ಬುಧವಾರ, ಜೂನ್ 16, 2021
22 °C

ತಾರಾ ಯುಗಾದಿ

ನಿರೂಪಣೆ: ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಈಗ ಎಲ್ಲಿ ನೋಡಿದರೂ ಹಕ್ಕಿಗಳ ಕಲರವ, ನಗುವ ಹೂಗಳ ಸಾಲು ಸಾಲು ರಾಶಿ. ಹೊಸ ಚಿಗುರನ್ನು ಹೊದ್ದು ನಿಂತಿರುವ ಮರಗಿಡಗಳು. ಬೆಳಗಿನ ಜಾವದಲ್ಲಿ ಮೈಚಳಿ ಬಿಟ್ಟು ಒಂದು ಸುತ್ತು ಪ್ರದಕ್ಷಿಣೆ ಹಾಕಿದರೆ ಇಲ್ಲಿ ಮೈದಳೆದು ನಿಂತಿರುವ ನಿಸರ್ಗದ ಚೆಲುವು ನಮ್ಮನ್ನು ವಿಸ್ಮಯಗೊಳಿಸುತ್ತದೆ.

 

ಕಾಲ ಉರುಳಿ ಋತುವು ಮರಳಿ ಶ್ರೀ ನಂದನ ಸಂವತ್ಸರಕ್ಕೆ ಕಾಲಿಟ್ಟಿದೆ. ಯುಗಾದಿಯ ಹೊಸ ಚಿಗುರು, ಹೊಸ ಹುರುಪು ಮತ್ತು ಹೊಸ ಉಲ್ಲಾಸಗಳ ಸಂಕೇತವಾಗಿರುವ ಹೊಸ ವರುಷವನ್ನು ಪ್ರಕೃತಿ ನವ ವಧುವಿನಂತೆ ಸಿಂಗರಿಸಿಕೊಂಡು ಆದರದಿಂದ ಬರಮಾಡಿಕೊಂಡಿದ್ದಾಳೆ.ಮಾವಿನ ಮರದಲ್ಲಿ ಇನ್ನೂ ಚಿಗುರು ಮೈದಳೆದಿಲ್ಲವೆಂದು ಮೌನವಾಗಿದ್ದ ಕೋಗಿಲೆಗಳು ಈಗ ತೆಳ್ಳನೆಯ ಕೊಂಬೆಯಲ್ಲಿ ಕುಳಿತು ಕಣ್ಣು ಮುಚ್ಚಿ ಚಿಗುರಿನ ಒಗರು ಸೋನೆಯನ್ನು ಕುಕ್ಕಿ, ಮೆಚ್ಚಿ ಕೂಗುತ್ತಿವೆ. ಬೆಳೆದು ನಿಂತಿರುವ ಮರಗಳ ಸೊಬಗಂತೂ ನಯನಾಕರ್ಷಕ. ಮರ ಮರಗಳಲ್ಲಿ ಮೈಬಿರಿದು ನಿಂತಿರುವ ನಗುವ ಹೂಗಳನ್ನು ನೋಡಿಯೇ `ಯಾರೋ ಸ್ವಿಚ್ಚು ಹಾಕಿದಂತೆ ಮರ ಮರಗಳಲ್ಲೂ ಹೂವಿನ ಬೆಳಕು~ ಎಂದು ಬರೆದಿದ್ದಾರೆ ಜಿ.ಎಸ್.ಶಿವರುದ್ರಪ್ಪ.ಹೊಸವರ್ಷ ಯುಗಾದಿಯಲ್ಲಿ ಸಂಭ್ರಮದ ಹೊನಲು. ಈ ಹಬ್ಬದಲ್ಲಿ ಎಲ್ಲರೂ ಮನೆ ಮಂದಿಯೊಂದಿಗೆ ಕೂಡಿ ಪೂಜೆ ಮಾಡಿ, ಹೊಸ ಬಟ್ಟೆ ತೊಟ್ಟು, ಉಡುಗೊರೆ ವಿನಿಮಯ ಮಾಡಿಕೊಂಡು ಸಡಗರ ಸಂಭ್ರಮದಿಂದ ಇರುತ್ತಾರೆ. ಹಾಗಾದರೆ ಹೊಸ ಹರುಪಿನ ಹಬ್ಬ ಯುಗಾದಿಯನ್ನು ತಾರೆಯರು ಹೇಗೆ  ಆಚರಿಸುತ್ತಾರೆ ಎನ್ನುವ ಕುತೂಹಲವೇ? ಅದಕ್ಕೆ ಇಲ್ಲಿದೆ ಉತ್ತರ. ಯುಗಾದಿಯನ್ನು ನಟಿಯರು ಹೇಗೆ ಆಚರಿಸುತ್ತಾರೆ ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ...ರಾಗಿಣಿಗೆ ಚಿಕ್ಕ ಚಿಕ್ಕ ಸಂಗತಿಗಳು ಖುಷಿ ಕೊಡ್ತಾವಂತೆ

