ಗುರುವಾರ , ಮೇ 13, 2021
16 °C
ಬೋರ್ಡ್ ರೂಮಿನ ಸುತ್ತ ಮುತ್ತ.........

ನಗು ನಗುತಾ ನಲಿ, ಏನೇ ಆಗಲಿ...

ಸತ್ಯೇಶ್ ಎನ್ ಬೆಳ್ಳೂರು Updated:

ಅಕ್ಷರ ಗಾತ್ರ : | |

ಮಕ್ಕಳಾಟದ ಹಾಗೆ ಕಾರಣವ ಹುಡುಕದಿರು/

ಸಕ್ಕರೆಯ ಸಿಹಿಯ ಸವಿ, ಪ್ರಶ್ನೆ ಕೇಳದೆಯೆ//

ಅಕ್ಕರೆಯ ಬಳಗದಲಿ ತರ್ಕಕೆಡೆ ಇಲ್ಲದೆಯೆ/

ನಕ್ಕು ನಲಿ ಶಿಶುವಂತೆ! -ನವ್ಯಜೀವಿ//ಹಿಂದಿನ ಕೆಲವು ಲೇಖನಗಳಲ್ಲಿ ಮಾರಾಟ ವಿಭಾಗದವರ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಪ್ರಸ್ತುತ ಲೇಖನ ಈ ವಿಷಯವನ್ನು ಕುರಿತಾಗಿ ಕಡೆಯದು. ಹೀಗಾಗಿ ಮುಂದಿನ ಲೇಖನದಿಂದ ಬೋರ್ಡ್ ರೂಮಿನ ಸುತ್ತಮುತ್ತಲಿನ ಬೇರೆ ವಿಚಾರಗಳತ್ತ ಗಮನ ಹರಿಸಬಹುದು.

ಮಾರಾಟ ವಿಭಾಗದವರ ಬಗೆಗಿನ ಲೇಖನಗಳನ್ನು ಓದಿಕೊಂಡು ಬಂದಿರುವ ಓದುಗರೊಬ್ಬರು `ಮಾರಾಟ ವಿಭಾಗದವರಿಗೆ ಪಠ್ಯ ಪುಸ್ತಕಗಳಲ್ಲಿ ದೊರೆಯದ ಯಾವುದಾದರೂ ಸಲಹೆಗಳಿದ್ದರೆ, ಅವನ್ನು ತಿಳಿಸಿಕೊಡಿ' ಎಂದು ಇತ್ತೀಚೆಗೆ ಕೇಳಿದ್ದಾರೆ. ನಾನು ಮ್ಯಾನೇಜ್‌ಮೆಂಟಿನ ಪಠ್ಯ ಪುಸ್ತಕಗಳನ್ನು ಓದಿಲ್ಲದವನಾದ್ದರಿಂದ ಅವುಗಳಲ್ಲಿ ಏನಿದೆ ಅಥವಾ ಇಲ್ಲ ಎಂಬುದು ನನಗೆ ತಿಳಿಯದು. ಆದರೂ ವಿಷಯವೊಂದನ್ನು ಮುಗಿಸುವ ಹಂತದಲ್ಲಿ ಸಲಹೆ- ಸೂಚನೆಗಳೊಂದಿಗೆ ಮುಕ್ತಾಯಗೊಳಿಸಿದರೆ ಸೂಕ್ತ ಎಂಬುದನ್ನಂತೂ ಒಪ್ಪುತ್ತೇನೆ. ಹಾಗಾಗಿ ಈ ಲೇಖನದಲ್ಲಿನ ನನ್ನ ಅನುಭವದ ಸಲಹೆಗಳೇನಾದರೂ ಪಠ್ಯ ಪುಸ್ತಕಗಳಲ್ಲಿ ಇದ್ದರೆ ನನ್ನದೇನೂ ತಪ್ಪಿಲ್ಲವೆನ್ನುತ್ತಾ ಮುಂದುವರೆಯುತ್ತೇನೆ.