ಸೋಮವಾರ, ಜನವರಿ 27, 2020
26 °C

ನಿಜದ ಬೆಳಕಿನೆಡೆಗೆ ಒಂದು ಧ್ಯಾನ

ಯು.ಆರ್.ಅನಂತಮೂರ್ತಿ Updated:

ಅಕ್ಷರ ಗಾತ್ರ : | |

ಮನುಷ್ಯನಿಗೆ ಬಹಳ ಸಿಟ್ಟು ಬಂದರೆ, ಅಂದರೆ ಏನೋ ಹೇಸಿಗೆ ಎನಿಸಿದರೆ ಯಾವ ಶಬ್ದದಲ್ಲಿ ಅದನ್ನವನು ಹೇಳಬಹುದು ಎಂಬ ವಿಚಾರ ನನ್ನನ್ನು ಕಾಡಿದೆ. ಶಕುಂತಲೆಗೆ ತನ್ನನ್ನು ನಿರಾಕರಿಸಿದ ರಾಜ ದುಷ್ಯಂತನ ಮೇಲೆ ಕೋಪ ಬಂದಾಗ ಅವಳು ಬಳಸುವ ಒಂದೇ ಒಂದು ಶಬ್ದ `ಅನಾರ್ಯ~. ಗಾಂಧೀಜಿಯವರು ತಮ್ಮ ಹಿಂದ್ ಸ್ವರಾಜ್‌ನಲ್ಲಿ ಆಧುನಿಕ ಯುಗದ ಅನಿಷ್ಟಗಳೇನು ಎಂಬುದನ್ನು ಪಟ್ಟಿಮಾಡುತ್ತ ಬ್ರಿಟಿಷ್ ಪಾರ್ಲಿಮೆಂಟನ್ನು ಅದರಲ್ಲಿ ಸೇರಿಸಿ ಹಳಿಯುತ್ತಾರೆ.ಗಾಂಧಿಯ ಬರವಣಿಗೆಯಲ್ಲಿ ನನಗೆ ಇವತ್ತಿಗೂ ಉಳಿದ ಅಚ್ಚರಿಯನ್ನು ಉಂಟುಮಾಡಿದ ಶಬ್ದ ಇದು. ಇಂಗ್ಲಿಷ್‌ನಲ್ಲಿ ಬ್ರಿಟಿಷ್ ಪಾರ್ಲಿಮೆಂಟನ್ನು ಅವರು `ಟ್ಟಟಠಿಜಿಠ್ಠಿಠಿಛಿ~ ಎನ್ನುತ್ತಾರೆ. ನನ್ನನ್ನಿದು ಬೆಚ್ಚಿಸಿತು, ಹೆಣ್ಣನ್ನು ಜರಿಯುವ ಇಂತಹ ಶಬ್ದವನ್ನು ಗಾಂಧಿ ಬಳಸಿದರಲ್ಲ ಎಂದು. ಸೂಳೆಯನ್ನು ಸೂಳೆಯೆಂದು ಜರಿಯುವ ಮನಸ್ಸು ಗಾಂಧಿಯ್ದ್ದದಾಗಿರಲಿಲ್ಲ. ಈ ಕೃತಿಯ ಮೂಲ ಇರುವುದು ಗುಜರಾತಿಯಲ್ಲಿ.ಆ ಪುಸ್ತಕವನ್ನು ಸರ್ಕಾರ ಬಹಿಷ್ಕರಿಸಿದ್ದಾಗ ಇಂಗ್ಲಿಷ್ ಭಾಷಾಂತರವನ್ನು ಗಾಂಧಿ ಪ್ರಕಟಿಸಿದರು. ಇಂಗ್ಲಿಷರೇ ಇಂಗ್ಲಿಷ್‌ನಲ್ಲಿರುವುದನ್ನು ಬಹಿಷ್ಕರಿಸುವುದಿಲ್ಲ ಎಂಬುದು ನಾವು ಗಮನಿಸಬೇಕಾದ ವಿಷಯ. ಇರಲಿ, ನನ್ನ ಗುಜರಾತಿ ಸ್ನೇಹಿತರ ಪ್ರಕಾರ ಗಾಂಧಿ ಬಳಸುವುದು `ವೇಶ್ಯೆ~ ಎನ್ನುವ ಶಬ್ದ. ಇದನ್ನು ಗಾಂಧಿಯ ಗಮನಕ್ಕೆ ಹಲವರು ತಂದಿದ್ದರಂತೆ.ತನ್ನದೇ ಒಂದು ಮನಸ್ಸಿಲ್ಲದ, ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುವ, ಸುಳ್ಳಿನಲ್ಲಿ ಬದುಕುವ ಬ್ರಿಟನ್ನಿನ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಗಾಂಧಿ ತಮ್ಮ ಅಂತರಂಗಕ್ಕೆ ಒಗ್ಗದ ಒಂದು ಹೀನ ಶಬ್ದವನ್ನು ಬಳಸಿ ಬರೆದದ್ದರ ಬಗ್ಗೆ ಪಶ್ಚಾತ್ತಾಪ ಪಟ್ಟಂತೆ ಕೂಡ ಕಾಣುವುದಿಲ್ಲ. ನೈತಿಕತೆಯನ್ನೇ ಮೂಲಾಧಾರವಾಗಿ ಬದುಕಿದ ಗಾಂಧಿ ಈ ಶಬ್ದವನ್ನು ಬಳಸಿದರೆಂಬುದು ನಮ್ಮ ಪಾರ್ಲಿಮೆಂಟಿನ ಕಾಲಹರಣದ ತೋರುಗಾಣಿಕೆಯ ವರ್ತನೆಯನ್ನು ನೋಡಿದಾಗ ನೆನಪಾಯಿತು. ಆದರೆ ಈ ಶಬ್ದವನ್ನು ಈಗ ನಾವು ಬಳಸಿದರೆ ಅಪರಾಧಿಗಳಾಗುತ್ತೇವೆ.ಮನುಷ್ಯನ ವರ್ತನೆಯಲ್ಲಿ ಸೌಜನ್ಯ ಮತ್ತು ನೈತಿಕತೆ ಎರಡೂ ಮನುಷ್ಯ ಎಂತಹವನು ಎಂಬುದನ್ನು ತಿಳಿಸುವ ಶಬ್ದಗಳು. ಇಲ್ಲೊಂದು ದ್ವಂದ್ವವಿದೆ. ನೈತಿಕತೆ ಅತಿ ನಿಷ್ಠುರವಾಗುತ್ತ ಹೋದಂತೆ ಸೌಜನ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಸೌಜನ್ಯ ಅತಿಯಾಗುತ್ತಾ ಹೋದಂತೆ ಎಲ್ಲರೂ ತನ್ನನ್ನು ಮೆಚ್ಚಬೇಕೆಂಬ ಆಸೆಯಲ್ಲಿಯೇ ಮನುಷ್ಯ ನೈತಿಕವಾದ ನಿಷ್ಠುರ ಸತ್ಯಗಳನ್ನು ತನ್ನಿಂದಲೇ ಮರೆಮಾಚಿಕೊಳ್ಳುತ್ತ ಸಾರ್ತ್ರ್ ಹೇಳುವ `ಬ್ಯಾಡ್ ಫೇತ್~ನಲ್ಲಿ ಬದುಕಲು ಶುರುಮಾಡುತ್ತಾನೆ.

