ಗುರುವಾರ , ಮಾರ್ಚ್ 4, 2021
29 °C

ನೀರಿಗಾಗಿ ಪರದಾಡುತ್ತಿರುವ ಮಲಪ್ರಭಾ ದಡದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ ಶ್ರೀಧರ ಗೌಡರ Updated:

ಅಕ್ಷರ ಗಾತ್ರ : | |

ನೀರಿಗಾಗಿ ಪರದಾಡುತ್ತಿರುವ ಮಲಪ್ರಭಾ ದಡದ ಗ್ರಾಮಸ್ಥರು

ಕೂಡಲಸಂಗಮ: ಮಲಪ್ರಭಾ ನದಿಯನ್ನು ಒಡಲಲ್ಲಿಯೇ ತುಂಬಿಕೊಂಡಿರುವ ಖೈರವಾಡಗಿ, ಪಾಪಥನಾಳ, ಹಿರೇಮಳಗಾವಿ, ಚಿಕ್ಕಮಳಗಾವಿ ಹಾಗೂ ಗಂಜಿಹಾಳ ಗ್ರಾಮದ ಜನರು ಕಳೆದ ಎರಡು ತಿಂಗಳುಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿದ್ದಾರೆ.ಈ ಗ್ರಾಮಗಳಿಗೆ ಅಧಿಕಾರಿಗಳು ಸಮರ್ಪಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸದ ಕಾರಣ ಮಲಪ್ರಭೆ ನದಿಯಲ್ಲಿನ ನೀರೇ ಇಲ್ಲಿಯ ಜನರಿಗೆ ಮೂಲ ಆಧಾರವಾಗಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ನದಿ ಸಂಪೂರ್ಣ ಬತ್ತಿದ ಪರಿಣಾಮ ಗ್ರಾಮಸ್ಥರು ಬೊಗಸೆ ನೀರಿಗಾಗಿ ದಿನವಿಡೀ ಪರದಾಡಬೇಕಿದೆ.ಖೈರವಾಡಗಿ ಹಾಗೂ ಪಾಪಥನಾಳ ಗ್ರಾಮದಲ್ಲಿ ಯವಾಗಲೋ ಕೊರೆಯಲಾದ ಕೊಳವೆ ಬಾವಿಗಳು ಸಮರ್ಪಕ ದುರಸ್ತಿ ಇಲ್ಲದೇ ಈಗ ಅವುಗಳೆಲ್ಲ ಕೆಟ್ಟು ನಿಂತಿವೆ. ಪಕ್ಕದಲ್ಲಿ ಇರುವ ಮಲಪ್ರಭೆ ನದಿಯಲ್ಲಿ ಆಳದವರೆಗೆ ಒರತಿ ತೋಡಿದರೂ ನೀರು ಬರದ ಕಾರಣ ಈ ಗ್ರಾಮಗಳಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಗಂಜಿಹಾಳ ಸಮಿಪ ಬಾಗಲಕೋಟೆ ರಸ್ತೆಯಲ್ಲಿರುವ ಕೊಳವೆ ಬಾವಿಯಿಂದ ಟ್ರ್ಯಾಕ್ಟರ್ ಮೂಲಕವೇ ದಿನನಿತ್ಯ ಕುಡಿಯಲು ನೀರು ತರಬೇಕು. ಈ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಗ್ರಾಮದಿಂದ ದೂರದಲ್ಲಿ ಮಲಪ್ರಭೆ ನದಿಯಲ್ಲಿ ಇರುವ ತೆಗ್ಗಿನಲ್ಲಿ ನಿಂತ ಮಲಿನ ನೀರೇ ಗತಿಯಾಗಿದೆ.