವಾಗಿ ಟೊಮೆಟೊ ಬೆಳೆ ಬರುತ್ತದೆ. ಆಗ ನಾವು ಬೆಳೆದ ನಮ್ಮ ಟೊಮೆಟೊವನ್ನು ಕೇಳುವವರಿರುವುದಿಲ್ಲ.ನವಂಬರ್,ಡಿಸೆಂಬರ್, ಜನವರಿ, ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ಹೇರಳವಾಗಿ ಟೊಮೆಟೊ ಫಸಲು ಬರುತ್ತದೆ. ಆಗ ಆಂಧ್ರಪ್ರದೇಶಕ್ಕೆ ನಮ್ಮ ಫಸಲು ಬೇಕಿಲ್ಲ. ನಮ್ಮ ರೈತರು ಬೆಳೆದ ಟೊಮೆಟೊಗೆ ಬೇಡಿಕೆ ಇರುವ ನಾಲ್ಕು ತಿಂಗಳು ಬೇಸಿಗೆಯ ಸಮಯ. ನೀರು ಕಡಿಮೆ ದಕ್ಕುವ ಕಾಲ. ಅಂತರ್ಜಲ ಕುಸಿತ, ವಿದ್ಯುತ್ ಅಭಾವದಂಥ ಸನ್ನಿವೇಶದಲ್ಲೂ ಟೊಮೆಟೊ ಬೆಳೆದವರಿಗೆ ಕೈತುಂಬ ಹಣ ಸಿಗುವುದು ಅದೃಷ್ಟವೇ ಎನ್ನುತ್ತಾರೆ ಮಾರುಕಟ್ಟೆ ಸಂಘದ ಅಧ್ಯಕ್ಷ ನೆಗವಾರ ಸತ್ಯನಾರಾಯಣ್.ಜಿಲ್ಲೆಯ ಹೆಮ್ಮೆಯ ಮಾರುಕಟ್ಟೆ ಎಂದೇ ಹೇಳಲಾಗುವ ಎನ್.ವಡ್ಡಹಳ್ಳಿ ಮಾರುಕಟ್ಟೆಯನ್ನು ತಾಲ್ಲೂಕು ಆರ್‌ಎಂಸಿ ಮಾರುಕಟ್ಟೆಯು ವಶಪಡಿಸಿಕೊಂಡು ಹಲವಾರು ವರ್ಷಗಳೇ ಆಗಿದೆ. ಮಾರುಕಟ್ಟೆಗೆ ಪ್ರತಿ ದಿವಸ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಆದಾಯವೂ ಇದೆ. ಆದರೆ ಮಾರುಕಟ್ಟೆಯಲ್ಲಿ ಮೂಲಸೌಕರ್ಯದ ಕೊರತೆಯೂ ಇದೆ.ದೇಶದ ಹಲವೆಡೆಯಿಂದ ಬರುವವರು ಮತ್ತು ಸ್ಥಳೀಯರಿಗೆ ಅಗತ್ಯ ಸೌಕರ್ಯಗಳಿಲ್ಲ. ಕುಡಿಯುವ ನೀರಿಲ್ಲ. ಶೌಚಾಲಯವಿಲ್ಲ, ಬೇರೆಡೆಯಿಂದ ಬರುವವರಿಗೆ ತಂಗಲು ಸಹ ಸ್ಥಳವಿಲ್ಲ ಎನ್ನುತ್ತಾರೆ ಅವರು.

ದಿನದಿನದಿಂದ ಅಭಿವೃದ್ಧಿ ಪಥದಲ್ಲಿರುವ ಮಾರುಕಟ್ಟೆಗೆ ತಕ್ಷಣ ಕಾಯಕಲ್ಪ ನೀಡಬೇಕಾಗಿದೆ ಎಂಬುದು ಅವರ ಆಗ್ರಹ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.