ಸೋಮವಾರ, ಜನವರಿ 20, 2020
27 °C

ನಾಲೆಕಾಮಗಾರಿ ಕಳಪೆ: ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ಕಟ್ಟೇಪುರ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ಕಳಪೆ ಕಾಮಗಾರಿ ನಡೆಯಲು ಕಾರಣವಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿ ಸರ್ಕಾರ ಕೂಡಲೇ ನಾಲೆಗಳ ಆಧುನೀಕರಣ ಕಾಮಗಾರಿ ಗುತ್ತಿಗೆಯನ್ನು ವಜಾಗೊಳಿಸಿ ಬೇರೊಬ್ಬರಿಗೆ ವಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಸೋಮವಾರ ಇಲ್ಲಿ ರಸ್ತೆತಡೆ ನಡೆಸಿದ ಪ್ರತಿಭಟನೆ ನಡೆಸಿದರು.ಪಟ್ಟಣದ ಹೊರ ವಲಯದಲ್ಲಿ ಕಾವೇರಿ ನದಿ ಆಚೆ ಸೇತುವೆ ಮುಂದೆ ಹಾದು ಹೋಗಿರುವ ಬಲದಂಡೆ ನಾಲೆ ಬಳಿ ಪಿರಿಯಾಪಟ್ಟಣ ಮಾರ್ಗದ ರಸ್ತೆಯಲ್ಲಿ ಧರಣಿ ಕುಳಿತ ಕಾರ್ಯಕರ್ತರು ರಸ್ತೆತಡೆ ನಡೆಸಿದರು. ನಾಲೆಗಳ ಆಧುನೀಕರಣ ನೆಪದಲ್ಲಿ ಕಳಪೆ ಕೆಲಸ ನಡೆಸಿ ಸರ್ಕಾರದ ಹಣ ಲೂಟಿ ಮಾಡಿರುವ ಸಂಬಂಧಪಟ್ಟ ಹಾರಂಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.ಅರಕಲಗೂಡು ತಾಲ್ಲೂಕಿನ ಕಟ್ಟೇಪುರದಿಂದ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಕೆಸ್ತೂರು ಗೇಟ್‌ವರೆಗೆ ಸುಮಾರು 120 ಕಿ.ಮೀ. ದೂರದವರೆಗೆ ಕಳೆದ ವರ್ಷ ಅಲ್ಲಲ್ಲಿ ಕೈಗೆತ್ತಿಕೊಂಡ ನಾಲೆಗಳ ಆಧುನೀಕರಣ ಕಾಮಗಾರಿ ಸಂಪೂರ್ಣವಾಗಿ ಹಾಳಾಗಿದೆ. ಏಳೆಂಟು ತಿಂಗಳ ಹಿಂದೆಯಷ್ಟೇ ಹಾಕಿದ್ದ ಸಿಮೆಂಟ್ ಕಾಂಕ್ರಿಟ್ ಮಲ್ಲಿನಾಥಪುರ ಬಳಿ ಕುಸಿದು ಬಿದ್ದಿದೆ ಎಂದು ದೂರಿದರು.ಕಟ್ಟೇಪುರ ಅಣೆಕಟ್ಟೆ ಎಡ ಮತ್ತು ಬಲದಂಡೆ ನಾಲೆಗಳ ಆಧುನೀಕರಣಕ್ಕಾಗಿ ಸರ್ಕಾರ ರೂ. 121 ಕೋಟಿ ಹಣ ನೀಡಿದೆ. ಆದರೆ ನಾಲೆಗಳ ಆಧುನೀಕರಣ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಗುತ್ತಿಗೆದಾರರು ಮನಸ್ಸೋ ಇಚ್ಚೆ ಕಳಪೆ ಕೆಲಸ ಮಾಡಿಸುತ್ತಿದ್ದರೂ ಸಂಬಂಧಪಟ್ಟ ಹಾರಂಗಿ ಇಲಾಖೆ ಎಂಜಿನಿಯರುಗಳು ತಲೆಕೆಡಿಸಿಕೊಳ್ಳದೇ ಕೈ ಕಟ್ಟಿ ಕುಳಿತಿದ್ದಾರೆ. ಕ್ಷೇತ್ರದ ಜನಪ್ರತಿನಿಧಿಗಳು ಕೂಡ ಈ ಕುರಿತು ಚಕಾರ ಎತ್ತುತ್ತಿಲ್ಲ. ಇದರಿಂದಾಗಿ ಕೋಟಿ ವೆಚ್ಚದ ಕಾಮಗಾರಿ ಹದಗೆಟ್ಟು ಸಾರ್ವಜನಿಕರ ತೆರಿಗೆ ಹಣವನ್ನು ನೀರಿನಲ್ಲಿ ಹಾಕಿದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ನಾಲೆಗಳಲ್ಲಿ ಈವರೆಗೆ ಕಳಪೆ ಕೆಲಸ ಎಗ್ಗಿಲ್ಲದೇ ಸಾಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸುಮ್ಮನಿರುವುದನ್ನು ನೋಡಿದರೆ ಲಂಚಾವತಾರ ತಾಂಡವಾಡಿರುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರ ಮೇಲ್ಮಟ್ಟದಲ್ಲಿ ವಿಶೇಷ ತನಿಖೆ ಕೈಗೊಂಡರೆ ಮಾತ್ರ ಸತ್ಯಾಂಶ ಹೊರ ಬಿದ್ದು ಸರ್ಕಾರದ ಹಣ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾದ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಸರ್ಕಾರ ಮೇಲ್ಮಟ್ಟದಲ್ಲಿ ಸೂಕ್ತ ತನಿಖೆ ನಡೆಸಿ ನಾಲಾ ಆಧುನೀಕರಣ ಕಾಮಗಾರಿ ಕೆಡಲು ಕಾರಣವಾದ ಅಂಶ ಬಯಲುಗೊಳಿಸಬೇಕು ಎಂದು ಆಗ್ರಹಿಸಿದರು.ಇದಲ್ಲದೇ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಎಸ್.ಎನ್.ಸಿ. ಕಂಪೆನಿಯವರು ಕಟ್ಟೇಪುರ ಅಣೆಕಟ್ಟೆ ಹಿನ್ನೀರು ಪ್ರದೇಶದಲ್ಲಿ ಹೇರಳವಾಗಿ ಮರಳು ಖರೀದಿಸಿ ಅದನ್ನು ಸಂಗ್ರಹಿಸಿಟ್ಟುಕೊಂಡು ಕೆಲವು ಸ್ಥಳೀಯ ಗುತ್ತಿಗೆದಾರರ ಮೂಲಕ ದುಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.

