ಭಾನುವಾರ, ಜೂಲೈ 5, 2020
22 °C

ದಕ್ಷಿಣ ಆಫ್ರಿಕಾ ಬಗಲಿಗೆ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಂಚೂರಿಯನ್: ಹಾಶೀಮ್ ಆಮ್ಲಾ ಗಳಿಸಿದ ಶತಕಕ್ಕೆ ಯೂಸುಫ್ ಪಠಾಣ್ ಅವರು ಶತಕದ ಮೂಲಕವೇ ಪ್ರತ್ಯುತ್ತರ ನೀಡಿದರು. ಆದರೆ ಭಾರತಕ್ಕೆ ಮಾತ್ರ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಮಾತ್ರವಲ್ಲ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಸರಣಿ ಜಯಿಸುವ ಕನಸು ಕೂಡಾ ಭಗ್ನಗೊಂಡಿತು.ಸೆಂಚೂರಿಯನ್‌ನಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ 33 ರನ್‌ಗಳಿಂದ ಭಾರತವನ್ನು ಮಣಿಸಿದ ಗ್ರೇಮ್ ಸ್ಮಿತ್ ಬಳಗ ಐದು ಪಂದ್ಯಗಳ ಸರಣಿಯನ್ನು 3-2 ರಲ್ಲಿ ಗೆದ್ದುಕೊಂಡಿತು. ಸೂಪರ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 46 ಓವರ್‌ಗಳಲ್ಲಿ 9 ವಿಕೆಟ್‌ಗೆ 250 ರನ್ ಪೇರಿಸಿತು. ಆತಿಥೇಯರ ಇನಿಂಗ್ಸ್ ವೇಳೆ ಮಳೆ ಅಡ್ಡಿ ಉಂಟುಮಾಡಿತ್ತು. ಈ ಕಾರಣ ಭಾರತದ ಗೆಲುವಿಗೆ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 268 ರನ್‌ಗಳ ಗುರಿ ನೀಡಲಾಯಿತು.ಯೂಸುಫ್ ಪಠಾಣ್ (105, 70 ಎಸೆತ, 8 ಬೌಂ, 8 ಸಿಕ್ಸರ್) ಅವರ ವೀರೋಚಿತ ಹೋರಾಟದ ಹೊರತಾಗಿಯೂ ಮಹೇಂದ್ರ ಸಿಂಗ್ ದೋನಿ ಬಳಗ 40.2 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.ಸವಾಲಿನ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 119 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಅನುಭವಿಸುವ ಅಪಾಯ ಎದುರಿಸಿತ್ತು. ಆದರೆ ಪಠಾಣ್ ಅದ್ಭುತ ಬ್ಯಾಟಿಂಗ್ ಮೂಲಕ ಸ್ಮಿತ್ ಪಡೆಯಲ್ಲಿ ನಡುಕ ಹುಟ್ಟಿಸಿದರು.ಅವರು ಜಹೀರ್ ಖಾನ್ (24) ಜೊತೆ ಒಂಬತ್ತನೇ ವಿಕೆಟ್‌ಗೆ 12.4 ಓವರ್‌ಗಳಲ್ಲಿ 100 ರನ್‌ಗಳ ಜೊತೆಯಾಟ ನೀಡಿದರು. ಇದರಲ್ಲಿ ಜಹೀರ್ ಕೊಡುಗೆ 13 ರನ್ ಮಾತ್ರ. ಒಂದು ಹಂತದಲ್ಲಿ ಭಾರತಕ್ಕೆ ಅಸಾಮಾನ್ಯ ಗೆಲುವು ಲಭಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು.ಆದರೆ ಮಾರ್ನ್ ಮಾರ್ಕೆಲ್ (52ಕ್ಕೆ 4) ಎಸೆತದಲ್ಲಿ ಪಠಾಣ್ ಔಟಾಗುತ್ತಿದ್ದಂತೆಯೇ ಭಾರತದ ಗೆಲುವಿನ ಕನಸು ಕೂಡಾ ಅಸ್ತಮಿಸಿತು. ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಶತಕ ಗಳಿಸಿದ ಪಠಾಣ್‌ಗೆ ಶಹಬ್ಬಾಸ್ ಹೇಳಲೇಬೇಕು.ಇದು ಅವರ ಎರಡನೇ ಏಕದಿನ ಶತಕ. ಈ ಎರಡೂ ಶತಕಗಳು ಏಳನೇ ಕ್ರಮಾಂಕದಲ್ಲಿ ದಾಖಲಾಗಿವೆ.ಸರಣಿಯ ಅತಿ ಮಹತ್ವದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಅವರ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾದದ್ದು ಮಾತ್ರ ದುರದೃಷ್ಟ ಎನ್ನಬೇಕು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಕೈಕೊಟ್ಟಿತು.ಪಾರ್ಥಿಲ್ ಪಟೇಲ್ (34 ಎಸೆತಗಳಲ್ಲಿ 38) ಭಾರತದ ಪರ ಎರಡನೇ ಗರಿಷ್ಠ ಸ್ಕೋರರ್ ಎನಿಸಿದರು. ದೋನಿ ಒಳಗೊಂಡಂತೆ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಎರಡಂಕಿಯ ಮೊತ್ತ ಕೂಡಾ ತಲುಪಲಿಲ್ಲ.ಆಮ್ಲಾ ಶತಕ:
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಮೊತ್ತ ಪೇರಿಸಲು ಕಾರಣರಾದದ್ದು ಹಾಶೀಮ್ ಆಮ್ಲಾ. ಸೊಗಸಾದ ಶತಕದ (ಅಜೇಯ 116, 132 ಎಸೆತ, 9 ಬೌಂಡರಿ) ಮೂಲಕ ಅವರು ತಂಡದ ಇನಿಂಗ್ಸ್‌ಗೆ ಜೀವ ತುಂಬಿದರು.ಗ್ರೇಮ್ ಸ್ಮಿತ್ (7) ಅವರನ್ನು ತಂಡ ಬೇಗನೇ ಕಳೆದುಕೊಂಡಿತು. ಆದರೆ ಆಮ್ಲಾ ಬಳಿಕ ಎರಡು ಉತ್ತಮ ಜೊತೆಯಾಟಗಳಲ್ಲಿ ಪಾಲ್ಗೊಂಡು ಭಾರತದ ಬೌಲರ್‌ಗಳನ್ನು ಕಾಡಿದರು.ಅವರು ಮಾರ್ನ್ ವಾನ್ ವಿಕ್ (63 ಎಸೆತಗಳಲ್ಲಿ 56) ಜೊತೆ ಎರಡನೇ ವಿಕೆಟ್‌ಗೆ 97 ರನ್‌ಗಳನ್ನು ಸೇರಿಸಿದರು.ಆ ಬಳಿಕ ನಾಲ್ಕನೇ ವಿಕೆಟ್‌ಗೆ ಜೆಪಿ ಡುಮಿನಿ (44 ಎಸೆತಗಳಲ್ಲಿ 35) ಜೊತೆ 102 ರನ್‌ಗಳನ್ನು ಕಲೆಹಾಕಿದರು.ದಕ್ಷಿಣ ಆಫ್ರಿಕಾ ಇನಿಂಗ್ಸ್‌ನ 42ನೇ ಓವರ್ ವೇಳೆ ಮಳೆಬಂದ ಕಾರಣ ಆಟಕ್ಕೆ ಅಡ್ಡಿಯಾಯಿತು. ಆ ಬಳಿಕ ಓವರ್‌ಗಳ ಸಂಖ್ಯೆಯನ್ನು 46ಕ್ಕೆ ಇಳಿಸಿ ಪಂದ್ಯ ಮುಂದುವರಿಸಲಾಯಿತು.ಕೊನೆಯ ನಾಲ್ಕು ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 24 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.ಮೊದಲ 15 ಓವರ್‌ಗಳ ಒಳಗೆ ದೋನಿ ತನ್ನ ಆರು ಬೌಲರ್‌ಗಳನ್ನು ಬಳಸಿಕೊಂಡರೂ ಲಭಿಸಿದ್ದು ಒಂದು ವಿಕೆಟ್ ಮಾತ್ರ.ಆದರೆ ಎದುರಾಳಿ ನಾಯಕ ಸ್ಮಿತ್ ಮೊದಲ 15 ಓವರ್‌ಗಳಲ್ಲಿ ಮೂರು ಬೌಲರ್‌ಗಳ ನೆರವಿನಿಂದ ಭಾರತದ 6 ವಿಕೆಟ್ ಪಡೆಯಲು ಯಶಸ್ವಿಯಾದರು.
ಸ್ಕೋರು ವಿವರ

