ಬುಧವಾರ, ಮೇ 25, 2022
30 °C

ಧಾರವಾಡಕ್ಕೆ ಬಂಪರ್ ಬೆಳೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶ ಧಾರವಾಡ ಜಿಲ್ಲೆಗೆ ಬಂಪರ್ ಬೆಳೆ ತಂದಿದೆ. ಸರ್ಕಾರದ ಜೊತೆಗೂಡಿದ ಕರ್ನಾಟಕ ವಾಣಿಜ್ಯೋದ್ಯಮ ಸಂಘದ ಹುಬ್ಬಳ್ಳಿ-ಧಾರವಾಡ ಭಾಗದ ಸದಸ್ಯರು ನಾಲ್ಕು ಸಾವಿರ ಕೋಟಿ ರೂಪಾಯಿ ಕಲೆಹಾಕಿದ್ದಾರೆ!`ಹೂಡಿಕೆದಾರರ ಸಮಾವೇಶದ ಪೂರ್ವಭಾವಿಯಾಗಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ರೋಡ್‌ಶೋ ಸಂದರ್ಭ 4,000 ಕೋಟಿ ರೂಪಾಯಿ ಮೊತ್ತದ ಹೂಡಿಕೆಗಳಿಗೆ ವಿವಿಧ ಕಂಪೆನಿಗಳು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿವೆ. ಒಪ್ಪಂದಗಳು ಅನುಷ್ಠಾನಕ್ಕೆ ಬಂದಾಗ ಉತ್ತರ ಕರ್ನಾಟಕ ಭಾಗದ ಅಂದಾಜು 35 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ.ಇಷ್ಟು ದೊಡ್ಡ ಮೊತ್ತದ ಬಂಡವಾಳವನ್ನು ಸರ್ಕಾರದ ಜೊತೆಗೂಡಿ ಸಂಘದ ನಮ್ಮ ಭಾಗದ ಸದಸ್ಯರೇ ಒಗ್ಗೂಡಿಸಿದ್ದಾರೆ~ ಎಂದು ಸಂಘದ ಉಪಾಧ್ಯಕ್ಷ ವಸಂತ್ ಎನ್. ಲದ್ವಾ ಅವರು ~ಪ್ರಜಾವಾಣಿ~ಗೆ ತಿಳಿಸಿದರು.`ಸೃಷ್ಟಿಯಾಗಲಿರುವ 35 ಸಾವಿರ ಉದ್ಯೋಗದಲ್ಲಿ ಅಂದಾಜು ಎಂಟು ಸಾವಿರ ಉದ್ಯೋಗ ಧಾರವಾಡ ಜಿಲ್ಲೆಯ ಜನರಿಗೇ ಲಭಿಸಲಿದೆ. ನಾಲ್ಕು ಸಾವಿರ ಕೋಟಿ ರೂಪಾಯಿ ಹೂಡಿಕೆ ಧಾರವಾಡ ಜಿಲ್ಲೆಯಲ್ಲೇ ಆಗಲಿದೆ. ಹೆಚ್ಚಿನ ಪ್ರಮಾಣದ ಹೂಡಿಕೆ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯದಲ್ಲಿ ಆಗಲಿದೆ. ಬೃಹತ್ ಕೈಗಾರಿಕಾ ವಲಯ ಕೂಡ ಗಣನೀಯ ಪ್ರಮಾಣದಲ್ಲಿ ಹೂಡಿಕೆ ಆಕರ್ಷಿಸಿದೆ~ ಎಂದು ಅವರು ತಿಳಿಸಿದರು.ರೋಡ್‌ಶೋ ಕಾರ್ಯಕ್ರಮದಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಪಾಲ್ಗೊಂಡಿದ್ದವು. ಕೃಷಿ ಆಧಾರಿತ ಕೈಗಾರಿಕೆಗಳು, ಆಹಾರ ಸಂಸ್ಕರಣಾ ಘಟಕಗಳು, ಎಂಜಿನಿಯರಿಂಗ್, ಆಟೊಮೊಬೈಲ್ ಮತ್ತಿತರ ವಲಯಗಳಲ್ಲಿ ಹೂಡಿಕೆ ಆಗಲಿದೆ.ಸಣ್ಣ ಕೈಗಾರಿಕಾ ವಲಯದಲ್ಲಿ ಆಗಿರುವ ಹೂಡಿಕೆ ಒಂದು ವರ್ಷದ ಅವಧಿಯಲ್ಲಿ ಅನುಷ್ಠಾನಕ್ಕೆ ಬರಲಿದೆ. ಹಾಗೆಯೇ, ಬೃಹತ್ ಕೈಗಾರಿಕಾ ವಲಯದ ಹೂಡಿಕೆ ಅನುಷ್ಠಾನಕ್ಕೆ ಬರಲು ಕೆಲವು ಸಮಯ ಹಿಡಿಯುತ್ತದೆ ಎಂದು ತಿಳಿಸಿದರು.ತಲೆ ಎತ್ತಲಿರುವ ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿಯ ಪೈಕಿ 523 ಎಕರೆ ಈಗಾಗಲೇ ಸರ್ಕಾರದ ವಶದಲ್ಲಿದೆ. ಇನ್ನೂ ಅಗತ್ಯವಿರುವ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಡುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.ವಿಶೇಷ ಹೂಡಿಕೆ ವಲಯ: ಧಾರವಾಡದಲ್ಲಿ ವಿಶೇಷ ಹೂಡಿಕೆ ವಲಯವನ್ನು ಅಭಿವೃದ್ಧಿಪಡಿಸುವ ಚಿಂತನೆ ಸರ್ಕಾರಕ್ಕಿದೆ. ಇಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ, ಅತ್ಯಾಧುನಿಕ ಮೂಲಸೌಕರ್ಯ ಒದಗಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಸಮಾವೇಶದಲ್ಲಿ ಆಯೋಜಿಸಲಾಗಿದ್ದ ಕೈಗಾರಿಕಾ ಮೂಲಸೌಕರ್ಯ ಕ್ಷೇತ್ರದಲ್ಲಿನ ಹೂಡಿಕೆಗಳ ಕುರಿತ ವಿಚಾರ ಸಂಕಿರಣದಲ್ಲಿ ಸರ್ಕಾರ ಈ ಭರವಸೆ ನೀಡಿದೆ.ವಸತಿ ಹಾಗೂ ಕೈಗಾರಿಕಾ ಸಂಕೀರ್ಣ, ಶೈಕ್ಷಣಿಕ ಕೇಂದ್ರ, ಅತ್ಯಾಧುನಿಕ ಸಾರಿಗೆ ಸೌಕರ್ಯವನ್ನು ಈ ವಲಯಕ್ಕೆ ಒದಗಿಸುವ ಭರವಸೆಯನ್ನು ಸರ್ಕಾರ ಉದ್ಯಮಿಗಳಿಗೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.