ಸೋಮವಾರ, ಮೇ 17, 2021
31 °C
ಅಕ್ರಮ ಮರಳು ದಂಧೆಗೆ ಇಲ್ಲದ ಮೂಗುದಾರ

ತುಂಗಭದ್ರಾ, ಕೃಷ್ಣಾ ನದಿ ಒಡಲು ಬರಿದು

ರಾಮರಡ್ಡಿ ಅಳವಂಡಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಂಗಭದ್ರಾ, ಕೃಷ್ಣಾ ನದಿ ಒಡಲು ಬರಿದು

ರಾಯಚೂರು:  ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಮರಳು ಸಾಗಾಟ ಮಿತಿ ಮೀರಿದೆ.ಜಿಲ್ಲೆಯ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿ ಹರಿಯುತ್ತಿದೆ. ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲ್ಲೂಕುಗಳಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಈ ಎರಡೂ ನದಿಗಳೂ ರಾಯಚೂರು ತಾಲ್ಲೂಕಿನಲ್ಲಿ ಹರಿದು ಮುಂದೆ ಆಂಧ್ರಪ್ರದೇಶದಲ್ಲಿ ಹರಿಯುತ್ತವೆ. ಎರಡೂ ನದಿಗಳ ಸುತ್ತಮುತ್ತ ಇರುವ ಕೆಲ ಗ್ರಾಮಗಳ ಪ್ರಭಾವಿಗಳಿಗೆ ಅಕ್ರಮ ಮರಳುಗಾರಿಕೆ ವರದಾನವಾಗಿದೆ. ಮಿಕ್ಕವರು ತಮ್ಮ ಕಣ್ಣೆದುರಿಗೆ ನೈಸರ್ಗಿಕ ಸಂಪತ್ತಾದ `ಮರಳ'ನ್ನು ಲೂಟಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾರೆ.ಹಗಲು ಹೊತ್ತು ಟ್ರ್ಯಾಕ್ಟರ್‌ನಲ್ಲಿ, ರಾತ್ರಿ ಹೊತ್ತು ಲಾರಿ ಮತ್ತು ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತದೆ. ಪರ್ಮಿಟ್, ರಾಜಧನ (ರಾಯಲ್ಟಿ) ಎಂಬ ಸೂತ್ರ ಹಿಡಿದ ಆಡಳಿತ ಯಂತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಗ್ರಾಮಸ್ಥರು ಕೆಂಡ ಕಾರುತ್ತಾರೆ.ಎಲ್ಲೆಲ್ಲಿ ಮರಳುಗಾರಿಕೆ: ಕೃಷ್ಣಾ ನದಿ ಹರಿಯುವ ದೇವದುರ್ಗ ತಾಲ್ಲೂಕಿನಲ್ಲಿ ಚಿಂಚೋಡಿ, ಗುಂತಲದೊಡ್ಡಿ, ಹಿರೇರಾಯಕುಂಪಿ, ಜೋಳದ ಹೆಡಗಿ, ಬಾಗೂರು, ಹೇರುಂಡಿ, ಗಬ್ಬೂರು ಗ್ರಾಮದ ಸುತ್ತ, ಲಿಂಗಸುಗೂರು ತಾಲ್ಲೂಕಿನಲ್ಲಿ ನಾಗಾಲಾಪುರ ಹಳ್ಳ, ವ್ಯಾಕರನಾಳ, ರಾಮತ್ನಾಳ, ಬ್ಯಾಲಿಹಾಳ, ಹಂಪನಾಳ, ತುರಡಗಿ ಗ್ರಾಮ ಸುತ್ತಮುತ್ತ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ.ಇನ್ನು ತುಂಗಭದ್ರಾ ನದಿ ಹರಿಯುವ ಮಾನ್ವಿ ತಾಲ್ಲೂಕಿನ ಜೂಕೂರು, ರಾಜಲಬಂಡಾ, ಚೀಕಲಪರ್ವಿ, ರಾಜೊಳ್ಳಿ ಸುತ್ತಮುತ್ತ, ಸಿಂಧನೂರು ತಾಲ್ಲೂಕಿನಲ್ಲಿ ಮಲ್ಲಾಪುರ, ವಳಬಳ್ಳಾರಿ, ಗೋಮರ್ಸಿ, ಬೆಳಗುರ್ಕಿ, ಕನ್ನಾರಿ, ಬೊಮ್ಮನಾಳ, ಬಾದರ್ಲಿ, ಗಿಣೇವಾರ, ಅರಟನೂರು, ಬಪ್ಪೂರು, ಬೊಮ್ಮನಾಳ, ಬೂತಲದಿನ್ನಿ ಮುಂತಾದ ಕಡೆ ನದಿ ಮತ್ತು ಹಳ್ಳಗಳಲ್ಲಿ ವ್ಯಾಪಕ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ನಡೆಯುತ್ತಿದೆ.ರಾಯಚೂರು ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಹರಿಯುವ ಬಿಚ್ಚಾಲಿ, ತುಂಗಭದ್ರಾ ಗ್ರಾಮದ ಹತ್ತಿರ ಮತ್ತು ಚಿಕ್ಕ ಮಂಚಾಲಿ ಹತ್ತಿರ ಹಾಗೂ ಕೃಷ್ಣಾ ನದಿ ಹರಿಯುವ ಕಾಡ್ಲೂರು ಗ್ರಾಮದ ಹತ್ತಿರ ಅಕ್ರಮ ಮರಳು ಗಾರಿಕೆ ಸಾಗಿದೆ.ಕಾಡ್ಲೂರಲ್ಲಿ ಸಮೀಪ ಕೃಷ್ಣಾ ನದಿಯಲ್ಲಿ `ಒಂದು ಕಡೆ' ಮರಳು ಗಣಿಗಾರಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಶಿಫಾರಸಿನ ಮೇರೆಗೆ ಪರವಾನಗಿ ಕೊಡಲಾಗಿದೆ. ಅಲ್ಲಿ ಮರಳು ತೆಗೆಯಲಾಗುತ್ತಿದೆ. ರೂ 5.5 ಲಕ್ಷ  ಸಂಗ್ರಹವಾಗಿದೆ. ಉಳಿದಂತೆ ಎಲ್ಲೂ ಪರವಾನಗಿ ಕೊಟ್ಟಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.ಆದರೆ, ಕಾಡ್ಲೂರು ಹತ್ತಿರ ಕೃಷ್ಣ ನದಿಯ ಉದ್ದಕ್ಕೂ ಅಕ್ರಮವಾಗಿ ಮರಳು ಎತ್ತುವುದು, ಸಾಗಾಟ ಮಾಡುವುದು ಕಾಣುತ್ತಿದೆ. ಕೇಳುವವರೂ, ತಡೆಯುವ ಅಧಿಕಾರಿ, ಸಿಬ್ಬಂದಿ ಇಲ್ಲದಿರುವುದು `ಪ್ರಜಾವಾಣಿ' ಭೇಟಿ ನೀಡಿದಾಗ ಕಂಡು ಬಂತು.ಟ್ರ್ಯಾಕ್ಟರ್-ಟಿಪ್ಪರ್ ಖರೀದಿ: ಮರಳು ಸಾಗಾಟಕ್ಕಾಗಿಯೇ ನದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉಳ್ಳವರು, ಗುತ್ತಿಗೆದಾರರು ಟ್ರ್ಯಾಕ್ಟರ್ ಖರೀದಿಸಿದ್ದರೆ ಶ್ರೀಮಂತರು, ಪ್ರಥಮ ದರ್ಜೆ ಗುತ್ತಿಗೆದಾರರು ಟಿಪ್ಪರ್ ಖರೀದಿಸಿದ್ದಾರೆ. ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೂಂಪಕಲದೊಡ್ಡಿ ಗ್ರಾಮದಲ್ಲಿ ಒಂದೇ ವರ್ಷದಲ್ಲಿ 50ರಿಂದ 60 ಟ್ರ್ಯಾಕ್ಟರ್ ಖರೀದಿ ಮಾಡಲಾಗಿದೆ ಎಂದು ತಿಳಿದಿದೆ.ಮರಳುನೀತಿ ಪಾಲನೆ ಇಲ್ಲ: ಸರ್ಕಾರದ `2011ರ ಮರಳು ನೀತಿ' ಪ್ರಕಾರ ಒಂದು ಕ್ಯೂಬಿಕ್ ಮೀಟರ್‌ಗೆ ರೂ.540.  ಒಂದು ಟ್ರ್ಯಾಕ್ಟರ್ ಮರಳಿಗೆ ರೂ. 