ಬುಧವಾರ, ಜೂನ್ 23, 2021
30 °C

ತಿರುವಿನಲ್ಲಿ ನಿಂತು...

ಡಿ.ಎಂ. ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

ಗಾಡ್ ಫಾದರ್‌’ ಚಿತ್ರದಿಂದ ಸಿನಿಮಾರಂಗಕ್ಕೆ ಅಡಿಇಟ್ಟವರು ನಟಿ ಸೌಂದರ್ಯ ಜಯಮಾಲಾ. ಆ ಚಿತ್ರದ ನಟನೆಯಿಂದ ನಿರ್ದೇಶಕರ ಕಣ್ಣುಗಳಲ್ಲಿ ಭರವಸೆಯಾಗಿ ಕಂಡವರು.ಮೊದಲ ಚಿತ್ರದಿಂದ ದೊರೆತ ಇಮೇಜು, ಅವರ ಸಿನಿಮಾಗ್ರಾಫ್‌ ಅನ್ನು ಕೆಲಕಾಲದಲ್ಲಿಯೇ ಏರಿಸುವ ಆಶಾಭಾವ ಮೂಡಿಸಿತ್ತು. ಆದರೆ, ‘ಗಾಢಪಾದರ್’ ತೆರೆಯಿಂದ ನಿರ್ಗಮಿಸಿ ಎರಡು ವರ್ಷವಾದರೂ ಸೌಂದರ್ಯ ನಟನೆಯ ಮತ್ತೊಂದು ಸಿನಿಮಾ ಪ್ರೇಕ್ಷಕನಿಗೆ ಸಿಕ್ಕಿಲ್ಲ. ಸೌಂದರ್ಯ ತಮ್ಮ ಸಿನಿಹೆಜ್ಜೆಯನ್ನು ಚುರುಕುಗೊಳಿಸುತ್ತಿಲ್ಲವೇ? ಅವಕಾಶಗಳು ದೊರೆಯುತ್ತಿಲ್ಲವೇ? ಪರಭಾಷೆಯತ್ತ ನೋಟವೇ?

‘ಸಿನಿಮಾ ರಂಜನೆ’ ಪ್ರಶ್ನೆಗಳಿಗೆ ಸೌಂದರ್ಯ ತಡಬಡಾಯಿಸದೆ ಉತ್ತರಿಸಿದ್ದು– ‘ಅಯ್ಯಯ್ಯೋ ಹಾಗೇನಿಲ್ಲಪ್ಪ... ನಿಮ್ಮ ಮಾತುಗಳಲ್ಲಿ ತುಸು ಸತ್ಯವಿದ್ದರೆ, ಕೆಲವನ್ನು ನಾನು ಒಪ್ಪುವುದಿಲ್ಲ’ ಎಂದರು.ತಮ್ಮ ಕನಸುಗಳೇ ಭಿನ್ನ ಎಂದ ಅವರ ಮಾತುಗಳಲ್ಲಿ, ಸ್ಯಾಂಡಲ್‌ವುಡ್‌ಗೆ ಕಾಲಿಟ್ಟೊಡನೆಯೇ ಭರಪೂರ ಅವಕಾಶಗಳತ್ತ ಕೈಚಾಚುವ ನಟಿಯರ ಸಾಲಿಗೆ ನಾನು ಸೇರಿದವಳಲ್ಲ ಎನ್ನುವ ಇಂಗಿತ ಇದ್ದಂತಿತ್ತು. ಪಾತ್ರಗಳ ಆಯ್ಕೆಯಲ್ಲಿ ಚೂಸಿಯಾಗಿರುವ ಅವರಿಗೆ ವರ್ಷಕ್ಕೆ ಒಂದೇ ಸಿನಿಮಾ ಮಾಡುವುದು ಖುಷಿ ಕೊಡುವ ವಿಚಾರವಾಗಿ ಕಾಣುತ್ತಿದೆಯಂತೆ. ಪ್ರಮಾಣಕ್ಕಿಂತ ಚಿತ್ರಗಳ ಗುಣಮಟ್ಟ ಮುಖ್ಯ ಎನ್ನುವ ನಂಬಿಕೆ ಅವರದು.ಚಿತ್ರರಂಗಕ್ಕೆ ಪ್ರವೇಶ ಪಡೆದ ಮೂರು ವರ್ಷಗಳಲ್ಲಿ ಅವರು ನಟಿಸಿರುವುದು ಮೂರೇ ಚಿತ್ರಗಳಲ್ಲಿ. ಅವುಗಳಲ್ಲಿ ‘ಗಾಡ್ ಫಾದರ್‌’ ತೆರೆಕಂಡಿದ್ದರೆ, ಪಾರು ವೈಫ್ ಆಫ್ ದೇವದಾಸ್’ ಬಿಡುಗಡೆಯ ದಿನ ನೋಡುತ್ತಿದ್ದಾರೆ. ‘ಸಿಂಹಾದ್ರಿ’ ಚಿತ್ರೀಕರಣ ನಡೆಯುತ್ತಿದೆ.

‘ನನ್ನ ಚಿತ್ರಗಳು ತೆರೆಗೆ ಬಂದ ನಂತರ ಈ ರೀತಿ ತಪ್ಪುಗಳಿವೆ ಎಂದು ಹೇಳಿಸಿಕೊಳ್ಳುವುದು ನನಗೆ ಇಷ್ಟವಾಗುವುದಿಲ್ಲ. ವೃತ್ತಿಯ ಗೌರವ ಮತ್ತು ಸಿನಿಮಾ ಬದ್ಧತೆ ಅರಿತುಕೊಂಡು ನನ್ನ ಪರಿಮಿತಿಯಲ್ಲಿ ಕೆಲಸ ಮಾಡುವೆ.ನಂಬರ್‌ ಒನ್‌ ನಟಿಯಾಗಬೇಕು ಎನ್ನುವ ಕನಸು ನನಗಿಲ್ಲ. ಗ್ಲಾಮರ್ ಎಲಿಮೆಂಟ್‌ಗಾಗಿಯೇ ಸಿನಿಮಾ ಮಾಡಬೇಕು ಎನ್ನುವ ಮನೋಭಾವವೂ ಇಲ್ಲ. ನಟನೆಯ ಕಾರಣದಿಂದಾಗಿ ಪಾತ್ರಗಳು–ಚಿತ್ರಗಳು ಬರಬೇಕು’ ಎನ್ನುವ ಮಾತುಗಳು ಅವರೊಳಗಿನ ಭಿನ್ನ ಕಲಾವಿದೆಯ ಹಂಬಲವನ್ನು ಬಿಂಬಿಸುತ್ತವೆ. ಎಲ್ಲ ಪಾತ್ರಗಳನ್ನೂ ಇಷ್ಟಪಡುವುದಿಲ್ಲ ಎನ್ನುವುದು ಸೌಂದರ್ಯ ಮಾತಿನ ಸಾರ. ಸುಖಾಸುಮ್ಮನೆ ನಟಿಸುವ ಅಗತ್ಯ ನನಗಿಲ್ಲ ಎನ್ನುವುದು ಅವರ ಸ್ಪಷ್ಟ ಮಾತು.ತೆರೆಗೆ ಬರಲು ಸಿದ್ಧವಾಗಿರುವ ತಮ್ಮ ಎರಡನೇ ಚಿತ್ರ ‘ಪಾರು ವೈಫ್ ಆಫ್ ದೇವದಾಸ್’ ಬಗ್ಗೆ ಸೌಂದರ್ಯ ಅವರಲ್ಲಿ ಅಪಾರ ನಿರೀಕ್ಷೆಗಳಿವೆ. ‘ಈ ಚಿತ್ರಕ್ಕೆ ಆರೇಳು ಮಂದಿ ನಾಯಕಿಯರು ಬದಲಾಗಿದ್ದರು. ಕೊನೆಗೆ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದರು. ಪಾರು, ನನ್ನ ಕನಸು, ಕನವರಿಕೆ, ಪ್ರೀತಿ ಎಲ್ಲವೂ. ನಾನು ಇಲ್ಲಿ ಕಥಕ್ ನೃತ್ಯಗಾರ್ತಿ.ಜರ್ನಲಿಸಂ ಓದುವ ಹುಡುಗಿ. ನನ್ನ ನೈಜ ವ್ಯಕ್ತಿತ್ವಕ್ಕೆ ಸ್ವಲ್ಪ ಸಮೀಪದ ಪಾತ್ರವಿದು. ಪಾರು ಪಾತ್ರ ನೂರಕ್ಕೆ ನೂರರಷ್ಟು ತೃಪ್ತಿ ನೀಡಿದೆ. ಪ್ರೇಕ್ಷಕರೂ ಚಿತ್ರವನ್ನು ಒಪ್ಪಿಕೊಳ್ಳುವ ಭರವಸೆ ಇದೆ’ ಎಂದು ಸೌಂದರ್ಯ ತಮ್ಮ ಚಿತ್ರವನ್ನು ವಿಶ್ಲೇಷಿಸುತ್ತಾರೆ. ಅಂದಹಾಗೆ, ‘ಸಿಂಹಾದ್ರಿ’ ಚಿತ್ರದಲ್ಲಿನ ಅವರ ಪಾತ್ರವನ್ನು ‘ಸಂಪತ್ತಿಗೆ ಸವಾಲ್’ನ ಮಂಜುಳಾ ಶೇಡ್‌ನಲ್ಲಿ ಕಾಣಬಹುದಂತೆ.