ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಟ್ಟ ಮುಖ್ಯಮಂತ್ರಿ ಆಗುವರೇ ಸಿದರಾಮಯ್ಯ?

Last Updated 15 ಫೆಬ್ರುವರಿ 2016, 19:55 IST
ಅಕ್ಷರ ಗಾತ್ರ

ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಕುರಿತು ಊಹಾಪೋಹಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ರಾಜ್ಯಗಳು ತಮ್ಮ ಬಜೆಟ್‌ ಸಿದ್ಧಪಡಿಸುವಲ್ಲಿ ಮಗ್ನವಾಗಿವೆ. ಬಜೆಟ್‌ಗಳು ಎಷ್ಟು ಪರಿಣಾಮಕಾರಿ ಆಗಿವೆ ಎಂಬ ಬಗ್ಗೆ ಈ ಹೊತ್ತಿನಲ್ಲಿ ದೂರಗಾಮಿ ದೃಷ್ಟಿ ಹರಿಸುವುದು ಒಳ್ಳೆಯದು. ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ಸಾವಿರ ದಿನ ಕಳೆದಿರುವ ಹಿನ್ನೆಲೆಯಲ್ಲಿ, ಈ ರಾಜ್ಯದ ಬಜೆಟ್‌ ಅವಲೋಕಿಸಲು ಇದು ಸಕಾಲ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಹಾಗೆ ಮಾಡುವ ಮೂಲಕ ಈ ಇಲಾಖೆ ಬಗ್ಗೆ ತಮಗಿರುವ ಪ್ರೀತಿಯನ್ನು, ಹಣಕಾಸು ಇಲಾಖೆ ನಿಭಾಯಿಸುವಲ್ಲಿ ತಮ್ಮ ಸಹೋದ್ಯೋಗಿಗಳ ಬಗ್ಗೆ ಇರಬಹುದಾದ ವಿಶ್ವಾಸದ ಕೊರತೆಯನ್ನು ತೋರಿಸಿದ್ದಾರೆ!

ಸಿದ್ದರಾಮಯ್ಯ ಅವರು ಹಣಕಾಸು ಇಲಾಖೆಯನ್ನು ಈ ಹಿಂದೆಯೂ ನಿಭಾಯಿಸಿದ್ದಾರೆ. 10 ಬಾರಿ ರಾಜ್ಯ ಬಜೆಟ್‌ ಮಂಡಿಸಿದ ಹೆಗ್ಗಳಿಕೆ ಅವರದ್ದು. 2004–05 ರಲ್ಲಿ ಅವರು ಹಣಕಾಸು ಮಂತ್ರಿಯಾಗಿದ್ದಾಗ ದೇಶದಲ್ಲಿ ಮೊದಲ ಬಾರಿಗೆ ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆ ಪರಿಚಯಿಸಿದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ, ಬಡವರಿಗೆ ₹ 1ಕ್ಕೆ 1 ಕೆ.ಜಿ. ಅಕ್ಕಿ ನೀಡುವ ‘ಅನ್ನಭಾಗ್ಯ’, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರ ಸಾಲ ಮನ್ನಾ, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹ 2 ಲಕ್ಷದವರೆಗೆ ಸಾಲ ನೀಡುವ ಯೋಜನೆಗಳನ್ನು ಘೋಷಿಸಿ, ತಮ್ಮ ಪ್ರಣಾಳಿಕೆಯಲ್ಲಿದ್ದ ಭರವಸೆಗಳನ್ನು ಈಡೇರಿಸಿದರು.

ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಬಗ್ಗೆ ತಮಗಿರುವ ಬದ್ಧತೆಯನ್ನು ಸಿದ್ದರಾಮಯ್ಯ ಅವರು ಬಜೆಟ್‌ ಭಾಷಣಗಳಲ್ಲಿ ಮತ್ತೆ ಮತ್ತೆ ವ್ಯಕ್ತಪಡಿಸಿದ್ದಾರೆ. ಈಗ ನಾವು, ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ, ಬಜೆಟ್‌ ಮತ್ತು ವೆಚ್ಚಗಳನ್ನು ಪರಿಶೀಲಿಸಿ ಸಿದ್ದರಾಮಯ್ಯ ಅವರ ಸಾಧನೆಯನ್ನು ನೋಡೋಣ.