 

ಆಧುನೀಕರಣ ಕಾಮಗಾರಿಯ ನೆಪದಲ್ಲಿ ಪುರಾತನ ಕಾಲದ ನಾಲೆಗಳನ್ನು ಹಾಳುಗೆಡುತ್ತಿರುವ ಸದರಿ ಗುತ್ತಿಗೆಯನ್ನು ರದ್ದುಗೊಳಿಸಿ ಉತ್ತಮವಾಗಿ ಕೆಲಸ ಮಾಡುವ ಬೇರೊಬ್ಬ ಗುತ್ತಿಗೆದಾರರಿಗೆ ವಹಿಸಬೇಕು. ಇಲ್ಲವಾದರೆ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸಮಿತಿಯ ಹಾಸನ- ಮೈಸೂರು, ಕೊಡಗು ಜಿಲ್ಲಾ ಉಸ್ತುವಾರಿ ಸಂಚಾಲಕ ಎಚ್.ಪಿ. ಮಂಜು, ಸಂಘಟನಾ ಸಂಚಾಲಕ ಜವರಯ್ಯ, ಜಿಲ್ಲಾ ಸಮತಾ ಸೈನಿಕದಳ ಅಧ್ಯಕ್ಷ ಕೆ.ಎಸ್. ಸತೀಶ್, ಮೈಸೂರು ವಿಭಾಗೀಯ ಅಧ್ಯಕ್ಷ ಕೆ.ವಿ. ಜಗದೀಶ್, ಜಿಲ್ಲಾ ಸಂಚಾಲಕರಾದ ಪುಟ್ಟರಾಜು, ನಿರಂಜನ್, ತಾಲ್ಲೂಕು ಸಂಚಾಲಕ ರಾಜಶೇಖರ್, ಶಿವರಾಮ್, ಜಗದೀಶ್, ರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)