 

ಹಾಡುವ, ಕುಣಿಯುವ, ಭೂರಿಭೋಜನ ಕೂಟಗಳಲ್ಲಿ ಕುಡಿದು ತಿಂದು ಹಾದರದಲ್ಲಿ ಹಗುರಾಗುವ, ಫ್ರೆಂಚ್ ಮಾತಾಡುವ ತನ್ನ ಶ್ರೀಮಂತ ವರ್ಗದಿಂದ ದೂರವಾಗುತ್ತ, ತನ್ನ ಮಹತ್ ಕೃತಿಗಳನ್ನು ನಿರಾಕರಿಸಿ ರೈತ ಪೋಷಾಕಿನಲ್ಲಿ ನಡೆದಾಡಿದ ಟಾಲ್‌ಸ್ಟಾಯ್ ಈ ದ್ವಂದ್ವದ ಸಂಕಟಕ್ಕೆ ದೊಡ್ಡ ಉದಾಹರಣೆ. ಈ ಸ್ಥಿತಿಯಲ್ಲಿ ಸೌಜನ್ಯ ಅಂತರಂಗದ ಗುಣವಾಗಿ ಉಳಿಯದೆ ಕೇವಲ ಸಾಮಾಜಿಕತೆಯಾಗುತ್ತದೆ. ಒಳ ಬದುಕೇ ಇಲ್ಲದ, ಬರೀ ಸಾಮಾಜಿಕರಾದ (socialites)ಜನರನ್ನು ಡಿ.ಎಚ್.ಲಾರೆನ್ಸ್ ಹೇಸಿಗೆಯಿಂದ ನೋಡುತ್ತಿದ್ದ. ಬ್ರಿಟನ್ನಿನ ಮೇಲ್ವರ್ಗದ ಜನರೆಲ್ಲ ಕೇವಲ ಸಾಮಾಜಿಕರು ಎಂದು ಅವನು ತಿಳಿದಿದ್ದ. ಆದ್ದರಿಂದ ಈ ಸಾಮಾಜಿಕತೆಯ ಆಚೆ ಇರುವ ಸತ್ಯವನ್ನೇ ನಿಜ ಜೀವನದಲ್ಲೂ ಕಾದಂಬರಿಯಲ್ಲೂ ಹುಡುಕುತ್ತಿದ್ದ ಲಾರೆನ್ಸ್ ಬಹಳ ಜನರಿಗೆ ಅಪ್ರಿಯನಾದ.ಬರ್ಟ್ರಂಡ್ ರಸಲ್ ಇವನ ಮಾತಿನಿಂದ ಎಷ್ಟು ನೊಂದಿದ್ದನೆಂದರೆ ತನ್ನ ಜೀವನ ಚರಿತ್ರೆಯಲ್ಲಿ ಹೇಳಿಕೊಳ್ಳುವ ಪ್ರಕಾರ ಅವನಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನ್ನಿಸಿತ್ತಂತೆ. ನಾನು ಮೆಚ್ಚುವ ಲೇಖಕರಲ್ಲಿ ಇ.ಎಂ.ಫಾರ್ಸ್‌ಟರ್ ಮಾತ್ರ ನೈತಿಕತೆಯನ್ನೂ ಸೌಜನ್ಯವನ್ನೂ ಒಟ್ಟಾಗಿ ಉಳಿಸಿಕೊಂಡವನೆಂದು ತೋರುತ್ತದೆ. ಆದರೆ ಫಾರ್ಸ್‌ಟರ್‌ನಲ್ಲಿ ಸೌಜನ್ಯ ನೈತಿಕವಾಗಿ ಕಾಣಬೇಕಾದ್ದನ್ನು ಮರೆಮಾಚುವ ಗುಣವಾಗಿರಲಿಲ್ಲ.

 

ಕೊಂಚ ಭೋಳೆ ಸ್ವಭಾವದ ಒಳ್ಳೆಯತನದಿಂದ ಸುಳ್ಳಾಗಬಲ್ಲ ನನ್ನಂಥವನ ಪ್ರಕೃತಿಗೆ ಇ.ಎಮ್.ಫಾರ್ಸ್‌ಟರ್‌ನ ಉದಾರ ಧೋರಣೆಯ ಶೀಲದಿಂದಲೇ ಹುಟ್ಟುವ ಶೈಲಿ ಆದರ್ಶಪ್ರಾಯವಾದದ್ದು. ಇ.ಎಂ.ಫಾರ್ಸ್‌ಟರ್‌ನ ನೈತಿಕತೆ ಇರುವುದು ಮುಂದಾಗಲೆಂದು ಹಿಮ್ಮೆಟ್ಟುವ, ಹಿಮ್ಮೆಟ್ಟಲು ಅಂಜದೆ ಮುಂದಾಗುವ ಅವನ ಮನಸ್ಸಿನ ಎಚ್ಚರದಿಂದ; ಖಂಡನಾತ್ಮಕ ಬರವಣಿಗೆಗೆ ನಾಚುವ ಅವನ ಉದಾರ ನೀತಿಯಿಂದ.  ಕೊಳೆ ಬಟ್ಟೆಯನ್ನು ಬೀದಿಗೆ ತಂದು ಒಗೆಯುವ ಪ್ರಜಾತಂತ್ರ ವ್ಯವಸ್ಥೆಯನ್ನು ಅನಿವಾರ್ಯವೆನ್ನಿಸುವಂತೆ ಅವನು ಮೆಚ್ಚುವುದು ಈ ಶೀರ್ಷಿಕೆಯಲ್ಲಿ: ಟು ಚಿಯರ್ಸ್ ಫಾರ್ ಡೆಮಾಕ್ರಸಿ- ಅಂದರೆ ತ್ರೀ ಚಿಯರ್ಸ್ ಅಲ್ಲ.ಮನುಷ್ಯನ ನಿಸರ್ಗದ ಜೊತೆಗಿನ ಹಾಗೂ ಉಳಿದ ಲೋಕದ ಜೊತೆಗಿನ ಸಂಬಂಧ ಹೇಗೆ ರೂಪಿತವಾಗುತ್ತ ಹೋಗುತ್ತದೆ ಎಂಬ ಬಗ್ಗೆ ನನ್ನ ಪ್ರಕಾರ ಅತ್ಯುತ್ತಮವಾದ, ಸರಳವಾದ ಮಾತನ್ನು ಯಾವ ಕಾವ್ಯದ ರಂಗೂ ಇಲ್ಲದೆ ಆಡಿದವನೆಂದರೆ ಕವಿ

ವರ್ಡ್ಸ್‌ವರ್ತ್. ~ಟಿಂಟರ್ನ್ ಅಬ್ಬೆ~ಯಲ್ಲಿ ತನ್ನನ್ನು ನೆಮ್ಮದಿಯ ಮನುಷ್ಯನನ್ನಾಗಿ ಮಾಡಿದ ಈ ‘The little unremembered acts of kindness and of love’ಎಂಬ ಒಂದು ಸಾಲನ್ನು ಬರೆಯುತ್ತಾನೆ. ಇಲ್ಲಿ  ‘unremembered’  ಎನ್ನುವುದು ಅತ್ಯಂತ ಮುಖ್ಯವಾದ ಶಬ್ದ. ಜೀವನದ ಸಾರ್ಥಕತೆ ಮಹತ್ತಿನಲ್ಲೇ ಇರಬೇಕಿಲ್ಲ; ದೈನಿಕದ ಮರೆತುಹೋಗುವ ಸಣ್ಣ ಪುಟ್ಟ ಕರುಣೆಯ ನಿತ್ಯ ಕ್ರಿಯೆಗಳಲ್ಲಿ ಅರಿವಿಗೆ ಬಾರದ ನೈತಿಕತೆಯಲ್ಲಿ ಕವಿ ಜೀವನದ ಸಾರ್ಥಕತೆಯನ್ನು ಕಾಣುತ್ತಾನೆ.ನನಗೆ ಪರಿಚಯವಿದ್ದ ಕೆಲವರಲ್ಲಿ ಈ ನೈತಿಕತೆ ಮತ್ತು ದಾಕ್ಷಿಣ್ಯದ ದ್ವಂದ್ವವನ್ನು ಕಂಡಿದ್ದೆೀನೆ. ಉದಾಹರಣೆಗೆ ಗೋಪಾಲಕೃಷ್ಣ ಅಡಿಗರು ತುಂಬ ಸೌಮ್ಯವಾಗಿ ತನಗಾಗದವರು ಮಾಡಿದ್ದೆಲ್ಲವನ್ನು ಅಲ್ಲ್ಲ್ಲಲೇ ಧಿಕ್ಕರಿಸದೆ ಮೌನದಲ್ಲಿ ಸಹಿಸಿಕೊಂಡು ಇದ್ದು ಬಿಡುತ್ತಿದ್ದರು. ಉಡುಪಿಯ ಕಾಲೇಜೊಂದರಲ್ಲಿ ಅವರು ಪ್ರಾಂಶುಪಾಲರಾಗ್ದ್ದಿದಾಗ ಹಾಗೆಯೇ ಸಾಗರದ ಕಾಲೇಜಿನಲ್ಲೂ ಪ್ರಾಂಶುಪಾಲರಾಗ್ದ್ದಿದಾಗಲೂ ಈ ಸೌಮ್ಯತೆಯಿಂದಾಗಿ ತಾವು ಏನು ಕೇಳಿದರೂ ಅಡಿಗರು ಮಾಡುತ್ತಾರೆಂದು ಅಧಿಕಾರದಲ್ಲಿದ್ದವರು ತಿಳಿದಂತೆ ಕಂಡಿತ್ತು.ಆದರೆ ಅಡಿಗರ ಸ್ವಭಾವದಲ್ಲಿದ್ದ ಒಂದು ವಿಶೇಷವೆಂದರೆ ಈ ಅವಮಾನ ಒಳಗಿನಿಂದಲೆ ತುಂಬಿ ತುಂಬಿ ಯಾವುದೋ ಒಂದು ಕ್ಷಣದಲ್ಲಿ ಸಿಡಿದುಬಿಡುತ್ತಿದ್ದುದು. ತಾನು ಸಹಿಸಿಕೊಂಡಿದ್ದವನ ಜೊತೆ ಎಲ್ಲ ವ್ಯವಹಾರವನ್ನು ಸಂಪೂರ್ಣ ಕಡಿದುಕೊಳ್ಳುವ  ಕ್ಷಣದಲ್ಲಿ ಅವರು ದಕ್ಷಿಣ ಕನ್ನಡದ  ಕೋಲದ ಭೂತದಂತಾಗಿ ಬಿಡುತ್ತಿದ್ದರು.ಇದು ಅವರ ಬರಹವನ್ನೂ ನಿರ್ದೇಶಿಸುತ್ತಿತ್ತು. ಅವರ ಕವನದ ನಾಯಕನೂ ಹೀಗೆ ಕೊಂಚ ಭೋಳೆಯಾದ ಆದರೆ ಒಳಜೀವನದಲ್ಲಿ ಸೂಕ್ಷ್ಮನಾದ ಇದ್ದಕ್ಕಿದ್ದಂತೆ ಸಿಡಿದು ಹೊರಬರುವ ಮನುಷ್ಯ. `ಗೊಂದಲಪುರ~ದಲ್ಲಿ ಕವಿ ಹೀಗೇ ಮೋಸ ಹೋದವನು. ಇನ್ನೂ ಎತ್ತರದ ನೆಲೆಯಲ್ಲಿ `ಕೂಪಮಂಡೂಕ~ದಲ್ಲೂ ಕವಿ ತನ್ನ ಪ್ರೇಮಿಯಾದ ದೇವನಿಗೆ ಮೋಸ ಹೋದವನು. ಕಡೆಗದನ್ನು ತಿಳಿದು ಇನ್ನೆಂದೂ ಉತ್ಸಾಹದಲ್ಲಿ ಕುಪ್ಪಳಿಸದೆ ಕೆರೆಯ ಕೆಸರಲ್ಲಿ ಒಂದು ಕಪ್ಪೆಯಂತೆ ಇರಬೇಕೆಂದು ನಿರ್ಧರಿಸಿದವನು.ತನ್ನ ಮಿತಿ ತಿಳಿದವನ ಮೈ ಬಣ್ಣ ಮರುಕಳಿಸುವದು ಭಾವುಕತೆಯ ಗಾಳಿಯಲ್ಲಿ ಅಲ್ಲ; ಕೆಸರಿನ ತಂಪಲ್ಲಿ. ಈ ನಮ್ಮ ಕಾಲದಲ್ಲಿ ಆಳುವ ವರ್ಗ ಎಷ್ಟು `ಬ್ಯಾಡ್ ಫೇತ್~ನಲ್ಲಿ ಬದುಕುತ್ತಿದೆ ಎಂದರೆ ಎಲ್ಲರೂ ಮುಖಕ್ಕೆ ನಗುವನ್ನು ಸದಾ ಅಂಟಿಸಿಕೊಂಡು ಕ್ಯಾಮೆರಾಕ್ಕೆ ಸತತ ಎದುರಾಗಿರುವ ಸಜ್ಜನರು; ಅದರೆ ಒಳಗೆ ಅವರು ತಾವು ಏನನ್ನೂ ನಂಬದವರು. ಹೀಗೆ ಸೌಜನ್ಯದಲ್ಲಿ ಕಾಣೆಯಾಗಿ ಹೋದ ನೈತಿಕತೆ ಅವರ ಒಳ ಜೀವನವನ್ನು ಬಾಧಿಸಿದಂತೆಯೂ ಕಾಣುವುದಿಲ್ಲ.ಗಾಂಧಿಯಲ್ಲಿ ಸೌಜನ್ಯ ಮತ್ತು ನೈತಿಕತೆ ಒಟ್ಟಾಗಿತ್ತು. ವಯಸ್ಸಿನಲ್ಲಿ ಹಿರಿಯರಾದ ಕೃಪಲಾನಿ ಕಿರಿಯಳಾದ ಸುಚೇತಾಳನ್ನು ಪ್ರೀತಿಸಿದಾಗ ಪರಮ ಪ್ರಮಾಣದ ನೈತಿಕತೆಯನ್ನೇ ಆಧಾರವಾಗಿಟ್ಟುಕೊಂಡ ವಿನೋಬಾ ಭಾವೆಯವರಿಗೆ ಅದು ತಪ್ಪು ಎನಿಸಿತು. ಆದರೆ ವಿನೋಬಾರ ಗುರುವಾಗಿದ್ದ ಗಾಂಧಿ ಸಂಸಾರಿಯಾಗಿದ್ದೇ ಸಂತನಾದವರು.ಇಬ್ಬರೂ ತೊಳಲಾಡುವುದನ್ನು ಕಂಡ ಗಾಂಧಿ ಸುಚೇತಾಳನ್ನು ಆತ್ಮೀಯವಾಗಿ ಕೇಳಿದರಂತೆ, `ಕೃಪಲಾನಿ ಅಂದ್ರೆ ನಿನಗೆ ತುಂಬ ಪ್ರೀತಿಯೆ?~. ಆಕೆ ಹೌದೆಂದಾಗ ಗಾಂಧಿ `ಹಾಗಾದರೆ ನೀವಿಬ್ಬರು ಮದುವೆಯಾಗಿ~ ಎಂದರಂತೆ.ತಮ್ಮ ಆಶ್ರಮದಲ್ಲಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ ಮಾಂಸವಿಲ್ಲದೆ ಸೊರಗುತ್ತಿದ್ದುದನ್ನು ಕಂಡಾಗ ಗಾಂಧೀಜಿ ಅವರಿಗೆ ತಿನ್ನಲು ಮೊಟ್ಟೆ ತರಿಸಿದರಂತೆ. ದಕ್ಷಿಣ ಭಾರತದ ಯುವಕನೊಬ್ಬ ಅವರ ಆಶ್ರಮದಲ್ಲಿ ಹೊಟ್ಟೆ ನೋವಾಗಿ ಮಲಗಿದ್ದಾಗ ಗಾಂಧಿ ಎಂದಿನ ಪದ್ಧತಿಯಂತೆ ಆಶ್ರಮದ ಎಲ್ಲ ರೋಗಿಗಳನ್ನು ಬೆಳಗ್ಗೆ ಎದ್ದು ಮಾತಾಡಿಸುತ್ತ ಬಂದವರು ಈ ಹುಡುಗನ ಎದುರು ನಿಂತು ಬಳಲಿ ಮಲಗಿದವನನ್ನು `ನಿನಗೇನು ಬೇಕಪ್ಪಾ?~ ಎಂದರಂತೆ.

