ಶನಿವಾರ, ಮೇ 21, 2022
27 °C

ದಸರಾ ಹಬ್ಬದ ಪ್ರಯುಕ್ತ 500 ಹೆಚ್ಚುವರಿ ಬಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿಯು ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ನಗರದಿಂದ 500 ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದ್ದರೂ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಮಂಗಳವಾರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.`ಸಾಂಸ್ಕೃತಿಕ ರಾಜಧಾನಿ~ ಮೈಸೂರಿಗೆ ಬುಧವಾರ ಹಾಗೂ ಗುರುವಾರ ನಗರದಿಂದ 200 ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದಲ್ಲದೆ, ರಾಜ್ಯದ ಇತರ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ಮೈಸೂರಿಗೆ 175 ಬಸ್‌ಗಳನ್ನು ಬಿಡಲಾಗಿದೆ~ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಯಾಣಿಕರ ಅನುಕೂಲಕ್ಕಾಗಿ ಹಬ್ಬದ ಪ್ರಯುಕ್ತ ಮೈಸೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ `ಗಿರಿದರ್ಶಿನಿ~, `ನಗರದರ್ಶಿನಿ~, `ಜಲದರ್ಶಿನಿ~ ಹಾಗೂ `ದೇವದರ್ಶಿನಿ~ ಹೆಸರಿನಲ್ಲಿ ವಿಶೇಷ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಅವರು ಹೇಳಿದರು.ಕೆಎಸ್‌ಆರ್‌ಟಿಸಿಯು ಮೈಸೂರಿಗೆ 200 ವಿಶೇಷ ಬಸ್‌ಗಳ ಸಂಚಾರ ಆರಂಭಿಸಿದ್ದರೂ ಶೇ 90ರಷ್ಟು ಬಸ್‌ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿ ತುಳುಕುತ್ತಿದ್ದ ದೃಶ್ಯ ಮಂಗಳವಾರ ಕಂಡು ಬಂದಿತು.`ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಶೇ 15ರಷ್ಟು ಹೆಚ್ಚಾಗುತ್ತದೆ. ಬುಧವಾರ ಹಾಗೂ ಗುರುವಾರ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುವುದು ಸಹಜ. ಈ ಹಿನ್ನೆಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಅಗತ್ಯ ಬಸ್‌ಗಳನ್ನು ಓಡಿಸಲು ಸಂಸ್ಥೆಯು ಸಿದ್ಧವಿದೆ~ ಎಂದು ಕೆಎಸ್‌ಆರ್‌ಟಿಸಿ ಸಂಚಾರ ವಿಭಾಗದ ಮುಖ್ಯ ವ್ಯವಸ್ಥಾಪಕ ಕೆ.ಎ.ರಾಜ್‌ಕುಮಾರ್ ತಿಳಿಸಿದ್ದಾರೆ.ಇನ್ನು ಮೈಸೂರು ಕಡೆ ತೆರಳುತ್ತಿದ್ದ ಖಾಸಗಿ ಬಸ್‌ಗಳ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. ಸಂಚಾರಿ ತಜ್ಞ ಎ.ಡಬ್ಲ್ಯು. ಶ್ರೀಧರ್ ಅವರ ಪ್ರಕಾರ, ಬುಧವಾರ ಹಾಗೂ ಗುರುವಾರಗಳಂದು ಈ ರಸ್ತೆಯಲ್ಲಿ ಗಂಟೆಗೆ ಆರು ಸಾವಿರಕ್ಕಿಂತ ಅಧಿಕ ಕಾರುಗಳು ಸಂಚರಿಸಲಿವೆ. ಒಂದು ಲೇನ್‌ನಲ್ಲಿ ಗಂಟೆಗೆ ಕನಿಷ್ಠ 1100 ವಾಹನಗಳು ಸಂಚರಿಸುತ್ತವೆ. ಹಬ್ಬದ ಸಮಯದಲ್ಲಿ ಮೈಸೂರು ರಸ್ತೆಯ ಮೂರು ಲೇನ್‌ಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ವಾಹನಗಳು ಸಂಚರಿಸಲಿವೆ ಎಂಬುದು ಅವರ ಅಂದಾಜು.ವಾಹನ ಸಂಚಾರ ದಟ್ಟಣೆ:
ದಸರಾ ಹಬ್ಬದ ಪ್ರಯುಕ್ತ ಮೆಜೆಸ್ಟಿಕ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ದಟ್ಟಣೆ ಅಧಿಕವಾಗಿತ್ತು. ಮೆಜೆಸ್ಟಿಕ್ ಸೇರುವ ರಸ್ತೆಗಳಲ್ಲಿ ವಾಹನ ಸಂಚಾರ ಮಂಗಳವಾರ ಸಂಜೆ ಅಸ್ತವ್ಯಸ್ತಗೊಂಡರೆ, ಇನ್ನೂ ಕೆಲವು ರಸ್ತೆಗಳಲ್ಲಿ ವಾಹನಗಳು ಆಮೆ ನಡಿಗೆಯಲ್ಲಿ ಸಾಗಿದವು.ಮೈಸೂರು ರಸ್ತೆ, ಪೀಣ್ಯ, ಯಶವಂತಪುರ, ಹೊಸೂರು ರಸ್ತೆ, ಕೆ.ಆರ್.ಪುರ, ಸಿಟಿ ಮಾರುಕಟ್ಟೆ ಮತ್ತು ಬಾಣಸವಾಡಿ ರಸ್ತೆಗಳಲ್ಲಿಯೂ ವಾಹನ ದಟ್ಟಣೆ ಅಧಿಕವಾಗಿತ್ತು.ನಗರದಲ್ಲಿ ಕೆಲಸ ಮಾಡುವ ಹಾಗೂ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಪ್ರಯಾಣಿಕರು ಮೆಜೆಸ್ಟಿಕ್‌ಗೆ ತೆರಳಿ ತಮ್ಮ ಊರುಗಳ ಕಡೆಯ ಬಸ್‌ಗಳನ್ನು ಹತ್ತಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಹೆಚ್ಚುವರಿ ಬಸ್‌ಗಳನ್ನು ಓಡಿಸಿದರೂ ಹಲವು ಭಾಗಗಳಿಂದ ಖಾಸಗಿ ವಾಹನಗಳು ಮೆಜೆಸ್ಟಿಕ್‌ನತ್ತ ಆಗಮಿಸುತ್ತಿದ್ದುದರಿಂದ ಈ ಪ್ರದೇಶದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಗರ ರೈಲು ನಿಲ್ದಾಣ ಮತ್ತು ಅದರ ಸಮೀಪದ ರಸ್ತೆಗಳಲ್ಲಿಯೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಂಪೇಗೌಡ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಶೇಷಾದ್ರಿ ರಸ್ತೆ, ಜೆ.ಸಿ. ರಸ್ತೆ, ಕಾಟನ್‌ಪೇಟೆ ಮುಖ್ಯ ರಸ್ತೆ, ಕಾರ್ಪೊರೇಷನ್ ವೃತ್ತದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.