ಶನಿವಾರ, ಮೇ 21, 2022
22 °C

ನಗರೀಕರಣದ ಭರಾಟೆಗೆ ನಲುಗಿದ ಸಿದ್ದಪ್ಪಜ್ಜನ ತಪಸ್ಸಿನ ತಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿಯ ಇತಿಹಾಸದಲ್ಲಿ ಸಿದ್ಧಾರೂಢ ಮಠ, ಮೂರು ಸಾವಿರ ಮಠದಷ್ಟೇ ಉಣಕಲ್ಲಿನ ಸಿದ್ದಪ್ಪಜ್ಜನ ಮೂಲ ಗದ್ದುಗೆಗೂ ಪವಿತ್ರವಾದ ಸ್ಥಾನವಿದೆ. 1859ರಲ್ಲಿ ಜನಿಸಿದ್ದ ಸಿದ್ದಪ್ಪಜ್ಜ 14 ವರ್ಷಕ್ಕೆ ಮನೆ ತೊರೆದು `ಗುರು'ವನ್ನು ಹುಡುಕುತ್ತ ಹುಬ್ಬಳ್ಳಿಗೆ ಬಂದು ಉಣಕಲ್ಲಿನಲ್ಲಿ ನೆಲೆನಿಂತ ಎನ್ನುವ ಇತಿಹಾಸವಿದೆ. ಈ ಸ್ಥಳವನ್ನೇ ತನ್ನ ಕರ್ಮಭೂಮಿಯಾಗಿ ಮಾಡಿಕೊಂಡು ಜನರಿಗೆ ಜ್ಞಾನವನ್ನು ಹಂಚಿದ ಈ ಪವಾಡ ಪುರುಷ ತಪಸ್ಸು ಮಾಡಿದ್ದ ಗುಹೆ ಈಗಲೂ ಹುಬ್ಬಳ್ಳಿಯ ವಾಣಿಜ್ಯ ನಗರಿಯಲ್ಲಿಯೇ ಇದೆ ಎನ್ನುವುದೇ ಅಚ್ಚರಿಯ ವಿಷಯ. ಆದರೆ ಆ ಗುಹೆಯ ತಾಣ ಪ್ರಸ್ತುತ ಹೇಗಿದೆ ಎನ್ನುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಬನ್ನಿ ನೋಡಿಕೊಂಡು ಬರೋಣ...ಹುಬ್ಬಳ್ಳಿಯ ದೇವಾಂಗಪೇಟೆಯನ್ನು ದಾಟಿ ಗೋಪನಕೊಪ್ಪ ಮುಖ್ಯ ರಸ್ತೆಗೆ ಬಂದರೆ ಅಲ್ಲೊಂದು ಸಿದ್ದಪ್ಪಜ್ಜನ ಆಕರ್ಷಕ ದೇವಸ್ಥಾನವನ್ನು ನೀವು ಕಾಣುತ್ತೀರಿ. ಹಾಗೆಯೇ ಅಲ್ಲಿಂದ ಕಿರು ದಾರಿಯಲ್ಲಿ ಶಿವಳ್ಳಿ ಮಾರ್ಗವಾಗಿ ಸಾಗಿದರೆ ಮುಂದೆ ಕಾಣುವ ಗವಿಸಿದ್ಧೇಶ್ವರ ಕಾಲೊನಿಗೆ ತಲುಪಬೇಕು. ಚಕ್ಕಡಿ ಗಾಡಿ, ಒಣಹುಲ್ಲಿನ ಬಣವೆ, ಕುರಿ, ಕೋಳಿ, ಆಡು, ಎತ್ತು, ಎಮ್ಮೆಗಳನ್ನು ದಾಟಿಕೊಂಡು ಹಳೆಯ ಮನೆಗಳ ಸಾಲನ್ನು ಹಾದು ಹೋಗಬೇಕು. ಅಲ್ಲಿಂದ ಮುಂದಕ್ಕೆ ಮತ್ತೆ ಹೊಲಗಳನ್ನು ಮಾರ್ಪಡಿಸಿ ಹೊಸದಾಗಿ ತಲೆ ಎತ್ತುತ್ತಿರುವ ಬೃಹತ್ ಮನೆಗಳನ್ನು, ಅರ್ಧ ಕಟ್ಟಿದ ಮನೆಗಳನ್ನು ಕಾಣಬಹುದು.