ಭಾನುವಾರ, ಮೇ 16, 2021
21 °C

`ನಾಲ್ವಡಿ ಹಿಂದುಳಿದವರ ಪಾಲಿನ ದಾರಿದೀಪ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನಾಲ್ವಡಿ ಹಿಂದುಳಿದವರ ಪಾಲಿನ ದಾರಿದೀಪ'

ಶ್ರೀರಂಗಪಟ್ಟಣ: ಮಿಲ್ಲರ್ ಆಯೋಗ ರಚಿಸಿ, ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗದ ಜನರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಇಂದಿಗೂ ಶೋಷಿತರ ಪಾಲಿನ ದಾರಿದೀಪವಾಗಿದ್ದಾರೆ ಎಂದು ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ತಿಳಿಸಿದರು.



ಇಲ್ಲಿನ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಜನಮನ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳವಾರ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 130ನೇ ಜನ್ಮ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜನಾದರೂ ವೈಭೋಗದ ಜೀವನ ನಡೆಸದ ಒಡೆಯರ್ ವೇಷ ಮರೆಸಿಕೊಂಡು ರಾಜ್ಯದ ಸ್ಥಿತಿಗತಿಯನ್ನು ತಿಳಿಯುತ್ತಿದ್ದರು. ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದರು. ಜನ ಸಾಮಾನ್ಯರ ಒಳಿತಿಗೆ ಆಡಳಿತ ವ್ಯವಸ್ಥೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುತ್ತಿದ್ದ ನಾಲ್ವಡಿ ಅವರನ್ನು ಇಂದಿನ ರಾಜಕಾರಣಿಗಳಿಗೆ ಆದರ್ಶಪ್ರಾಯರೆಂದು ಭಾವಿಸಿ ಜನಸೇವೆ ಮಾಡಬೇಕು ಎಂದು ಹೇಳಿದರು.



ಜನಮನ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಿ. ಪುಟ್ಟಸ್ವಾಮಿ ಮಾತನಾಡಿ, ನಾಲ್ವಡಿಯವರು ರೈತರಿಗಾಗಿ ಅರಮನೆಯಲ್ಲಿದ್ದ ಮೂರು ಮೂಟೆ ವಜ್ರ, ವೈಢೂರ್ಯವನ್ನು ಮಾರಾಟ ಮಾಡಿ ಅಣೆಕಟ್ಟೆ ಕಟ್ಟಿಸಿದ ತ್ಯಾಗಜೀವಿ ಎಂದು ಹೇಳಿದರು. ಕವಿಯತ್ರಿ ಗುಣಸಾಗರಿ ನಾಗರಾಜು, ರಿವರ್‌ವ್ಯಾಲಿ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ. ರಾಮೇಗೌಡ ಮಾತನಾಡಿದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಮಹೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪುರುಷೋತ್ತಮ ಇದ್ದರು.



ಪುರಸ್ಕಾರ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಅಂಗವಾಗಿ ತಾಲ್ಲೂಕು ಮಟ್ಟದಲ್ಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ಎಚ್.ಕೆ. ವೀರೇಶ್, ಪಿ.ಎಸ್. ಯಶ್ವಿತ್, ಎಂ.ಆರ್. ನಂದನಕುಮಾರ್, ಸಂಜಯ ಕೆ. ಗೌಡ, ಎಸ್.ಎಸ್. ಮನಿಶ ಹಾಗೂ ಕನ್ನಡ ಭಾಷೆ ವಿಷಯದಲ್ಲಿ ಗರಿಷ್ಠ ಅಂಕ ಪಡೆದ ವೈ.ಬಿ. ಸಹನಾ, ಎ.ಎನ್. ಸೌಮ್ಯ, ಆರ್. ಮೇಘನಾ, ಸಿ.ಎಸ್. ಚೈತ್ರ ಹಾಗೂ ಮನೋಹರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.



`ನಾಲ್ವಡಿ ಕೊಡುಗೆ ಅಪಾರ'

ಪಾಂಡವಪುರ: ಬರಡಾಗಿದ್ದ ಜಿಲ್ಲೆಯ ನೆಲವನ್ನು ಹಸಿರು ನೆಲವಾಗಿ ಪರಿವರ್ತಿಸಿದ ಕೀರ್ತಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ತಹಶೀಲ್ದಾರ್ ಶಿವಕುಮಾರಸ್ವಾಮಿ ಹೇಳಿದರು.



ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು.



ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀರಾವರಿ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಅಪಾರವಾದ ಕೊಡುಗೆ ನೀಡಿದ್ದಾರೆ. ರೈತರು ಇಂದು ಸಮೃದ್ಧ ಕೃಷಿ ಮಾಡಲು ನಾಲ್ವಡಿ ಅವರ ಕೊಡುಗೆಯೇ ಪ್ರಮುಖ ಕಾರಣ.



ಒಡೆಯರ್ ಅವರು ತಮ್ಮ ಪತ್ನಿಯ ಒಡೆಗಳನ್ನು ಗಿರವಿ ಇಟ್ಟು ಕೆಆರ್‌ಎಸ್ ಅಣೆಕಟ್ಟೆ ನಿರ್ಮಿಸಿದರು. ಆ ಮೂಲಕ ಇಡೀ ಜಿಲ್ಲೆಗೆ ನೀರು ನೀಡಿದ ಮಹಾನ್ ವ್ಯಕ್ತಿ. ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ನಾಲ್ವಡಿ ಅವರ ಭಾವಚಿತ್ರವನ್ನಿಟ್ಟು ಅವರ  ಸ್ಮರಣೆ ಮಾಡಬೇಕು ಎಂದು ಸಲಹೆ ನೀಡಿದರು.



ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಂ. ರಾಮಕೃಷ್ಣಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ. ವಸಂತಪ್ರಕಾಶ್, ಎ.ಎಲ್. ಕೆಂಪೂಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಗಾಯತ್ರಿ ಕೃಷ್ಣೇಗೌಡ, ಸದಸ್ಯರಾದ ಶೈಲಜಾ ಗೋವಿಂದರಾಜು, ಪಿ.ಎಸ್. ಶಾಮಣ್ಣ, ಮಹದೇವಮ್ಮ, ಇಒ ಸಿದ್ದಲಿಂಗಮೂರ್ತಿ, ಬಿಇಒ ಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಲೀಲಮ್ಮ, ಶೋಭಾ ಹಾಜರಿದ್ದರು.



ಕಾರ್ಯಕ್ರಮದ ನಂತರ ಪಟ್ಟಣದ ಮಿನಿ ವಿಧಾನಸೌಧ ಆವರಣದಿಂದ ಕೃಷ್ಣರಾಜ ಒಡೆಯರ್ ಭಾವಚಿತ್ರದೊಂದಿಗೆ ಶಾಲಾ ಮಕ್ಕಳ ಸೇವಾದಳ, ವಾದ್ಯಗೋಷ್ಠಿಯ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಪಾಂಡವ ಕ್ರೀಡಾಂಗಣ ತಲುಪಿತು. ಅಲ್ಲಿ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.



ಮೀಸಲಾತಿ ಜನಕ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೊದಲು ಹಿಂದುಳಿದ ಜನರಿಗಲ್ಲದೇ ಬ್ರಾಹ್ಮಣರಿಗೂ ಕೂಡ ಉದ್ಯೋಗದಲ್ಲಿ ಮೀಸಲಾತಿ ಒದಗಿಸಿಕೊಟ್ಟ ಮೀಸಲಾತಿಯ ಜನಕರು ಎಂದು ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ನಲ್ಲಹಳ್ಳಿ ಸುರೇಶ್ ಅಭಿಪ್ರಾಯಪಟ್ಟರು.



ತಾಲ್ಲೂಕಿನ ಎಲೆಕೆರೆ ಗ್ರಾಮದ ಹ್ಯಾಂಡ್‌ಪೋಸ್ಟ್‌ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಪ್ರಥಮ ಬಾರಿಗೆ 1921ರಲ್ಲಿ ಶೇ 75ರಷ್ಟು ಮೀಸಲಾತಿಯನ್ನು ನೀಡುವುದರ ಮೂಲಕ ತಮ್ಮ ಸಂಸ್ಥಾನದಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ನೌಕರರನ್ನಾಗಿ ಸೇರಿಸಿಕೊಂಡು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದರು ಎಂದರು.