ಮೊದಲನೆಯದಾಗಿ, ನಿಮ್ಮ ಗ್ರಾಹಕರಾರೂ ನಿಮ್ಮ ಆಪ್ತಮಿತ್ರರಲ್ಲ! ಹಾಗೆಯೇ ಅವರಾರೂ ನಿಮ್ಮ ಶತ್ರುಗಳೂ ಅಲ್ಲ. ಅಂದರೆ, ನಿಮಗೆ ಆರ್ಡರ್ ನೀಡಿದ ಗ್ರಾಹಕ ನಿಮ್ಮ ಮಿತ್ರನಲ್ಲ ಹಾಗೂ ನಿಮ್ಮನ್ನು ಈಗ ತಿರಸ್ಕರಿಸುತ್ತಿರುವ ಗ್ರಾಹಕ ನಿಮ್ಮ ಶತ್ರುವೂ ಅಲ್ಲ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯವಾದದ್ದು.ಗ್ರಾಹಕ ಕೇವಲ ಗ್ರಾಹಕನಷ್ಟೆ ಎಂಬುದೇ ವಾಸ್ತವ. ಈ ವಾಸ್ತವತೆಯ ಅರಿವಾದಾಗ ಅವರೊಡನೆಯ ನಮ್ಮ ವ್ಯವಹಾರ ನೀರಿನಲ್ಲಿರುವ ತಾವರೆಯ ಹೂವಿನಂತಾಗುತ್ತದೆ. ನೀರಿನಲ್ಲೇ ಇದ್ದರೂ ನೀರಿನಿಂದ ಒದ್ದೆಯಾಗದ ಪ್ರವೃತ್ತಿ. ಇಂತಹ ಭಾವವನ್ನು ಸಹಜವಾಗಿ ರೂಪಿಸಿಕೊಂಡಾಗ, ಆರ್ಡರ್ ಕೊಡದಿರುವ ಗ್ರಾಹಕರನ್ನು ಸಂಪೂರ್ಣವಾಗಿ ತಿರಸ್ಕರಿಸದೆ, ಕೊಟ್ಟಿರುವನನ್ನು ತಬ್ಬಿ ಮುದ್ದಾಡದೆ, ಇಬ್ಬರನ್ನೂ ಸರ್ವದಾ ಸಂತೋಷವಾಗಿಡುವ ಪ್ರಯತ್ನದಲ್ಲಿ ಮುಂದುವರೆಯುತ್ತೇವೆ.ಎರಡನೆಯದಾಗಿ, ಮಾರಾಟ ವಿಭಾಗದಲ್ಲಿ ಯಾವುದೇ ಸೋಲು, ದೀರ್ಘಕಾಲದ ಸೋಲಾಗಿರುವುದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಂದು ಸೋಲಿನ ಹಿಂದೆಯೇ, ಇಂದು ಕಣ್ಣಿಗೆ ಕಾಣದ ಯಾವುದೋ ಒಂದು ಜಯ ಕಾದಿದೆ ಎಂಬುದೇ ಸತ್ಯ. ಆ ಜಯವನ್ನು ಸೋಲಿನ ಹಿನ್ನೆಲೆಯಲ್ಲಿ ಅರಸಬೇಕು. ಕಳೆದುಕೊಂಡಿರುವುದನ್ನು ಮರೆತು ದಕ್ಕಿಸಿಕೊಳ್ಳಬೇಕಾದ ನಿಟ್ಟಿನಲ್ಲೇ ಪ್ರಯತ್ನವಿದ್ದರೆ, ಮುಂದೆ ದಕ್ಕುವುದು ಹಿಂದೆ ಕಳೆದುಕೊಂಡದ್ದಕ್ಕಿಂತ ಬೆಲೆಬಾಳುವಂತಹದಾಗುವ ಸಾಧ್ಯತೆಗಳೇ ಅಧಿಕ. ಅಂತೆಯೇ ಇಲ್ಲಿ ಯಾವುದೇ ಗೆಲುವು ಕೂಡ ದೀರ್ಘ ಕಾಲದ ಗೆಲುವೇ ಆಗಿರಲಿಕ್ಕೆ ಸಾಧ್ಯವಿಲ್ಲ. ಪ್ರತಿಯೊಂದು ಗೆಲುವಿನ ಹಿಂದೆಯೂ ಇಂದು ಕಣ್ಣಿಗೆ ಕಾಣದ ಯಾವುದೋ ಒಂದು ಸೋಲು ಕಾದಿದೆ ಎಂಬುದೇ ಸತ್ಯ. ಆ ಸೋಲನ್ನು ಗೆಲುವಿನ ಹಿನ್ನೆಲೆಯಲ್ಲಿ ಎಷ್ಟು ಸಮಯ ತಡೆಯಲಿಕ್ಕಾಗುವುದೋ ಅಷ್ಟು ಸಮಯ ನಾವೇ ವಿಜಯಿಯಾಗಿರುತ್ತೇವೆ ಅಷ್ಟೆ!