ಬುಧವಾರ, ಏಪ್ರಿಲ್ 14, 2021
24 °C

ತಂದೆ- ಮಗ ಮತ್ತು ಬಡತನ: ಮನೆ ಹುಡುಗನಿಗೆ ಬಟ್ಟೆಯೇ ಶತ್ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಬಂಡೆ: `ತಾಯಿ ಇಲ್ಲದ ಮಗ, ಯಾರು ನೋಡಿಕೋಬೇಕು ಹೇಳು? ಅವನ ಅಪ್ಪ ಕೂಲಿಗೆ ಹೋಗದೆ ದಿನ ಕಳೆಯೋದು ಕಷ್ಟ. ಇವನನ್ನು ನೋಡಿಕೊಂಡು ಕೂತರೆ ಹೊಟ್ಟೆ ಕೇಳಬೇಕಲ್ಲ~ ಎಂದು ಪರಿಚಿತರು ನಿಟ್ಟುಸಿರಿಟ್ಟರೆ, `ಅಲ್ನೋಡು ಬೆತ್ತಲೆ ಕೂತಿದ್ದಾನೆ. ಅವನ ಮನೆಯವರಿಗಾದರೂ ಗೊತ್ತಾಗಲ್ವಾ?~ ಎಂದು ಅಪರಿಚಿತರು ಬಯ್ದುಕೊಳ್ಳುತ್ತಾರೆ.ಈ ಎರಡೂ ಬಗೆ ಮಾತಿಗೂ ತನಗೂ ಸಂಬಂಧವೆ ಇಲ್ಲ ಎಂಬ ರೀತಿಯಲ್ಲಿ ಈತ ರಸ್ತೆಬದಿಯಲ್ಲಿ ಬೆತ್ತಲೆ ಕೂತಿರುತ್ತಾನೆ.`ಈತ~ನ ಹೆಸರು ತಿಮ್ಮಪ್ಪ. ವಯಸ್ಸು 25. ಗುಡಿಬಂಡೆ ಸಮೀಪದ ಚಿಕ್ಕಬಳ್ಳಾಪುರ ತಾಲ್ಲೂಕಿನ ಬೊಮ್ಮಗಾನಹಳ್ಳಿಯವನು. ತಿಮ್ಮಪ್ಪ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥ ಎಂದು ಗ್ರಾಮಸ್ಥರು ಹೇಳುತ್ತಾರೆ.ಈತನ ತಾಯಿ ಬದುಕಿರುವವರೆಗೆ ಪರಿಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಕೆಲ ವರ್ಷಗಳ ಹಿಂದೆ ಆಕೆ ತೀರಿಕೊಂಡರು. ಆ ನಂತರ ಮನೆಯಲ್ಲಿ ಉಳಿದಿದ್ದು ತಂದೆ- ಮಗ ಹಾಗೂ ಬಡತನ.ಕೂಲಿ ಕೆಲಸಕ್ಕೆ ಹೋಗುವ ತಂದೆಗೆ ಮಗನ ಆರೈಕೆ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. `ತಿಮ್ಮಪ್ಪ ಯಾವಾಗೆಂದರೆ ಆಗ ಮೈಮೇಲಿನ ಬಟ್ಟೆಯೆಲ್ಲ ಕಳಚಿ ರಸ್ತೆ ಮಧ್ಯಕ್ಕೆ ಬಂದು ಬಿಡುತ್ತಾನೆ.ಪೆರೆಸಂದ್ರ ಹಾಗೂ ಗುಡಿಬಂಡೆ ಮಧ್ಯೆ ಸಂಚರಿಸುವ ವಾಹನಗಳಿಗೆ ಈತ ಸಿಕ್ಕಿಕೊಂಡ ಉದಾಹರಣೆಯೂ ಇದೆ. ಸಣ್ಣ- ಪುಟ್ಟ ಗಾಯಗಳೂ ಆಗಿವೆ. ಕಷ್ಟಪಟ್ಟು ಬಟ್ಟೆ ಹಾಕಿದರೂ ಕೆಲವೇ ಕ್ಷಣಗಳಲ್ಲಿ ಕಳಚಿ ಹಾಕಿ ಮತ್ತೆ ರಸ್ತೆಗೆ ಬಂದುಬಿಡುತ್ತಾನೆ~ ಎಂದು ತಿಮ್ಮಪ್ಪನ ತಂದೆ ನಾಗಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಈತನ ಚಿಕಿತ್ಸೆಗಾಗಿ ಪೋಷಕರು ತಮ್ಮ ಆರ್ಥಿಕ ಚೈತನ್ಯಕ್ಕೆ ನಿಲುಕುವ ಎಲ್ಲ ವೈದ್ಯರ ಬಳಿ ಎಡತಾಕಿದ್ದಾರೆ. ಆದರೆ ಏನೂ ಸುಧಾರಣೆಯಾಗಿಲ್ಲ. `ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ತೋರಿಸುವುದಕ್ಕೆ ಬಡತನದ ಬಂಡೆ ಎದೆ ಮೇಲೆ ಕೂತಿದೆ~ ಎಂದು ನಾಗಪ್ಪನವರು ಮಗನೆಡೆಗೆ ದೈನ್ಯದಿಂದ ನೋಡುತ್ತಾರೆ.ತಿಮ್ಮಪ್ಪನಿಗೆ ತುರ್ತು ಮಾನಸಿಕ ಚಿಕಿತ್ಸೆ ಅಗತ್ಯವಿದೆ. ಅಂಗವಿಕಲ ಇಲಾಖೆ ಅಥವಾ ಸಹೃದಯಿಗಳ ಸಹಾಯಹಸ್ತ ದೊರೆತರೆ ತಿಮ್ಮಪ್ಪನ ಮನಸ್ಸಿಗೆ ಚಿಕಿತ್ಸೆ ದೊರಕಿಸಬಹುದು. ಸಂಪರ್ಕ ಸಂಖ್ಯೆ 8970859234.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.