ಮದ್ರಾಸಿನ ಈ ಹುಡುಗ ~ನನಗೆ ಕಾಫಿ ಬೇಕು~ ಎಂದನಂತೆ. ಗಾಂಧಿ ಅವರ ಹೆಂಡತಿಯ ಕೋಣೆಗೆ ಹೋಗಿ ಅವರಿಗೆ ನಿದ್ದೆಗೆ ಭಂಗ ಬಾರದಂತೆ ಸದ್ದಿಲ್ಲದೆ  ತಾವೇ ಕಾಫಿ ಮಾಡಿ ಬಿಸಿಬಿಸಿಯಾಗಿ ಲೋಟಕ್ಕೆ ಬಗ್ಗಿಸಿಕೊಂಡು ಆ ಹುಡುಗನಿಗೆ ನೀಡಿದರಂತೆ. ಇಂತಹ ಎಷ್ಟೋ ಕತೆಗಳು ಗಾಂಧಿಯ ಬಗ್ಗೆ ಇವೆ. ವಿನೋಬಾರ ಬಗ್ಗೆ ಇಂತಹ ಕತೆಗಳನ್ನು ಹೇಳುವುದು ಸಾಧ್ಯವೇ ಇಲ್ಲ. ಕುವೆಂಪುರಂಥವರನ್ನು ಅವರ ಮನೆಗೇ ಹೋಗಿ ನೋಡುವ ಸೌಜನ್ಯ ಇದ್ದ ವಿನೋಬಾಗೆ ಬೇರೆಯವರು ಮಾಡುವ ತಪ್ಪು ಮಾನವ ಸಹಜವಾದದ್ದು ಎನ್ನುವ ಅನುಕಂಪ ಇರಲಿಲ್ಲ.