ಬಡವರಿಗೆ, ದುರ್ಬಲರಿಗಾಗಿ ಕೈಗೊಳ್ಳುವ ಬಹುತೇಕ ಕ್ರಮಗಳನ್ನು ಹಣಕಾಸಿನ ಪರಿಭಾಷೆಯಲ್ಲಿ ಸಾಮಾನ್ಯ ಸಂದರ್ಭಗಳಲ್ಲಿ ‘ಜನಪ್ರಿಯ’, ‘ದಾನದ ರೂಪದಲ್ಲಿ ಹಂಚುವುದು’ ಎಂದು ಕರೆಯಲಾಗುತ್ತದೆ. ಬಡವರಿಗಾಗಿ ಮಾಡುವ ಖರ್ಚುಗಳನ್ನು ಹೀಗೆ ಕರೆಯುವುದು ಸಂಪೂರ್ಣ ಸರಿಯಲ್ಲ. ಹಾಗೆಯೇ, ಜನರ ಜೀವನವನ್ನು ಸುಧಾರಿಸುವವರೆಗೂ ಸಾಮಾಜಿಕ ನ್ಯಾಯದ ಹೆಸರಲ್ಲಿ ಮಾಡುವ ಎಲ್ಲಾ ಕೆಲಸಗಳನ್ನು  ಸಮರ್ಥಿಸಲಾಗದು.

ಬಜೆಟ್‌ ಎಂಬುದು ಆದಾಯ ಮತ್ತು ವೆಚ್ಚವನ್ನು ಹೇಳುವ ಪತ್ರ. ರಾಜ್ಯದ ಆದಾಯವನ್ನು ಹೆಚ್ಚಿಸುವಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆಯೇ ಎಂಬುದನ್ನು ಮೊದಲು ಪರೀಕ್ಷಿಸೋಣ. ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿರುವುದು ಕಳೆದ ಮೂರು ಬಜೆಟ್‌ಗಳ ಪರಿಶೀಲನೆಯಿಂದ ಗೊತ್ತಾಗುತ್ತದೆ. ರಾಜ್ಯದ ಆದಾಯ 2013–14ರಲ್ಲಿ ಶೇಕಡ 16ರಷ್ಟು, 2014–15ರಲ್ಲಿ ಶೇಕಡ 12ರಷ್ಟು ಹೆಚ್ಚಳ ಕಂಡಿದೆ. ಈ ಹೆಚ್ಚಳವು ರಾಷ್ಟ್ರೀಯ ಸರಾಸರಿಗಿಂತ, ಹಣದುಬ್ಬರ ದರದ ಪ್ರಮಾಣಕ್ಕಿಂತ ಜಾಸ್ತಿ ಇದೆ.

2010–11ರ ನಂತರ ಕರ್ನಾಟಕದ ಜಿಎಸ್‌ಡಿಪಿ (ರಾಜ್ಯದ ಒಟ್ಟು ಆಂತರಿಕ ಉತ್ಪನ್ನ) ಮತ್ತು ತೆರಿಗೆ ಅನುಪಾತ ಶೇಕಡ 10ರಷ್ಟಿತ್ತು. ಇದು ದೇಶದಲ್ಲೇ ಹೆಚ್ಚು. ಮೂರು ವರ್ಷಗಳಲ್ಲಿ ಕೈಗೊಂಡ ತೆರಿಗೆ ಮತ್ತು ಸುಂಕ ವಸೂಲಿ ಸುಧಾರಣೆ ಕ್ರಮಗಳು, ತೆರಿಗೆ ವಸೂಲಿಗೆ ತಂತ್ರಜ್ಞಾನದ ನೆರವು ಪಡೆದಿದ್ದು, ಶುಲ್ಕ ಮತ್ತು ತೆರಿಗೆಯ ವಿವೇಕಯುತ ಹೆಚ್ಚಳದ ಕಾರಣ ಆದಾಯ ಹೆಚ್ಚಳವಾಯಿತು. ಜಾಗತಿಕ ಆರ್ಥಿಕ ಹಿಂಜರಿತದ ಕೆಟ್ಟ ಪರಿಣಾಮಗಳನ್ನು ಬೇರೆ ಯಾವುದೇ ರಾಜ್ಯಕ್ಕಿಂತ ಉತ್ತಮವಾಗಿ ನಿಭಾಯಿಸಿದ ಕರ್ನಾಟಕದ ಅರ್ಥ ವ್ಯವಸ್ಥೆ ಆದಾಯ ಹೆಚ್ಚಳಕ್ಕೆ ನೆರವಾಯಿತು.

