ಸೋಮವಾರ, ಜೂನ್ 14, 2021
21 °C

ನಾಗಮಂಗಲದ ಸೌಮ್ಯಕೇಶವ

ಕೆ. ಚೇತನ್ Updated:

ಅಕ್ಷರ ಗಾತ್ರ : | |

ನಾಗಮಂಗಲದ ಸೌಮ್ಯಕೇಶವ

ಬೇಲೂರಿನಲ್ಲಿ ಚೆನ್ನಕೇಶವ ಇರುವಂತೆ ಮಂಡ್ಯ ಜಿಲ್ಲೆಯ ಐತಿಹಾಸಿಕ ಪಟ್ಟಣ ನಾಗಮಂಗಲದಲ್ಲಿ ಸೌಮ್ಯಕೇಶವ ಭಕ್ತರನ್ನು ಸಲಹುತ್ತಿದ್ದಾನೆ.ಫಣಿಪುರ, ನಾಗಪುರ, ನಾಗಮಂಡಲ ಎಂಬ ಹೆಸರುಗಳು ಇರುವ ನಾಗಮಂಗಲದಲ್ಲಿ ಹೊಯ್ಸಳ ಕಾಲದ ಈ ದೇವಳವನ್ನು ಕ್ರಿ.ಶ. 1173ರಲ್ಲಿ ನಿರ್ಮಿಸಲಾಗಿದೆ.ಸಾಮಾನ್ಯವಾಗಿ ಹೊಯ್ಸಳರ ದೇಗುಲಗಳ ಹೊರಭಾಗದಲ್ಲಿ ಮೇಲಿನಿಂದ ಕೆಳಗಿನವರೆಗೆ ಕೆತ್ತನೆಗಳಿಂದ ಅಲಂಕೃತವಾಗಿರುತ್ತವೆ. ಆದರೆ ಸೌಮ್ಯಕೇಶವ ದೇಗುಲ ಇದಕ್ಕಿಂತ ಭಿನ್ನ.ವಿಶಾಲವಾದ ತಳಹದಿಯ ಮೇಲಿರುವ ಈ ತ್ರಿಕೂಟಾಚಲ ದೇಗುಲದಲ್ಲಿ ಮೂರು ಗರ್ಭಗೃಹಗಳಿವೆ. ಪ್ರಧಾನ ಗರ್ಭಗುಡಿಯ ಪೀಠದ ಮೇಲೆ ಏಳು ಅಡಿ ಎತ್ತರದ ಕೇಶವನ ಚಿತ್ತಾಕರ್ಷಕ ಶಿಲ್ಪವಿದ್ದು, ಮುಖದಲ್ಲಿ ಶಾಂತಿ, ಮಂದಹಾಸವಿದೆ. ಕೇಶವನು ಸಮಭಂಗಿಯಲ್ಲಿ ನಿಂತಿದ್ದು, ಬಲದ ಎರಡು ಕೈಗಳಲ್ಲಿ ಶಂಖ, ಪದ್ಮ, ಎಡಗೈಗಳಲ್ಲಿ ಚಕ್ರ, ಗಧೆಯನ್ನು ಹಿಡಿದಿದ್ದಾನೆ. ಇಕ್ಕೆಲಗಳಲ್ಲಿ ಶ್ರೀದೇವಿ-ಭೂದೇವಿಯರಿದ್ದಾರೆ.ಉತ್ತರ ಭಾಗದ ಗರ್ಭಗೃಹದಲ್ಲಿ ಹೊಯ್ಸಳ ಕಾಲದ ಲಕ್ಷ್ಮಿ ನರಸಿಂಹ, ದಕ್ಷಿಣ ಭಾಗದ ಗರ್ಭಗೃಹದಲ್ಲಿ ವೇಣುಗೋಪಾಲ, ರುಕ್ಮಿಣಿ ಮತ್ತು ಸತ್ಯಭಾಮೆಯರ ವಿಗ್ರಹಗಳಿವೆ. ಗರ್ಭಗೃಹದ ಮುಂಭಾಗ ಚೌಕಾಕಾರದ ಸುಖನಾಸಿ ಮತ್ತು 20 ಕಂಬಗಳಿಂದ ಕೂಡಿದ ನವರಂಗ, ಭುವನೇಶ್ವರಿಯಿದೆ.ಹೊರ ಭಾಗದ ನೈರುತ್ಯದಲ್ಲಿ ಏಕಶಿಲೆಯ ಸುದರ್ಶನ ಮೂರ್ತಿ, ವಾಯುವ್ಯದಲ್ಲಿ ಸೌಮ್ಯನಾಯಕಿ ಅಮ್ಮನವರ ಗುಡಿ ಇದೆ. ಅಲ್ಲದೆ, ವಿಶಾಲವಾದ ಪ್ರಾಂಗಣದಲ್ಲಿ  ಪಾಳೆಯಗಾರರ ಕಾಲದಲ್ಲಿ ನಿರ್ಮಾಣಗೊಂಡ ಅನೇಕ ಉಪ ದೇಗುಲಗಳಿವೆ.ನಾಗಮಂಡಲ: ನವರಂಗ ಮಧ್ಯದ ಮೇಲ್ಭಾಗದ ಸುಖನಾಸಿಯಲ್ಲಿ ಕೆತ್ತಲಾಗಿರುವ ಸರ್ಪಮಂಟಪ ಆಕರ್ಷಕವಾಗಿದೆ. ಒಂದರೊಳಗೊಂದರಂತೆ ಒಟ್ಟು ನಾಲ್ಕು ವೃತ್ತಗಳಿಂದ ಈ ಕೆತ್ತನೆ ಕೂಡಿದೆ.

