ನಾಗಪುರ (ಐಎಎನ್‌ಎಸ್): ಸಾಲದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಬಡ್ಡಿಯನ್ನು ರೈತರೊಬ್ಬರಿಂದ ಬಲಾತ್ಕಾರವಾಗಿ ವಸೂಲಿ ಮಾಡಿದ್ದ ಪ್ರಕರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಮಹಾರಾಷ್ಟ್ರ ಸರ್ಕಾರದ ಸಹಕಾರ ಇಲಾಖೆಯ ಕಾರ್ಯದರ್ಶಿ ಮತ್ತು ಭೂ ಅಭಿವೃದ್ಧಿ ಬ್ಯಾಂಕಿನ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
ಕೃಷಿಕ ಪ್ರಶಾಂತ್ ಇಂಗ್ಳೆ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಮಾರ್ಪಡಿಸಿರುವ ಹೈಕೋರ್ಟ್‌ನ ವಿಭಾಗೀಯ ಪೀಠವು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದೆ. ವಾರ್ಧಾ ಜಿಲ್ಲೆಯ ತಿಗಾಂವ್‌ನ ಪ್ರಶಾಂತ್ ಇಂಗ್ಳೆ ಅವರ ತಂದೆ ಭೂ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಬ್ಯಾಂಕ್ ಅಧಿಕಾರಿಗಳು ಇಂಗ್ಳೆ ಅವರಿಂದ ಬಲಾತ್ಕಾರವಾಗಿ ಸಾಲದ ಎರಡು ಪಟ್ಟು ಬಡ್ಡಿಯನ್ನು ವಸೂಲಿ ಮಾಡಿದ್ದರು.
ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಾಲದ ಮೊತ್ತಕ್ಕಿಂತ ಬಡ್ಡಿ ಹೆಚ್ಚಿರಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ತಮ್ಮಿಂದ ಹೆಚ್ಚುವರಿ ಬಡ್ಡಿ ವಸೂಲು ಮಾಡಲಾಗಿದೆ ಎಂದು ಅವರು ದೂರಿದ್ದರು.
ಪ್ರಶಾಂತ್ ಅವರ ತಂದೆ 2001ರಲ್ಲಿ 22 ಎಕರೆ ಭೂಮಿಯನ್ನು ಒತ್ತೆ ಇಟ್ಟು ರೂ 2.90 ಲಕ್ಷ ಸಾಲ ಪಡೆದಿದ್ದರು. ನಂತರ ಅವರು ಬ್ಯಾಂಕಿಗೆ ರೂ 6,09,891 ಬಡ್ಡಿ ಪಾವತಿಸಿದ್ದರು. ಆದರೂ ರೂ 2,91,387 ಬಾಕಿ ಇದೆ ಎಂದು ಬ್ಯಾಂಕ್ ನೋಟಿಸ್ ನೀಡಿತ್ತು.
ಇದಾದ ನಂತರ ಅಧಿಕಾರಿಗಳು ಸಾಲಗಾರನ ಮನೆಯ ಮುಂದೆ ತಮ್ಮಟೆ ಬಾರಿಸಿ ಸಾಲದ ಮೊತ್ತನ್ನು ಬಹಿಗಗೊಳಿಸಿ ಅವಮಾನ ಮಾಡಿದ್ದರು. ಬ್ಯಾಂಕಿನ ಅಧಿಕಾರಿಗಳ ಕಾಟ ತಾಳಲಾರದೆ ವಿದರ್ಭ ವಿಭಾಗದಲ್ಲಿ ಕಳೆದ ಐದು ವರ್ಷಗಳಲ್ಲಿ ಏಳು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದರ್ಭ ವಿಭಾಗದಲ್ಲಿ ರಾಜ್ಯ ಭೂ ಅಭಿವೃದ್ಧಿ ಬಾಂಕಿನ ಅಧಿಕಾರಿಗಳು ರೈತರಿಂದ ಬಲಾತ್ಕಾರವಾಗಿ ಸಾಲ ಹಾಗೂ ಹೆಚ್ಚುವರಿ ಬಡ್ಡಿಯನ್ನು ವಸೂಲಿ ಮಾಡುತ್ತಿರುವುದರ ವಿರುದ್ಧ ವಿದರ್ಭ ಜನ ಆಂದೋಲನ ಸಮಿತಿಯು ಹೋರಾಟ ನಡೆಸುತ್ತ ಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.