ರಾಜ್ಯ ಅಬಕಾರಿ ಸುಂಕ ಹೆಚ್ಚಳ, ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಏರಿಕೆ, ಮದ್ಯದ ಅಂಗಡಿ ತೆರೆಯಲು ಪರವಾನಗಿ ಶುಲ್ಕ ಜಾಸ್ತಿ ಮಾಡಿದ್ದು ಆದಾಯ ಹೆಚ್ಚಳಕ್ಕೆ ನೆರವು ನೀಡಿತು. ಆದಾಯ ಸಂಗ್ರಹವು ಅಂದಾಜಿಸಿದ ಮೊತ್ತಕ್ಕೆ ಸಮೀಪದಲ್ಲೇ ಇದೆ. ಇದು ಉತ್ತಮ ಹಣಕಾಸಿನ ವ್ಯವಹಾರದ ಸೂಚಕ. ಆದಾಯ ಸಂಗ್ರಹದಲ್ಲಿ ಆಗಿರುವ ಹೆಚ್ಚಳ ಕಾರಣ, ಸಿದ್ದರಾಮಯ್ಯ ಅವರಿಗೆ ಮಿಗತೆ ಆದಾಯ ಕಾಯ್ದುಕೊಳ್ಳಲು ಸಾಧ್ಯವಾಯಿತು. ಇದನ್ನು 2006ರ ನಂತರ ಬಂದ ಎಲ್ಲ ಸರ್ಕಾರಗಳೂ ಸಾಧಿಸಿವೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಆದಾಯ ಕೊರತೆಯನ್ನು ಶೂನ್ಯ ಪ್ರಮಾಣದಲ್ಲಿ ಇಡಲು, ವಿತ್ತೀಯ ಕೊರತೆಯು (ವರಮಾನ ಮತ್ತು ವೆಚ್ಚದ ನಡುವಿನ ಅಂತರ) ಜಿಎಸ್‌ಡಿಪಿಯ ಶೇಕಡ 3ರಷ್ಟನ್ನು ಮೀರದಂತೆ ನೋಡಿಕೊಳ್ಳಲು ಕರ್ನಾಟಕವು ‘ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ ಕಾಯ್ದೆ – 2002’ನ್ನು ದೇಶದಲ್ಲೇ ಮೊದಲಿಗೆ ಜಾರಿಗೊಳಿಸಿತು.

ಈ ಕಾಯ್ದೆಯನ್ನು ಜಾರಿಗೆ ತಂದಿದ್ದು ಎಸ್‌.ಎಂ. ಕೃಷ್ಣ ಸರ್ಕಾರ. ಆಗ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿನಲ್ಲಿ ಇರಲಿಲ್ಲ. ಆದರೆ, ಆದಾಯ ಹೆಚ್ಚಳವು ಬಂಡವಾಳ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಲಿಲ್ಲ. ವರಮಾನ ವೆಚ್ಚಕ್ಕೆ ಹೋಲಿಸಿದರೆ, ಬಂಡವಾಳ ವೆಚ್ಚವು ನಿಧಾನ ಬೆಳವಣಿಗೆಯನ್ನು ಕಂಡಿದೆ. ಆಂತರಿಕ ಸಾಲವು ಬಂಡವಾಳ ವೆಚ್ಚ ಹೆಚ್ಚಿಸುವುದರ ಬದಲಾಗಿ ಹಳೆ ಸಾಲ ಮರುಪಾವತಿ ಮತ್ತು ಬಡ್ಡಿ ಪಾವತಿಗೆ ಬಳಕೆಯಾಯಿತು ಎಂದು ಭಾಸವಾಗುತ್ತಿದೆ. ಸಾಮಾಜಿಕ ವಲಯ ಮತ್ತು ಸಾಮಾಜಿಕ ಭದ್ರತೆಗೆ ಮಾಡಿದ ವೆಚ್ಚಗಳು ರಾಜ್ಯದ ಒಟ್ಟು ವೆಚ್ಚದಲ್ಲಿ, ಬಂಡವಾಳ ಸೃಷ್ಟಿಗೆ ಬಳಸುವುದಕ್ಕಿಂತ ಹೆಚ್ಚಿನ ಪಾಲನ್ನು ಪಡೆಯುತ್ತಿವೆಯೇ? ಅಂದರೆ, ಇದರ ಅರ್ಥ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ಗಳು ಸಾಮಾಜಿಕ ನ್ಯಾಯದ ಗುರಿಯನ್ನು ಹೊಂದಿವೆಯೇ? ಬಂಡವಾಳ ಸೃಷ್ಟಿಯಲ್ಲದಿದ್ದರೆ, ಈ ಬಜೆಟ್‌ಗಳು ಮಾನವ ಅಭಿವೃದ್ಧಿಯನ್ನು ದ್ರೀಕರಿಸಿಕೊಂಡಿವೆಯೇ? ಈ ಪ್ರಶ್ನೆಗಳಿಗೆ ಸ್ಪಷ್ಟವಾಗಿ ‘ಹೌದು’ ಎನ್ನಲು ಸಾಧ್ಯವಾಗುತ್ತಿಲ್ಲ.

ಕೇಂದ್ರ–ರಾಜ್ಯಗಳ ನಡುವಣ  ಹಣಕಾಸಿನ ಕೊಡು–ಕೊಳ್ಳುವಿಕೆಯ ವಿಚಾರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಎರಡು ಪ್ರಮುಖ ಪಲ್ಲಟಗಳು ಕಂಡಿವೆ. ಯುಪಿಎ ಸರ್ಕಾರವು ತನ್ನ ಕೊನೆಯ ವರ್ಷದಲ್ಲಿ (2014–15) ಕೇಂದ್ರದ ಪ್ರಮುಖ ಯೋಜನೆಗಳಾದ ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಹಣವನ್ನು ರಾಜ್ಯಗಳ ಬಜೆಟ್‌ ಮೂಲಕ ಉದ್ದೇಶಿತ ಸಮುದಾಯಕ್ಕೆ ತಲುಪಿಸುವ ಕೆಲಸ ಆರಂಭಿಸಿತು. ಇದರಿಂದ ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚಿನ ಹಣ ಸಿಗದಿದ್ದರೂ, ರಾಜ್ಯಗಳ ಬಜೆಟ್‌ ಗಾತ್ರದಲ್ಲಿ ಹೆಚ್ಚಳವಾಯಿತು.

ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇಕಡ 32ರಿಂದ ಶೇಕಡ 42ಕ್ಕೆ ಹೆಚ್ಚಿಸಬೇಕು ಎಂದು ಹದಿನಾಲ್ಕನೆಯ ಹಣಕಾಸು ಆಯೋಗ ಶಿಫಾರಸು ಮಾಡಿತು. ಇದರ ಪರಿಣಾಮವಾಗಿ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೇಂದ್ರದಿಂದ ದೊರೆಯಿತು. ಆದರೆ, ಪ್ರಮುಖ ಯೋಜನೆಗಳಿಗೆ ನೀಡುತ್ತಿದ್ದ ಹಣದಲ್ಲಿ ಕೇಂದ್ರ ದೊಡ್ಡ ಪ್ರಮಾಣದ ಕಡಿತ ಮಾಡಿತು. ಮಿಗತೆ ಹಣ ಹೊಂದಿದ್ದ ರಾಜ್ಯಗಳು ಮಾತ್ರ ಈ ಕಡಿತವನ್ನು ನಿರ್ವಹಿಸಬಲ್ಲವು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕರ್ನಾ ಟಕವೂ ಸೇರಿದಂತೆ ಬಹುತೇಕ ರಾಜ್ಯಗಳು ಪ್ರಮುಖ ಯೋಜನೆಗಳ ಮೇಲಿನ ವೆಚ್ಚವನ್ನು ನಿಭಾಯಿಸುವ ಬದಲು ವಿತ್ತೀಯ ಕೊರತೆ ತುಂಬಿಕೊಳ್ಳಲು ಸಂಪನ್ಮೂಲಗಳ ಮೇಲೆ ಹೆಚ್ಚಿನ ನಿಯಂತ್ರಣದ ಮೊರೆ ಹೋದವು.

ಇದರ ಪರಿಣಾಮವಾಗಿ ಚಿಕ್ಕ ಮಕ್ಕಳು, ಶಿಕ್ಷಣ, ಆರೋಗ್ಯ ಮತ್ತು ವಸತಿ ಯೋಜನೆಗಳಿಗೆ ಮೀಸಲಿಡುವ ಅನುದಾನದ ಮೊತ್ತದಲ್ಲಿ ಕಡಿತವಾಯಿತು.
ಒಂದು ಉದ್ದೇಶಕ್ಕಾಗಿ ತನ್ನದೇ ಹಣವನ್ನು ಮೀಸಲಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವಿನಲ್ಲಿ ದ್ವಂದ್ವ ಕಾಣುತ್ತಿದೆ. ಉದಾಹರಣೆಗೆ: 14ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ್ದ ಮನವಿಯಲ್ಲಿ ರಾಜ್ಯ ಸರ್ಕಾರ, ₹ 1,500 ಕೋಟಿ ವೆಚ್ಚದಲ್ಲಿ 10 ಸಾವಿರ ಅಂಗನವಾಡಿಗಳನ್ನು ಆದ್ಯತೆಯ ಮೇಲೆ ನಿರ್ಮಿಸಬೇಕು ಎಂದು ವಾದಿಸಿತ್ತು. ಆದರೆ ಈ ಉದ್ದೇಶಕ್ಕೆ 2015–16ನೇ ಸಾಲಿನಲ್ಲಿ ಮೀಸಲಿಟ್ಟ ಹಣ ₹ 44 ಕೋಟಿಗಳಿಗೆ ಕುಸಿಯಿತು. ಅದಕ್ಕೂ ಹಿಂದಿನ ವರ್ಷದಲ್ಲಿ ಈ ಉದ್ದೇಶಕ್ಕೆ ₹ 72 ಕೋಟಿ ತೆಗೆದಿರಿಸಲಾಗಿತ್ತು. ಸಿದ್ದರಾಮಯ್ಯ ಅವರ ಕೂಸು ಎಂದೇ ಪರಿಗಣಿಸಲಾಗಿರುವ ಅನ್ನಭಾಗ್ಯ ಯೋಜನೆಯನ್ನು 2014–15 ರಲ್ಲಿ ಪರಿಷ್ಕರಿಸಲಾಯಿತು. ಅಲ್ಲಿಂದ, ಈ ಯೋಜನೆಯ ಅಡಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆಗೆ ಮೀಸಲಿಟ್ಟ ಹಣ ಮತ್ತು ಬಳಕೆಯಾದ ಹಣದ ಮೊತ್ತದಲ್ಲಿ ಮೂರು ವರ್ಷಗಳಲ್ಲಿ ಇಳಿಕೆ ಕಂಡುಬಂದಿದೆ.

