ಸೋಮವಾರ, ಜೂನ್ 14, 2021
26 °C
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ

ದಾಖಲು ಹೆಚ್ಚು, ಕ್ರಮ ಕಡಿಮೆ

ಪ್ರಕಾಶ ಕುಗ್ವೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಎದುರು ಆಗಿನ ಮುಖ್ಯಮಂತ್ರಿ ಬಿ.ಎಸ್‌.­ಯಡಿಯೂ­ರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸಿದ್ದರಿಂದ 2009ರ ಲೋಕ­ಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆದಿತ್ತು.ಪರಸ್ಪರರನ್ನು ಮಣಿಸುವ ಮೇಲಾ­ಟ­­ದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು– ಅಂದರೆ ಚುನಾವಣಾ ನೀತಿ ಸಂಹಿತೆಯ 105 ಉಲ್ಲಂಘನೆ ಪ್ರಕರಣಗಳು ಈ ಕ್ಷೇತ್ರದಿಂದಲೇ ದಾಖಲಾಗಿದ್ದವು.ಬಂಗಾರಪ್ಪ, ರಾಘವೇಂದ್ರ ಸೇರಿ­ದಂತೆ ಹಲವು ರಾಜಕಾರಣಿಗಳ ವಿರುದ್ಧ ಈ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದವು. ಚುನಾವಣಾ ಆಯೋಗದ ಮಾಹಿತಿ­ಯಂತೆ 80 ಪ್ರಕರಣಗಳು ಬಿಜೆಪಿ ಮೇಲೆಯೇ ಇವೆ.ಈಗ ಐದು ವರ್ಷಗಳು ಕಳೆದಿದೆ. ಸಂಸತ್‌ ಸದಸ್ಯ ಬಿ.ವೈ. ರಾಘವೇಂದ್ರ ಅವರ ಮೇಲೆ ಹಲವು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿದ್ದರೂ, ಅವರು ತಮ್ಮ ಅಧಿಕಾರಾವಧಿಯನ್ನು ಸಮಸ್ಯೆಗಳಿಲ್ಲದೆ ಮುಗಿಸಿದ್ದಾರೆ. ಇವ­ರೊಬ್ಬರೇ ಅಲ್ಲ, ನೀತಿ ಸಂಹಿತೆ ಉಲ್ಲಂಘಿಸಿದ ಯಾವೊಬ್ಬ ಜನಪ್ರತಿ­ನಿಧಿಯೂ ಇದುವರೆಗೂ ಚುನಾವಣಾ ಆಯೋಗದ ಕ್ರಮಕ್ಕೆ ಒಳಗಾಗಿಲ್ಲ!2009ರ ‘ಮಹಾಸಮರ’ದ ಸಮಯ­ದಲ್ಲಿ ರಾಜ್ಯದಲ್ಲಿ ಬಿ.ಎಸ್‌.­ಯಡಿಯೂರಪ್ಪ ಮುಖ್ಯಮಂತ್ರಿ­ಯಾಗಿದ್ದರು. ಅವರ ಪುತ್ರನೇ ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಅವ­ರಿಗೆ ಶತಾಯಗತಾಯ ಗೆಲುವು ಪಡೆಯಬೇಕಾಗಿತ್ತು. ಕಾಂಗ್ರೆಸ್‌ಗೂ ಇದು ಸವಾಲಿನ ಪ್ರಶ್ನೆಯಾಗಿತ್ತು. ಜೆಡಿಎಸ್‌ ಕೂಡ ಅದರ ನೆರವಿಗೆ ಬಂದಿತ್ತು. ಕದನದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಲೆಕ್ಕವೇ ಇಲ್ಲದಾಯಿತು. ಕೊನೆಗೆ ಬಿಜೆಪಿ ಗೆದ್ದ ರೀತಿಯ ಬಗ್ಗೆ ಅವರದೇ ಪಕ್ಷದ ಮುಖಂಡ ಕೆ.ಎಸ್‌.­ಈಶ್ವರಪ್ಪ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರು. ಇದು ರಾಜಕೀಯ­ದಲ್ಲಿ ದೊಡ್ಡ ಸುದ್ದಿಯಾಗಿತ್ತು.ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಅಡಿ 27, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ 39, ಭಾರತೀಯ ದಂಡ ಸಂಹಿತೆ ಅಡಿ 20, ಕರ್ನಾಟಕ ಪೊಲೀಸ್‌ ಕಾಯ್ದೆ ಉಲ್ಲಂಘಿಸಿದ 2 ಹಾಗೂ ಅಬಕಾರಿ ಇಲಾಖೆ ದಾಖಲಿಸಿದ 17, ಒಟ್ಟಾರೆ 105 ಪ್ರಕರಣಗಳು ಈ ಲೋಕಸಭಾ ಕ್ಷೇತ್ರದಲ್ಲಿ ದಾಖಲಾಗಿದ್ದವು.