ದಕ್ಷಿಣ ಆಫ್ರಿಕಾ 46 ಓವರ್‌ಗಳಲ್ಲಿ 9 ವಿಕೆಟ್‌ಗೆ 250

ಗ್ರೇಮ್ ಸ್ಮಿತ್ ಸಿ ಪಠಾಣ್ ಬಿ ಜಹೀರ್ ಖಾನ್  07

ಹಾಶೀಮ್ ಆಮ್ಲಾ ಔಟಾಗದೆ  116

ಮಾರ್ನ್ ವಾನ್ ವಿಕ್ ಸಿ ಮತ್ತು ಬಿ ಯುವರಾಜ್ ಸಿಂಗ್  56

ಎಬಿ ಡಿವಿಲಿಯರ್ಸ್ ಸ್ಟಂಪ್ ದೋನಿ ಬಿ ಯುವರಾಜ್ ಸಿಂಗ್  11

ಜೆಪಿ ಡುಮಿನಿ ಸಿ ಮತ್ತು ಬಿ ಮುನಾಫ್ ಪಟೇಲ್  35

ಫಾಫ್ ಡು ಪ್ಲೆಸಿಸ್ ಬಿ ಮುನಾಫ್ ಪಟೇಲ್  08

ಜಾನ್ ಬೋಥಾ ಸಿ ದೋನಿ ಬಿ ಮುನಾಫ್ ಪಟೇಲ್  02

ರಾಬಿನ್ ಪೀಟರ್‌ಸನ್ ಬಿ ಜಹೀರ್ ಖಾನ್  02

ಡೆಲ್ ಸ್ಟೇನ್ ರನೌಟ್  00

ಮಾರ್ನ್ ಮಾರ್ಕೆಲ್ ರನೌಟ್  00

ಲೊನ್‌ವಾಬೊ ತ್ಸೊತ್ಸೊಬೆ ಔಟಾಗದೆ  00

ಇತರೆ (ಬೈ 6, ವೈಡ್ 5)  11ವಿಕೆಟ್ ಪತನ: 1-16 (ಸ್ಮಿತ್; 2.3), 2-113 (ವಾನ್ ವಿಕ್; 22.2), 3-129 (ಡಿವಿಲಿಯರ್ಸ್; 26.1), 4-231 (ಡುಮಿನಿ; 42.3), 5-242 (ಡು ಪ್ಲೆಸಿಸ್; 44.2), 6-244 (ಬೋಥಾ; 44.4), 7-250 (ಪೀಟರ್‌ಸನ್; 45.2), 8-250 (ಸ್ಟೇನ್; 45.3), 9-250 (ಮಾರ್ಕೆಲ್; 45.5)ಬೌಲಿಂಗ್: ಜಹೀರ್ ಖಾನ್ 9-1-47-2, ಮುನಾಫ್ ಪಟೇಲ್ 8-0-50-3, ಪಿಯೂಷ್ ಚಾವ್ಲಾ 7-0-32-0, ಹರಭಜನ್ ಸಿಂಗ್ 8-0-33-0, ಯೂಸುಫ್ ಪಠಾಣ್ 2-0-10-0, ಯುವರಾಜ್ ಸಿಂಗ್ 8-0-45-2, ರೋಹಿತ್ ಶರ್ಮ 2-0-14-0, ಸುರೇಶ್ ರೈನಾ 2-0-13-0

ಭಾರತ 40.2 ಓವರ್‌ಗಳಲ್ಲಿ 234

(ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಗೆಲುವಿನ ಗುರಿ 268)

