ಭಾನುವಾರ, ಏಪ್ರಿಲ್ 18, 2021
29 °C

ನೀರಿನ ಕೊರತೆ; ರಾಜಕೀಯ ಹಿತದ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನ ಕೊರತೆ; ರಾಜಕೀಯ ಹಿತದ ಹುನ್ನಾರ

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗದ ರೈತರಿಗೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಾರಾಯಣಪುರ ಬಲದಂಡೆ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ ಮಧ್ಯೆ ಸಂಪರ್ಕ ಕಾಲುವೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಸಯ್ಯದ್ ಯಾಸಿನ್ ಅವರು ಹೇಳಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿ ಪ್ರದೇಶದಲ್ಲಿ ರೈತರ ಜಮೀನಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರಲು ರಾಜಕೀಯ ಹಿತಾಸಕ್ತಿ, ಕುತಂತ್ರವೇ ಕಾರಣವಾಗಿದೆ. ಹಲವು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ತುಂಗಭದ್ರಾ ಎಡದಂಡೆ ಕಾಲುವೆ ಕೆಳ ಭಾಗದ ರೈತರಿಗೆ ನೀರಿನ ಸಮಸ್ಯೆ ಎಂದು ಕೃತಕ ಅಭಾವ ಸೃಷ್ಟಿಯ ಹಿಂದೆಯೂ ಇದೇ ಹಿತಾಸಕ್ತಿಗಳು ಕೆಲಸ ಮಾಡುತ್ತ ಬಂದಿವೆ ಎಂದು ಹೇಳಿದರು.ಜಿಲ್ಲೆಯ ಎಲ್ಲ ತಾಲ್ಲೂಕಿಗೆ ಗೇಜ್ ಪ್ರಕಾರ ನೀರು ಹಂಚಿಕೆ ಆಗಬೇಕು. ತಾವೊಬ್ಬ ಜಿಲ್ಲಾ ಮುಖಂಡನಾಗಿದ್ದು, ಯಾವುದೇ ತಾಲ್ಲೂಕಿಗೂ ಅನ್ಯಾಯವಾಗಬಾರದು ಎಂದು ಬಯಸುವವ. ಆದರೆ, ರಾಜಕೀಯ ಹಿತಾಸಕ್ತಿ ಮತ್ತು ನೀರಾವರಿ ಇಲಾಖೆಯ ಎಂಜಿನಿಯರ್ ಅವರ ನಿರ್ಲಕ್ಷ್ಯ ಧೋರಣೆಯಿಂದ ಕೆಳ ಭಾಗದ ರೈತರಿಗೆ ಸಮರ್ಪಕ ನೀರು ದೊರಕುತ್ತಿಲ್ಲ ಎಂದು ಹೇಳಿದರು.ಇದು ಪ್ರತಿ ವರ್ಷ ಸಮಸ್ಯೆ ಮುಂದುವರಿದುಕೊಂಡೇ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಗೇಜ್ ಸಮರ್ಪಕ ನಿರ್ವಹಣೆ ಆಗಬೇಕು ಹಾಗೂ ನಾರಾಯಣಪುರ ಬಲದಂಡೆ ಕಾಲುವೆ 95 ಕಿ.ಮೀಯಿಂದ 108ವರೆಗೆ ಕಾಲುವೆ ನಿರ್ಮಾಣಗೊಳ್ಳಬೇಕು. ಇದರಿಂದ ತುಂಗಭದ್ರಾ ಎಡದಂಡೆ ಕಾಲುವೆಗೆ ಸಂಪರ್ಕ ಕಲ್ಪಿಸಿದರೆ ಈ ಭಾಗದ ನೀರಿನ ಸಮಸ್ಯೆ ಹೋಗಲಾಡಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದ ಹಿಂದೆ ನಿರ್ಮಾಣಗೊಳ್ಳುತ್ತಿರುವ ಕನ್ನಡ ಭವನಕ್ಕೆ ಶಾಸಕರ ವಿವೇಚನಾ ನಿಧಿಯಿಂದ 10 ಲಕ್ಷ ದೊರಕಿಸಲಾಗಿದೆ ಎಂದು ತಿಳಿಸಿದರು. ಕೃಷಿ ವಿವಿ ಆರಂಭಕ್ಕೆ ಶ್ರಮಿಸಿರುವೆ: ರಾಯಚೂರು ಕೃಷಿ ವಿಶ್ವವಿದ್ಯಾಲಯ ಆರಂಭಕ್ಕೆ ತಾವೂ ಕೂಡಾ ದಶಕಗಳಿಂದ ಒತ್ತಾಯ ಮಾಡುತ್ತ ಬಂದಿದ್ದೆ. ಈ ಹಿಂದೆ ಶಾಸಕನಾಗಿದ್ದಾಗಲೂ ಒತ್ತಾಯಿಸಿದ್ದೆ. ಈಗ ಬಿಜೆಪಿ ಸರ್ಕಾರ ಅಧಿಕಾರವಹಿಸಿಕೊಂಡ ಎರಡೇ ದಿನದಲ್ಲಿ ಮುಖ್ಯಮಂತ್ರಿಗಳಿಗೆ ಸಮಗ್ರ ಮಾಹಿತಿ ನೀಡಿದ್ದೆ. ರಾಯಚೂರಿನಲ್ಲಿಯೇ ಯಾಕೆ ಕೃಷಿ ವಿವಿ ಸ್ಥಾಪನೆ ಮಾಡಬೇಕು, ಇದರಿಂದ ಈ ಭಾಗದ ವಿದ್ಯಾರ್ಥಿ ಸಮೂಹಕ್ಕೆ, ಕೃಷಿಕರಿಗೆ ಆಗುವ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ ಎಂದು ಹೇಳಿದರು.