ಸೋಮವಾರ, ಜನವರಿ 20, 2020
20 °C

ನಿಧಿಗಾಗಿ ನರಬಲಿ ವದಂತಿ: ಸಂಶಯಾಸ್ಪದ ಸ್ಥಳ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ನಿಧಿಗಾಗಿ ನರಬಲಿ ನೀಡಲಾಗಿದೆ ಎಂಬ  ವದಂತಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆ ಪಿಎಸ್‌ಐ ಜಿ.ಎಂ. ಶಶಿಧರ ನೇತೃತ್ವದ ತಂಡದವರು ಪಟ್ಟಣದ ಶಿವಪ್ಪ ನವಲಗುಂದ ಎಂಬುವರ ತೋಟದಲ್ಲಿ ಸಂಶಯಾಸ್ಪದ ಸ್ಥಳವೊಂದನ್ನು ಅಗೆದು ಬುಧವಾರ ಪರಿಶೀಲನೆ ನಡೆಸಿದರು.ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದ ದಾವಣಗೆರೆ ನಗರದ ೧೪ ವರ್ಷದ ಮಗುವೊಂದನ್ನು ನಿಧಿಗಾಗಿ ಇದೇ ತೋಟದಲ್ಲಿ ಬಲಿ ಕೊಡಲಾಗಿದೆ ಎಂಬ ವದಂತಿ ಶಿಗ್ಗಾವಿ ಪಟ್ಟಣದಲ್ಲಿ ಜೋರಾಗಿ ಹರಡಿತ್ತು. ‘ಅಷ್ಟೇ  ಅಲ್ಲ ಇದು ಪೊಲೀಸರಿಗೆ ಗೊತ್ತಿದ್ದರೂ, ಸುಮ್ಮನಿದ್ದಾರೆ’ ಎಂಬ ಆರೋಪಗಳು ಕೇಳಲಾರಂಭಿಸಿದವು. ಇದು ಪೊಲೀಸರಿಗೂ ತಲೆ ಬಿಸಿ  ಮಾಡಿತ್ತು.ವದಂತಿ, ಆರೋಪದ ಹಿನ್ನೆಲೆಯಲ್ಲಿ ತೋಟದ ಮಾಲೀಕನನ್ನು ಠಾಣೆಗೆ ಕರೆದು ವಿಚಾರಣೆ ಕೈಗೊಂಡ ವೇಳೆ, ಮಾಲೀಕ ತನ್ನ ಮನೆಯಲ್ಲಿರುವ ಸಮಸ್ಯೆ ನಿವಾರಣೆಗಾಗಿ ವಿಶೇಷ ಪೂಜೆ ಮಾಡಿ ನೀರನ್ನು ಮಾತ್ರ ಇಲ್ಲಿ ಹಾಕಲಾಗಿದೆ ಹೊರತು, ನಿಧಿಗಾಗಿ ನರಬಲಿ ಮಾಡಿಲ್ಲ. ಇದು ತಮಗೆ  ಗೊತ್ತಿಲ್ಲದ ವಿಷಯ ಎಂದು ಸ್ಪಷ್ಟಪಡಿಸಿದ್ದಾರೆ.ಆದರೂ, ಸಂಶಯ ವ್ಯಕ್ತಪಡಿಸಿದ ಪೊಲೀಸರು, ಬುಧವಾರ ತೋಟದ ಮಾಲೀಕ ಪೂಜೆ ಮಾಡಿ ಸ್ಥಳವನ್ನು ಸುಮಾರು ೪ ಅಡಿ ಅಗೆದು  ಪರಿಶೀಲಿಸಿದರು. ಅಲ್ಲಿ ಏನೂ ಪತ್ತೆಯಾಗಿಲ್ಲ. ಪುರಸಭೆ ಸಿಬ್ಬಂದಿ ಭೂಮಿ ಅಗೆಯಲು ನೆರವಾದರು. ಆರೋಗ್ಯ ನಿರೀಕ್ಷಕ ಡಾ. ವಿ.ಆರ್. ಪಾಟೀಲ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)