ಭಾನುವಾರ, ಏಪ್ರಿಲ್ 2, 2023
31 °C

ಥಂಡಿ ತಲೆನೋವಿಗೆ ತೀಕ್ಷ್ಣನಸ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಥಂಡಿ ತಲೆನೋವಿಗೆ ತೀಕ್ಷ್ಣನಸ್ಯ

ಕೆಂಪಡರಿದ ಕಣ್ಣು, ಊದಿದ ಮುಖ, ತಲೆಯನ್ನು ಬಿಗಿಯಾಗಿ ಹಿಡಿದು ವೈದ್ಯರಲ್ಲಿಗೆ ಧಾವಿಸಿದ್ದಳು ಸರಳ. ತತ್‌ಕ್ಷಣವೇ ಅವಳನ್ನು ಮಲಗಿಸಿ ಚಿಕಿತ್ಸೆ ನೀಡಲಾಯಿತು. 15 ನಿಮಿಷಗಳ ಚಿಕಿತ್ಸೆಯ ನಂತರ ನಗುತ್ತಾ, ವೈದ್ಯರಿಗೆ ಥ್ಯಾಂಕ್ಸ್ ಹೇಳುತ್ತಾ ಆಚೆ ಬಂದ ಅವಳನ್ನು ಕಂಡು, ಅಲ್ಲಿ ತಮ್ಮ ಸರದಿಗಾಗಿ ಕಾಯುತ್ತಿದ್ದ ಇತರ ರೋಗಿಗಳಿಗೆ ಅಚ್ಚರಿ !!



‘ಆಯುರ್ವೇದದ ಪ್ರಕಾರ, 11 ವಿಧದ ತಲೆಶೂಲೆ, ಜನರನ್ನು ಕಾಡುತ್ತದೆ. ಸರಳ ಅವರಲ್ಲಿ ಕಂಡುಬಂದಂತೆಯೇ ಥಂಡಿ ಕಾಲದಲ್ಲಿಅತಿಯಾಗಿ ಪೀಡಿಸುವ ತಲೆಶೂಲೆಯನ್ನು ಆಯುರ್ವೇದದಲ್ಲಿ ‘ಕಫಜ ಶಿರೋಶೂಲ’ ಎನ್ನುತ್ತಾರೆ’ ಎಂದು ಹೇಳುತ್ತಾ, ರೋಗದ ಲಕ್ಷಣಗಳು, ಚಿಕಿತ್ಸಾ ವಿಧಾನವನ್ನು ವಿವರಿಸುತ್ತಾರೆ ಆಯುರ್ವೇದ ವೈದ್ಯೆ,

ಹಾಗೂ  ಸ್ತ್ರೀ ಹಾಗೂ ಮಕ್ಕಳ ತಜ್ಞೆ ಡಾ.ಸನ್ಮತಿ ಪಿ. ರಾವ್.

*ಕಫಜ ಶಿರೋಶೂಲ-ಕಾರಣ

 ಥಂಡಿ ಕಾಲದಲ್ಲಿ, ಅತಿಯಾಗಿ ನಿದ್ರೆ ಮಾಡುವುದರಿಂದ, ಆಲಸ್ಯ ಜೀವನ ಶೈಲಿ, ಅತಿಯಾದ ಭೋಜನ, ಅತಿಯಾದ ಜಿಡ್ಡು, ಕುರುಕುರು ಆಹಾರ, ಜಂಕ್‌ಫುಡ್ ಸೇವನೆ, ಜೋರಾದ ಗಾಳಿಗೆ ತಲೆಯೊಡ್ಡುವುದು, ಹಗಲು ನಿದ್ರೆ ಮಾಡುವುದು ಮುಂತಾದ ಕಾರಣಗಳಿಂದ ಶರೀರದ ತ್ರಿದೋಷಗಳಲ್ಲಿ ಒಂದಾದ ಕಫ ದೋಷವು ವಿಕೃತಗೊಳ್ಳುತ್ತದೆ. ಅದು ತಲೆಯಲ್ಲಿರುವ ಸ್ರೋತಸ್ಸುಗಳಿಗೆ ತಡೆಹಾಕಿ, ತಲೆಭಾರ, ಮುಖ ಊತ, ತಣ್ಣನೆಯ ಕೈಕಾಲು ಹಾಗೂ ಮೈಬಿಗಿ ಮುಂತಾದ ಲಕ್ಷಣಗಳೊಂದಿಗೆ ತಲೆನೋವು ತೀವ್ರವಾಗುತ್ತದೆ.

ಚಿಕಿತ್ಸೆ

ಮೂಗಿಗೆ ಔಷಧಿ ಹಾಕುವ ನಸ್ಯ ಚಿಕಿತ್ಸೆ, ಪಂಚಕರ್ಮದಲ್ಲಿ ಹೇಳಲಾಗಿರುವ, ತಲೆಗೆ ಸಂಬಂಧಿಸಿದ ದೋಷ ನಿವಾರಿಸುವ ಪ್ರಮುಖ ಚಿಕಿತ್ಸೆ.

ಆಯುರ್ವೇದದ ಪ್ರಕಾರ ಮೂಗು, ತಲೆ ಅಥವಾ ಮೆದುಳಿಗೆ ಹೆಬ್ಬಾಗಿಲು.