`ನಾನು ಈ ಬಾರಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಇರುವುದಿಲ್ಲ. ಶೂಟಿಂಗ್‌ಗೆಂದು ದುಬೈಗೆ ಹೋಗ್ತಾ ಇದೀನಿ. ನಾನು ಪಂಜಾಬಿ. ನಾರ್ತ್ ಇಂಡಿಯನ್ಸ್‌ಗೆ ಯುಗಾದಿ ಬಗ್ಗೆ ತಿಳಿದಿಲ್ಲ. ಹಾಗಾಗಿ ಯುಗಾದಿ ಹಬ್ಬದ ರೀತಿ ನೀತಿ, ಸಂಪ್ರದಾಯದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ನಾನು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲು ಶುರುಮಾಡಿದ ನಂತರ ನಾನು ಕೂಡ ಯುಗಾದಿ ಆಚರಣೆ ಮಾಡುತ್ತಾ ಬರುತ್ತಿದ್ದೇನೆ. ತುಂಬಾ ಗ್ರ್ಯಾಂಡ್ ಆಗಿ ಮಾಡುವುದಿಲ್ಲ. ಚಿಕ್ಕ ಚಿಕ್ಕ ಆಚರಣೆಗಳನ್ನು ಮಾಡಿ ಖುಷಿ ಪಡುತ್ತೇನೆ. ಹಬ್ಬದ ದಿನದಂದು ಶೂಟಿಂಗ್‌ನಲ್ಲಿ ಇದ್ದರೆ ಅಲ್ಲೇ ಪಾಯಸ ಮಾಡುತ್ತಾರೆ. ಅದನ್ನು ತಿನ್ನುತ್ತೇನೆ. ಕಳೆದ ಯುಗಾದಿಯಂದು ಮನೆಗೆ ತುಂಬಾ ಜನ ಗೆಸ್ಟ್‌ಗಳು ಬಂದಿದ್ದರು. ಅವರ ಜತೆ ಸೇರಿಕೊಂಡು ನಾನು ಯುಗಾದಿ ಹಬ್ಬವನ್ನು ತುಂಬಾ ಎಂಜಾಯ್ ಮಾಡಿದೆ.ದಕ್ಷಿಣ ಭಾರತೀಯರಿಗೆ ಹೊಸ ವರ್ಷ ಶುರುವಾಗುವುದು ಯುಗಾದಿಯಿಂದ. ಹಾಗೆಯೇ ಪಂಜಾಬಿಗಳಿಗೆ `ವೈಸಾಕಿ~ ಹೊಸ ವರ್ಷ. ವೈಸಾಕಿಯನ್ನು ನಾವು ತುಂಬಾ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡ್ತೀವಿ. ನಾನು ಅಭಿನಯಿಸಿರುವ `ವಿಲನ್~ ಈ ತಿಂಗಳು ತೆರೆ ಕಾಣುತ್ತಿದೆ. `ಶಿವಾ~ ಹಾಗೂ `ಬಂಗಾರಿ~ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ನನ್ನ ಕೈಯಲ್ಲಿ ಇನ್ನೂ ಎರಡು ಕನ್ನಡ ಸಿನಿಮಾ ಹಾಗೂ ಒಂದು ತಮಿಳು ಪ್ರಾಜೆಕ್ಟ್ ಇದೆ. ಹಾಗಾಗಿ ಈ ವರ್ಷ ನಾನು ತುಂಬಾ ಬ್ಯುಸಿ. ನನ್ನ ಅಭಿಮಾನಿಗಳಿಗೆಲ್ಲಾ ಯುಗಾದಿ ಹಬ್ಬದ ಶುಭಾಶಯಗಳು.  ಶರ್ಮಿಳಾ ಮಾಂಡ್ರೆ ಸೀರೆ ಉಡ್ತಾರಂತೆ

ಪ್ರತಿ ವರ್ಷದಂತೆ ಈ ವರ್ಷ ಕೂಡ ನಾನು ಯುಗಾದಿಯನ್ನು ತುಂಬಾ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತೀನಿ. ನಮ್ಮ ಮನೆಯಲ್ಲಿ ನಾನು ಚಿಕ್ಕವಳಿದ್ದಾಗಿಂದಲೂ ಇದೇ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಹಬ್ಬದ ದಿನ ಕುಟುಂಬದ ಸದಸ್ಯರೆಲ್ಲೂ ಒಂದುಗೂಡುತ್ತೇವೆ. ಪೂಜೆ ಮಾಡುತ್ತೇವೆ. ಪ್ರತಿ ಹಬ್ಬಕ್ಕೂ ನನ್ನ ಅಜ್ಜಿ ನನಗೆ ಉಡುಗೊರೆ ನೀಡುತ್ತಿದ್ದರು. ಅಜ್ಜಿ ಹೋದಮೇಲೆ ಅಪ್ಪ ನನಗೆ ಉಡುಗೊರೆ ನೀಡುತ್ತಿದ್ದಾರೆ.ಹಿಂದೆಲ್ಲಾ ಹಬ್ಬಕ್ಕೆ ಸಂಪ್ರದಾಯಬದ್ಧವಾಗಿ ಸೀರೆ ಏನೂ ಉಡುತ್ತಿರಲಿಲ್ಲ. ಆದರೆ ಕಳೆದ ಮೂರು ವರ್ಷದಿಂದ ನನಗೆ ಸೀರೆ ಉಟ್ಕೋಬೇಕು ಅಂತ ತುಂಬಾ ಅನಿಸ್ತಿದೆ. ಹಾಗಾಗಿ ಈ ಬಾರಿಯ ಹಬ್ಬಕ್ಕೂ ಕೂಡ ಸೀರೆ ಉಟ್ಕೋತೀನಿ. ಕಡಲ ನೀಲಿ ಅಂದ್ರೆ ನಂಗೆ ತುಂಬಾ ಇಷ್ಟ. ಹಾಗಾಗಿ ಈ ಬಾರಿ ನೀಲಿ ಬಣ್ಣದ ಸೀರೆಯನ್ನು ಕೊಂಡು ಕೊಂಡಿದ್ದೇನೆ.ನಮ್ಮನೇಲಿ ಯುಗಾದಿಗೆ ಸಿಕ್ಕಾಪಟ್ಟೆ ಜನ ಬರುತ್ತಾರೆ. ಹಾಗಾಗಿ ಸುಮಾರು 40ಕ್ಕೂ ಅಧಿಕ ಬಗೆಯ ಸಿಹಿ ತಿನಿಸುಗಳನ್ನು ಮಾಡುತ್ತೇವೆ. ನನಗೆ ಲಡ್ಡು ಮತ್ತು ಒಬ್ಬಟ್ಟು ಅಂದ್ರೆ ತುಂಬಾನೇ ಇಷ್ಟ. ಹಬ್ಬಕ್ಕೆಂದು ಮಾಡುವ ಹೋಳಿಗೆಯನ್ನು ನಾನೇ ತಿಂದು ಮುಗಿಸುತ್ತಿದ್ದೆ. ಆದರೆ ಈಗ ಡಯಟ್ ಮಾಡುತ್ತಿರೋದ್ರಿಂದ ಒಂದೇ ಒಂದು ಒಬ್ಬಟ್ಟು ತಿನ್ನಬೇಕು. ನಮ್ಮನೇಲಿ ಅಪ್ಪ, ಅಮ್ಮ, ಅಣ್ಣ, ಅಕ್ಕ, ಅವರ ಮಕ್ಕಳು ಎಲ್ಲರೂ ಇದ್ದಾರೆ. ಇವರ ಜತೆಗೆ ನನ್ನ ಸೋದರ ಸಂಬಂಧಿಗಳು ಬಂದು ಸೇರಿಕೊಳ್ಳುತ್ತಾರೆ. ಹಾಗಾಗಿ ಹಬ್ಬಕ್ಕೆ ಮತ್ತಷ್ಟು ಕಳೆ ಕಟ್ಟುತ್ತದೆ. ಅಂದಹಾಗೆ ಮುಂದಿನ ತಿಂಗಳು ನಾನು ನಟಿಸಿರುವ ತಮಿಳು ಸಿನಿಮಾ `ಮಿರಟ್ಟಲ್~ ತೆರೆಕಾಣುತ್ತಿದೆ.ಐಂದ್ರಿತಾ ಮನೇಲಿ ಹಬ್ಬದ ಅಬ್ಬರ ಸ್ವಲ್ಪ ಕಮ್ಮಿ

ನಾನು ಬಂಗಾಳಿ. ನಮ್ಮ ಮನೆಯಲ್ಲಿ ದುರ್ಗಾ ಪೂಜೆಯನ್ನು ಅದ್ದೂರಿಯಾಗಿ ಮಾಡುತ್ತೇವೆ. ಹಾಗೆಯೇ ಗೌರಿ-ಗಣೇಶ, ದೀಪಾವಳಿ ಹಬ್ಬ ಕೂಡ ಜೋರು. ಯುಗಾದಿ ಹಬ್ಬದ ಆಚರಣೆ ಸ್ವಲ್ಪ ಕಮ್ಮಿ. ಯುಗಾದಿ ಹಬ್ಬದಂದು ಅಮ್ಮ ಪೂಜೆ ಮಾಡುತ್ತಾರೆ ಅಷ್ಟೆ.`ರಜನಿಕಾಂತ್~ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಚಿತ್ರ ಚಿನ್ನಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ನನ್ನದು ತುಂಬಾನೇ ಇನೋಸೆಂಟ್ ಕ್ಯಾರೆಕ್ಟರ್. `ಜಂಗ್ಲಿ~ ನಂತರ ನಾನು ವಿಜಿ ಒಟ್ಟಾಗಿ ನಟಿಸಿದ್ದೇವೆ. `ಜಂಗ್ಲಿ~ಯಲ್ಲಿ ನನ್ನ ಅವರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿತ್ತು. ಅದೂ ಇಲ್ಲೂ ಮುಂದುವರಿಯುತ್ತೆ. ನನಗೆ ಕನ್ನಡದಲ್ಲೇ ಹೆಸರು ಮಾಡುವ ಹಂಬಲ. ಹಾಗಾಗಿ ಬೇರೆ ಭಾಷೆ ಚಿತ್ರಗಳಲ್ಲಿ ಹೆಚ್ಚು ನಟಿಸುತ್ತಿಲ್ಲ. ಅಂದಹಾಗೆ `ರಜನಿಕಾಂತ್~ ಚಿತ್ರದಲ್ಲಿ ಆ್ಯಕ್ಷನ್, ಕಾಮಿಡಿ, ಕ್ಯೂಟ್ ರೊಮ್ಯಾಂಟಿಕ್ ಎಲ್ಲವೂ ಇದೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ.ನೀತೂಗೆ ಲಂಗ-ದಾವಣಿ ಇಷ್ಟವಂತೆ