ಮೂರನೆಯದಾಗಿ, ಹಿಂದಿನ ಲೇಖನವೊಂದರಲ್ಲಿ ತಿಳಿಸಿದಂತೆ ಸುಳ್ಳು ಹೇಳುವುದು, ಅಪ್ರಮಾಣಿಕವಾಗಿ ವ್ಯವಹರಿಸುವುದು, ನೇರವೇರಿಸಲಾಗದ ಒಪ್ಪಂದಗಳಿಗೆ ಸಹಿ ಹಾಕುವುದು... ಹೀಗೆ ಯಾವುವೂ ಮಾರಾಟ ವಿಭಾಗದವರಿಗೆ ಒಗ್ಗದ ಪ್ರವೃತ್ತಿಗಳು. ಪ್ರಾಮಾಣಿಕತೆ, ನೀಯತ್ತು ಹಾಗೂ ಎಲ್ಲ ಗ್ರಾಹಕರ ಪರ ವೃತ್ತಿಯಾಧಾರಿತ ಸಂವೇದನೆಯೊಂದೇ ಮಂತ್ರವಾಗಿರಲಿ.ನಾಲ್ಕನೆಯದಾಗಿ, ನಾನು ಕಾಲೇಜೊಂದರಲ್ಲಿ ಉಪನ್ಯಾಸ ಮಾಡುತ್ತಿದ್ದಾಗ ನನ್ನನ್ನು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದ - `ಸರ್ ಮಾರಾಟ ವಿಭಾಗದಲ್ಲಿರುವವರೆಲ್ಲ ಕುಡಿಯಲು ಕಲಿಯಬೇಕಂತೆ, ಹೌದಾ ಸಾರ್?'ಗ್ರಾಹಕರನ್ನು ಹತ್ತಿರದಿಂದ ಅರ್ಥೈಸಿಕೊಳ್ಳಲು ಅವರನ್ನು ಭೋಜನ ಕೂಟಗಳಿಗೆ ಆಹ್ವಾನಿಸಬೇಕಾಗುತ್ತದೆ. ಅವರೊಡನೆ ರೆಸ್ಟೊರೆಂಟ್‌ಗಳಲ್ಲಿ ಅನೇಕ ಸಂಜೆಗಳನ್ನು ಕಳೆಯಬೇಕಾಗುತ್ತದೆ. ಇದು ಸತ್ಯ. ಆದರೆ, ನಾವು ಕುಡಿಯಲೇಬೇಕು ಎಂಬುದನ್ನು ನಾನು ಒಪ್ಪುವುದಿಲ್ಲ. ಒಂದು ಹನಿ ಬಿಯರ್ ಕೂಡ ಕುಡಿಯದೆ ಇದ್ದರೂ ಅತ್ಯಂತ ಯಶಸ್ವಿಯಾಗಿರುವ ಅನೇಕ ಮಾರಾಟ ವಿಭಾಗದ ಅಧಿಕಾರಿಗಳನ್ನು ನಾನು ಹತ್ತಿರದಿಂದ ಬಲ್ಲೆ. ಹೀಗಾಗಿ, ಮೊದಲ ಬಾರಿ `ಚಿಯರ್ಸ್' ಎನ್ನುವ ಮುನ್ನ ಯೋಚಿಸಿ. ಇದು ಅನಿವಾರ್ಯವೇನಲ್ಲ- ನಿಮ್ಮ ವೈಯಕ್ತಿಕ ಆಯ್ಕೆ ಅಷ್ಟೆ!