2013–14ರಲ್ಲಿ ಈ ಯೋಜನೆಗೆ ₹ 3,400 ಕೋಟಿ ನಿಗದಿ ಮಾಡಿ, ₹ 3,046 ಕೋಟಿ ವೆಚ್ಚ ಮಾಡಲಾಯಿತು. 2014–15ರಲ್ಲಿ ₹ 4,365 ಕೋಟಿ ನಿಗದಿ ಮಾಡಿ, ₹ 2,590 ಕೋಟಿ ವೆಚ್ಚ ಮಾಡಲಾಯಿತು. 2015–16ರಲ್ಲಿ ಈ ಯೋಜನೆಗೆ ಮೀಸಲಿಟ್ಟ ಅನುದಾನದ ಮೊತ್ತ ₹ 2,022 ಕೋಟಿಗೆ ಇಳಿಕೆ ಕಂಡಿತು. ದಂತಕತೆಯ ರೂಪ ಪಡೆದಿರುವ ವರದಿಗಳ ಪ್ರಕಾರ, ಈ ಯೋಜನೆಯ ಅಡಿ ವಿತರಿಸಿದ ಧಾನ್ಯಗಳ ಗುಣಮಟ್ಟ ಕಳಪೆಯಾಗಿದ್ದು ಧಾನ್ಯಗಳನ್ನು ಉದ್ದೇಶಿತ ಸಮುದಾಯ ಕಡಿಮೆ ಪ್ರಮಾಣದಲ್ಲಿ ಬಳಸಲು ಕಾರಣವಾಯಿತು ಎನ್ನಲಾಗಿದೆ. ಆದರೆ, ಬಡವರಿಗಾಗಿ ಗುಣಮಟ್ಟವನ್ನು ಹೆಚ್ಚಿಸಬೇಕಲ್ಲ!

ದಲಿತರು ಮತ್ತು ಆದಿವಾಸಿಗಳ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಯೋಜನಾ ಅನುದಾನ ನಿಗದಿಯಾಗಬೇಕು ಎನ್ನುವ ಪರಿಶಿಷ್ಟ ಜಾತಿ, ಪಂಗಡಗಳ ಕಾಯ್ದೆ – 2013ಕ್ಕೆ ವಿಧಾನ ಮಂಡಲದಲ್ಲಿ ಅನುಮೋದನೆ ಪಡೆದುಕೊಳ್ಳುವ ಮೂಲಕ ಸಿದ್ದರಾಮಯ್ಯ ದಿಟ್ಟ ನಡೆ ಇಟ್ಟರು. ಎಸ್‌ಎಪಿ ಮತ್ತು ಟಿಎಸ್‌ಪಿ ಯೋಜನೆಯ ಅಡಿ ನಿಗದಿ ಮಾಡುತ್ತಿರುವ ಅನುದಾನದ ಮೊತ್ತ ಮೂರು ವರ್ಷಗಳಿಂದ ಹೆಚ್ಚುತ್ತಿದೆ. ಆದರೆ, ಬೇರೆ ಬೇರೆ ಇಲಾಖೆಗಳ ಯೋಜನೆಗಳನ್ನು ಇದರ ಅಡಿ ತರುವುದಕ್ಕೆ ಸೂಕ್ತ ನಿಯಮ ಇರುವಂತೆ ಕಾಣುತ್ತಿಲ್ಲ.

ವೈಯಕ್ತಿಕ ಮಟ್ಟದಲ್ಲಿ ಫಲಾನುಭವಿಗಳನ್ನು ಗುರುತಿಸುವುದು ಅರ್ಥವಾಗುವಂಥದ್ದು. ಆದರೆ, ಔಷಧಾಲಯ ಸ್ಥಾಪನೆ, ಶಿಕ್ಷಣ ವಿಸ್ತರಣೆ ಮತ್ತು ಸಂಶೋಧನೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಕೆರೆ ನವೀಕರಣದಂಥ ಯೋಜನೆಗಳು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮಾತ್ರ ಹೇಗೆ ಅನ್ವಯ ಆಗುವಂಥವು ಎಂಬುದಕ್ಕೆ ಸ್ಪಷ್ಟ ವಿವರ ಇಲ್ಲ. ಇದು ಲಿಂಗ ಆಧಾರಿತ ಬಜೆಟ್‌ ಇದ್ದಂತೆ. ಇಲ್ಲಿ, ಕೆಲವು ಅನುದಾನಗಳಿಗೆ ತರ್ಕವೇ ಇರುವುದಿಲ್ಲ. ನಂತರದ ವರ್ಷಗಳಲ್ಲಿ, ಈ ವೆಚ್ಚದಿಂದ ಆಗಿರುವ ಪರಿಣಾಮ ಏನು ಎಂಬುದನ್ನು ತಿಳಿಸುವುದೂ ಇಲ್ಲ.