ಯುಗಾದಿ ನಮಗೆ ಈ ವರ್ಷದ ಎರಡನೇ ಹಬ್ಬ. ಸಂಕ್ರಾಂತಿ ನಂತರ ಬರುವ ಪ್ರಥಮ ಹಬ್ಬ. ದಕ್ಷಿಣ ಭಾರತೀಯರಿಗೆ ಹೊಸ ವರ್ಷದ ಆರಂಭ ಕೂಡ ಹೌದು. ಯುಗಾದಿಯನ್ನು ನಾನು ನನ್ನ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತೇನೆ. ಮನೆಯನ್ನು ಚೆನ್ನಾಗಿ ಸಿಂಗರಿಸಿ ಒಪ್ಪ ಓರಣ ಮಾಡುತ್ತೇನೆ. ನಮ್ಮಮ್ಮ ತುಂಬಾ ಸಂಪ್ರದಾಯಸ್ಥೆ. ಹಾಗಾಗಿ ಪೂಜೆಯನ್ನು ಚೆನ್ನಾಗಿ ಮಾಡುತ್ತಾರೆ. ಆನಂತರ ಮನೆ ಮಂದಿಯೆಲ್ಲಾ ಕೂಡಿ ಕೋರಮಂಗದಲ್ಲಿರೋ ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗುತ್ತೇವೆ.ನಾನು ಹಬ್ಬಕ್ಕೆ ಸೀರೆ ಉಡೋದಿಲ್ಲ. ಲಂಗ-ದಾವಣಿ ತೊಡುತ್ತೇನೆ. ಹಬ್ಬದ ದಿನ ಎಲ್ಲರೂ ಒಂದೆಡೆ ಸೇರುತ್ತೇವೆ. ಅಮ್ಮ ಅಡಿಗೆ ಚೆನ್ನಾಗಿ ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ತಿನಿಸುಗಳನ್ನು ಸೊಗಸಾಗಿ ಮಾಡುತ್ತಾರೆ. ಆದರೆ ಅವರಿಗೆ ಹೋಳಿಗೆಯನ್ನು ರುಚಿಯಾಗಿ ಮಾಡಲು ಬರುವುದಿಲ್ಲ. ಸಂಕ್ರಾಂತಿಯಲ್ಲಿ ಕಬ್ಬನ್ನು ಕಚ್ಚಿ ತಿನ್ನೋದು ಅಂದ್ರೆ ತುಂಬಾ ಇಷ್ಟ. ಹಾಗೆಯೇ ಯುಗಾದಿಯಲ್ಲಿ ಹೋಳಿಗೆ ತಿನ್ನುತ್ತೇನೆ. ಹೋಟೆಲ್‌ಗೆ ಹೋಗಿ ಎಲ್ಲರೂ ಊಟ ಮಾಡಿ ಖುಷಿ ಖುಷಿಯಾಗಿ ಕಾಲ ಕಳೆಯುತ್ತೇವೆ.`ಪಾರು ಐ ಲವ್ ಯೂ~ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಪಾರ್ವತಿ ಅಂತ ನನ್ನ ಹೆಸರು. ನಾಯಕ ನನ್ನನ್ನು ಪ್ರೀತಿಯಿಂದ ಪಾರೂ ಪಾರೂ ಎಂದು ಕರೆಯುತ್ತಾನೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.ಇದೊಂದು ಪಕ್ಕಾ ಲವ್ ಸ್ಟೋರಿ. ನನ್ನದು ಬಿ.ಇಡಿ ಓದುವ ಹುಡುಗಿ ಪಾತ್ರ. ತುಂಬಾ ಚೆನ್ನಾಗಿ ಮೂಡಿಬಂದಿದೆ. ರಂಜನ್ ಅನ್ನೋ ಹೊಸ ಹುಡುಗ ಈ ಚಿತ್ರದ ನಾಯಕ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.