ಬುಧವಾರ, ಜನವರಿ 29, 2020
27 °C

ಧರ್ಮಾಧಾರಿತ ಮೀಸಲಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿ ಸೌಲಭ್ಯವನ್ನು ಮುಂದುವರಿಸುವುದು ಅತ್ಯಗತ್ಯವಾಗಿದೆ~ ಎಂದು ಪ್ರತಿಪಾದಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ   (ಆರ್‌ಎಸ್‌ಎಸ್) ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ, `ಧರ್ಮಾಧಾರಿತ ಮೀಸಲಾತಿಗೆ ನಮ್ಮ ವಿರೋಧವಿದೆ~ ಎಂದೂ ತಿಳಿಸಿದರು.ನಗರದಲ್ಲಿ ಏರ್ಪಡಿಸಿರುವ `ಹಿಂದೂ ಶಕ್ತಿ ಸಂಗಮ~ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.`ಹಿಂದೂಗಳಲ್ಲಿಯೇ ಹಿಂದುಳಿದ ಜಾತಿಗಳಿಗೆ ಈ ಸೌಲಭ್ಯ ದೊರೆಯಬೇಕೇ ವಿನಃ ಒಬಿಸಿ ಕೋಟಾದ ಅಡಿಯಲ್ಲಿ ಮುಸ್ಲಿಮರು ಸೇರಿದಂತೆ ಇತರ ಧರ್ಮಗಳ ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡುವುದಕ್ಕೆ ನಮ್ಮ ವಿರೋಧವಿದೆ. ಮತಬ್ಯಾಂಕ್ ಹೊಂದುವ ಉದ್ದೇಶದಿಂದ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವಂತಹ ರಾಜಕೀಯ ಆಟ ಆಡಲಾಗುತ್ತಿದೆ~ ಎಂದು  ಕಿಡಿಕಾರಿದರು.`ಯಾವುದೇ ಕಾರಣಕ್ಕೂ ಮೀಸಲಾತಿ ಪ್ರಮಾಣ ಶೇ 50 ಮೀರಬಾರದು. ಇದರಿಂದ ಇನ್ನೊಂದು ರೀತಿಯ ಸಮಸ್ಯೆ ಉದ್ಭವವಾಗುತ್ತದೆ. ಉಳಿದವರ ಹಕ್ಕಿನ ಮೇಲೆ ಏಟು ಬೀಳುತ್ತದೆ. ಆದ್ದರಿಂದಲೇ ಸುಪ್ರೀಂ ಕೋರ್ಟ್ ಈ ಮಿತಿಯನ್ನು ಹೇರಿದೆ~ ಎಂದು ತಿಳಿಸಿದರು.`ಸಂಘ ಪರಿವಾರದಿಂದ ಎಲ್ಲ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ. ಆದರೆ, ಈ ಕೆಲಸ ಇನ್ನೂ ಪೂರ್ಣ ತೃಪ್ತಿತಂದಿಲ್ಲ. ದೀನ-ದಲಿತರ ಪ್ರಗತಿಗಾಗಿ ಆರ್‌ಎಸ್‌ಎಸ್ ಇನ್ನಷ್ಟು ಸಕ್ರಿಯವಾಗಿ ಶ್ರಮಿಸಲಿದೆ~ ಎಂದು ಅವರು ಹೇಳಿದರು.`ಜಗತ್ತಿನ ತುಂಬಾ ಹೆಚ್ಚಿರುವ ಆತಂಕವಾದ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ತಲೆ ಎತ್ತಿರುವ ಪ್ರತ್ಯೇಕತಾವಾದ, ಅನಕ್ಷರತೆ, ಬಡತನ, ಜಾತಿಭೇದ, ಗಡಿಯಲ್ಲಿ ಹೆಚ್ಚಿರುವ ನುಸುಳುವಿಕೆ, ಆಂತರಿಕವಾಗಿ ಕಾಡುವ ಗಡಿ ಹಾಗೂ ಭಾಷಾ ವಿವಾದಗಳೇ ದೇಶ, ಹಿಂದೂ ಸಮಾಜ ಮತ್ತು ಸಂಘದ ಮುಂದಿರುವ ಪ್ರಮುಖ ಸವಾಲುಗಳಾಗಿವೆ~ ಎಂದು ಜೋಶಿ ವಿವರಿಸಿದರು.`ಕ್ರಿಶ್ಚಿಯನ್ ಮಿಷನರಿಗಳು ಸಮಾಜ ಸೇವೆ ಹೆಸರಿನಲ್ಲಿ ತಮ್ಮ ಧರ್ಮವನ್ನು ಹೇರುವ ಯತ್ನ ಮಾಡುತ್ತಿವೆ. ಹಿಂದೂಗಳು ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ~ ಎಂದು ಅವರು ಹೇಳಿದರು.`ಒಳ್ಳೆಯ ಸರ್ಕಾರ ನೀಡಬೇಕು. ರಾಷ್ಟ್ರ ಮತ್ತು ಜನರ ಸೇವೆ ಮಾಡಬೇಕು ಎಂಬ ಸಲಹೆಯನ್ನು ಸಂಘದ ಹಿನ್ನೆಲೆ ಹೊಂದಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವ ದಾರಿ ಮುಕ್ತವಾಗಿದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಂಘದ ದಕ್ಷಿಣ-ಮಧ್ಯ ಪ್ರಾಂತ ಸಂಚಾಲಕ ನ್ಯಾ. ಪರ್ವತರಾವ್, ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹ ಅರವಿಂದ ದೇಶಪಾಂಡೆ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಜಿಗಜಿನ್ನಿ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)