ಜಿಲ್ಲಾ ಪಂಚಾಯಿತಿ ಮೂಲಕ ಕಿರು ನೀರು ಯೋಜನೆಯಡಿ ಹಿರೇಮಳಗಾವಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು 2007ರಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೆ, ಈ ಯೋಜನೆಗೆ ಹಣ ಖರ್ಚು ಮಾಡಲಾಯಿತೇ ಹೊರತು ಈ ಯೋಜನೆಯಿಂದ ಗ್ರಾಮಕ್ಕೆ ಒಂದು ದಿನವೂ ನೀರು ಬರಲಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.1994ರಲ್ಲಿ ಡೆನಿಡಾ ಯೊಜನೆಯಡಿ ಮಲಪ್ರಭಾ ನದಿಯಲ್ಲಿ ನಿರ್ಮಿಸಿದ ಜಾಕವೆಲ್ ಮೂಲಕ ಇಂದಿಗೂ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಜಾಕವೆಲ್‌ನಲ್ಲಿ ತುಂಬಿದ ಹೂಳಿನಿಂದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಸರಬರಾಜು ಮಾಡುವ ನೀರು ಅರ್ಧ ಗಂಟೆ ಕೂಡಾ ಬರುವುದಿಲ್ಲ. ಮೇಲಾಗಿ ಈ ನೀರು ಕುಡಿಯಲು ಯೋಗ್ಯವಿಲ್ಲ.ಒರತಿ ನೀರೇ ಗತಿ: ಹಿರೇಮಳಗಾವಿ ಗ್ರಾಮದ ಜನರಿಗೆ ಕುಡಿಯಲು ಒರತಿ ನೀರೇ ಗತಿಯಾಗಿದೆ. ಗ್ರಾಮದಿಂದ ಸುಮಾರು ದೂರದಲ್ಲಿರುವ ಮಲಪ್ರಭೆ ನದಿಯಲ್ಲಿ ತೋಡಲಾದ ಒಂದೆರಡು ಒರತಿಗಳಲ್ಲಿ ಮಾತ್ರ ಸಣ್ಣ ಪ್ರಮಾಣದಲ್ಲಿ ನೀರಿನ ಸೆಲೆ ಬರುತ್ತಿದ್ದು, ಈ ನೀರಿಗಾಗಿ ಮನೆ ಮಂದಿಯೆಲ್ಲ ನಿತ್ಯ ನೀರಿಗಾಗಿಯೇ ಅಲೆಯಬೇಕಿದೆ. ಒಂದು ಕೊಡ ನೀರು ತುಂಬಲು ಕನಿಷ್ಠ ಅರ್ಧ ಗಂಟೆ ಸಮಯ ಬೇಕಾಗಿರುವುದರಿಂದ ಜನ ಖಾಲಿ ಕೊಡಗಳನ್ನು ಹಿಡಿದು ಸಾಲುಗಟ್ಟಲೇ ನಿಲ್ಲುವ ದಶ್ಯ ಸಾಮಾನ್ಯವಾಗಿದೆ.ಇನ್ನು ಚಿಕ್ಕಮಳಗಾವಿ ಹಾಗೂ ಗಂಜಿಹಾಳ ಗ್ರಾಮಗಳ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಇಲ್ಲಿ ಯೂ ನೀರಿನ ಮೂಲ ಇಲ್ಲದ ಕಾರಣ ಈ ಗ್ರಾಮಗಳ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.ಬೇಸಿಗೆಯಲ್ಲಿ ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದಿಂದ ಅಗತ್ಯ ಅನುದಾನ ಬಿಡುಗಡೆಯಾಗಿದೆ. ನೀರಿನ ಸಮಸ್ಯೆ ನಿಗಿಸುವ ನಿಟ್ಟಿನಲ್ಲಿ ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆಡಳಿತ ಹೇಳುತ್ತಿದೆ. ಆದರೆ ನದಿ ದಡದಲ್ಲಿ ರುವ ಈ ಗ್ರಾಮಗಳಲ್ಲಿ ಉಂಟಾದ ತೀವ್ರ ನೀರಿನ ಸಮಸ್ಯೆ ನಿವಾರಣೆ ಏನು ಕ್ರಮ ಕೈಗೊಂಡಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.