ಮುಖಂಡರಾದ ರವೀಂದ್ರಕುಮಾರ್, ರಾಗಿಮುದ್ದನಹಳ್ಳಿ ಸ್ವಾಮಿ, ಚಿಕ್ಕಾಯರಹಳ್ಳಿ ನಾರಾಯಣಮೂರ್ತಿ, ನಲ್ಲಹಳ್ಳಿ ಸ್ವಾಮಿ ಹಾಜರಿದ್ದರು.





`ಮೈಸೂರನ್ನು ಮಾದರಿಯನ್ನಾಗಿಸಿದ ಕೀರ್ತಿ ನಾಲ್ವಡಿಯವರದ್ದು'

ಮಳವಳ್ಳಿ: ಮೈಸೂರು ರಾಜ್ಯ ಮಾದರಿ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ ಎಂದು ತಹಶೀಲ್ದಾರ್ ಎಂ.ಆರ್.ರಾಜೇಶ್ ತಿಳಿಸಿದರು.



ಪಟ್ಟಣದ ತಾಲ್ಲೂಕು ಕಚೇರಿ ಸಮೀಪವಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕಿರುಉದ್ಯಾನದಲ್ಲಿ ಮಂಗಳವಾರ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.



ಅವರ ಆಳ್ವಿಕೆಯ್ಲ್ಲಲೇ ಮುಂದಿನ 200 ವರ್ಷಗಳಿಗೆ ಯೋಜನೆಗಳನ್ನು ರೂಪಿಸಿದ್ದರು. ಇದಕ್ಕೆ ಪೂರಕವೆಂಬಂತೆ ಕೃಷ್ಣರಾಜ ಅಣೆಕಟ್ಟು, ಮೈಸೂರು ಪ್ರಾಂತ್ಯದ ಅಭಿವೃದ್ಧಿಗೆ ಅಡಿಪಾಯ, ಕುಡಿಯುವ ನೀರಿಗಾಗಿ ವ್ಯವಸ್ಥೆ, ಭಾರತದ ಒಕ್ಕೂಟಕ್ಕೆ ರಾಜ್ಯಗಳು ಸೇರಬೇಕೆಂಬುದು ಅವರ ಅಭಿಪ್ರಾಯವಾಗಿತ್ತು ಎಂದು ಸ್ಮರಿಸಿದರು. ವಿದ್ಯಾರ್ಥಿಗಳು ಅವರ ಕೊಡುಗೆಗಳನ್ನು ಓದಿ ತಿಳಿದುಕೊಳ್ಳುವುದು ಅವಶ್ಯ ಎಂದರು.



ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಚಿಂತನೆ, ಮನೆ ಮನೆಗೆ ಬೆಳಕು ನೀಡಿದ್ದು, ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಿದ್ದು ಸೇರಿದಂತೆ ಬಹುಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಮಹಾನ್ ವ್ಯಕ್ತಿ. ಮಳವಳ್ಳಿಯಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ ನಿರ್ಮಿಸಬೇಕು ಎಂದು ಆಗ್ರಹಿಸಿದರು.



ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಉಪಾಧ್ಯಕ್ಷೆ ಚಂದ್ರಮ್ಮ, ಮಾಜಿ ಅಧ್ಯಕ್ಷೆ ರಾಧಾ, ಸದಸ್ಯ ಮಹದೇವ, ಪುರಸಭೆ ಸದಸ್ಯ ಗಂಗರಾಜೇ ಅರಸ್, ಎಂ.ಆರ್. ಮಹೇಶ್, ತಾಲ್ಲೂಕು ವೀರಶೈವ ಯುವ ಬಳಗದ ಅಧ್ಯಕ್ಷ ಬಿ.ಎನ್. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಂ. ರಾಮು, ಅಧಿಕಾರಿಗಳಾದ ಪ್ರಸನ್ನ, ಪುಟ್ಟಮಲ್ಲು, ಮಹದೇವಯ್ಯ, ನಂಜಪ್ಪ ಇದ್ದು ಇದಕ್ಕೂ ಮುನ್ನ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿಯಿಂದ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆ ಬಳಿಗೆ ತರಲಾಯಿತು.