ಐದನೆಯದಾಗಿ, ತಾಳ್ಮೆ! ಇದು ಹೆಚ್ಚಿದ್ದಷ್ಟೂ ಗೆಲುವು ಖಂಡಿತ. ಮಾರಾಟ ವಿಭಾಗದವರು ವಿನಾಕಾರಣ ಗ್ರಾಹಕರೊಂದಿಗೆ ಜಗಳ ಮಾಡಿಕೊಳ್ಳುವುದಾಗಲೀ ಅಥವಾ ತಮ್ಮದೇ ಕಂಪೆನಿಗಳ ಅಧಿಕಾರಿಗಳೊಂದಿಗೆ ಜಿದ್ದಿಗೆ ಬೀಳುವುದಾಗಲೀ, ಎಲ್ಲ ನಡೆಯುವುದು ಅವರಲ್ಲಿ ಸಾಕಷ್ಟು ತಾಳ್ಮೆ ಇಲ್ಲದಿರುವುದರಿಂದ, ಬೋರ್ಡ್ ರೂಮಿನ ಸುತ್ತಮುತ್ತಲಿನ ಎಲ್ಲ ವಿಭಾಗಗಳಲ್ಲಿ, ಅಂದರೆ ಅದು ಮಾನವ ಸಂಪನ್ಮೂಲ ವಿಭಾಗದವರಾಗಲೀ, ಹಣಕಾಸು ವಿಭಾಗದವರಾಗಲೀ ಅಥವಾ ಸಂಶೋಧನಾ ವಿಭಾಗದವರಾಗಲೀ, ಇವರೆಲ್ಲರ ಕೆಲಸಗಳೆಲ್ಲಾ ವಿಳಂಬವಾಗುವುದು ಸ್ವಾಭಾವಿಕ. ಆದರೆ ಯಾವುದೋ ಒಂದು ನಿರ್ದಿಷ್ಟವಾದ ಹಂತದಲ್ಲಿ ಅವರ ಎಲ್ಲ ಕೆಲಸಗಳೂ ಸಾಮಾನ್ಯವಾಗಿ ಪೂರ್ಣಗೊಳ್ಳುತ್ತವೆ. ಆದರೆ, ಮಾರಾಟ ವಿಭಾಗದವರ ಕೆಲಸಗಳು ಕೆಲವೊಮ್ಮೆ ಪೂರ್ಣಗೊಳ್ಳದೆ ಅರ್ಧಕ್ಕೆ ತ್ರಿಶಂಕುವಿನ ತೆರದಿ ಸ್ಥಗಿತವಾಗಿ ಬಿಡುತ್ತವೆ. ಅಂತೆಯೇ ತಾಳ್ಮೆ ಎಂಬ ಸದ್ಗುಣ ಅವರಲ್ಲಿ ಹೇರಳವಾಗಿರಬೇಕೆಂಬುದೇ ನನ್ನ ಅಭಿಮತ.ಆರನೆಯದಾಗಿ, ಮಾರಾಟ ವಿಭಾಗದವರ ವೇತನ ಪದ್ಧತಿ ಬಹುತೇಕ ಯಾವುದೇ ಕಂಪೆನಿ ತೆಗೆದುಕೊಂಡರೂ ಅಲ್ಲಿನ ಮಾರಾಟ ವಿಭಾಗದವರ ವೇತನದಲ್ಲಿ ಎರಡು ಅಂಶಗಳಿರುತ್ತವೆ. ಒಂದು ತಿಂಗಳಿಗೆ ಇಷ್ಟೆಂಬ ಖಾಯಂ ವೇತನವಾದರೆ, ಎರಡನೆಯದು ಅವರ ವೇರಿಯಬಲ್ ಅಥವಾ ಚರಾಂಶ ವೇತನ ಅಥವಾ ಕಮಿಷನ್ ಹಣ. ಎರಡನೆಯದು ಹೆಚ್ಚು ಮಾರಿದಷ್ಟೂ ಹೆಚ್ಚಾಗುವ ಅಂಶ. ಹಾಗೆಯೇ ಕಡಿಮೆ ಮಾರಿದಾಗ ಮಾಯವಾಗಿ ಬಿಡುವ ಅಂಶವೂ ಕೂಡ ಆಗಿದೆ.ಬಹುತೇಕ ಮಾರಾಟ ವಿಭಾಗದ ಮಂದಿ ಹೆಚ್ಚಿನ ಖಾಯಂ ವೇತನ ಪಡೆದು ಔಪಚಾರಿಕವಾಗಿ ಸ್ವಲ್ಪ ಮಟ್ಟದ ಚರಾಂಶವನ್ನು ಅಪೇಕ್ಷಿಸುತ್ತಾರೆ. ಇದು ಒಂದು ನೆಲೆಯಲ್ಲಿ ಸರಿ ಎನ್ನಿಸಿದರೂ ಯಾರೂ ಇದಕ್ಕೆ ವಿರುದ್ಧವಾಗಿ ಅಲ್ಪ ಖಾಯಂ ಹಾಗೂ ಹೆಚ್ಚು ಚರಾಂಶವನ್ನು ಉಪೇಕ್ಷಿಸುತ್ತಾರೋ ಅವರೆಲ್ಲ ಬಹುತೇಕ ವೇಳೆಗಳಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರಿಗಿಂತ ಹೆಚ್ಚಿನ ವೇತನವನ್ನು ಪಡೆದುಕೊಂಡಿದ್ದಾರೆ. ವೇತನದಲ್ಲಿ ಖಾಯಂ ಹಾಗೂ ಚರಾಂಶದ ಶೇಖಡಾವಾರು ವಿಲೇವಾರಿ ಬಹುತೇಕ ಕಂಪೆನಿಗಳಲ್ಲಿ ಒಂದು ಪೂರ್ವನಿಯೋಜಿತವಾದ ಸಿದ್ಧಾಂತವಾದರೂ, ಇದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಯಾರಿಗಾದರೂ ಲಭಿಸಿದರೆ, ಅವರು ಅಲ್ಪ ಖಾಯಂ ಹಾಗೂ ಹೆಚ್ಚು ಚರಾಂಶವನ್ನೇ ಆಯ್ದುಕೊಳ್ಳುವುದು ಸೂಕ್ತ ಎಂಬುದು ನನ್ನ ಅನಿಸಿಕೆ.ಕಾರಣಾಂತರಗಳಿಂದ ಕಮಿಷನ್ ಹಣ ತಪ್ಪಿಹೋದರೂ, ಆ ಇಡಿಯ ವರ್ಷದ ಅದರ ಗಳಿಕೆಯಲ್ಲಿ ನಮ್ಮನ್ನೇ ನಾವು ಜೀವಂತವಾಗಿಟ್ಟು ಕೊಂಡಿರುತ್ತೇವೆ ಎಂಬುದು ಇಲ್ಲಿ ಮುಖ್ಯ.

ಕಡೆಯದಾಗಿ ಇತ್ತೀಚಿನ ದಿನಗಳಲ್ಲಿ ದೇಶದ ಉದ್ಯೋಗರಂಗದಲ್ಲಿ ಸಾಕಷ್ಟು ಕೇಳಿಬಂದಿರುವ ಪದ `ಸ್ಟ್ರೆಸ್' ಅಥವಾ `ಒತ್ತಡದ ಬೇನೆ' ಅನಿಶ್ಚಿತೆಗಳೊಡನೆ ಸತತ ಹೋರಾಟ, ವಿಪರೀತವಾದ ಪ್ರವಾಸಗಳ ಪ್ರಯಾಸ, ಅವೇಳೆಯ ಮೀಟಿಂಗ್‌ಗಳು, ಬೇಡದ ಔತಣಕೂಟಗಳು...ಹೀಗೆ ಎಲ್ಲವೂ ಮಾರಾಟ ವಿಭಾಗದವರ ದೇಹವನ್ನು ಸಾಕಷ್ಟು ಮೆತ್ತಗಾಗಿಸುತ್ತವೆ. ಜತೆಗೆ ಗೊತ್ತಿಲ್ಲದೆಯೇ ಕೈತಪ್ಪಿ ಹೋದ ಗ್ರಾಹಕರ ಕಾಂಟ್ರಾಕ್ಟುಗಳು ಹಾಗೂ ಅವುಗಳಿಂದಾಗಿ ಇಳಿಮುಖವಾದ ವೇತನದ ಚರಾಂಶ ಹಣ ಅವರ ಮನಸ್ಸನ್ನು ಸಾಕಷ್ಟು ನಿಶ್ಯಕ್ತಿಗೊಳಿಸುತ್ತವೆ. ಕಂಪೆನಿ ಗೆದ್ದಾಗ ದಕ್ಕಿದ ಬಿರುದುಗಳು ಹಾಗೂ ಕಂಪೆನಿ ಸೋತಾಗ ಹೇರಳವಾಗಿ ಸಿಕ್ಕುವ ಅಪಮಾನ ಅವರ ಆತ್ಮವನ್ನು ಸಾಕಷ್ಟು ಹಣ್ಣಾಗಿಸುತ್ತವೆ. ಇವೆಲ್ಲವುಗಳ ಒಟ್ಟು ಪರಿಣಾಮ `ಕೆಲಸದೊತ್ತಡ' ಎಂಬ ಕಣ್ಣಿಗೆ ಕಾಣಿಸದ ವಿಚಿತ್ರವಾದ ಖಾಯಿಲೆ! ಅದರಿಂದಾಗಿ, ಅಜೀರ್ಣ ಹಾಗೂ ಕರಳುಬೇನೆ, ಮನೆಯಲ್ಲಿ ವಿನಾಕಾರಣ ಎಲ್ಲರ ಮೇಲೂ ಸಿಡಿಮಿಡಿ, ಸ್ನೇಹಿತರ ಮೇಲೆಲ್ಲ ಅರ್ಥವಿಲ್ಲದ ಸಂಶಯಾರೋಪಗಳು.ಮಾರಾಟ ವಿಭಾಗದಲ್ಲಿರುವ ನಿಮ್ಮಲ್ಲಾರಿಗಾದರೂ ಇವೆಲ್ಲವುಗಳ ದರ್ಶನವಾಗುತ್ತಿದ್ದರೆ, ಸುಮ್ಮನೆ ಹೀಗೆ ಮಾಡಿ. ಕನ್ನಡ ಚಿತ್ರರಂಗ ಕಂಡ ಎರಡು ಅದ್ಭುತಗಳಾದ ರಾಜ್ ಕುಮಾರ್ ಅವರ ನಟನೆ ಹಾಗೂ ಪಿ.ಬಿ.ಶ್ರೀನಿವಾಸ್ ಅವರ  ಗಾಯನ ಇರುವ ಹಳೆಯ ಕನ್ನಡ ಚಲನ ಚಿತ್ರವೊಂದರ ಪ್ರತಿ ತಂದು ಮನೆಯಲ್ಲಿ ಕುಳಿತುಕೊಂಡು ನೋಡಿ. ಅದರಲ್ಲಿ ಅಶ್ವಥ್, ಲೀಲಾವತಿ, ನರಸಿಂಹರಾಜು, ಬಾಲಣ್ಣ ಅವರಲ್ಲಿ ಕೆಲವರು ಇರಲೇಬೇಕು. ಸಾಹಿತ್ಯ ಇಂತಹವರದೇ ಆಗಬೇಕೆಂದೇನಿಲ್ಲ. ಏಕೆಂದರೆ, ಮೇಲಿನ ಕಾಂಬಿನೇಶನ್ ಇರುವ ಎಲ್ಲ ಚಿತ್ರಗಳ ಸಾಹಿತ್ಯವನ್ನು ಆಗಿನ ಕಾಲದಲ್ಲಿ ಸಾಹಿತಿಗಳೇ ರಚಿಸುತ್ತಿದ್ದರು! ಇಂತಹ ಚಿತ್ರವೊಂದನ್ನು ನೋಡಿ ಮುಗಿಸುವಷ್ಟರಲ್ಲಿ ನಿಮ್ಮೆಲ್ಲ ಒತ್ತಡ ಕಡಿಮೆಯಾಗಿ ನೀವು ನಗುತ್ತಿರುತ್ತೀರಿ, ಇದು ಖಂಡಿತಾ.ಹಾಗೊಮ್ಮೆ ಚಿತ್ರವೊಂದನ್ನು ಕುಳಿತು ನೋಡುವಷ್ಟು ತಾಳ್ಮೆ ಅಥವಾ ಸಮಯವೂ ಇಲ್ಲದಷ್ಟು ಒತ್ತಡದಲ್ಲಿ ನೀವಿದ್ದರೆ ಯೋಚಿಸಬೇಡಿ. ಇನ್ನೊಂದು ಸರಳ ಮಾರ್ಗವಿದೆ. ಬಂಗಾರದ ಮನುಷ್ಯ ಚಿತ್ರದ `ನಗು ನಗುತಾ ನಲಿ ನಲಿ ಏನೇ ಆಗಲಿ... ಎಲ್ಲಾ ದೇವನ ಕಲೆಯೆಂದೇ ನೀ ತಿಳಿ ಅದರಿಂದ ನೀ ಕಲಿ'... ಎಂದು ಗುನುಗುತ್ತ ಗುನುಗುತ್ತ, ನಗುತ್ತ ನಗಿಸುತ್ತ, ಮಕ್ಕಳಂತೆ ಇದ್ದುಬಿಡಿ. ಎಲ್ಲ ಸರಿ ಹೋಗುತ್ತದೆ!

- ಲೇಖಕರನ್ನು satyesh.bellur@gmail.com ಇಮೇಲ್ ವಿಳಾಸದಲ್ಲಿ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.