ಭಾನುವಾರ, ಏಪ್ರಿಲ್ 18, 2021
23 °C

ನಕ್ಕು ನಲಿಸಿದ ಜೂನಿಯರ್ ರಾಜಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಪಾನ್ ದೇಶದಲ್ಲಿ ಸಂಭವಿಸಿದ ಭೂಕಂಪ, ಸುನಾಮಿ ಹಾಗೂ ಅಣು ವಿಕಿರಣಗಳಿಂದ ಸಂತ್ರಸ್ತರಾದವರಿಗೆ ದೇವರು ಬದುಕು ಎದುರಿಸುವ ಸ್ಥೈರ್ಯ ನೀಡಲಿ ಎಂದು ಪ್ರಾರ್ಥಿಸುವ ಮೂಲಕ ನಗರದ ಶರಣ ಉದ್ಯಾನದಲ್ಲಿ ಶನಿವಾರ ಶರಣ ಸಂಗಮ ಹಾಗೂ ನಗೆಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ತನ್ನನ್ನು ತಾನು ಅರಿತುಕೊಂಡರೆ ಅದೇ ಪರಮಾತ್ಮ ಎಂದು ‘ಶಿವಶರಣರ ಸಂಪದ’ ಪುಸ್ತಕ ಬಿಡುಗಡೆ ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ ಹೇಳಿದರು.ಜೀವನದ ಸೊಗಸು ಅನುಭವಿಸಬೇಕಾದರೆ ಶರಣ ಸಂಗದಲ್ಲಿ ಹಾಡಿ, ಪಾಡಿ ನಲಿಯಬೇಕು. ಶರಣರು ನಗಿಸುವುದನ್ನು ಕೂಡ ಒಂದು ಕಾಯಕವಾಗಿ ಪರಿಗಣಿಸಿದ್ದರು. ನಗಮಾರಿ ತಂದೆ, ಬಹುರೂಪಿ ಚೌಡಯ್ಯನವರು ಜನರನ್ನು ನಗಿಸಿ, ಸಂತೋಷಪಡಿಸುವ ಕಾಯಕ ಕೈಗೊಂಡಿದ್ದರು ಎಂದು ಬಹುರೂಪಿ ಚೌಡಯ್ಯನವರ ಜೀವನ ಸಂದೇಶ ಕುರಿತು ಮಾತನಾಡಿದ ಡಾ. ಗಂಗಾಂಬಿಕೆ ಅಕ್ಕ ಹೇಳಿದರು. ಜೂನಿಯರ್ ರಾಜಕುಮಾರ ಎಂದೇ ಪ್ರಸಿದ್ಧರಾಗಿರುವ ಹೇಮಂತಕುಮಾರ ಮಾಲಗತ್ತಿ ಅವರು ಕನ್ನಡ ಮೇರು ನಟ ಡಾ. ರಾಜಕುಮಾರ ಅವರ ಹಾವಭಾವ, ಧ್ವನಿ ಅನುಕರಿಸಿ ನಟನೆ ಪ್ರದರ್ಶಿಸಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು.ಡಾ. ರಾಜ್‌ರ ಪ್ರತಿರೂಪದಂತೆ ಕಂಡ ಮಾಲಗತ್ತಿಯವರು ರಾಜ್‌ರ ವಿವಿಧ ನಟನಾಭಂಗಿಗಳನ್ನು ರಸವತ್ತಾಗಿ ಪ್ರದರ್ಶಿಸಿದರು.ಹಾಸ್ಯ ಕಲಾವಿದ ಮಲ್ಲಿಕಾರ್ಜುನ ಟಂಕಸಾಲಿ ಹನಿ ಹನಿಗಳನ್ನು ಹೇಳಿ ಎಲ್ಲರನ್ನು ನಕ್ಕು ನಗಿಸಿದರು. ಅಶೋಕ ಸುರಪುರ, ಮತ್ತು ಮಾರ್ಥಂಡರಾವ ಮಹಾರಾಜರ ಹಾಸ್ಯಭರಿತ ನಗೆಹನಿ ಗಳು ಕೂಡ ನಗೆ ಬುಗ್ಗೆ ತೇಲಿಸಿದವು.ಜಾದೂ ಕಲಾವಿದ ತುಕಾರಾಮ ನಾಗೂರೆ ಜಾದೂ ಪ್ರದರ್ಶಿಸಿ ಎಲ್ಲ ರನ್ನು ಮಂತ್ರಮುಗ್ಧಗೊಳಿಸಿದರು. ವಾಯುಪಡೆ ಇತಿಹಾಸದಲ್ಲೇ ಮರುಭೂಮಿ ಕಾರ್ ರೇಸ್‌ನಲ್ಲಿ ಭಾಗವಹಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದ ಡಾ. ಜ್ಯೋತಿ ಏರೋ ಳಕರ್ ಅವರನ್ನು ಸನ್ಮಾನಿಸಲಾಯಿತು. ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಪಟ್ನಾಯಿಕ್ ಮಾತನಾಡಿದರು.ಮಹೇಶ ಧೂಪೆ ಮತ್ತು ತಂಡದವರ ‘ಸುಂದರಾಂಗ ಪ್ರಹಸನ’ ಹಾಸ್ಯ ರೂಪಕ ಸೊಗಸಾಗಿ ಮೂಡಿ ಬಂದಿತು. ಬಿ.ಎಸ್. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಅಕ್ಕ ಅನ್ನಪೂರ್ಣ ಸಾನ್ನಿಧ್ಯ ವಹಿಸಿದ್ದರು. ಡಾ. ಅಮರ ಏರೋಳಕರ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿ ವಂದಿಸಿದರು. ಅನುಪಮಾ ಏರೋಳ್ಕರ್ ವಚನ ಪಠಣ ಮಾಡಿಸಿದರು. ವರ್ಗವಾಗಿರುವ ಕಂದಾಯ ಇಲಾಖೆಯ ಅಧಿಕಾರಿ ಪ್ರಕಾಶ ಚಿಂಚೋಳಿಕರ್ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.