ಮಂಗಳವಾರ, ಜನವರಿ 21, 2020
19 °C

ನೇಹಾ ಹೊಸ ಗುರಿಗಳು

–ಅಮಿತ್‌ ಎಂ.ಎಸ್‌ Updated:

ಅಕ್ಷರ ಗಾತ್ರ : | |

ನೇಹಾ ಹೊಸ ಗುರಿಗಳು

‘ಯಾವ ವಿವಾದವೂ ಇಲ್ಲದೇ 2013ರ ಸಿನಿಮಾ ಪಯಣವನ್ನು ಯಶಸ್ವಿಯಾಗಿ ಮುಗಿಸುತ್ತಿದ್ದೇನೆ’

– ವಿವಾದಕ್ಕೂ  ನಟಿ ನೇಹಾ ಪಾಟೀಲ್‌ ಅವರಿಗೂ ಇರುವ ಬಿಡಿಸಲಾಗದ ನಂಟು! ಅದು ಅವರ ಮೊದಲ ಚಿತ್ರ ‘ಸಂಕ್ರಾಂತಿ’ಯಿಂದಲೇ ಶುರುವಾಗಿದ್ದು. ಹೀಗಿರುವಾಗ ಒಂದು ವರ್ಷವನ್ನು ವಿವಾದವಿಲ್ಲದೆ ಕಳೆದಿದ್ದೇನೆ ಎಂಬ ಅವರ ಸಂಭ್ರಮದ ಹೇಳಿಕೆ ಅರ್ಥಪೂರ್ಣ.ನೇಹಾ ಪಾಟೀಲ್‌ ಈ ಸಾಧನೆಯ ಖುಷಿಯನ್ನು ಹಂಚಿಕೊಂಡಿದ್ದು ತಮ್ಮ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ. ಇಪ್ಪತ್ತೆರಡರ ಹರೆಯಕ್ಕೆ ಕಾಲಿಟ್ಟಿರುವ ಅವರಲ್ಲಿ ಇದುವರೆಗೆ ನಟಿಸಿರುವ ಸಿನಿಮಾಗಳ ಬಗ್ಗೆ ತೃಪ್ತಿಯಿದ್ದರೆ, ಭವಿಷ್ಯದ ಸಿನಿ ಯಾನದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಮಾತ್ರವಲ್ಲ, ನಂಬರ್ ಒನ್‌ ನಟಿಯ ಪಟ್ಟ ಮತ್ತು ಅಭಿನಯಕ್ಕೆ ರಾಜ್ಯಪ್ರಶಸ್ತಿಯನ್ನೂ ಪಡೆಯುವ ಕನಸು ಅವರಲ್ಲಿದೆ.ಎರಡು ವರ್ಷದ ಬಣ್ಣದ ಬದುಕಿನಲ್ಲಿ ನೇಹಾ ನಟಿಸಿರುವ ಚಿತ್ರಗಳ ಸಂಖ್ಯೆ ಹನ್ನೆರಡು. ಬಿಡುಗಡೆಯಾಗಿರುವ ಚಿತ್ರಗಳಲ್ಲಿ ದೊಡ್ಡಮಟ್ಟದ ಹೆಸರು ತಂದುಕೊಡದಿದ್ದರೂ, ಇನ್ನೂ ತೆರೆಕಾಣಬೇಕಿರುವ ಚಿತ್ರಗಳು ತಮಗೆ ಹೆಸರು ಹಾಗೂ ಮತ್ತಷ್ಟು ಅವಕಾಶಗಳನ್ನು ತಂದುಕೊಡುತ್ತವೆ ಎಂಬ ಭರವಸೆ ಅವರದು. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ತಮ್ಮ ಹೆಸರು ಚಾಲ್ತಿಗೆ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಾರೆ ನೇಹಾ.‘ನಾನಾಗಿಯೇ ಎಂದಿಗೂ ವಿವಾದವನ್ನು ಬಯಸಿಲ್ಲ. ವಿವಾದದ ಮೂಲಕ ಪ್ರಚಾರ ಪಡೆದುಕೊಳ್ಳುವ ಬಯಕೆ ನನಗಿಲ್ಲ. ಅವು ತಾನಾಗಿಯೇ ಸಂಭವಿಸಿದ್ದು. ಅಭಿನಯದ ಮೂಲಕವೇ ಉತ್ತಮ ನಟಿಯಾಗಿ ಗುರ್ತಿಸಿಕೊಳ್ಳುವ ಗುರಿ ನನ್ನದು. ಅದಕ್ಕಾಗಿ ಕಠಿಣ ಪರಿಶ್ರಮ ಮಾಡುತ್ತಿದ್ದೇನೆ. ಅದಕ್ಕೆ ತಕ್ಕ ಪ್ರತಿಫಲ ಖಂಡಿತಾ ದೊರಕುತ್ತದೆ’ ಎನ್ನುತ್ತಾರೆ ಅವರು. ಈ ವರ್ಷ ಬಿಡುಗಡೆಗೊಂಡ ‘ಒಲವಿನ ಓಲೆ’, ‘ಸ್ಟೋರಿ ಕಥೆ’ ಮತ್ತು ‘ಸ್ಲಂ’ ಚಿತ್ರಗಳು ಯಶ ಕಾಣದಿದ್ದರೂ ತಮ್ಮ ನಟನೆಯನ್ನು ಚಿತ್ರರಂಗ ಗುರುತಿಸುತ್ತಿದೆ ಎಂಬ ಅಭಿಪ್ರಾಯ ಅವರದು.