 

ಈ ವೃತ್ತಗಳಲ್ಲಿ ಕೆಳಮುಖವಾಗಿ 108 ಮೊಗ್ಗುಗಳನ್ನು ಕೆತ್ತಲಾಗಿದ್ದು, ಮಧ್ಯದಲ್ಲಿರುವುದು ಗಾತ್ರದಲ್ಲಿ ದೊಡ್ಡದಾಗಿದೆ. ದೊಡ್ಡ ಮೊಗ್ಗಿನ ಬುಡದಲ್ಲಿ ನಾಗರಹಾವಿನ ಕೆತ್ತನೆಯಿದೆ. ಹೊಯ್ಸಳ ಕಾಲದ ದೇವಾಲಯಗಳ ಭುವನೇಶ್ವರಿಯಲ್ಲಿ ಇದೊಂದು ವಿಶೇಷ ಕೆತ್ತನೆ.ಇಂಥದೇ ಚಿತ್ರಣ ಜಿಲ್ಲೆಯ ತೆಂಗಿನಘಟ್ಟದಲ್ಲಿರುವ ಹೊಯ್ಸಳೇಶ್ವರ ದೇಗುಲದಲ್ಲಿಯೂ ಇದೆ. ತೆಂಗಿನಘಟ್ಟದ್ದು ಶಿವನ ದೇಗುಲವಾದರೆ, ನಾಗಮಂಗಲದಲ್ಲಿರುವುದು ಸೌಮ್ಯಕೇಶವ ದೇವಸ್ಥಾನ. ಇಲ್ಲಿ ಆದಿಶೇಷನ ಪೂಜೆ ನೆರವೇರಿಸಿದರೆ ಸರ್ಪ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.ದೀಪಸ್ತಂಭ: ದೇವಸ್ಥಾನದ ಮುಂಭಾಗದಲ್ಲಿರುವ ಐದು ಅಡಿ ಪೀಠದ ಮೇಲೆ ಸುಮಾರು 47 ಅಡಿ ಎತ್ತರದ ಏಕಶಿಲಾ ದೀಪಸ್ತಂಭವಿದೆ. ಇದನ್ನು ಗರುಡಗಂಭ ಎಂದೂ ಕರೆಯುತ್ತಾರೆ. ಸ್ತಂಭದ ಕೆಳಭಾಗದ ಬದಿಗಳಲ್ಲಿ ಗರುಡ, ಆಂಜನೇಯ, ಶಂಖ ಮತ್ತು ಚಕ್ರದ ಕೆತ್ತನೆಯಿದೆ.ವಿಜಯನಗರದ ಕಾಲದ ಶಿಲ್ಪಗಳ ಲಕ್ಷಣಗಳನ್ನು ಈ ಸ್ತಂಭ ಹೊಂದಿರುವುದರಿಂದ ವಿಜಯನಗರ ಅರಸರು ನಿರ್ಮಿಸಿದ್ದಾರೆ ಎಂಬುದು ಇತಿಹಾಸದಲ್ಲಿ ಲಭ್ಯವಾಗುವ ಮಾಹಿತಿ. ಸರಪಳಿ ಮೂಲಕ ಕಂಬದ ಮೇಲೆ ದೀಪವನ್ನು ಹೊತ್ತಿಸುವ ಯಾಂತ್ರಿಕ ವ್ಯವಸ್ಥೆ ಇಂದಿಗೂ ಸಹ ಚಾಲ್ತಿಯಲ್ಲಿದೆ.ದಾರಿ: ಮೈಸೂರು- ಪಾಂಡವಪುರ- ಜಕ್ಕನಹಳ್ಳಿ ಮಾರ್ಗ (72 ಕಿ.ಮೀ), ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ಬೆಳ್ಳೂರು ಕ್ರಾಸ್‌ನಿಂದ 14 ಕಿ.ಮೀ ದೂರದಲ್ಲಿದೆ. ಉಳಿದುಕೊಳ್ಳಲು ಖಾಸಗಿ ವಸತಿ ಗೃಹಗಳಿವೆ.ಮಾಹಿತಿಗೆ ದೇಗುಲದ ಪ್ರಧಾನ ಅರ್ಚಕ  ಎಸ್.ತಿರುನಾರಾಯಣ ಅವರನ್ನು 08234 286529 ಅಥವಾ 94487 50603 ಮೂಲಕ ಸಂಪರ್ಕಿಸಬಹುದು.ಸೇವಾ ವಿವರ (ರೂ)

*
 ಅಭಿಷೇಕ    1001

* ಶ್ರೀ ಕೃಷ್ಣದೇವರಿಗೆ ಅಭಿಷೇಕ 850

* ಶ್ರೀ ಲಕ್ಷ್ಮಿನರಸಿಂಹ ದೇವರಿಗೆ ಅಭಿಷೇಕ   650

* ಶ್ರೀ ಆದಿಶೇಷ ದೇವರಿಗೆ ಅಭಿಷೇಕ     301

* ಶ್ರೀ ಅಮ್ಮನವರ ದೇವರಿಗೆ ಅಭಿಷೇಕ  801

* ಶ್ರೀ ಸುದರ್ಶನಸ್ವಾಮಿಗೆ ಅಭಿಷೇಕ      501

* ಶ್ರೀ ಆಂಜನೇಯಸ್ವಾಮಿಗೆ ಅಭಿಷೇಕ  450

* ಶ್ರೀ ರಾಮಾನುಚಾರ್ಯರಿಗೆ ಅಭಿಷೇಕ  601

* ಪಂಚಾಮೃತ  150

* ದೇಗುಲದ ಬಾಗಿಲು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 5 ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.