ಬುಧವಾರ, ಜೂನ್ 23, 2021
28 °C
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಸ್ಯೆಗಳ ಕಾರುಬಾರು

ಟ್ಯಾಂಕರ್‌ ನೀರು: ₨ 1 ಕೋಟಿಗೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮುಂಬರುವ ಬೇಸಿಗೆ ಕಾಲದಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ತಾಲ್ಲೂಕು­ವಾರು ಕ್ರಿಯಾಯೋಜನೆ ಸಿದ್ಧಪಡಿಸ­ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರ­ವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯ­ಕ್ರಮ­ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಿ ಬದಲಿ ವ್ಯವಸ್ಥೆಯನ್ನು ಮಾಡುವ ಕುರಿತು ಈಗಿ­ನಿಂದಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಈಗಾಗಲೇ ಬಿಡುಗಡೆ ಆಗಿರುವ ಅನುದಾನದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಮಾ. 6 ರೊಳಗೆ ಟೆಂಡರ್‌ ಪ್ರಕ್ರಿಯೆ ಮುಗಿಸಿ, ಕೆಲಸದ ಕಾರ್ಯಾದೇಶದ ಪ್ರತಿ ನೀಡಬೇಕು. ಲೋಕಸಭೆ ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಜಾರಿಗೆ ಬರಲಿದೆ. ಆದ್ದರಿಂದ ಅಷ್ಟರೊಳಗೆ ಕೆಲಸಗಳು ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು.ಪ್ರತಿ ತಾಲ್ಲೂಕಿಗೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿ­ಗಳೆಂದು ಈಗಾಗಲೇ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿ­ಗಳೊಂದಿಗೆ ಸಮಿತಿಯೊಂದನ್ನು ರಚಿಸಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಉಂಟಾ­ಗದಂತೆ ಕ್ರಮಕೈಗೊಳ್ಳಬೇಕು. ಪ್ರತಿವಾರ ಸಭೆ ಸೇರಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದರು.ಜಿಲ್ಲಾಧಿಕಾರಿ ಎನ್.ಜಯರಾಂ ಅವರು, ಈಗಾಗಲೇ 8 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂಬರುವ ತಿಂಗಳಲ್ಲಿ 160 ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ. ಇದಕ್ಕಾಗಿ ₨ 11 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಕೆಲವು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದರೂ ಯಾವುದೇ ಪರಿ­ಹಾರ ಕಾರ್ಯ ನಡೆದಿಲ್ಲ ಎಂದು ಶಾಸಕ ಉಮೇಶ ಕತ್ತಿ ಸಭೆಯ ಗಮನಕ್ಕೆ ತಂದರು. ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸುವ ಕಾರ್ಯಕ್ರಮದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಶಾಸಕ ದುರ್ಯೋಧನ ಐಹೊಳೆ, ಪಿ.ರಾಜೀವ್‌ ಅವರು ದೂರಿದರು.ಇಂತಹ ನಿರ್ದಿಷ್ಟ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ­ಲಾಗುವುದು. ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಿರುವ ಗುತ್ತಿಗೆದಾರರಿಗೆ ₨ 3 ಕೋಟಿ ಪಾವತಿ ಮಾಡುವುದು ಬಾಕಿ ಇದ್ದು, ಅದನ್ನು ಶೀಘ್ರ ಪಾವತಿ ಮಾಡಲು ಕ್ರಮ ಕೈಗೊಳ್ಳ­ಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳಿಗೆ ಜಿಪಿಆರ್‌ಎಸ್‌ ಅಳವಡಿಸಲಾಗುವುದು. ಇದರಿಂದ ಎಲ್ಲ ಅವ್ಯವಹಾರವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.‘ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಜಿಲ್ಲೆಯಲ್ಲಿ ಅವ್ಯವಹಾರ ಹೆಚ್ಚಾ­ಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವ್ಯವಹಾ­ರಕ್ಕೆ ಪ್ರೋತ್ಸಾಹ ನೀಡುವ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಾಸಕ ಲಕ್ಷ್ಮಣ ಸವದಿ ಒತ್ತಾಯಿಸಿದರು.ಹಿಪ್ಪರಗಿ ಬ್ಯಾರೇಜ್‌ ನೀರು: ವಿರೋಧ