ಸೊರಬದ ಉಳವಿಯ ಬಿಜೆಪಿ ಪದಾಧಿಕಾರಿಯೊಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಮದ್ಯ ಪತ್ತೆಯಾಗಿದ್ದು, ಇದೇ ಪ್ರಕರಣದಲ್ಲಿ ಆಗ ಸಚಿವರಾಗಿದ್ದ ಎಚ್‌.ಹಾಲಪ್ಪ ಅವರ ಗನ್‌ಮನ್‌ನ ಬಂದೂಕಿನಿಂದ ಗುಂಡು ಸಿಡಿದಿದ್ದು, ಭದ್ರಾವತಿಯಲ್ಲಿ ಬಂಗಾರಪ್ಪ–ಬಿ.ಕೆ.ಸಂಗಮೇಶ್ವರ ಬೆಂಬ­ಲಿ­ಗರ ಹೊಡೆದಾಟ, ಸಾಗರದಲ್ಲಿ  ಕಾಗೋಡು ತಿಮ್ಮಪ್ಪ ಅವರ ವಿವಾದಾ­ತ್ಮಕ ಭಾಷಣ, ಭದ್ರಾವತಿಯ ಕಾರೇ­ಹಳ್ಳಿ ರಸ್ತೆ ಗಡಿಯಲ್ಲಿ ಸಿಕ್ಕ ದಾಖಲೆ ಇಲ್ಲದ ರೂ. 52 ಲಕ್ಷ, ಡಿ.ಎಚ್‌.ಶಂಕರ­ಮೂರ್ತಿ ಅವರು ಸಂತ ಥಾಮಸ್‌ ಸಮುದಾಯ ಭವನದಲ್ಲಿ ಕಾರ್ಯ­ಕರ್ತರಿಗೆ ಊಟ ಹಾಕಿಸಿದ್ದು, ಮತ್ತಿ­ತರರ ಪ್ರಕರಣಗಳು ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಗಳಾಗಿದ್ದವು. ಬಿಜೆಪಿ ಪರ ಪ್ರಚಾರಕ್ಕೆ ಬಂದ ನಟ ಜಗ್ಗೇಶ್‌, ಕಾಂಗ್ರೆಸ್‌ ಪರ ಬಂದಿದ್ದ  ಮಾರ್ಗರೆಟ್‌ ಆಳ್ವ, ಹೋಟೆಲ್‌ನಲ್ಲಿ ಸಭೆ ನಡೆಸಿ ಶ್ರೀಕಾಮಾಕ್ಷಿ ಕೋ–ಆಪರೇಟಿವ್ ಸೊಸೈಟಿಗೆ ರೂ. 5 ಲಕ್ಷ ನೀಡುವ ಭರವಸೆ ನೀಡಿದ್ದ ಕೆ.ಎಸ್‌.­ಈಶ್ವರಪ್ಪ, ಹೊಸನಗರದಲ್ಲಿ ಕಾರ್ಯ­ಕರ್ತರ ಸಭೆಯ ಲೆಕ್ಕ ನೀಡದ ಬಿ.ವೈ.­ರಾಘವೇಂದ್ರ, ಚರ್ಚ್–ಶಾದಿ ಮಹಲ್‌­ಗಳಲ್ಲಿ ಮತಯಾಚನೆ ಮಾಡಿದ ಎಸ್‌.ಬಂಗಾರಪ್ಪ ವಿರುದ್ಧ ನೀತಿ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದ್ದವು. ಊಟ ಹಾಕಿಸಿದ್ದು, ಹಣ ಹಂಚಿದ್ದು, ಅನುಮತಿ ಇಲ್ಲದೆ ವಾಹನ ಬಳಸಿದ್ದು, ಸಭೆ ನಡೆಸಿದ್ದು ಮತ್ತಿತರ ಪ್ರಕರಣಗಳಿಗೆ ಲೆಕ್ಕವೇ ಇಲ್ಲ; ದಾಖಲಾಗದ ಪ್ರಕರಣಗಳು ಇನ್ನಷ್ಟು ಇದ್ದವೊ!.ಇವುಗಳಲ್ಲಿ ಸೊರಬದ ಉಳವಿ­ಯಲ್ಲಿ ಮದ್ಯ ದಾಸ್ತಾನು ಪ್ರಕರಣದಲ್ಲಿ ಆರೋಪಿ ನ್ಯಾಯಾಲಯದಲ್ಲಿ ಹಾಜ­ರಾಗಿ ಷರತ್ತಿನ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಬಂಗಾರಪ್ಪ­–­ಸಂಗಮೇಶ್ವರರ ಗಲಾಟೆಯಲ್ಲಿ ಇಂದಿಗೂ ಸಂಗಮೇಶ್ವರ ಅವರು  ಪೊಲೀಸ್‌ ಠಾಣೆಗೆ ಓಡಾಡುತ್ತಿದ್ದಾರೆ. ಅಬಕಾರಿ ಇಲಾಖೆಯ ಎಲ್ಲಾ ಪ್ರಕರಣಗಳು ಇನ್ನೂ ವಿಚಾರಣೆಯಲ್ಲಿವೆ.‘ಚುನಾವಣಾ ಆಯೋಗ ಪ್ರಕರಣ ದಾಖಲಿಸುತ್ತದೆ. ಮುಂದಿನ ಕ್ರಮವನ್ನು ಪೊಲೀಸರು ಜರುಗಿಸಬೇಕು. ನಾನಾ ನೆಪವೊಡ್ಡಿ ಜನಪ್ರತಿನಿಧಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು  ಹಿಂಜ­ರಿ­ಯುತ್ತಾರೆ. ಇದರಿಂದ ಆಯೋಗದ ಕ್ರಮಗಳ ಬಗ್ಗೆಯೇ ಜನ ಅನುಮಾನ ಪಡುವಂತಾಗುತ್ತದೆ’ ಎನ್ನುತ್ತಾರೆ ವಕೀಲ ಕೆ.ಪಿ.ಶ್ರೀಪಾಲ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.