ಶನಿವಾರ, ಏಪ್ರಿಲ್ 10, 2021
29 °C

ದಿಕ್ಕು ತಪ್ಪಿಸುವ ಜಾರಕಿಹೊಳಿ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: `ಅರಬಾವಿ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತನನ್ನು ಬರುವ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಗುರುತಿಸಲಾಗುವುದು ಮತ್ತು ಪ್ರತಿಷ್ಠೆ ಎನ್ನುವ ರೀತಿಯಲ್ಲಿ ಜೆಡಿಎಸ್ ಪಕ್ಷದಿಂದ ಹೋರಾಟ ಮಾಡಲಾಗುವುದು~ ಎಂದು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಅಶೋಕ ಪೂಜೇರಿ ಹೇಳಿದರು.ಇಲ್ಲಿ ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ಅರಬಾವಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಅರಬಾವಿ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವಂತೆ ಕಾರ್ಯಕರ್ತರನ್ನು ಸಿದ್ಧಗೊಳಿಸುವ ಕಾರ್ಯತಂತ್ರ ರೂಪಿಸಲಾಗುವುದು ಎಂದರು.ಗೋಕಾಕ ತಾಲ್ಲೂಕಿನಲ್ಲಿ ಜಾರಕಿಹೊಳಿ ಕುಟುಂಬದ ಸದಸ್ಯರು ಒಂದೊಂದು ಪಕ್ಷದೊಂದಿಗೆ ಗುರುತಿಸಿಕೊಂಡು ಕಾರ್ಯಕರ್ತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇತ್ತ ಕಾರ್ಯಕರ್ತರನ್ನೂ ಬೆಳೆಸದೆ ಅತ್ತ ಪಕ್ಷವನ್ನೂ ಬೆಳೆಸದೆ ಕೇವಲ ತಮ್ಮ ವೈಯಕ್ತಿಕ ವರ್ಚಸ್ಸು, ಅಧಿಕಾರ ಪಡೆಯುತ್ತಿದ್ದಾರೆ ಎಂದು ಅವರು ಆಪಾದಿಸಿದರು.ಕಚ್ಚಾಟ, ಗುಂಪುಗಾರಿಕೆಯಿಂದ  ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಇಂದು ಗೊಂದಲದ ಗೂಡುಗಳಾಗಿವೆ. ಈಗ ಮತ್ತೆ ಕುಮಾರಸ್ವಾಮಿಯವರ ಆಡಳಿತ ಬೇಕು ಎನ್ನುವಷ್ಟರ ಮಟ್ಟಿಗೆ ಜನ ಬದಲಾಗಿದ್ದು, ಸದ್ಯ ರಾಜ್ಯದಲ್ಲಿ ಕುಮಾರಸ್ವಾಮಿ ಅಲೆ ಇದೆ ಎಂದರು.ಸಕ್ಕರೆ ಕಾರ್ಖಾನೆಗಳ ಆಡಳಿತ ಮತ್ತು ಮಾಲೀಕರೆಲ್ಲ ಸರ್ಕಾರದಲ್ಲಿಯ ಸಚಿವರು, ಶಾಸಕರೇ ಇರುವುದರಿಂದ ರೈತರ ಕಬ್ಬಿಗೆ ಯೋಗ್ಯ ಬೆಲೆ ಕೊಡದೆ ಶೋಷಣೆ ಮಾಡುತ್ತ್ದ್ದಿದಾರೆ. ರಾಜ್ಯದಲ್ಲಿ ಎಸ್‌ಎಪಿ ಕಾನೂನು ಜಾರಿಗೆ ತಂದು ಸಕ್ಕರೆ ಕಾರ್ಖಾನೆಗಳ ಮೇಲೆ ನಿಯಂತ್ರಣ ತರಬೇಕಾಗಿದೆ ಎಂದರು.ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ರೈತರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.ಯಾದವಾಡದ ಈಶ್ವರ ಕತ್ತಿ ಮಾತನಾಡಿ, ಅಶೋಕ ಪೂಜೇರಿ ಅವರು ಗೋಕಾಕದೊಂದಿಗೆ ಅರಬಾವಿ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.ಮುಖಂಡರಾದ ಅರವಿಂದ ದಳವಾಯಿ, ಪ್ರಕಾಶ ಸೋನವಾಲಕರ, ಕುಲಿಗೋಡದ ಸತೀಶ ವಂಟಗೋಡಿ, ಡಾ. ಸೂರ್ಯವಂಶಿ, ವೈ.ಎಚ್. ಪಾಟೀಲ, ಶ್ರೀಕಾಂತ ಪರುಶೆಟ್ಟಿ, ಲಕ್ಷ್ಮಣ ಕೋಳಿ, ನಾಗನೂರದ ಸುರೇಶ ಸಕ್ರೆಪ್ಪಗೋಳ, ಮಲಿಕ್, ಈರಣ್ಣ ಢವಳೇಶ್ವರ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆಲವರು ಜೆಡಿಎಸ್ ಪಕ್ಷ ಸೇರಿದರು. ವೆಂಕಟೇಶ ಜಂಬಗಿ ನಿರೂಪಿಸಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.