ನೇಹಾ ಬಯಸುವ ವೈವಿಧ್ಯಮಯ ಪಾತ್ರಗಳು ಅವರಿಗೆ ಒಲಿಯುತ್ತಿವೆಯಂತೆ. ‘ಮತ್ತೆ ಸತ್ಯಾಗ್ರಹ’ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪತ್ನಿ, ‘ತಿಪ್ಪಜ್ಜಿ ಸರ್ಕಲ್‌’ನಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸುವ ದೇವದಾಸಿ, ‘ಸಾಮ್ರಾಟ’ದಲ್ಲಿ ವರದಿಗಾರ್ತಿ, ಹೀಗೆ ಸವಾಲಿನ ಪಾತ್ರಗಳನ್ನು ಎದುರಿಸುವ ಅವಕಾಶ ಅವರನ್ನು ಪುಳಕಿತರನ್ನಾಗಿಸಿದೆ. ಗಿರೀಶ್‌ ಕಾಸರವಳ್ಳಿ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದಾರೆ. ಅಂದುಕೊಂಡಂತೆ ಆದರೆ ಕಲಾತ್ಮಕ ಚಿತ್ರದಲ್ಲಿ ನಟಿಸುವ ಭಾಗ್ಯ ತಮ್ಮದಾಗಲಿದೆ ಎಂದು ಹೇಳಿಕೊಳ್ಳುತ್ತಾರೆ ಅವರು.2014ರಲ್ಲಿ ದೊಡ್ಡ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತಿದೆಯಂತೆ. ಆದರೆ ನಟರ ಹೆಸರುಗಳನ್ನು ಬಹಿರಂಗಪಡಿಸಲು ಅವರು ಸಿದ್ಧರಿಲ್ಲ. ಚಿತ್ರತಂಡವೇ ಮುಂದೆ ಅಧಿಕೃತವಾಗಿ ಘೋಷಿಸುವವರೆಗೂ ನಾನು ಹೇಳಲು ಸಾಧ್ಯವಿಲ್ಲ ಎಂದು ಜಾರಿಕೊಳ್ಳುತ್ತಾರೆ ನೇಹಾ. ಮಾತುಕತೆ ನಡೆದಿದೆ. ಕತೆಗಳು ಇಷ್ಟವಾಗಿವೆ. ಇನ್ನೂ ಅಂತಿಮಗೊಂಡಿಲ್ಲ.ಶ್ರೀನಗರ ಕಿಟ್ಟಿ ನಾಯಕರಾಗಿರುವ ‘ಪಾರು ವೈಫ್‌ ಆಫ್‌ ದೇವದಾಸ್‌’, ತೆಲುಗಿನ ನಟ ವರುಣ್‌ ಸಂದೇಶ್‌ ಜೊತೆಗಿನ ತ್ರಿಭಾಷಾ ಚಿತ್ರ ‘ನಿನ್ನಲ್ಲೇ ನಾನು’, ಹೊಸಬರ ‘ಶಂಭೋ ಮಹಾದೇವ’ ಮುಂತಾದವು ನೇಹಾ ಈ ವರ್ಷ ನಟಿಸಿರುವ ಚಿತ್ರಗಳು. ತಮಿಳಿನಲ್ಲಿ ಹೊಸ ನಟ ವೆಂಕಟೇಶ್‌ ಜೊತೆ ನಟಿಸಿರುವ ‘ಒದವೊರ್ಲೆ’ ಬಿಡುಗಡೆಗೆ ಸಿದ್ಧವಾಗುತ್ತಿದೆ.ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಿಂದ ಸಾಕಷ್ಟು ಆಫರ್‌ಗಳು ಬರುತ್ತಿವೆ ಎನ್ನುವ ನೇಹಾರಿಗೆ ಮುಂದಿನ ವರ್ಷ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಭರವಸೆ ಇದೆಯಂತೆ. ‘ಮತ್ತೆ ಸತ್ಯಾಗ್ರಹ’ ಹಾಗೂ ‘ತಿಪ್ಪಜ್ಜಿ ಸರ್ಕಲ್‌’ ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಬೇರೆ ಚಿತ್ರಗಳೊಂದಿಗೆ ಪೈಪೋಟಿ ನಡೆಸಲಿವೆ. ಒಂದು ಚಿತ್ರದಲ್ಲಾದರೂ ಪ್ರಶಸ್ತಿ ಪಡೆಯುವ ತಮ್ಮ ಬಯಕೆ ಈಡೇರಲಿದೆ ಎನ್ನುವ ವಿಶ್ವಾಸ ಅವರಲ್ಲಿದೆ.ಅಭಿನಯ ಪ್ರತಿಭೆಯನ್ನು ಹೊರಹಾಕಲು ಪಾತ್ರಗಳೇನೋ ಸಿಗುತ್ತಿವೆ. ಆದರೆ ಇದುವರೆಗೂ ತಮ್ಮ ನೆಚ್ಚಿನ ಪಾತ್ರ ಇನ್ನೂ ಸಿಕ್ಕಿಲ್ಲ ಎಂಬ ಕೊರಗು ನೇಹಾ ಅವರದು. ಬೋಲ್ಡ್‌, ರಫ್‌ ಅಂಡ್‌ ಟಫ್‌ ಆದ ರೌಡಿಸಂ ಪಾತ್ರವೆಂದರೆ ಅವರಿಗೆ ಅಚ್ಚುಮೆಚ್ಚು. ಸ್ಟೈಲಿಶ್‌ ಲೇಡಿ ಡಾನ್‌ ಆಗಿ ಕಾಣಿಸಿಕೊಳ್ಳುವ ಆಸೆಯೂ ಅವರಿಗಿದೆ. 

ಪ್ರತಿಕ್ರಿಯಿಸಿ (+)