ಗುರುವಾರ , ಆಗಸ್ಟ್ 22, 2019
27 °C

ತುಂಗಭದ್ರಾ ಸೇತುವೆ: ನೀರಿನ ರಭಸ ಕ್ಷೀಣ

Published:
Updated:

ಕಂಪ್ಲಿ:ಸ್ಥಳೀಯ ಕೋಟೆ ಬಳಿ ಹರಿಯುವ  ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ನೀರಿನ ರಭಸ ಸ್ವಲ್ಪ ಕ್ಷೀಣಿಸಿದ್ದರಿಂದ ಕಂಪ್ಲಿ-ಗಂಗಾವತಿ ಕಡೆ ಸಂಚರಿಸುವ ಪ್ರಯಾಣಿಕರು ಸೇತುವೆ ಮೇಲೆ ನೀರಿದ್ದರೂ ಲೆಕ್ಕಿಸದೆ ನಡೆದು ದಡ ಸೇರುತ್ತಿದ್ದಾರೆ. ಸಾರ್ವಜನಿಕರು ಪಟ್ಟಣ, ಗ್ರಾಮಗಳಿಗೆ ತವಕದಿಂದ ತೆರಳುತ್ತಿದ್ದ ದೃಶ್ಯ ಬುಧವಾರ ಕಂಡುಬಂತು.ಈ ಮಧ್ಯೆ ಸೇತುವೆ ಮೇಲೆ ಇದ್ದ ತ್ಯಾಜ್ಯ ಕಸದರಾಶಿಯನ್ನು ಪುರಸಭೆಯವರು ಎರಡು ದಿನಗಳಿಂದ ಎಡೆಬಿಡದೆ ತೆರವುಗೊಳಿಸಿದ್ದರಿಂದ ಪ್ರಯಾಣಿಕರಿಗೆ ನಡೆದುಕೊಂಡು ಬರಲು ಅನುಕೂಲವಾಗಿದೆ.ಸುಮಾರು ಒಂದು ವಾರದಿಂದ ಸೇತುವೆ ಮುಳಗಡೆಯಾಗಿ ಅಲ್ಲಲ್ಲಿ ಸಿಮೆಂಟ್ ಕಿತ್ತುಹೋಗಿದೆ. ಇನ್ನೊಂದೆಡೆ ಸೇತುವೆ ಅಧಿಕ ತೇವಾಂಶದಿಂದ ನಲುಗಿದ್ದು, ವಾಹನಗಳ ಸಂಚಾರಕ್ಕೆ ಯೋಗ್ಯವೇ ಎನ್ನುವುದನ್ನು ತಜ್ಞ ಎಂಜನಿಯರ್‌ಗಳು ಪರಿಶೀಲಿಸಿದ ನಂತರ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.ಗಂಗಾವತಿ, ರಾಯಚೂರು, ಗುಲ್ಬರ್ಗ, ವಿಜಾಪುರ, ಬಾಗಲಕೋಟೆ ಇತ್ಯಾದಿ ಜಿಲ್ಲೆ ಮತ್ತು ಹೈದರಾಬಾದ್ ನಗರ ಕಡೆ ಸಂಚರಿಬೇಕಾದ ಪ್ರಯಾಣಿಕರು ಹೊಸಪೇಟೆ ಮೂಲಕ ಸುತ್ತು ಬಳಸಿ ಕಳೆದ ಒಂದು ವಾರದಿಂದ ಪ್ರಯಾಣಿಸುತ್ತಿದ್ದಾರೆ. ನದಿ ಪಾತ್ರದಲ್ಲಿರುವ ಗದ್ದೆಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಯಥಾಸ್ಥಿತಿ ಜಲಾವೃತ್ತ ಮುಂದುವರಿದಿದೆ.ಸೇತುವೆ ಎರಡು ಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಇದೆ. ಕಂದಾಯ ಇಲಾಖೆ ಅಧಿಕಾರಿಗಳು ನದಿ ಬಳಿ ತೀವ್ರ ನಿಗಾ ವಹಿಸಿದ್ದಾರೆ.ಆಲಮಟ್ಟಿ: 6ರಂದು ಸಿಎಂ ಬಾಗಿನ

ವಿಜಾಪುರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ತಿಳಿಸಿದ್ದಾರೆ. ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಅಂದು ಮಧ್ಯಾಹ್ನ 12ಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

Post Comments (+)