ಈಗ ಈ ವಿಶ್ವವಿದ್ಯಾಲಯ ಆರಂಭಗೊಂಡಿದೆ. ಈ ರೀತಿ ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡಿದ ಪದವೀಧರರು ನಿರುದ್ಯೋಗಿಗಳಾಗಬಾರದು. ಅವರಿಗೆ ಶೀಘ್ರ ಉದ್ಯೋಗ ದೊರಕಬೇಕು. ಅವರು ಕೃಷಿಗೆ ಸಂಬಂಧಪಟ್ಟ ಜ್ಞಾನ ಆ ಕ್ಷೇತ್ರಕ್ಕೆ ಬಳಕೆ ಆಗಬೇಕು. ಹೀಗಾಗಿ ರಾಜ್ಯ ಸರ್ಕಾರ ಈ ಪದವೀಧರರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು. ಇದಕ್ಕಾಗಿ ಕರ್ನಾಟಕ ರಾಜ್ಯಪತ್ರ ಹೊರಡಿಸಬೇಕು ಎಂದು ಹೇಳಿದರು.ನಗರ ಅಭಿವೃದ್ಧಿ: ರಾಯಚೂರು ನಗರ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕನಾಗಿ ಈ ಬಿಜೆಪಿ ಸರ್ಕಾರದ ಆಡಳಿದಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು ಪೈಪ್ ಲೈನ್ ಸೇರಿದಂತೆ ಮೂಲಭೂತ ಸೌಕರ್ಯ ಸಮರ್ಪಕ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆದಿವೆ ಎಂದು ಅವರು ತಿಳಿಸಿದರು. ಜಿಲ್ಲಾಡಳಿತ ಭವನ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಈ ಹಿಂದಿನಿಂದಲೂ ಇತ್ತು. ಈಗ 25 ಕೋಟಿ ದೊರಕಿದೆ. ಈ ಕಟ್ಟಡ ನಿರ್ಮಾಣಕ್ಕೆ ಕೃಷಿ ವಿವಿ ಜಮೀನು ಕೋರಲಾಗಿದೆ. ಕೃಷಿ ವಿವಿ ಕಾರ್ಯಚಟುವಟಿಕೆಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಬೃಹತ್ ಗೋಡೆ ನಿರ್ಮಿಸುವ ಬಗ್ಗೆ ವಿವರಣೆ ನೀಡಲಾಗಿದೆ ಎಂದು ತಿಳಿಸಿದರು.ರಸೂಲ್‌ಸಾಬ್, ಜಾನಿಮಿಯಾ, ಸಯ್ಯದ್ ಇಸ್ಮಾಯಿಲ್, ಶ್ರೀನಿವಾಸ್, ಸುಧೀಂದ್ರ ಜಹಗೀರದಾರ್, ನಜೀರ ಪಂಜಾಬಿ, ಇಸ್ಮಾಯಿಲ್ ಪತ್ರಿಕಾಗೋಷ್ಠಿಯಲ್ಲಿದ್ದರು. ಎಸ್‌ಕೆಇಎಸ್ ಸಂಸ್ಥೆಯಲ್ಲಿ ಜನ್ಮದಿನಾಚರಣೆ ರಾಯಚೂರು: ಇಲ್ಲಿನ ಸುವರ್ಣ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ 120ನೇ ಜನ್ಮದಿನವನ್ನು ಆಚರಿಸಲಾಯಿತು.ಉದ್ಘಾಟನೆ ನಡೆವೇರಿಸಿದ ಸಾಹಿತಿ ವೀರಹನುಮಾನ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಮಾಜದಿಂದ ದೂರ ತಳಲ್ಪಟ್ಟಂಥ ಜನರನ್ನು ಮುಖ್ಯವಾಹಿನಿಗೆ ತಂದ ಯಶಸ್ವಿ ಅವರಿಗೆ ಸಲ್ಲುತ್ತದೆ. ಅವರು ಇಂದು ವಿಶ್ವ ಮಾನವರಾಗಿದ್ದಾರೆ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಅಧ್ಯಕ್ಷತೆಯನ್ನು ಬಾಬುರಾವ್ ಎಂ.ಶೇಗುಣಿಸಿ ವಹಿಸಿದ್ದರು. ಪ್ರಾಚಾರ್ಯ ಶ್ರವಣಕುಮಾರ, ನರಸಿಂಹಮೂರ್ತಿ, ಮಲ್ಲಿಕಾರ್ಜುನ ಹಳ್ಳೂರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಗುರುರಾಜ ಸ್ವಾಗತಿಸಿದರು. ಸಾಬಣ್ಣ ನಿರೂಪಿಸಿದರು. ನಾಗರಾಜ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.