ಇವುಗಳ ನಡುವೆ ರಸ್ತೆ ಬದಿ ಪಾಳುಬಿದ್ದ ಮಣ್ಣಿನ ಮನೆಯೊಂದಿದ್ದು ಅದಕ್ಕೆ ತಾಗಿಕೊಂಡೇ ಸಿದ್ದಪ್ಪಜ್ಜ ತಪಸ್ಸು ಮಾಡಿದ ಗುಹೆಯಿದೆ. ಅದರೆ ಇದು ಥಟ್ಟನೆ ನಿಮ್ಮ ಕಣ್ಣಿಗೆ ಬೀಳುವುದಿಲ್ಲ. ಆ ಪಾಳುಬಿದ್ದ ಮನೆಯ ಚೌಕಟ್ಟಿನೊಂದಿಗೆ ಹತ್ತಾರು ಮೆಟ್ಟಿಲುಗಳು ಕೆಳಕ್ಕಿಳಿದಿರುವುದು ಕಾಣಸಿಗುತ್ತದೆ. ಕುತೂಲದಿಂದ ಆ ಮೆಟ್ಟಿಲು ಇಳಿದು ಸಾಗಿದರೆ ಅಲ್ಲೊಂದು ಗುಹೆಯ ದ್ವಾರ ಕಂಡು ಬರುತ್ತದೆ.ಈ ಕತ್ತಲ ಗುಹೆಯಲ್ಲಿ ಹಗಲಿನಲ್ಲಿಯೂ ಥಟ್ಟನೆ ನಿಮಗೇನೂ ಕಾಣುವುದಿಲ್ಲ. ಅದೃಷ್ಟವಶಾತ್ ಅಲ್ಲಿ ನೀಲಾಂಜನ ಉರಿಯುತ್ತಿದ್ದರೆ ಆಗಷ್ಟೇ ಸಿದ್ದಪ್ಪಜ್ಜನ ಕಲ್ಲಿನ ವಿಗ್ರಹಕ್ಕೆ ಪೂಜೆ ನಡೆದಿದೆ ಎಂದು ತಿಳಿಯಬಹುದು. ಆ ಬೆಳಕಿನಲ್ಲಿ ನಿಮಗೆ ಸಿದ್ದಪ್ಪಜ್ಜನ ವಿಗ್ರಹವು ಕಾಣುತ್ತದೆ. ಇದೇ ಸಿದ್ದಪ್ಪಜ್ಜ ತಪಸ್ಸು ಮಾಡಿದ ಸ್ಥಳ.ಈ  ಗುಹೆ ಸಂಪೂರ್ಣವಾಗಿ ನೈಸರ್ಗಿಕವಲ್ಲ, ಕಲ್ಲುಬಂಡೆಗಳನ್ನು ಕೊರೆದು ಒಂದಿಷ್ಟು ಅಂದಗೊಳಿಸಲಾಗಿದೆ. ಮೇಲ್ಛಾವಣಿಗಾಗಿ ಕಲ್ಲಿನ ಚಪ್ಪಡಿ ಇದೆ. ಅದಕ್ಕೆ ಸುಣ್ಣ ಬಳಿಯಲಾಗಿದೆ. ಆದರೆ ಗುಹೆಯ ಬಾಗಿಲಿಗೆ, ಇಳಿಯುವ ಮೆಟ್ಟಿಲುಗಳಿಗೆ ಮೇಲ್ಛಾವಣಿ ಇಲ್ಲದ ಕಾರಣ ಮಳೆಯಿಂದಾಗಿ ಇವೆಲ್ಲ ಕುಸಿದು ಹೋಗುವ ಅಪಾಯದಲ್ಲಿವೆ. ಎದುರಿಗೇ ಪಾಳುಬಿದ್ದ ಪಾಚಿಗಟ್ಟಿದ ಬಾವಿಯೊಂದಿದೆ. ಅದೃಷ್ಟವಶಾತ್ ಬಾವಲಿಗಳು ಗೂಡು ಕಟ್ಟದಂತೆ ದಿನನಿತ್ಯವೂ ಶಿವನಗೌಡ ಸಿ. ಪಾಟೀಲ ಎಂಬವರ ಕುಟುಂಬದ ಸದಸ್ಯರು ದೀಪ, ಊದುಬತ್ತಿ ಹಚ್ಚಿ, ಪುಷ್ಪ ಸಮರ್ಪಿಸಿ ಪೂಜೆ ಮಾಡುತ್ತ ಬಂದಿದ್ದಾರೆ.ಒಂದು ಕಾಲದಲ್ಲಿ ಇವೆಲ್ಲ ಶುದ್ಧ ಹಳ್ಳಿಗಳು. ಪ್ರಸ್ತುತ ಗ್ರಾಮಗಳೆಲ್ಲ ಹೋಗಿ ನಗರೀಕರಣಕ್ಕೆ ತೆರೆದುಕೊಂಡಿರುವ ಈ ಪ್ರದೇಶಗಳಲ್ಲಿ ಈಗ ಈ ಗುಹೆಯೊಂದು ಅನಾಥವಾಗಿ ಉಳಿದಿದೆ. ಅಕ್ಕಪಕ್ಕದಲ್ಲಿ ಹಾಗೂ ಎದುರಿಗೆಲ್ಲ ದೊಡ್ಡ ದೊಡ್ಡ ಮನೆಗಳು ತಲೆ ಎತ್ತಿವೆ.ಸಿದ್ದಪ್ಪಜ್ಜನ ಮೂಲ ಗದ್ದುಗೆ ಉಣಕಲ್ ಸಾಯಿನಗರದಲ್ಲಿದೆ. ಭಕ್ತರು ದೊಡ್ಡ ಸಂಖ್ಯೆಯಲ್ಲಿ ಅಲ್ಲಿ ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಆದರೆ ಪವಾಡಪುರುಷ ಸಿದ್ದಪ್ಪಜ್ಜ ತಪಸ್ಸು ಮಾಡಿದ ತಾಣವನ್ನು ಹುಡುಕಿಕೊಂಡು ಬರುವವರು ಮಾತ್ರ ಕಡಿಮೆ.`ನಮ್ಮ ಮನೆಗೆ ತಾಗಿಕೊಂಡೇ ಈ ಗುಹೆ ಇತ್ರಿ...ನಾವು ಹಳೆಯ ಮನೆ ಕೆಡವಿ ಸಮೀಪದಲ್ಲಿಯೇ ಹೊಸ ಮನೆ ಕಟ್ಟಿದೆವು. ಈಗ ನಾವೇ ಇದಕ್ಕೊಂದು ಗುಡಿ ಕಟ್ಟಬೇಕು ಅಂತ ಚಿಂತನೆ ಮಾಡೀವ್ರಿ' ಎಂದು  ಹೇಳುವ ಶಿವನಗೌಡರ  ಹೊಲದಲ್ಲಿಯೇ ಈ ಗುಹೆ ಇದೆ.

ಒಟ್ಟಿನಲ್ಲಿ ಅವರ ಆಸೆ ಈಡೇರಿದರೆ ನಗರೀಕರಣ, ಕಾಂಕ್ರೀಟ್ ಕಾಡಿನ ನಡುವೆ ಐತಿಹಾಸಿಕ ತಾಣವೊಂದು ಉಳಿದೀತು.

ಚಿತ್ರ ಲೇಖನ: ರಾಮಕೃಷ್ಣ ಸಿದ್ರಪಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.