*ನಸ್ಯ ಚಿಕಿತ್ಸೆಯಲ್ಲಿ ಔಷಧಿಯನ್ನು,

 ಪುಡಿ (ಚೂರ್ಣ), ದ್ರವ (ಕಷಾಯ), ಎಣ್ಣೆ (ತೈಲ), ಹೊಗೆ (ಧೂಮ)- ಇವುಗಳಲ್ಲಿ ಯಾವುದಾದರೂ ಒಂದು ರೂಪದಲ್ಲಿ, ಮೂಗಿನ ಮೂಲಕ ನೀಡಲಾಗುವುದು. ಇದನ್ನು ‘ಶಿರೋವಿರೇಚಕ ನಸ್ಯ’ ಅಥವಾ ‘ತೀಕ್ಷ್ಣ ನಸ್ಯ’ ಎನ್ನುತ್ತಾರೆ.

ಈ ನಸ್ಯದ ಔಷಧೀಯ ಗುಣಕ್ಕೆ ವಿಕೃತ ಕಫವನ್ನು ದ್ರವಗೊಳಿಸಿ ಹೊರಹಾಕುವ ಸಾಮರ್ಥ್ಯವಿದ್ದು, ತಕ್ಷಣವೇ ಶಮನಗೊಳಿಸುತ್ತದೆ.

ನಸ್ಯ ಕರ್ಮದ ನಂತರ, ಮೂಗಿನ ಒಳಗೆ ಎಳೆದುಕೊಳ್ಳುವ ಔಷಧೀಯ ಹೊಗೆ, ಮೂಗಿನ ಸ್ರೋತಸ್ಸನ್ನು ಶುದ್ಧಿಗೊಳಿಸುತ್ತದೆ.

ಇದಾದ ನಂತರ ಔಷಧೀಯ ಕಷಾಯದಿಂದ ಬಾಯಿ ಮುಕ್ಕಳಿಸಲು ಹೇಳಲಾಗುವುದು. ಇದರಿಂದ ಗಂಟಲಿಗೆ ಅಂಟಿರುವ ದೋಷಗಳ ನಿವಾರಣೆಯಾಗುವುದು.

*ಈ ತೊಂದರೆ ಬುಡಸಮೇತ ವಾಸಿಯಾಗಬೇಕಾದರೆ ಶೋಧನ ಮತ್ತು ಶಮನ ಚಿಕಿತ್ಸೆ ನೀಡಬೇಕಾಗುವುದು. ರೋಗಿಯ ದೇಹ ಪ್ರಕೃತಿ ಪರೀಕ್ಷೆ ಮಾಡಿ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಇದಕ್ಕೆ ಹಲವು ಲೇಹ್ಯ ಕಷಾಯ, ಮುಂತಾದುವನ್ನು ಬಳಸುತ್ತಾರೆ.

 

ತಲೆನೋವು ಬರದಂತೆ ತಡೆಯಲು ಸಲಹೆ

*ಹೊಗೆ ಹಾಗೂ ಶೀತ ಗಾಳಿಗೆ ಮೈ ಒಡ್ಡಬೇಡಿ.

*ಮುಂಜಾನೆ, ಸಂಜೆ, ರಾತ್ರಿ ತಲೆಗೆ ಟೋಪಿ ಅಥವಾ ಸ್ಕಾರ್ಫ್ ಕಟ್ಟಿಕೊಳ್ಳಿ.

*ಪ್ರತಿನಿತ್ಯ ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶದ ಶಕ್ತಿ ಹೆಚ್ಚಿ ತಲೆಗೆ ಒತ್ತಡ ಕಡಿಮೆಯಾಗುವುದು.

*ಮಲ ಮೂತ್ರಗಳನ್ನು ತಡೆಯಬೇಡಿ.

*ಥಂಡಿ ಕಾಲದಲ್ಲಿ ಮೊಸರು, ಥಂಡಿ ಪದಾರ್ಥಗಳ ಸೇವನೆ ವರ್ಜಿಸಿ.

*ಅತಿಯಾದ ನಿದ್ರೆ, ಹಗಲು ನಿದ್ರೆ ಬಿಡಿ.

* ಮಳೆಯಲ್ಲಿ ನೆನೆಯಬೇಡಿ.

 

ತಲೆನೋವಿಗೆ ಮನೆ ಮದ್ದು

*ಒಣಶುಂಠಿಯನ್ನು ನೀರಿನಲ್ಲಿ ತೇಯ್ದು ಹಣೆಗೆ ಹಚ್ಚಿ.

*ಕಪ್ಪು ಎಳ್ಳನ್ನು ಹಾಲಿನಲ್ಲಿ ಅರೆದು ಅದರ ಕಲ್ಕವನ್ನು ಹಣೆಗೆ ಲೇಪಿಸಿ.

*ತ್ರಿಫಲ (ಅಳಲೆಕಾಯಿ, ನೆಲ್ಲಿಕಾಯಿ, ತಾರೆಕಾಯಿ), ತ್ರಿಕುಟ (ಶುಂಠಿ, ಮೆಣಸು, ಹಿಪ್ಪಲಿ) ಅರಿಶಿಣ, ಅಮೃತಬಳ್ಳಿ, ನೆಲನೆಲ್ಲಿ, ಇವುಗಳನ್ನು  ಕುದಿಸಿ ಕಷಾಯಮಾಡಿಕೊಂಡು ಕುಡಿಯಿರಿ.

        

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.