ಇಂದಿನ ಮುಖ್ಯಮಂತ್ರಿಯವರು ಮಂಡಿಸಿರುವ ಬಜೆಟ್‌ಗಳಲ್ಲಿ ಲಿಂಗ ಸಮಾನತೆ ಎಂಬುದು ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌ – IV) ಇದನ್ನು ಬೊಟ್ಟುಮಾಡಿ ತೋರಿಸಿದೆ. 2005ರಲ್ಲಿ ಪ್ರತಿ ಸಾವಿರ ಪುರುಷರಿಗೆ 1,028 ಮಹಿಳೆಯರು ಇದ್ದರು. ಈ ಅನುಪಾತ 2015ರಲ್ಲಿ 979ಕ್ಕೆ ಕುಸಿದಿದೆ.

ಈ  ಸಮಸ್ಯೆಯನ್ನು ಗುರಿಯಾಗಿಸಿಕೊಂಡಿದ್ದ ಏಕೈಕ ಯೋಜನೆ ‘ಭಾಗ್ಯಲಕ್ಷ್ಮಿ’. ಹಿಂದಿನ ಸರ್ಕಾರ ಆರಂಭಿಸಿದ ಈ ಯೋಜನೆ 2015–16ರಲ್ಲಿ ಚೇತರಿಕೆ ಕಂಡುಕೊಂಡಿತು. 2012–13, 2013–14ರಲ್ಲಿ ಕಡಿತಗೊಂಡಿದ್ದ ಅನುದಾನ 2015–16ರಲ್ಲಿ ಈ ಯೋಜನೆಗೆ ₹ 473 ಕೋಟಿ ಮೀಸಲಿಡಲಾಯಿತು. 2005ರಿಂದ 2015ರ ನಡುವಿನ ಅವಧಿಯಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ಮಹಿಳೆಯ ಪಾಲುದಾರಿಕೆ ಶೇಕಡ 21ರಷ್ಟರಲ್ಲೇ ನಿಂತಿದೆ. ಈ ಸಮಸ್ಯೆಯ ನಿವಾರಣೆಗೆ ಯಾವುದೇ ನೀತಿ ರೂಪಿಸಿಲ್ಲ. ಇದಕ್ಕೆ ಸಮಗ್ರವಾದ, ದೂರಗಾಮಿ ಪರಿಣಾಮ ಇರುವಂತಹ ಯೋಜನೆಯೊಂದನ್ನು ರೂಪಿಸಬೇಕು.

ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ನೀಡುವ ಅನುದಾನದಲ್ಲಿ ಸುಧಾರಣೆ ತರಲು ಸಾಕಷ್ಟು ಅವಕಾಶ ಇದೆ. ಈ ಸುಧಾರಣೆಗಳಿಂದ ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಿ, ಅನುಷ್ಠಾನ ಹೆಚ್ಚು ದಕ್ಷವಾಗಿ ಹಾಗೂ ಅದರ ನಿರ್ವಹಣೆ ಸುಲಭವಾಗಿ ಆಗುತ್ತದೆ. ಉದಾಹರಣೆಗೆ: ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಸ್ಥಾಪಿಸಲು ರಾಜ್ಯ ಸರ್ಕಾರ ವಿವಿಧ ಹಂತಗಳಲ್ಲಿ ಯೋಜನೆ ರೂಪಿಸಿದೆ. ಬೇರೆ ಬೇರೆ ವಿದ್ಯಾರ್ಥಿನಿಲಯಗಳಲ್ಲಿ ಆಹಾರ ಪೂರೈಕೆಗೆ ಬೇರೆ ಬೇರೆ ರೀತಿಯ ನಿಯಮಗಳಿವೆ.

ಈ ನಿಯಮಗಳಲ್ಲಿ ಇರುವ ತಾರತಮ್ಯಗಳನ್ನು ಸರಿಪಡಿಸಿ, ಸರಳಗೊಳಿಸಲು ಇದು ಸಕಾಲ. ಅಲ್ಲದೆ, ಗುಣಮಟ್ಟದ ಶಿಕ್ಷಣ ಪ್ರಮುಖವಾಗುತ್ತಿರುವ ಈ ಕಾಲಘಟ್ಟದಲ್ಲಿ, ಬೇರೆ ಬೇರೆ ಇಲಾಖೆಗಳು ಪರ್ಯಾಯವಾಗಿ ಶಾಲೆಗಳನ್ನು ನಡೆಸುವುದು ತರವೇ ಎಂಬುದನ್ನೂ ಪರಿಶೀಲನೆಗೆ ಒಳಪಡಿಸಬೇಕು. ಬಡವರಿಗೆ ಸೂರು ಎಂಬುದು ಸಿದ್ದರಾಮಯ್ಯ ಅವರ ಆದ್ಯತಾ ವಲಯಗಳಲ್ಲಿ ಒಂದು. ಮೂರು ವರ್ಷಗಳಲ್ಲಿ ವಸತಿ ಕ್ಷೇತ್ರಕ್ಕೆ ನೀಡುವ ಅನುದಾನ, ಬಡವರ ಮನೆಗೆ ನೀಡುವ ಸಬ್ಸಿಡಿಯ ದರದಲ್ಲಿ ಹೆಚ್ಚಳ ಆಗಿದೆ.