 

ಬಹುಶಃ ಇದಕ್ಕೆ ವಿನೋಬಾ ಸಂಸಾರಿಯಲ್ಲದೇ ಕಾರಣವಾಗಿರಬೇಕು. ಇಬ್ಬರಿಗೆ ಮಾತ್ರ ಮಗುವಿನಂತೆ ಗಹಗಹಿಸಿ ನಗುವುದು ಸಾಧ್ಯವಿತ್ತೆಂಬ ಮಾತಿದೆ. ಈ ಇಬ್ಬರು ಗಾಂಧಿ ಮತ್ತು ಚಾರ‌್ಲಿ ಚಾಪ್ಲಿನ್. `ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ~ ಎನ್ನುವುದು ಗಾಂಧಿಯ ನೈತಿಕತೆ ಬಗ್ಗೆ ಸತ್ಯ.ನಮ್ಮ ಕಾಲ ಹೀಗೆ ಸೌಜನ್ಯ ಮತ್ತು ನೈತಿಕತೆಯನ್ನು ಒಟ್ಟಾಗಿ ಪಡೆದ ಒಬ್ಬ ನಾಯಕನನ್ನು ಹುಡುಕುತ್ತಿದೆ ಎಂದು ನನಗನ್ನಿಸುತ್ತದೆ. ಆದರೆ ಅಂಥವರ‌್ಯಾರೂ ಸದ್ಯಕ್ಕೆ ಕಣ್ಣಿಗೆ ಬೀಳುತ್ತಿಲ್ಲ. ಈ ಹೊತ್ತಲ್ಲಿ ಅಕಸ್ಮಾತ್ ಕಾಣಿಸಿಕೊಂಡವರು ಅಣ್ಣಾ ಹಜಾರೆ. ಈತನ ಜೊತೆ ಒಂದು ತಿಂಗಳು ಬದುಕುವುದೂ ನನ್ನಂತವನಿಗೆ ಸಾಧ್ಯವೇ ಇಲ್ಲ. ಅಷ್ಟು ಕಠಿಣವಾದ ನೈತಿಕತೆಯ ಕಲ್ಪನೆ ಅಣ್ಣಾ ಹಜಾರೆಯದು ಎಂದು ನನಗನ್ನಿಸುತ್ತದೆ. ಆತ ತನ್ನ ಹಳ್ಳಿಯ ಜನರನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ಹಿಂದಿನ ಕಾಲದ ಊರ ಯಜಮಾನನಂತೆ ದಬ್ಬಾಳಿಕೆಯಲ್ಲಿ ನಿರ್ವಹಿಸುತ್ತಾನೆ.

 

ಕುಡಿದು ಬಂದು ಹೆಂಡಿರಿಗೆ ಹೊಡೆಯುವವನನ್ನು ಕಂಬಕ್ಕೆ ಕಟ್ಟಿ ಹೊಡೆಯಿರಿ ತಾನು ಹೊಡೆಯುತ್ತೇನೆ ಯಾವ ನಾಚಿಕೆಯೂ ಇಲ್ಲದೆ ಅಣ್ಣಾ ಹಜಾರೆ ಹೇಳುತ್ತಾನೆ. ನಾನು ನನ್ನ ಹಳ್ಳಿಗೆ ತಾಯಿ ಯಿದ್ದಂತೆ ಎಂದು ತನ್ನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಾನೆ. ಇದನ್ನು ಕೇಳಿಸಿಕೊಂಡ ನಾನು ಎಲ್ಲರಂತೆ ಅಣ್ಣಾ ಹಜಾರೆಯನ್ನು ಹಳಿಯದೆ, ಆಧುನಿಕ ನಾಗರಿಕ ಸದ್ವರ್ತನೆಯ ಗರ್ವದಲ್ಲಿ ತಿರಸ್ಕರಿಸದೆ, ನಮ್ಮ ಕಾಲದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತೇನೆ.

 