1,600 ರಾಜಧನ ನಿಗದಿ ಪಡಿಸಲಾಗಿದೆ. ಮರಳು ಗಣಿಗಾರಿಕೆಗೆ ಪರವಾನಗಿ ಕೊಟ್ಟ ಸ್ಥಳದಲ್ಲಿ ಆ ಗಣಿ ಸುತ್ತ ಬೇಲಿ ಹಾಕಬೇಕು. ಕಚೇರಿ ತೆರೆಯಬೇಕು. ಕಾವಲು ಇಡಬೇಕು. ಪರಿಶೀಲನೆ ಮಾಡಬೇಕು. ಜಿಲ್ಲೆಯಲ್ಲಿ ಇದ್ಯಾವುದೂ ಪಾಲನೆ ಆಗುತ್ತಿಲ್ಲ ಎಂದು ಮಾನ್ವಿಯ ಪ್ರಭುರಾಜ ಕೊಡ್ಲಿ ಹೇಳುತ್ತಾರೆ.ಸಹಾಯಕ ಆಯುಕ್ತೆ ಮಂಜುಶ್ರೀ ಅವರಿಗೆ ಈಚೆಗೆ ಅಕ್ರಮ ಮರಳು ಸಾಗಾಟ ಮತ್ತು ಸಂಗ್ರಹದ ಬಗ್ಗೆ ದೂರು ಸಲ್ಲಿಸಿದಾಗ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಪ್ರಕರಣ ದಾಖಲಿಸಲು ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಪ್ರಕರಣ ದಾಖಲಾಗಿಲ್ಲ. ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹ, ಸಾಗಾಟ ಪತ್ತೆಯಾದಲ್ಲಿ ನೇರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಲು ಮಾತ್ರ ಅವಕಾಶವಿದೆ. ಪೊಲೀಸ್ ಠಾಣೆಯಲ್ಲಿ ಇಲ್ಲ. ಬೇಗ ಪ್ರಕರಣ ದಾಖಲು ಮಾಡಲು ಹಿಂದೇಟು ಹಾಕಲು ಇದೇ  ಕಾರಣ ಎಂದು ಸಮಸ್ಯೆ ವಿವರಿಸುತ್ತಾರೆ.ಯಾದಗಿರಿ ಜಿಲ್ಲೆ ಶಹಪುರ, ಸುರಪುರ, ಹೈದರಾಬಾದ್‌ಗೆ ಮರಳು ಸಾಗಾಟ ಆಗುತ್ತದೆ. ಹೈದರಾಬಾದ್‌ನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಒಂದು ಲಾರಿ ಮರಳು ರೂ30 ಸಾವಿರಕ್ಕೆ ಮಾರಾಟ ಆಗುತ್ತಿದೆ.  ಹೀಗಾಗಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಟ ಚಟುವಟಿಕೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ.ಅಕ್ರಮ ಗಣಿಗಾರಿಕೆ ಮತ್ತು ಸಾಗಾಟದಿಂದ ಸರ್ಕಾರಕ್ಕೂ ಲಾಭವಿಲ್ಲ. ಜನರಿಗೂ ಕಡಿಮೆ ಬೆಲೆಗೆ ಮರಳು ಸಿಗುವುದಿಲ್ಲ. ಅಕ್ರಮ ಮರಳು ಗಣಿಗಾರಿಕೆ ಮಾಡುವವರಿಗೆ, ಸಾಗಾಟ ಮತ್ತು ಮಾರಾಟ ಮಾಡುವವರಿಗೆ ಲಾಭ ಹೋಗುವಂತಾಗಿದೆ. ನದಿಯಲ್ಲಿ ಮರಳು ಕದ್ದು ಅಕ್ರಮವಾಗಿ ಸಾಗಿಸಿ ಕೋಟ್ಯಂತರ ಲಾಭ ಮಾಡುವ ಗುತ್ತಿಗೆದಾರರ ಜಾಲವೇ ಇದೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಷಿರುದ್ದೀನ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.