ಆದರೆ, ಈ ಹೆಚ್ಚಳದಲ್ಲಿ ದೊಡ್ಡ ಪಾಲು ಸಿಕ್ಕಿರುವುದು ಗೃಹ ನಿರ್ಮಾಣ ಸಂಘಗಳಿಗೆ. 2015–16ರಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಸಿಕ್ಕಿಲ್ಲ. ಗೃಹ ನಿರ್ಮಾಣ ಸಂಘಗಳಿಗೆ ಹೆಚ್ಚಿನ ಅನುದಾನ ಕೊಡುವ ಬದಲು, ಗ್ರಾಮ ಪಂಚಾಯಿತಿಗಳಿಗೆ ಕೊಟ್ಟಿದ್ದರೆ ಬಡವರಿಗೆ ಅನುಕೂಲ ಆಗುತ್ತಿತ್ತು. ಮೂರು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚಿನ ಮೊತ್ತದ ಸಬ್ಸಿಡಿಯನ್ನು – ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ – ಪಡೆದುಕೊಂಡಿರುವುದು ಕೃಷಿ ಕ್ಷೇತ್ರ. ಹಿಂದಿನ ಸರ್ಕಾರ ಆರಂಭಿಸಿದ, ಕೃಷಿಕರಿಗೆ ಬಡ್ಡಿಯಿಲ್ಲದೆ ಸಾಲ ನೀಡುವ ಪದ್ಧತಿಯನ್ನು ಈ ಸರ್ಕಾರ ಕೂಡ ಮುಂದುವರಿಸಿದೆ. ಅಲ್ಲದೆ, ಸಾಲದ ಪ್ರಮಾಣವನ್ನು ₹ 3 ಲಕ್ಷಕ್ಕೆ ಹೆಚ್ಚಿಸಿದೆ. ₹ 3 ಲಕ್ಷದಿಂದ ₹ 10 ಲಕ್ಷದವರೆಗಿನ ಸಾಲಕ್ಕೆ ಶೇಕಡ 3ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಈ ಅನುಕೂಲಗಳನ್ನು ಶ್ರೀಮಂತ ರೈತರು ಮಾತ್ರವೇ ಬಳಸುತ್ತಿದ್ದಾರೆಯೇ? ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸಬ್ಸಿಡಿಯಿಂದ ಇಂಧನ ಮತ್ತು ನೀರಾವರಿ ಕ್ಷೇತ್ರಗಳ ಮೇಲೆ ಆಗಿರುವ ಪರಿಣಾಮಗಳು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ, ಈ ಕ್ಷೇತ್ರಗಳಲ್ಲಿ ಉಂಟಾಗಿರುವ ಪರಿಣಾಮವನ್ನು ಇನ್ನಷ್ಟು ಶ್ರದ್ಧೆಯಿಂದ ಪರಿಶೀಲಿಸಲು ಕ್ರಮ ಕೈಗೊಳ್ಳದಿರುವುದು, ಪರಿಣಾಮ ಅಳೆಯಲು ಸರ್ಕಾರಕ್ಕೆ ಮನಸ್ಸಿದೆಯೇ ಎಂಬ ಬಗ್ಗೆ ಸಂದೇಹ ಮೂಡಿಸುತ್ತದೆ.

ಉದಾಹರಣೆಗೆ: ಕಿರು ನೀರಾವರಿ ಸಬ್ಸಿಡಿಯನ್ನು ಪೂರೈಕೆದಾರರ ಮೂಲಕವೇ ವಿತರಿಸಲಾಗುತ್ತದೆ. ಆದರೆ, ಪೂರೈಕೆದಾರರು ಸಬ್ಸಿಡಿಯ ಮೊತ್ತ ಪಡೆಯಲು ನೀರಾವರಿ ಯೋಜನೆಯ ಫಲಾನುಭವಿ ಯಾರು, ಅವರ ಸಾಮಾಜಿಕ ಹಿನ್ನೆಲೆ ಏನು ಎಂಬ ದಾಖಲೆ ನಿರ್ವಹಿಸಬೇಕಾದ ಅಗತ್ಯವೇ ಇಲ್ಲ. ಸಬ್ಸಿಡಿ ಯಾರಿಗೆ ತಲುಪಬೇಕು ಎಂಬುದನ್ನು ಮಾರಾಟಗಾರರೇ ನಿರ್ಧರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕುತ್ತದೆ. ಆಹಾರ, ಹಾಲು, ಐಸಿಡಿಎಸ್‌ ಯೋಜನೆಯ ಕೆಲವು ಉಪಕರಣಗಳು, ಕಿರು ನೀರಾವರಿ ಯೋಜನೆ ಉಪಕರಣಗಳ ಸಬ್ಸಿಡಿಯನ್ನು ಈ ರೀತಿ ನೀಡಲಾಗುತ್ತದೆ. ಇದರಿಂದಾಗಿ ಈ ಯೋಜನೆಗಳ ಉದ್ದೇಶದ ಬಗ್ಗೆಯೇ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅಲ್ಲದೆ, ಕಿರು ನೀರಾವರಿ ಸೌಲಭ್ಯ, ಕಡಿಮೆ ಬಡ್ಡಿ ದರದ ಸಾಲ ಪಡೆದು ಅಭಿವೃದ್ಧಿಪಡಿಸಿದ ಜಮೀನಿನ ಬಗ್ಗೆ ಆರ್‌ಟಿಸಿಯಲ್ಲಿ ಗುರುತು ಮಾಡಿಕೊಳ್ಳುವುದಿಲ್ಲ. ಏಕೆ ಎಂಬುದು ಗೊತ್ತಿಲ್ಲ.