ಜನಸಾಮಾನ್ಯರಿಗೆ ಸದಾ ನಗುಮುಖದ ನಮ್ಮ ಯಾವ ರಾಜಕೀಯ ನಾಯಕರೂ ನಂಬಿಕೆಗೆ ಅರ್ಹರಾಗಿ ಕಾಣುವುದಿಲ್ಲ. ಆದರೆ ಒರಟು ಮಾತಿನ ಈ ಗಡಸು ಮುದುಕ ಅಣ್ಣಾ ಜನರ ಆಶೋತ್ತರಗಳಿಗೆ ಮಾತುಕೊಡಬಲ್ಲ ಮನುಷ್ಯನಾಗಿ ಕಾಣುತ್ತಾನೆ. ಇದನ್ನು ನಾವು ಸರಿ ತಪ್ಪುಗಳಲ್ಲಿ ಮಾತ್ರ ಕಾಣದೆ ನಮ್ಮ ಕಾಲದ ಒಂದು ವಿದ್ಯಮಾನ ಎಂದು ಕಾಣಬೇಕು. Anna Hajare is a phenomenon ಹಜಾರೆಯ ಅತ್ಯಂತ ಸರಳವೆನಿಸುವ ನೈತಿಕ ಜೀವನದ ಕಲ್ಪನೆ ಭಾರತದ ಜನ ಸಮುದಾಯಕ್ಕೆ ಸದ್ಯದಲ್ಲಿ ಆಕರ್ಷಕ ಎನಿಸುವುದೆ ನಮ್ಮ ಕಾಲದ ದ್ಯೋತಕ ಎನ್ನಬಹುದೆ?ಇವತ್ತಿಗೂ ನಮ್ಮ ಸಮಾಜದ ಸಾಂಸಾರಿಕ ಜೀವನದಲ್ಲಿ ಇರುವ ತಾಯಂದಿರು, ತಂದೆಯರು ತಮ್ಮ ತಮ್ಮ ಮನೆಗಳಲ್ಲಿ ಉಳಿಸಿಕೊಂಡು ಬಂದಿರುವ ಒಂದು ನೈತಿಕತೆಯಿದೆ. ಇದನ್ನು ನಾವು ವೈಚಾರಿಕ ನೆಲೆಯಲ್ಲಿ ಗುರುತಿಸದೆ ಮರೆತು ಬಿಟ್ಟಿದ್ದೆೀವೆ. ಬಹಳ ವರ್ಷಗಳ ಹಿಂದೆ ಮೈಸೂರಿನಲ್ಲಿ ಒಂದು ಘಟನೆ ನಡೆಯಿತು. ಅಲ್ಲೊಂದು ಸೈಕಲ್ ಶಾಪ್ ಇತ್ತು. ಇದರಲ್ಲಿ ಸಿನಿಮಾ ಹಾಡುಗಳನ್ನು ಸತತವಾಗಿ ಬಿತ್ತರಿಸುವ ಟೇಪ್ ರೆಕಾರ್ಡರ್ ಒಂದಿತ್ತು. ಇಲ್ಲಿ ಕೆಲಸವಿಲ್ಲದ ಯುವಕರು ಬೀಡಿ ಸಿಗರೇಟು ಸೇದುತ್ತ ಕಾಲಹರಣ ಮಾಡುತ್ತಿದ್ದರು.ಚಾಮುಂಡಿಪುರಂನ ಕೆಲವು ಬ್ರಾಹ್ಮಣ ಹುಡುಗಿಯರು ಕೆಲಸಕ್ಕೋ ಕಾಲೇಜಿಗೋ ಹೋಗುವಾಗ ಈ ಜಾಗದ ಹತ್ತಿರ ಬರುತ್ತಿದ್ದಂತೆಯೇ ಹುಡುಗರು ಅವರನ್ನು ರೇಗಿಸುತ್ತಿದ್ದರು. ಒಂದು ಕತೆ ಹಬ್ಬಿತು, ಯಾವನೋ ಒಬ್ಬ ಹುಡುಗ ಯಾವುದೋ ಹುಡುಗಿಯ ಕೈ ಹಿಡಿದು ಎಳೆದನಂತೆ ಎಂದು. ಈ ಕತೆ ಬೆಳೆಯುತ್ತ ಬೆಳೆಯುತ್ತಾ ಯಾರೋ ಹುಡುಗಿ ಬಸುರಾದಳಂತೆ ಎಂಬ ಮಟ್ಟಿಗೂ ಬೆಳೆಯಿತು.

 

ಇದರಿಂದ ಕ್ರುದ್ಧರಾದ ಮೇಲ್ವರ್ಗದ ಪುಂಡು ಯುವಕರ ಗುಂಪೊಂದು ಚಾಮುಂಡಿಪುರಂನ ಸನಿಹದಲ್ಲೆ ಇದ್ದ ಒಂದು ವೀಳ್ಯದೆಲೆಯ ತೋಟಕ್ಕೆ ನುಗ್ಗಿ ಅಲ್ಲಿನ  ಎಲ್ಲ ಅಂಬುಗಳನ್ನು ಕಿತ್ತು ಬಿಸಾಡಿ ದಲಿತರ ವಿರುದ್ಧ ಸ್ಲೋಗನ್‌ಗಳನ್ನು ಕೂಗಿ ಜನಜೀವನ ಅಸ್ತವ್ಯಸ್ತವಾಯಿತು. ಇದು ಹಲವು ದಲಿತರಿಗೆ ಅನ್ನ ಕೊಡುತ್ತಿದ್ದ ಎಲೆಯ ತೋಟ. ದಲಿತ ಹೆಂಗಸರು ಈ ತೋಟದ ಎಲೆಗಳನ್ನು ಬೀದಿಯಲ್ಲಿಟ್ಟು ಮಾರಿ ಜೀವನ ಮಾಡುತ್ತಿದ್ದರು.ಅವರ ಜೀವನ ಅಸ್ತವ್ಯಸ್ತವಾಯಿತು. ಈ ಕಾಲದಲ್ಲಿ ಶಾರದಾ ವಿಲಾಸ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಅಪ್ಪಟ ಗಾಂಧೀವಾದಿ ಪ್ರಾಣೇಶರಾವ್ ಎನ್ನುವವರು, ನಾನು ಮತ್ತು ನಮ್ಮಲ್ಲಿ ಕೆಲವರನ್ನು ಕೂಡಿಕೊಂಡು ಮನೆಮನೆಗೆ ಹೋಗಿ ಎರಡು ಕೋಮಿನ ನಡುವೆ ಶಾಂತಿ ತರಲು ಪ್ರಯತ್ನಿಸುತ್ತ ಓಡಾಡಿದಾಗ ನಡೆದ ಒಂದು ಘಟನೆಯನ್ನು ನಾನು ಮರೆಯಲಾರೆ. ಅದನ್ನಿಟ್ಟುಕೊಂಡೇ ನಾನು ಹಲವು ರೀತಿಯ ವಿಚಾರಗಳನ್ನು ಆನಂತರದಲ್ಲಿ ಪಡೆದಿದ್ದೆೀನೆ.ಘಟನೆ ಇದು: ಎಲ್ಲ ದಲಿತರ ಮನೆಗಳನ್ನೂ ನಾವು ಹೊಕ್ಕು ಮಾತಾಡಿದೆವು. ಚಾಮುಂಡಿಪುರಂನ ಮೇಲ್ಜಾತಿಯ ಮನೆಗಳಿಗೂ ಹೋಗಿ ದಲಿತ ಹುಡುಗರ ದೌರ್ಜನ್ಯದ ಬಗ್ಗೆ ಹಬ್ಬಿದ ಕತೆಗಳಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಎಂಬುದನ್ನು ಆತ್ಮೀಯವಾಗಿ ಮಾತನಾಡಿ ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆವು. ದಲಿತರ ಕೇರಿಯಲ್ಲಿ ಚಾವಡಿಯ ಮೇಲೆ ಮೈತುಂಬ ಹರಕು ಕಂಬಳಿಯನ್ನು ಹೊದ್ದು ಆ ಕೇರಿಯ ನಾಯಕ ಕುಳಿತಿದ್ದ. ಅವನ ಮನೆಯೆದುರಿಗೆ ನುಗ್ಗೇಕಾಯಿ ಮರವಿತ್ತು. (ಬ್ರಾಹ್ಮಣರ ಮನೆಯೆದುರು ಒಂದು ತೆಂಗಿನ ಮರವಿದ್ದರೆ ದಲಿತರ ಮನೆಯೆದುರು ನುಗ್ಗೆಮರ ಇದ್ದೆೀ ಇರುತ್ತದೆಂಬುದು ನಾನು ಗಮನಿಸಿದ್ದ ಸಂಗತಿ).ಈ ಮುದುಕ ನನಗೆ ಹೇಳಿದ, `ಸ್ವಾಮಿ ನಮಗೂ ಇಲ್ಲಿ ಒಂದು ಕುಟುಂಬ ಇದೆ, ಮಕ್ಕಳು ಮರಿ ಇದ್ದಾರೆ. ಅವರನ್ನು ವಿಚಾರಿಸಿಕೊಳ್ಳುವ ಒಂದು ಪಂಚಾಯಿತಿ ಇದೆ ಎಂದು ನಿಮಗ್ಯಾರಿಗೂ ಗೊತ್ತೇ ಇಲ್ಲ. ನಮ್ಮ ಹುಡುಗರೇನಾದರೂ ಹುಡುಗಿಯರ ವಿಷಯದಲ್ಲಿ ತಪ್ಪಾಗಿ ನಡೆದುಕೊಂಡಿದ್ದರೆ ನಾವು ಅವರ ಕೆನ್ನೆಗೆ ಎರಡು ಬಾರಿಸಿ ಸರಿಮಾಡುತ್ತಿದ್ದೆವು...(ಇಲ್ಲಿನನಗೆ ಅಣ್ಣಾ ಹಜಾರೆ ನೆನಪಾಗುತ್ತಾರೆ)  ಆದರೆ ನಿಮ್ಮ ಜನ ನಮ್ಮ ಹತ್ತಿರ ಒಂದು ಮಾತೂ ಆಡದೆ ವರ್ಷಗಟ್ಟಲೆ ನಾವು ಕಷ್ಟಪಟ್ಟು ಬೆಳೆಸಿದ ವೀಳ್ಯದೆಲೆಯ ಅಂಬುಗಳನ್ನೆಲ್ಲ ಕಿತ್ತೆಸೆದರಲ್ಲ? ನಾವು ಮೆಟ್ಟು ಹಾಕಿಕೊಂಡು ತೊಟದೊಳಕ್ಕೆ ಹೋಗುವುದಿಲ್ಲ ಅದು ನಮ್ಮ ಪಾಲಿನ ದೇವರು. ನಿಮ್ಮ ಯುವಕರು ಅದರೊಳಕ್ಕೆ ಬೂಟು ಕಾಲಿನಲ್ಲಿ ಹೊಕ್ಕು ತೋಟವನ್ನು ನಿರ್ನಾಮ ಮಾಡಿದರು~ ಎಂದು ಹೇಳಿ, ನಿಟ್ಟುಸಿರಿಟ್ಟು ಬೀಡಿ ಹಚ್ಚಿ `ನಿಮಗೆ ದೇವರು ದಿಂಡರು ಎನ್ನುವ ಭಯವೇ ಇಲ್ಲವೆ?~ ಎಂದು ಕೇಳಿದ.