ಗುರುವಾರ , ಜನವರಿ 23, 2020
28 °C
ಅಭಿವೃದ್ಧಿಯ ನಿರೀಕ್ಷೆಯಲ್ಲಿ ಇತಿಹಾಸದ ಕುರುಹುಗಳು

ನಿರ್ಲಕ್ಷ್ಯಕ್ಕೆ ಒಳಗಾದ ಜಿಲ್ಲೆಯ ಪ್ರವಾಸೋದ್ಯಮ

ಪ್ರಜಾವಾಣಿ ವಾರ್ತೆ / ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ರಾಜ್ಯದ 30 ನೇ ಜಿಲ್ಲೆಯಾಗಿರುವ ಯಾದಗಿರಿಯು ಐತಿಹಾಸಿಕವಾಗಿ ಸಾಕಷ್ಟು ಮಹತ್ವವನ್ನು ಪಡೆದಿದೆ. ಯಾದವರು, ಚಾಲು­ಕ್ಯರು, ರಾಷ್ಟ್ರಕೂಟರು ಸೇರಿದಂತೆ ಹಲವಾರು ರಾಜಮನೆತಗಳು ಆಳ್ವಿಕೆ ಕಂಡಿರುವ ಜಿಲ್ಲೆಯಲ್ಲಿ­ರುವ ಅನೇಕ ಐತಿಹಾಸಿಕ ಸ್ಮಾರಕಗಳು ಇಲ್ಲಿನ ಮಹತ್ವವನ್ನು ಸಾರಿ ಹೇಳುತ್ತಿವೆ. ಆದರೆ ಈ ಎಲ್ಲ ಕುರುಹುಗಳು ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ.ಜಿಲ್ಲೆಯ ಸುರಪುರ, ಶಹಾಪುರ ಹಾಗೂ ಯಾದಗಿರಿ ತಾಲ್ಲೂಕುಗಳಲ್ಲಿ ಅನೇಕ ರಾಜ­ಮನೆತನಗಳು ಆಳ್ವಿಕೆ ನಡೆಸಿವೆ. ಈ ಮೂರೂ ಪಟ್ಟಣಗಳಲ್ಲಿರುವ ಕೋಟೆಗಳು ಇದಕ್ಕೆ ಸಾಕ್ಷಿ­ಯಾಗಿ ನಿಂತಿವೆ. ಯಾದಗಿರಿಯಲ್ಲಿ ಬೆಟ್ಟದ ಮೇಲಿನ ಕೋಟೆ, ಸುರಪುರದಲ್ಲಿರುವ ಅನೇಕ ದೇವಾಲಯಗಳು, ಕೋಟೆಗಳು ಇಲ್ಲಿನ ಗತ­ವೈಭವವನ್ನು ತಿಳಿಸುತ್ತಿವೆ.ಇನ್ನೂ ಹಲವಾರು ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ಕ್ಷೇತ್ರಗಳು ಜಿಲ್ಲೆಯಲ್ಲಿವೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಪ್ರವಾಸೋದ್ಯಮಕ್ಕೆ ಯಾದಗಿರಿ ಜಿಲ್ಲೆಯೂ ಸಾಕಷ್ಟು ಅವಕಾಶಗಳಿವೆ. ಈ ಸ್ಮಾರಕಗಳ ಅಭಿವೃದ್ಧಿ ಆಗದೇ ಇರುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಇನ್ನೂ ಚಿಗುರೊಡೆ­ಯುವ ಹಂತದಲ್ಲಿಯೇ ಇದೆ.ಸುರಪುರ ತಾಲ್ಲೂಕಿನ ಕೆಂಭಾವಿಯ ಪ್ರಾಚ್ಯ­ವಸ್ತು, ಮುದನೂರು ದೇವರ ದಾಸಿಮಯ್ಯ ಜನ್ಮ ಸ್ಥಳ ಹಾಗೂ ಕೊಡೇಕಲ್‌ನ ಹಿಂದು–-ಮುಸ್ಲಿಂ ಸೌಹಾರ್ದದ ಬಸವಣ್ಣನ ದೇವಸ್ಥಾನ, ಅಲ್ಲಿ­ರುವ 600 ವಚನಗಳು, ದಕ್ಷಣ ಕಾಶಿ ಎಂದು ಕರೆಯುವ ನಾರಾಯಣಪೂರದ ಛಾಯಾ ಭಗವತಿ ಕ್ಷೇತ್ರ, ಸುರಪುರ ರಾಜವಂಶದ ಕೋಟೆ ಕೊತ್ತಲುಗಳು, ಏವೂರಿನ ಐತಿಹಾಸಿಕ ವಾಸ್ತುಶಿಲ್ಪಗಳಿಂದ ಕೂಡಿದ ದೇವಾಲಯ ಹಾಗೂ ಶಾಸನಗಳು, ಯಾದಗಿರಿ ತಾಲ್ಲೂಕಿನ ಚಿಂತನ­ಹಳ್ಳಿ ಗವಿಸಿದ್ದಲಿಂಗೇಶ್ವರ, ಅಬ್ಬೆತು ಮಕೂರಿನ ವಿಶ್ವಾರಾಧ್ಯರ ಮಠ, ಯಾದಗಿರಿ ಬೆಟ್ಟದಲ್ಲಿನ ಅರಮನೆ, ಜಿನ್ನಪ್ಪನ ಬೆಟ್ಟ, ಶಹಾಪುರ ತಾಲ್ಲೂಕಿನ ಮಲಗಿದ ಬುದ್ಧನ ಬೆಟ್ಟ ಸೇರಿದಂತೆ ಅನೇಕ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ಯಾದಗಿರಿ ಜಿಲ್ಲೆ ಹೊಂದಿದೆ.ಇದರ ಜೊತೆಗೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ಭಾಗದ ಉಪರಾಜಧಾನಿ­ಯಾಗಿದ್ದ ಯಾದಗಿರಿ ಗಡಿ ಭಾಗದ ಉಜ್ಜಿಲೆ, ಅನಪುರ, ಸಗರ, ಏವೂರು, ಶಿರವಾಳ, ಈಡ್ಲೂರು ಗ್ರಾಮಗಳಲ್ಲಿನ ಐತಿಹಾಸಿಕ ಹಿನ್ನೆಲೆ­ಯುಳ್ಳ ಶಾಸನಗಳು, ದೇಗುಲಗಳು ವಾಸ್ತುಶಿಲ್ಪ, ಯಾದಗಿರಿ ತಾಲ್ಲೂಕಿನ  ಯರಗೋಳ ಗ್ರಾಮ­ದಲ್ಲಿ ಶ್ರೀಮದ್ವಾಚಾರ್ಯರ ಗ್ರಂಥಗಳಿಗೆ ಟೀಕೆ­ಗಳನ್ನು ಬರೆದು  ಟೀಕಾಚಾರ್ಯರೆಂದೇ ಖ್ಯಾತ­ರಾದ ಜಯತೀರ್ಥರು ತಪಸ್ಸು ಮಾಡಿದ ಪುಣ್ಯಕ್ಷೇತ್ರ, ಬಳಿಚಕ್ರದ ಬೆಟ್ಟದ ಮೇಲಿನ ಮಾನವ ರೇಖಾ ಚಿತ್ರಗಳು, ಗಾಜರಕೋಟದ ಮಠ, ಗುರುಮಠಕಲ್‌ದ ದಭದಬಿ(ಜಲಪಾತ), ಜೈಮಿನಿ ಭಾರತ ಕೃತಿ ರಚಿಸಿದ ಕವಿ ಲಕ್ಷ್ಮೀಶನ ಜನ್ಮಸ್ಥಳ ದೇವಾಪೂರ, ಬೋನಾಳ ಕೆರೆ, ಶಹಾಪುರದ ಸಗರ ಗ್ರಾಮದ ಕೋಟೆಗಳು ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳು ಜಿಲ್ಲೆಯ ಐತಿಹಾಸಿಕ ಶ್ರೀಮಂತ್ರಿಕೆಗೆ ಸಾಕ್ಷಿಯಾಗಿ ನಿಂತಿವೆ.ಪ್ರಗತಿಯಲ್ಲಿರುವ ಕಾಮಗಾರಿ: ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಅನೇಕ ಮನವಿಗಳನ್ನು ಸಲ್ಲಿಸಲಾಗಿದ್ದು, ಅದರ ಪರಿಣಾಮವಾಗಿ ಸರ್ಕಾರ ಸುಮಾರು ₨15 ಕೋಟಿ ಹಣ ಬಿಡುಗಡೆ ಮಾಡಿದೆ. ಜಿಲ್ಲಾ ಕೇಂದ್ರದಲ್ಲಿನ ಸಣ್ಣ ಕೆರೆ ಅಭಿವೃದ್ಧಿ­ಗಾಗಿ ₨ 2.20 ಕೋಟಿ, ಸುರಪುರ ತಾಲ್ಲೂಕಿನ ಹುಣಸೆಹೊಳೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ₨ 1.20 ಕೋಟಿ, ಯಾದಗಿರಿ ಕೋಟೆ ಉನ್ನತಿಕರಣಕ್ಕಾಗಿ ₨ 4.07 ಕೋಟಿ, ಬೋನಾಳ ಕೆರೆ ಸೌಂದರ್ಯೀಕರಣಕ್ಕೆ ₨50 ಲಕ್ಷ, ಶಹಾಪುರದ ಮಲಗಿದ ಬುದ್ಧ ತಾಣದ ಅಭಿವೃದ್ದಿಗೆ ₨ 7 ಲಕ್ಷ ಬಿಡುಗಡೆ ಮಾಡಲಾಗಿದೆ.

ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರ ಸಿದ್ದ ಸಂಸ್ಥಾನ ಕ್ಷೇತ್ರದ ಯಾತ್ರಿ ನಿವಾಸದ ನಿರ್ಮಾಣಕ್ಕೆ ₨ 75 ಲಕ್ಷ, ಮೈಲಾಪುರ ಶರಣ ಅಮಾತೇಶ್ವರ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ₨ 60 ಲಕ್ಷ, ಶಹಾಪುರ ತಾಲ್ಲೂಕಿನ ಹೈಯಾಳದ ಹೈಯಾಳಲಿಂಗೇಶ್ವರ ದೇವಸ್ಥಾನ ಯಾತ್ರಿ ನಿವಾಸಕ್ಕೆ ₨50 ಲಕ್ಷ ನೀಡಿಸಲಾಗಿದೆ ಎಂದು ಇಲಾಖೆಯ ಅಧಿಕಾರಿ­ಗಳು ಮಾಹಿತಿ ನೀಡುತ್ತಾರೆ. ಆದರೆ, ಇದುವರೆಗೂ ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಒಂದೇ ಒಂದು ಸ್ಮಾರಕಗಳು ಜನರ ವೀಕ್ಷಣೆಗೆ ಸಿದ್ಧವಾಗಿ ನಿಂತಿಲ್ಲ. ಹೀಗಾಗಿ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳು ಅವನ­ತಿಯ ಅಂಚಿನಲ್ಲಿವೆ. ಇವುಗಳನ್ನು ಅಭಿವೃದ್ಧಿ ಪಡಿಸಿದಲ್ಲಿ ಸರ್ಕಾರಕ್ಕೆ ಆದಾಯವೂ ಬರಲಿದ್ದು, ಜಿಲ್ಲೆಯ ಶ್ರೀಮಂತಿಕೆಯ ಪರಿಚಯವೂ ಆಗಲಿದೆ ಎನ್ನುತ್ತಾರೆ ಸಾಹಿತ್ಯ ಸೌರಭ ವೇದಿಕೆ ಅಧ್ಯಕ್ಷ ವೆಂಕಟರಾವ ಕುಲಕರ್ಣಿ.ಜಿಲ್ಲೆಯ ಧಾರ್ಮಿಕ, ಐತಿಹಾಸಿಕ ಮಹತ್ವದ ಹೊಂದಿರುವ ಸ್ಥಳಗಳ ಮಾಹಿತಿಯನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಬೇಕು. ಡಾ. ಕೆ.ಜಿ. ಜಗದೀಶ ಅವರು ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಕೈಪಿಡಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇದುವರೆಗೆ ಕೈಪಿಡಿಯಾಗಲಿ, ಕಿರುಹೊತ್ತಿಗೆ­ಯಾಗಲಿ ಬಿಡುಗಡೆ ಆಗಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)