‘ಕೃಷ್ಣಾ ನದಿಯ ಹಿಪ್ಪರಗಿ ಬ್ಯಾರೇಜ್‌ನಿಂದ ನೀರನ್ನು ಬಿಡುಗಡೆ ಮಾಡಬಾರದು. ಕಳೆದ ವರ್ಷ ನೀರು ಬಿಟ್ಟಿದ್ದರಿಂದ ಅಥಣಿ ಭಾಗದ ಜನರಿಗೆ ನೀರಿಲ್ಲದಂತಾಗಿದೆ. ಒಬ್ಬರನ್ನು ಬದುಕಿಸಲು, ಮತ್ತೊಬ್ಬರನ್ನು ಸಾಯಿಸುವುದು ಸರಿಯಲ್ಲ. ಆದ್ದರಿಂದ ನೀರು ಬಿಡುಗಡೆ ಮಾಡಬಾರದು’ ಎಂದು ಭರಮಗೌಡ (ರಾಜು) ಕಾಗೆ ಆಗ್ರಹಿಸಿದರು.

‘ಕೊಳವೆ ಬಾವಿ ಕೊರೆಯಿಸಲು ಅನುಮತಿ ನೀಡುತ್ತಿಲ್ಲ. ಆದರೆ, ಅಥಣಿ ಭಾಗದಲ್ಲಿ ನೀರಾವರಿಯಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿದ್ದು, ಕೊಳವೆ ಬಾವಿ ತೋಡಿಸಲು ಅನುಮತಿ ನೀಡಬೇಕು’ ಎಂದು ಸವದಿ ಹೇಳಿದರು.ಪಡಿತರಚೀಟಿ ವಿತರಣೆಗೆ ಸೂಚನೆ

‘ಪಡಿತರ ಚೀಟಿ ವಿತರಿಸುವ ಕಾರ್ಯಕ್ರಮವನ್ನು ತ್ವರಿತಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಮಾರ್ಚ್‌ ಮೊದಲ ವಾರದಲ್ಲಿ ಕಾರ್ಡುಗಳನ್ನು ವಿತರಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು’ ಎಂದು ಸಚಿವ ಜಾರಕಿಹೊಳಿ ಸೂಚಿಸಿದರು.3 ಲಕ್ಷಕ್ಕೂ ಹೆಚ್ಚು ಜನರು ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 1.99 ಲಕ್ಷ ಕುಟುಂಬಗಳು ಬಿ.ಪಿ.ಎಲ್. ಕಾರ್ಡುಗಳನ್ನು ಕೋರಿ ಮನವಿ ಸಲ್ಲಿಸಿದ್ದಾರೆ. ಈಗಾಗಲೇ 1.59 ಬಿ.ಪಿ.ಎಲ್. ಕಾರ್ಡುಗಳನ್ನು ಮುದ್ರಿಸಲಾಗಿದ್ದು, 55 ಸಾವಿರ ಕಾರ್ಡುಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಲೋಕೋ­ಪ­ಯೋಗಿ ಇಲಾಖೆಯ ರಸ್ತೆಗಳ ಸುಧಾರಣೆ, ದುರಸ್ತಿ ಕಾರ್ಯವನ್ನು ಮಾ.6 ರೊಳಗೆ ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು.‘ಅಥಣಿ ತಾಲ್ಲೂಕಿನಲ್ಲಿ ಕಪಟ ಸ್ವಾಮೀಜಿಯನ್ನು ಬಂಧಿಸಿದ್ದು ಶ್ಲಾಘನೀಯ. ಇಂಥ ಸ್ವಾಮೀಜಿಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಬೇಕು. ಇತ್ತೀಚೆಗೆ ಇಸ್ಪೀಟ್‌ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಆದರೆ, ಈ ಅಡ್ಡೆಗಳನ್ನು ನಡೆಸುತ್ತಿದ್ದವರ ಮೇಲೂ ಕ್ರಮ ಜರುಗಿಸಬೇಕು’ ಎಂದು ಸವದಿ ಒತ್ತಾಯಿಸಿದರು.ಅರಣ್ಯ ಇಲಾಖೆ, ವಸತಿ ನಿಗಮದ ಕಾರ್ಯ­ಕ್ರಮಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಯಿತು. ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಫಿರೋಜ್‌ ಸೇಠ್‌, ಸಂಭಾಜಿ ಪಾಟೀಲ, ಶಶಿಕಲಾ ಜೊಲ್ಲೆ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಉಷಾ ಶಿಂತ್ರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಾ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಸಭೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.