ಈ `ಬೂಟು~ ಶಬ್ದ ನನ್ನನ್ನು ಕಾಡಿದೆ. ಎಷ್ಟೇ ಸೊರಗಿದ್ದರೂ ಒಂದು ನೈತಿಕ ಎಳೆ ನಮ್ಮ ಸಮಾಜದ ಸಾಂಸಾರಿಕ ಜೀವನದಲ್ಲಿ ಇರುತ್ತದೆ. ಇದನ್ನು ಕಾಪಾಡುವ ಹಿರಿಯರೂ ಇರುತ್ತಾರೆ. ಈ ವ್ಯವಸ್ಥೆ ಕ್ರಮೇಣ ನಮ್ಮ ಲೋಕದಿಂದ ಮಾಯ ಆಗುತ್ತಿರುವುದರ ಬಗ್ಗೆ ಶಂಕರ ಮೊಕಾಶಿ ಪುಣೇಕರ ಒಂದು ಲೇಖನವನ್ನು ಬರೆದಿದ್ದರು. ಪ್ರತಿ ಜಾತಿಯಲ್ಲೂ ಇಂತಹ ಒಂದು ನ್ಯಾಯವನ್ನು ಕಾಪಾಡುವ ಪುರೋಹಿತ ಎನ್ನಬಹುದಾದ ವರ್ಗವಿತ್ತು, ಆದರೆ ಬ್ರಿಟಿಷರ ಆಳ್ವಿಕೆಯಲ್ಲಿ ಈ ವರ್ಗದ ನ್ಯಾಯದ ತೀರ್ಪಿಗೆ ಬೆಲೆಯೇ ಇಲ್ಲವೆಂದು ಹೊಸ ಕಾನೂನು ವ್ಯವಸ್ಥೆ ತರಲಾಯಿತು. ಹೀಗಾಗಿ ಪ್ರತಿ ಜಾತಿಯ ಒಳಗೂ ದೊರಕುತ್ತ ಇದ್ದ ನೈತಿಕ ನ್ಯಾಯತೀರ್ಪಿನ ಅಧಿಕೃತತ್ವಕ್ಕೆ ಬೆಲೆಯೇ ಇಲ್ಲದೆ, ಪ್ರತಿಜಾತಿಯಲ್ಲಿಯೂ ಎಳೆಯರಿಗೆ ಮೇಲೇರುವ ಭರವಸೆ ಹುಟ್ಟಿಸುವ ಒಂದು ವರ್ಗವೇ ನಶಿಸಿತು ಎಂದು ಅದರಲ್ಲಿ ಪುಣೇಕರ್ ಹೇಳುತ್ತಾರೆ.ಅಬ್ದಲ್ ನಜೀರ್ ಸಾಬರು ಪಂಚಾಯತ್ ರಾಜ್ ಮಸೂದೆಯನ್ನು ತರುವ ಮೊದಲು ನಮ್ಮಲ್ಲಿ ಕೆಲವರು ತೀವ್ರವಾಗಿ ಅವರ ಜೊತೆ ಚರ್ಚಿಸುತ್ತಿದ್ದೆವು. ನ್ಯಾಯ ಪಂಚಾಯಿತಿಯನ್ನೂ ಅವರು ತರಲು ಮುಂದ್ದಾಗಿದ್ದರು. ಆದರೆ ಆಧುನಿಕ ವಿಚಾರಗಳಿಗೆ ಮನಸೋತ ನಾನು ಅವರಿಗೆ ಹೇಳಿದ್ದು ನೆನಪಾಗುತ್ತಿದೆ: `ಹಳ್ಳಿಯಲ್ಲಿ ಜಾತಿ ವ್ಯವಸ್ಥೆಯಿರುತ್ತದೆ, ಆದ್ದರಿಂದ ನ್ಯಾಯ ಪಂಚಾಯಿತಿ ತಂದರೆ ಮೇಲ್ಜಾತಿಗಳು ಮೆರೆದು ಕೆಳಜಾತಿಯವರನ್ನು ಮೆಟ್ಟಿ ಬಿಡುತ್ತವೆ~ ಎಂದು.ಹೀಗೆ ಹೇಳುವಾಗ ಪ್ರೇಮ್‌ಚಂದ್‌ರ ಪಂಚಾಯಿತಿ ಮೇಲಿನ ಅದ್ಭುತ ಕತೆಯೊಂದು ನನ್ನ ಮನಸ್ಸಿನಲ್ಲಿತ್ತು. ಪಂಚಾಯಿತಿಯ ಜಾಗದಲ್ಲಿ ಕುಳಿತಾಗ ಆ ಜಾಗದ ವರ್ಚಸ್ಸಿನಿಂದಲೆ ಕೂತವರು ತಮ್ಮ ಜಾತಿಗಳಿಂದ ಅತೀತರಾಗಿ ನ್ಯಾಯವನ್ನು ದೊರಕಿಸಬಲ್ಲರು ಎಂದು ಈ ಕಥೆ ಹೇಳುತ್ತದೆ. ಆದರೆ ಇದನ್ನು ನಿಜಜೀವನದಲ್ಲಿ ನಂಬಲು ಆಧುನಿಕತೆಗೆ ಅನಿವಾರ್ಯವಾಗಿ ಮಾರುಹೋದ ನಾವ್ಯಾರೂ ತಯಾರಿರಲಿಲ್ಲ ನ್ಯಾಯ ಪಂಚಾಯಿತಿ ಒಂದನ್ನು ಬಿಟ್ಟು ಉಳಿದ ಅಧಿಕಾರವನ್ನು ಹಳ್ಳಿಗರಿಗೆ ಕೊಡಬೇಕೆಂದು ನಾವು ವಾದಿಸಿದ್ದೆವು. ನಜೀರ್ ಸಾಬರೂ  `ಹಾಗಾದರೆ ಇದನ್ನು ಮುಂದೂಡೋಣ~ ಎಂದಿದ್ದರು. ದಲಿತ ಸಮುದಾಯವಂತೂ ಖಂಡಿತ ಹಳ್ಳಿಗಳಲ್ಲಿ ನ್ಯಾಯ ಪಂಚಾಯತಿ ತರುವುದನ್ನು ಒಪ್ಪುತ್ತಿರಲಿಲ್ಲ.ಗಾಂಧೀಜಿಗೆ ಮಾದರಿ ಹಳ್ಳಿಯೊಂದರ ಕಲ್ಪನೆಯಿತ್ತು. ಆದರೆ ಅಂಬೇಡ್ಕರ್‌ಗೆ ದಲಿತ ಸಮುದಾಯದ ದೃಷ್ಟಿಯಿಂದ ಹಳ್ಳಿಗಳೆಂದರೆ ಒಂದು ನರಕ. ಭಾರತದ ಸಂದರ್ಭದಲ್ಲಿ ಈ ವೈಚಾರಿಕತೆಯ ದ್ವಂದ್ವ ಇವತ್ತಿಗೂ ಹಲವು ವೈಚಾರಿಕ ಸಂಘರ್ಷಗಳ ಗಣಿಯಾಗಿಯೇ ಉಳಿದಿದೆ.ಇಂತಹ ಒಂದು ಬಿಡಿಸಲಾರದ ಕಗ್ಗಂಟಿನಲ್ಲಿ ಕೆಲವೇ ಕೆಲವರು ಶ್ರೀಮಂತರಾಗುತ್ತ ಹೋಗಿರುವ, ಎಲ್ಲ ಜನಸಮುದ್ದಾಯಕ್ಕೂ ಅಂಥ ಕನಸನ್ನು ಉಣ್ಣಿಸಿ ಇನ್ನಷ್ಟು ಹತಾಶರನ್ನಾಗಿ ಮಾಡುತ್ತಿರುವ ಭಾರತದಲ್ಲಿ ಒಬ್ಬ ಅಪ್ಪಟ ಹಳ್ಳಿಗನಂತೆ ಯೋಚಿಸುವ, ವರ್ತಿಸುವ ಬಿಳಿ ಗಾಂಧಿ ಟೋಪಿ ಧರಿಸುವ ಅಣ್ಣಾ ಹಜಾರೆ ಜನಸಮುದಾಯಕ್ಕೆ ಯಾಕೆ ಬೇಕಾಗಿದ್ದಾನೆ, ಅಥವಾ ಹಾಗೆ ನೈತಿಕ ನಾಯಕನಾಗಿ ಕಾಣಿಸತೊಡಗಿದ ಎನ್ನುವುದನ್ನು ಇನ್ನಷ್ಟು ಆಳವಾಗಿ ಯೋಚಿಸಲು ಈ ನನ್ನ ಲಹರಿಯೊಂದು ಆಹ್ವಾನವಾಗಬೇಕೆಂದು ನನ್ನ ಆಶಯ.

 

ಪ್ರತಿಕ್ರಿಯಿಸಿ (+)