ಬುಧವಾರ, ಜೂನ್ 23, 2021
29 °C

ಪಂಚ ರಾಜ್ಯಗಳ ಫಲಿತಾಂಶ ಸ್ಫೂರ್ತಿದಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಶಕ್ತಿಯಾಗಲಿದೆ ಎನ್ನುವ ಭವಿಷ್ಯವನ್ನು ಪಂಚ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಸುಳ್ಳುಮಾಡಿದೆ. ಈ ಫಲಿತಾಂಶ  ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆಗೆ ಸ್ಫೂರ್ತಿ ತಂದಿದೆ~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಇಲ್ಲಿ ಹೇಳಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಉಡುಪಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದ ಅವರು ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. `ಗೋವಾ ಹೊರತುಪಡಿಸಿ ಇನ್ನಿತರ ರಾಜ್ಯಗಳಲ್ಲಿ ಬಿಜೆಪಿಗೆ ಸರ್ಕಾರ ರಚಿಸುವಷ್ಟು ಮತಗಳು ಬಾರದೇ ಇದ್ದರೂ ಪಕ್ಷದ ಸಾಧನೆ ಕಳಪೆಯಾಗಿಲ್ಲ. ಭವಿಷ್ಯದ ಪ್ರಧಾನಿ ಎಂದು ಬಿಂಬಿಸಲಾಗಿದ್ದ ರಾಹುಲ್ ಗಾಂಧಿ ಅವರಿಗೆ ಮುಖಭಂಗವಾಗಿದೆ. ಅವರನ್ನು ಮತದಾರರು ತಿರಸ್ಕರಿಸಿದ್ದಾರೆ. ನಮ್ಮ ದೇಶದಲ್ಲಿ ಕಾಂಗ್ರೆಸ್ ಹಾಗೂ ನೆಹರೂ ಮನೆತನದ ಅಧಿಕಾರ ಅಂತ್ಯಕ್ಕೆ ಜನಸಾಮಾನ್ಯರೇ ತೀರ್ಪು ನೀಡಿದ್ದಾರೆ~ ಎಂದರು.`ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಗಮನಿಸಿದಾಗ ಮುಂದಿನ ದಿನಗಳಲ್ಲಿ ರಾಜಕಾರಣಕ್ಕೆ ಯುವ ನಾಯಕರನ್ನು ಜನ ಬಯಸುತ್ತಿದ್ದಾರೆ ಎನ್ನುವ ಅಂಶ ಗಮನಕ್ಕೆ ಬಂದಿದೆ. ಹೀಗಾಗಿ ಬಿಜೆಪಿಗೆ ಕೂಡ ಈ ಭಾಗದಲ್ಲಿ ಯುವ ಅಭ್ಯರ್ಥಿಯನ್ನೇ ಚುನಾವಣೆಗೆ ನಿಲ್ಲಿಸಿದೆ~ ಎಂದರು.`ಈ ಉಪ ಚುನಾವಣೆ ನಮಗೆ ಬಹಳ ಮುಖ್ಯ. ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದಿಂದಾಗಿ ಕಳೆದ 4 ವರ್ಷಗಳಲ್ಲಿ ಬಹಳ ಅಭಿವೃದ್ಧಿ ಕೆಲಸಗಳಾಗಿವೆ. ಡಾ.ವಿ.ಎಸ್.ಆಚಾರ್ಯರು ಇಲ್ಲದ ಚುನಾವಣೆ ಎದುರಿಸುತ್ತಿದ್ದೇವೆ. ಆದಾಗ್ಯೂ ನಮಗೆ ಬಿಜೆಪಿಯ ಅಭಿವೃದ್ಧಿ ಕೆಲಸಗಳೇ ನಮ್ಮ ಕೈಹಿಡಿಯಲಿವೆ~ ಎಂದರು.ಯಡಿಯೂರಪ್ಪ ಬಗ್ಗೆ ಹೈಕಮಾಂಡ್ ನಿರ್ಧಾರ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಬುಧವಾರ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಮದಾಸ್, `ನ್ಯಾಯಾಲಯದ ವಿಚಾರವನ್ನು ನಾವಿಲ್ಲಿ ಚರ್ಚಿಸುವುದಿಲ್ಲ.ಭವಿಷ್ಯದ ದಿನಗಳಲ್ಲಿ ಯಡಿಯೂರಪ್ಪ ಅವರಿಗೆ ಯಾವ ಹುದ್ದೆ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಆ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ~ ಎಂದರು.ಪಕ್ಷದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಮುಖಂಡ ವಿಶ್ವೇಶ್ವರ ಭಟ್ ಬಂಗಾರಡ್ಕ, ಕಟಪಾಡಿ ಶಂಕರ ಪೂಜಾರಿ ಹಾಗೂ ಶ್ಯಾಮಲಾ ಕುಂದರ್ ಮತ್ತಿತರರು  ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.