‘ನಾನು ಒಂದು ಸಿನಿಮಾ ಮಾಡುತ್ತೇನೆ ಎಂದರೆ ಅದನ್ನು ಹೆಚ್ಚು ಪ್ರೀತಿ ಮಾಡುತ್ತೇನೆ. ಸ್ವಲ್ಪ ತಪ್ಪಾದರೂ ನೊಂದುಕೊಳ್ಳುತ್ತೇನೆ. ನಾಳೆಯೇ ಸೂಪರ್ ಸ್ಟಾರ್ ಆಗಬೇಕು ಎನ್ನುವ ಆಸೆಗಳೇನೂ ನನಗಿಲ್ಲ. ಕ್ಯಾಮೆರಾ ಮುಂದೆ ನಿಂತು ನಟಿಸುವ ಖುಷಿ ನನಗೆ ಅಷ್ಟಕಷ್ಟೇ. ಚಿಕ್ಕ ವಯಸ್ಸಿನಿಂದ ಕ್ಯಾಮೆರಾ ನೋಡಿದ್ದರಿಂದ ಇಷ್ಟೇನಾ ಇದು ಅನ್ನಿಸುತ್ತದೆ. ಆದರೆ ಹೊಸ ರೀತಿಯಲ್ಲಿ ನನ್ನನ್ನು ಹೇಗೆ ಅಭಿವ್ಯಕ್ತಿಗೊಳಿಸಿಕೊಳ್ಳಬಹುದು ಎನ್ನುವುದರತ್ತ ಗಮನ ವಹಿಸುತ್ತೇನೆ. ಅದೇ ನನಗೆ ಹಿತ’ ಎನ್ನುವ ಜಯಮಾಲಾ ಪುತ್ರಿಗೆ ಕ್ಯಾಮೆರಾ ಕಣ್ಣಿನ ನೋಟಕ್ಕಿಂತ ಪ್ರೇಕ್ಷಕನ ಚಿತ್ತದಲ್ಲಿ ಕಲಾವಿದೆಯಾಗಿ ಅಚ್ಚೊತ್ತುವ ಬಯಕೆ.ತಮಿಳಿನ ‘ವೆಂಡ್ರುವಾ’ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿರುವ ಅವರು, ತಮಿಳಿನಲ್ಲಿ ಎರಡು ಮತ್ತು ತೆಲುಗಿನ ಒಂದು ಚಿತ್ರವನ್ನು ನಿರಾಕರಿಸಿದ್ದಾರಂತೆ. ಪಾತ್ರಗಳನ್ನು ಒಪ್ಪಿಕೊಳ್ಳದಿರುವುದು ಮತ್ತು ನಿರಾಕರಣೆ– ಈ ಎರಡು ಶಬ್ದಗಳ ನಡುವೆ ತೆಳುವಾದ ಗೆರೆ ಇದೆ. ‘ಕನ್ನಡದಲ್ಲಿನ ಯಾವುದೇ ಅವಕಾಶಗಳನ್ನು ನಿರಾಕರಿಸುವುದಿಲ್ಲ. ಆದರೆ ಇಷ್ಟವಿಲ್ಲದ ಪಾತ್ರ–ಕಥೆಗಳತ್ತ ನೋಡುವುದೇ ಇಲ್ಲ’ ಎನ್ನುವ ನಿಲುವು ಅವರದು.ಜಯಮಾಲಾರ ‘ತಾಯಿ ಸಾಹೇಬ’ದಂಥ ಕಲಾತ್ಮಕ ಚಿತ್ರಗಳ ಬಗ್ಗೆಯೂ ಸೌಂದರ್ಯರಲ್ಲಿ ತುಡಿತವಿದೆ. ‘ಕಲಾತ್ಮಕ ಚಿತ್ರಗಳು ಸಿಕ್ಕರೆ ಜಂಪ್ ಮಾಡಿಬಿಡುತ್ತೇನೆ’ ಎಂದು ಸಂಭ್ರಮಿಸುತ್ತಾರೆ. ತಮ್ಮ ಚಿತ್ರ ಜೀವನವನ್ನು ತಾವೇ ಅವಲೋಕಿಸಿದಾಗ ಅವಕಾಶಗಳು ಕಡಿಮೆ ಇದೆ ಎನಿಸಿದ ಗಳಿಗೆಗಳಿವೆಯಂತೆ. ಸ್ವಂತ ಹಣ ಹೂಡಿ ಸಿನಿಮಾ ಮಾಡುವ ಆಸೆಯೂ ಅವರಲ್ಲಿದೆ.‘ಅಮ್ಮ ಒಂದು ಸಿನಿಮಾ ನಿರ್ಮಿಸಿ, ನನಗೆ ಅವಕಾಶ ಕೊಡಲಿಲ್ಲ ಅಂದರೆ ಆಗ ಜಗಳ ಮಾಡುತ್ತೇನೆ’ ಎಂದು ಮುಗುಳ್ನಗುತ್ತಾರೆ. ಆದರೆ, ಅಮ್ಮನ ಪ್ರಭಾವಲಯ ಮೀರಿ ನಟಿಯಾಗಿ ತನ್ನದೇ ಆದ ಅಸ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸುವುದನ್ನು ಅವರು ಮರೆಯುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.