ಶುಕ್ರವಾರ, ಮೇ 14, 2021
21 °C

ತುರ್ತು ಸಂದರ್ಭ: ಎನ್‌ಎಂಪಿಟಿ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪ್ರಕ್ಷುಬ್ಧಗೊಂಡಿದ್ದ ಕಡಲಲ್ಲಿ ದೋಣಿ ಮುಳುಗಿ ಒಂದೂವರೆ ದಿನ ಕಳೆದಿದ್ದರೂ, ಶುಕ್ರವಾರ ಸಂಜೆಯವರೆಗೆ ನಾಪತ್ತೆಯಾದವರ ಯಾವ ಸುಳಿವೂ ಸಿಕ್ಕಿಲ್ಲ. ಕಷ್ಟಕಾಲದಲ್ಲಿರುವ ಮೀನುಗಾರರಿಗೆ ನೆರವಾಗದಿದ್ದರೆ ಇಡೀ ಮಂಗಳೂರು ಬಂದರನ್ನೇ ಮುಚ್ಚುವ ಮೀನುಗಾರರ ಬೆದರಿಕೆಗೆ ಮಣಿದ ನವ ಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಮುಂದಿನ ದಿನಗಳಲ್ಲಿ ಸಕಾಲದಲ್ಲಿ ಆಶ್ರಯ ನೀಡುವ ಭರವಸೆ ನೀಡಿದೆ.ಮೂರು ದಿನದಲ್ಲಿ ಎರಡು ದೋಣಿ ದುರಂತಗಳು ಸಂಭವಿಸಿದ್ದು, ಎರಡೂ ಸಂದರ್ಭಗಳಲ್ಲಿ ಕಷ್ಟದಲ್ಲಿದ್ದ ಮೀನುಗಾರರ ಕೋರಿಕೆಯನ್ನು ಎನ್‌ಎಂಪಿಟಿ ತಿರಸ್ಕರಿಸಿತ್ತು. ಗುರುವಾರ ಬೆಳಿಗ್ಗೆ ಕಡಲಿನ ಅಬ್ಬರಕ್ಕೆ ಸಿಕ್ಕಿದ ದೋಣಿ ಮುಳುಗಿ ಆರು ಮಂದಿ ನಾಪತ್ತೆಯಾಗಿರುವುದಕ್ಕೆ ಎನ್‌ಎಂಪಿಟಿಯೇ ನೇರ ಹೊಣೆ ಎಂದು ಶುಕ್ರವಾರ ಬೆಳಿಗ್ಗೆ ಪರ್ಸಿನ್ ಮತ್ತು ಟ್ರಾಲ್ ದೋಣಿಗಳ ಸಂಘಗಳ ಜಂಟಿ ಸಭೆಯಲ್ಲಿ ಸದಸ್ಯರು ಒಕ್ಕೊರಲ ನಿರ್ಣಯಕ್ಕೆ ಬಂದಿದ್ದರು. ಎನ್‌ಎಂಪಿಟಿಯನ್ನೇ ಬಂದ್ ಮಾಡುವ ಬೆದರಿಕೆಯನ್ನೂ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಎಂಪಿಟಿ ಅಧ್ಯಕ್ಷ ತಮಿಳುವಾಣನ್ ಅವರು ಸಂಜೆ ಮೀನುಗಾರ ಮುಖಂಡರ ಸಭೆ ಕರೆದರು. ತುರ್ತು ಸಂದರ್ಭಗಳಲ್ಲಿ ಅರ್ಧ ಗಂಟೆಯೊಳಗೆ ಸ್ಪಂದಿಸುವ ಭರವಸೆ ನೀಡಿದರು.ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರ ಮುಖಂಡರಾದ ಮೋಹನ್ ಬೇಂಗ್ರೆ, ಉಮೇಶ್ ಕರ್ಕೇರಾ, ನವೀನ್ ಕರ್ಕೇರಾ, ನವೀನ್ ಬಂಗೇರಾ, ದೇವಾನಂದ ಬೇಂಗ್ರೆ, ತುಕಾರಾಂ ಮೊದಲಾದವರು ಎನ್‌ಎಂಪಿಟಿ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದಕ್ಕೆ ಮೊದಲೇ  ಅಧ್ಯಕ್ಷ ತಮಿಳುವಾಣನ್ ಅವರು ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಿದ್ದರು. ಅದರಂತೆ ತುರ್ತು ಸಂದರ್ಭಗಳಲ್ಲಿ  ಅರ್ಧ ಗಂಟೆಯೊಳಗೆ ಎನ್‌ಎಂಪಿಟಿಯೊಳಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಕಂಟ್ರೋಲ್ ರೂಂನ ಒಂದು ಮೊಬೈಲ್ ಮತ್ತು ಒಂದು ಸ್ಥಿರ ದೂರವಾಣಿ ಸಂಖ್ಯೆಗಳನ್ನು ನೀಡಿದ್ದರು.ಆದರೆ ಮೀನುಗಾರ ಮುಖಂಡರು ಈ ಹಿಂದೆ ನೀಡಿದ ಭರವಸೆಗಳು ಪೊಳ್ಳಾಗಿದ್ದನ್ನು ಉಲ್ಲೇಖಿಸಿ ಇದು ಕೂಡ ಅಂತಹ ಪೊಳ್ಳು ಭರವಸೆಯೇ ಎಂದು ಕೇಳಿದರು. ಬುಧವಾರ ರಾತ್ರಿ ಯಾರೂ ಎನ್‌ಎಂಪಿಟಿಯಲ್ಲಿ ನೆರವು ಕೇಳಿಲ್ಲ, ಮಂಗಳವಾರ ಬೆಳಿಗ್ಗೆ ಸಹ ಅಪಾಯದಲ್ಲಿದ್ದ ದೋಣಿ ನೆರವಿಗೆ ಕೋರಿಕೊಂಡಿದ್ದರೂ, ಸ್ಪಂದಿಸುವ ಮೊದಲೇ ಅಲ್ಲಿಂದ ತೆರಳಿತ್ತು ಎಂದರು.`ಎನ್‌ಎಂಪಿಟಿ ಬಂದರಿನಲ್ಲಿ ಇಂದು 220 ಲಕ್ಷ ಟನ್ ತೈಲ ಮತ್ತು 20 ಲಕ್ಷ ಟನ್ ಅಡುಗೆ ಅನಿಲವನ್ನು ನಿರ್ವಹಿಸಲಾಗುತ್ತಿದೆ. ಭಯೋತ್ಪಾದಕರು ಇಲ್ಲೇನಾದರೂ ಸ್ಫೋಟ ನಡೆಸಿದರೆ ಇಡೀ ಮಂಗಳೂರು ಧ್ವಂಸವಾಗುವ ಅಪಾಯ ಇದೆ. ಹೀಗಾಗಿ ನಾವು ಅತಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.ಆದರೂ ಮೀನುಗಾರರ ಬಗ್ಗೆ ಎನ್‌ಎಂಪಿಟಿಗೆ ಸಹಾನುಭೂತಿ ಇದ್ದೇ ಇದೆ. ಇನ್ನು ಮುಂದೆ ತುರ್ತು ಸಂದರ್ಭಗಳಲ್ಲಿ ಮಧ್ಯರಾತ್ರಿ ಸಹಿತ ಯಾವುದೇ ಹೊತ್ತಲ್ಲಿ ಈ ಎರಡು ನಿಯಂತ್ರಣ ಕೊಠಡಿ ಸಂಖ್ಯೆಗಳಿಗೆ (9741875425, 0824-2407428) ಕರೆ ಮಾಡಿದರೆ ಅರ್ಧ ಗಂಟೆಯೊಳಗೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮೀನುಗಾರರನ್ನು ಮತ್ತು ದೋಣಿಗಳನ್ನು ಬಂದರಿನೊಳಗೆ ನಿರ್ದಿಷ್ಟ ಜಾಗದಲ್ಲಿ ತಂಗಲು ಅವಕಾಶ ನೀಡಲಾಗುವುದು, ಆದರೆ ಎಲ್ಲಾ ದೋಣಿಗಳೂ ದೋಣಿ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ಹೊಂದಿರಬೇಕು, ಮರುದಿನವಾದರೂ ಮೀನುಗಾರಿಕಾ ಇಲಾಖೆಯಿಂದ ಪತ್ರ ನೀಡಬೇಕು~ ಎಂದರು.ಮೂರು ದಿನಗಳಲ್ಲಿ ನಡೆದ ಎರಡೂ ದೋಣಿ ದುರಂತಗಳಿಗೆ ಎನ್‌ಎಂಪಿಟಿಯೇ ನೇರ ಹೊಣೆ, ಹೀಗಾಗಿ ಗಾಯಗೊಂಡಿರುವ ಮತ್ತು ನಾಪತ್ತೆಯಾಗಿರುವವರ ಹತ್ತಿರದ ಬಂಧುಗಳಿಗೆ ಪರಿಹಾರವನ್ನೂ ಎನ್‌ಎಂಪಿಟಿಯೇ ನೀಡಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದರು. ಆದರೆ ಈ ಎರಡು ದುರಂತಗಳಿಗೆ ಎನ್‌ಎಂಪಿಟಿ ಕಾರಣವೇ ಅಲ್ಲ, ಸಂವಹನ ಕೊರತೆಯಿಂದ ದೋಣಿಗಳು ಬಂದರಿನೊಳಗೆ ಬರುವುದು ಸಾಧ್ಯವಾಗಿರಲಾರದು, ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ತಮಿಳುವಾಣನ್ ಭರವಸೆ ನೀಡಿದರು.ಎಚ್ಚರಿಕೆ: ಈ ಹಂತದಲ್ಲಿ ಮಾತನಾಡಿದ ಮೋಹನ್ ಬೇಂಗ್ರೆ, ಮುಂದೆ ತುರ್ತು ಸಂದರ್ಭಗಳಲ್ಲಿ ಎನ್‌ಎಂಪಿಟಿ ಅಸಹಕಾರದಿಂದಾಗಿ ಜೀವ ಹಾನಿ ಸಂಭವಿಸಿದರೆ, ಮರುದಿನವೇ ಹಳೆ ಬಂದರಿನಲ್ಲಿರುವ ಎಲ್ಲಾ 1200 ದೋಣಿಗಳೂ ಎನ್‌ಎಂಪಿಟಿ ಮುಂಭಾಗ ಲಂಗರು ಹಾಕಿ ಪ್ರತಿಭಟಿಸಲಿವೆ ಎಂದು ಎಚ್ಚರಿಸಿದರು.ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ತಮಿಳುವಾಣನ್, ಈ ಹಿಂದೆ ತುರ್ತು ಸಂದರ್ಭಗಳಲ್ಲಿ, ಸೂಕ್ತ ದಾಖಲೆ ಒದಗಿಸಿದ ಮೀನುಗಾರಿಕಾ ದೋಣಿಗಳಿಗೆ ಆಸರೆ ನೀಡಲಾಗಿದೆ. ಸಂವಹನ ಕೊರತೆಯಿಂದ ಈ ಎರಡು ಘಟನೆಗಳು ನಡೆದಿರಬಹುದು. ಮುಂದಿನ ದಿನಗಳಲ್ಲಿ ಅದು ಆಗದಂತೆ ಎಚ್ಚರ ವಹಿಸಲಾಗುವುದು. ಜತೆಗೆ ಎನ್‌ಎಂಪಿಟಿಯ ಭದ್ರತಾ ಹೊಣೆಗಾರಿಕೆ ಬಗ್ಗೆ ಸಹ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.