ನಾಲ್ವಡಿ ತ್ಯಾಗಮಯಿ

ಮದ್ದೂರು: `ನಾಡಿನ ಸರ್ವತೋಮುಖ ಪ್ರಗತಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಅನನ್ಯ' ಎಂದು ತಿ.ನರಸೀಪುರದ ರಾಮಕೃಷ್ಣ ಆಶ್ರಮದ ನಾಗಾನಂದ ಸ್ವಾಮೀಜಿ ಬಣ್ಣಿಸಿದರು.



ಪಟ್ಟಣದ ಪುರಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಂಬಾಡಿ ಅಣೆಕಟ್ಟು ಕಟ್ಟದಿದ್ದರೆ ಮಂಡ್ಯ ಜಿಲ್ಲೆ ಇಂದಿಗೂ ಬರಗಾಡು ಆಗಿರುತ್ತಿತ್ತು.



ಅಣೆಕಟ್ಟು ಕಟ್ಟಲು ಆರ್ಥಿಕ ಸಂಕಷ್ಟ ಎದುರಾದಾಗ ನಾಲ್ವಡಿ ಅವರು ಅರಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮೂಟೆಯಲ್ಲಿ ತುಂಬಿಕೊಂಡು ಮುಂಬಯಿಗೆ ಹೋಗಿ ಅದನ್ನು ಅಡವಿಟ್ಟು ಹಣ ತಂದು ಅಣೆಕಟ್ಟು ಪೂರ್ಣಗೊಳಿಸಿದ ತ್ಯಾಗಮಯಿ' ಎಂದು ನಾಲ್ವಡಿ ಕೃಷ್ಣರಾಜರ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರನ್ನು ನೆನೆಸುವಂತೆ ನಾಲ್ವಡಿ ಅವರ ತ್ಯಾಗ ಆದರ್ಶ ಗುಣಗಳನ್ನು ಜನರು ಸ್ಮರಿಸಬೇಕು. ಪ್ರತಿ ಮನೆಯಲ್ಲೂ ಸರ್.ಎಂ.ವಿ ಅವರ ಭಾವಚಿತ್ರದೊಂದಿಗೆ ನಾಲ್ವಡಿ ಅವರ ಭಾವಚಿತ್ರವನ್ನಿಟ್ಟು ಪೂಜಿಸಬೇಕು ಎಂದು ಸಲಹೆ ನೀಡಿದರು.



ಭವ್ಯ ಮೆರವಣಿಗೆ: ಇದಕ್ಕೂ ಮುನ್ನ ಪಟ್ಟಣದ ಉಗ್ರನರಸಿಂಹಸ್ವಾಮಿ ದೇಗುಲ ಆವರಣದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.



ನಾಲ್ವಡಿ ಅವರ ಕುರಿತು ಗಾಯಕ ಹುರುಗಲವಾಡಿ ರಾಮಯ್ಯ ಲಾವಣಿ ಹಾಡಿ ರಂಜಿಸಿದರು. ಸಾಹಿತಿ ಡಾ.ಅರ್ಜುನಪುರಿ ಅಪ್ಪಾಜಿಗೌಡ ನಾಲ್ವಡಿ ಅವರ ಬದುಕು ಸಾಧನೆ ಕುರಿತು ಮಾತನಾಡಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಕಾಂತರಾಜು, ಪುರಸಭಾ ಮುಖ್ಯಾಧಿಕಾರಿ ಚಿಕ್ಕನಂಜಯ್ಯ, ಗ್ರೇಡ್ 2 ತಹಶೀಲ್ದಾರ್ ರಾಮಪ್ಪ, ಕೃಷಿ ಸಹಾಯಕ ನಿರ್ದೇಶಕಿ ಡಾ.ಷುಷ್ಪಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ರಾಜು, ಯುವ ಮುಖಂಡ ಕೆಂಪರಾಜು, ದೈಹಿಕ ಶಿಕ್ಷಣ ಪರೀವಿಕ್ಷಕ ಬಿ. ರಾಜು, ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.