ಸೋಮವಾರ, ಏಪ್ರಿಲ್ 12, 2021
26 °C

ನಾವು ಬದಲಾಗಿದ್ದೇವೆಯೇ?

ಸವಿತಾ ನಾಗಭೂಷಣ, ಶಿವಮೊಗ್ಗ Updated:

ಅಕ್ಷರ ಗಾತ್ರ : | |

ಕುಂಜಾರುಗಿರಿ ದೇಗುಲದಲ್ಲಿ ಪಂಕ್ತಿಭೇದ ಆಚರಿಸುತ್ತಿರುವ ಕುರಿತು ಮಣಿಪಾಲದ ದೀಪಾಲಿ ಕಾಮತ್ ಎತ್ತಿರುವ ಪ್ರಶ್ನೆಗಳಿಗಾಗಿ ನಾನವರನ್ನು ಅಭಿನಂದಿಸುತ್ತೇನೆ. ಆದರೆ ಜಾತೀಯತೆ ಆಚರಿಸುವುದರಲ್ಲಿ ಗೌಡ ಸಾರಸ್ವತರು ಕೂಡ ಹಿಂದೆ ಇಲ್ಲ ಎಂದು ಹೇಳಬಯಸುವೆ. ಇದು 40 ವರುಷದ ಹಿಂದಿನ ಕತೆ. ಶಿವಮೊಗ್ಗೆಯ ಸಾರಸ್ವತ ಕಲ್ಯಾಣಮಂಟಪದಲ್ಲಿ ಸಾರಸ್ವತ ಜನಾಂಗದ ಎಲ್ಲರಿಗೆ ಊರೂಟ ಇತ್ತು. (ಗಾಂವ್ ಜವಣ್) ಊಟದ ಸಮಯದಲ್ಲಿ ನನ್ನ ಎದುರಿಗೆ ಊಟದ ಎಲೆಯ ಮುಂದೆ ಕೂತ ಮನುಷ್ಯನನ್ನು ಎಬ್ಬಿಸಲಾಯಿತು.ಯಾಕೆಂದು ನನ್ನ ತಾಯಿಯವರನ್ನು ಕೇಳಿದೆ. `ಅವನು ನಮ್ಮ ಜಾತಿಯವನಲ್ಲ, ಅದಕ್ಕೆ~ ಎಂದರು. ಅವನು ನೋಡುವುದಕ್ಕೆ ನಮ್ಮ ಹಾಗೆಯೇ ಇದ್ದಾನೆ ಅವನು ಬೇರೆ ಜಾತಿ ಎಂದು ಹೇಗೆ ಗೊತ್ತಾಯಿತು ಎಂದು ಕೇಳಿದೆ. ಅವನ ಭಾಷೆಯಿಂದ ಎಂದರು.ಒಳ್ಳೆ ಮೂಕನ ಹಾಗೆ ಕುಳಿತಿದ್ದಾನೆ. ಅವನು ಮಾತೇ ಆಡಿಲ್ಲವಲ್ಲ ಎಂದೆ. ತೋಂಡ್ ದಂಪ್ರನು ಬಸ್ಲಾ... ಕಶ್ಯಿ ಕಳ್ಳೆ? ತೂ ತೋಂಡ್ ದಂಪ್ರನು ಬೈಸ... ಅಂತ ನನ್ನ ತಾಯಿ ನನ್ನ ಬಾಯಿ ಮುಚ್ಚಿಸಿದರು. ಅಂದಿನಿಂದ ನಾನಂತು ಊರೂಟಗಳಿಗೆ ಹೋಗುವುದನ್ನು ನಿಲ್ಲಿಸಿದೆ! ನಾವು ಬದಲಾಗದೆ ಜಗತ್ತು ಬದಲಾಗುವುದೆ? ಮನೆಯಲ್ಲಿ ಊಟ ಇಲ್ಲ ಎಂದು ಯಾರೂ ದೇಗುಲಕ್ಕೆ ಊಟಕ್ಕೆ ಹೋಗುವುದಿಲ್ಲ.ಒಂದೊಮ್ಮೆ ಹಾಗೆ ಹೋದರೂ ಅನ್ನದೇವರ ಮುಂದೆ ಕುಳಿತವನನ್ನು ಎಬ್ಬಿಸುವುದು ಮಾನವೀಯತೆ ಅಲ್ಲ. ಜಗತ್ತು ಎಷ್ಟೆಲ್ಲ ಬದಲಾಗಿದೆ ಎಂದು ಹೇಳುತ್ತಿರುತ್ತೇವೆ. ಆದರೆ ನಾವು ಬದಲಾಗಿದ್ದೇವೆಯೇ?ಎಲ್ಲರು ಉಣ್ಣುವ ಅನ್ನ ಒಂದೇ. ಆದರೆ ಊಟ ಮಾಡುವ ಮನುಷ್ಯರು ಮಾತ್ರ ಬೇರೆ ಬೇರೆ ಎಂದು ತಿಳಿಯುವ ಪರಿ ವಿಚಿತ್ರದ್ದಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.