ಪಾರ್ಥಿವ್ ಪಟೇಲ್ ಸಿ ಪ್ಲೆಸಿಸ್ ಬಿ ಮಾರ್ನ್ ಮಾರ್ಕೆಲ್  38

ರೋಹಿತ್ ಶರ್ಮ ಬಿ ಲೊನ್‌ವಾಬೊ ತ್ಸೊತ್ಸೊಬೆ  05

ವಿರಾಟ್ ಕೊಹ್ಲಿ ಸಿ ಡಿವಿಲಿಯರ್ಸ್ ಬಿ ಮಾರ್ನ್ ಮಾರ್ಕೆಲ್  02

ಮಹೇಂದ್ರ ಸಿಂಗ್ ದೋನಿ ಸಿ ಸ್ಮಿತ್ ಬಿ ಮಾರ್ನ್ ಮಾರ್ಕೆಲ್  05

ಯುವರಾಜ್ ಸಿಂಗ್ ಸಿ ಡುಮಿನಿ ಬಿ ಡೆಲ್ ಸ್ಟೇನ್  08

ಸುರೇಶ್ ರೈನಾ ಸಿ ಮಾರ್ಕೆಲ್ ಬಿ ಡೆಲ್ ಸ್ಟೇನ್  11

ಯೂಸುಫ್ ಪಠಾಣ್ ಸಿ ಪ್ಲೆಸಿಸ್ ಬಿ ಮಾರ್ನ್ ಮಾರ್ಕೆಲ್  105

ಹರಭಜನ್ ಸಿಂಗ್ ಸಿ ಡುಮಿನಿ ಬಿ ಜಾನ್ ಬೋಥಾ  13

ಪಿಯೂಷ್ ಚಾವ್ಲಾ ಬಿ ರಾಬಿನ್ ಪೀಟರ್‌ಸನ್  08

ಜಹೀರ್ ಖಾನ್ ಸಿ ಮಾರ್ಕೆಲ್ ಬಿ ಲೊನ್‌ವಾಬೊ ತ್ಸೊತ್ಸೊಬೆ  24

ಮುನಾಫ್ ಪಟೇಲ್ ಔಟಾಗದೆ  04

ಇತರೆ: (ಲೆಗ್‌ಬೈ-2, ವೈಡ್-7, ನೋಬಾಲ್-2)  11ವಿಕೆಟ್ ಪತನ: 1-21 (ರೋಹಿತ್; 3.6), 2-31 (ಕೊಹ್ಲಿ; 6.1), 3-45 (ದೋನಿ; 8.3), 4-60 (ಪಾರ್ಥಿವ್; 10.6), 5-60 (ಯುವರಾಜ್; 11.6), 6-74 (ರೈನಾ; 13.5), 7-98 (ಹರಭಜನ್; 19.1), 8-119 (ಚಾವ್ಲಾ; 22.4), 9-219 (ಪಠಾಣ್; 35.2), 10-234 (ಜಹೀರ್; 40.2)ಬೌಲಿಂಗ್: ಡೆಲ್ ಸ್ಟೇನ್ 9-1-32-2, ಲೊನ್‌ವಾಬೊ ತ್ಸೊತ್ಸೊಬೆ 7.2-0-57-2, ಮಾರ್ನ್ ಮಾರ್ಕೆಲ್ 8-0-52-4, ಜಾನ್ ಬೋಥಾ 8-0-33-1, ರಾಬಿನ್ ಪೀಟರ್‌ಸನ್ 7-0-45-1, ಫಾಫ್ ಡು ಪ್ಲೆಸಿಸ್ 1-0-13-0ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 33 ರನ್ ಗೆಲುವು ಹಾಗೂ

ಸರಣಿಯಲ್ಲಿ 3-2 ಅಂತರದ ಜಯಪಂದ್ಯಶ್ರೇಷ್ಠ: ಹಾಶೀಮ್ ಆಮ್ಲಾ; ಸರಣಿ ಶ್ರೇಷ್ಠ: ಮಾರ್ನ್ ಮಾರ್ಕೆಲ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.