ಆರ್‌ಟಿಸಿಯಲ್ಲಿ ಗುರುತಿಸಿಕೊಂಡರೆ, ಅದೇ ಜಮೀನನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ಇನ್ನೊಬ್ಬ ಖರೀದಿಸಿದಾಗ ಸಬ್ಸಿಡಿಗೆ ಅರ್ಹವಾಗುವುದಿಲ್ಲ ಎಂದು ಹೇಳಲು ಸಾಧ್ಯವಾಗುತ್ತಿತ್ತು.ವಿದ್ಯುತ್‌ಗೆ ನೀಡುತ್ತಿರುವ ಸಬ್ಸಿಡಿಯಿಂದಾಗಿ ಅಂತರ್ಜಲವನ್ನು ವಿವೇಚನೆ ಇಲ್ಲದೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾತಿದೆ. ಈ ಬಗ್ಗೆ ಪರಿಸರವಾದಿಗಳು ಧ್ವನಿ ಎತ್ತುತ್ತಿದ್ದರೂ ಇದು ಮುಂದುವರಿದಿದೆ.

ಸಿದ್ದರಾಮಯ್ಯ ಅವರ ಬಜೆಟ್‌ಗಳು ಸಾಮಾಜಿಕ ನ್ಯಾಯದ ದಿಕ್ಕಿನತ್ತ ತುಸು ಮುಖಮಾಡಿವೆ ಎಂದು ಅನಿಸಿದರೂ, ವಾಸ್ತವದಲ್ಲಿ ಒಂದು ದೊಡ್ಡ ಪ್ರಮಾಣದ ವೆಚ್ಚಗಳನ್ನು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಮಾಡುತ್ತಿರುವಂತಿದೆ. ಇಂಥ ಪಟ್ಟಭದ್ರ ಹಿತಾಸಕ್ತಿಗಳನ್ನು ನಿಯಂತ್ರಣದಲ್ಲಿಡಲು ಸೂಕ್ತ ವ್ಯವಸ್ಥೆ ಇಲ್ಲ. ಹೆಚ್ಚುವರಿ ಆದಾಯ ಸೃಷ್ಟಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಯಶಸ್ಸು ಕಂಡಿದೆ. ಆದರೆ, ಸುಧಾರಣೆಗಳನ್ನು ವೆಚ್ಚದ ನಿರ್ವಹಣೆಯತ್ತಲೂ ವಿಸ್ತರಿಸಬೇಕಾದ ತುರ್ತು ಈಗ ಇದೆ.

ಬಜೆಟ್‌ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸುವುದು, ಪರಿಣಾಮ ಗಮನಿಸಿ ವೆಚ್ಚಕ್ಕೆ ಮುಂದಾಗುವುದು ಹಣಕಾಸು ಸುಧಾರಣಾ ಕ್ರಮಗಳಲ್ಲಿ ಸೇರಿವೆ. ಸಿದ್ದರಾಮಯ್ಯ ಅವರು ದಿಟ್ಟ ಹಣಕಾಸು ಮಂತ್ರಿ. ಆದರೆ, ರಾಜ್ಯಕ್ಕೆ ಅಗತ್ಯವಾಗಿ ಬೇಕಿರುವ ತೀವ್ರತರಹದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಅವರು ದಿಟ್ಟ ಮುಖ್ಯಮಂತ್ರಿಯೂ ಆಗಬೇಕಿದೆ.

–ಜ್ಯೋತ್ಸ್ನಾ ಝಾ, ಬಿ.ವಿ.ಮಧುಸೂದನ್
(ಲೇಖಕರು: ಆರ್ಥಿಕ ತಜ್ಞರು, ಬಜೆಟ್ ಮತ್ತು ನೀತಿ ಅಧ್ಯಯನ ಕೇಂದ್ರ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT