ಸೋಮವಾರ, ಮೇ 16, 2022
30 °C

ಪಕ್ಷದ ವರ್ಚಸ್ಸು ವೃದ್ಧಿಸುವ ಸವಾಲು: ಡಿವಿಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ರಾಜ್ಯದ ಆಡಳಿತಕ್ಕೆ ಹೊಸ ಸ್ವರೂಪ ನೀಡಿ ವೇಗ ನೀಡುವುದು ಮತ್ತು ಪಕ್ಷದ ವರ್ಚಸ್ಸನ್ನು ಮತ್ತೆ ವೃದ್ಧಿಸುವುದು ಮುಂದಿನ ಪ್ರಮುಖ ಸವಾಲುಗಳು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.ಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗಿದ್ದು ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜೆಡಿಎಸ್ ಸ್ಥಿತಿ ಮುಂದಿನ ಚುನಾವಣೆಗೆ ಕೊನೆಯಾಗುವ ಹಂತದಲ್ಲಿದೆ ಎಂದರು.ಅಭಿವೃದ್ಧಿ ವಿಚಾರಗಳಿಗೆ ಟೀಕೆ ಮಾಡುವುದೇ ವಿರೋಧಪಕ್ಷಗಳ ಜವಾಬ್ದಾರಿಯಲ್ಲ. ವಿರೋಧಪಕ್ಷಗಳು ತಮ್ಮ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಮತ್ತು ಸಹಕಾರ ನೀಡುವ  ಕೆಲಸ ಮಾಡಿದಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಇಲ್ಲಿನ ವಿರೋಧಪಕ್ಷಗಳ ಟೀಕೆ ಸಕಾರಾತ್ಮಕವಾಗಿಲ್ಲ. ಅರ್ಹವಲ್ಲದ ಟೀಕೆಗಳಿಗೆ ಉತ್ತರಿಸುದಿಲ್ಲ ಎಂದರು. ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆಯಿಲ್ಲ. ಅದಿರಿಗೆ ಸಂಬಂಧಿಸಿ ರೂ. 450 ಕೋಟಿ ಹಿನ್ನಡೆ ಸಂಭವಿಸಿದ್ದರೂ ಕಮರ್ಷಿಯಲ್ ಮತ್ತು ಅಬಕಾರಿ ತೆರಿಗೆಯಲ್ಲಿ ಶೇ 28 ಏರಿಕೆಯಾಗಿದೆ ಎಂದರು.

ಮನೆ ಅಡಿಸ್ಥಳವನ್ನು ಆಯಾಮಂದಿಗೆ ನೀಡುವ ಮತ್ತು ಏಕಕಾಲದಲ್ಲಿ 50 ಸಾವಿರ ಮಂದಿಗೆ ಹಕ್ಕುಪತ್ರ ವಿತರಿಸುವ ಯೋಜನೆ ಜಾರಿಗೊಳಿಸಲಾಗುವುದು. ಎರಡು ವರ್ಷಗಳ ಬಳಿಕ ಇಡೀ ದಿನ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದರು.ಸಚಿವ ಸೋಮಣ್ಣ ನಿರಪರಾಧಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ವಿವರ ನೀಡಿದ ಅವರು, ಸುಪ್ರೀಂಕೋರ್ಟಿನ  ವಕೀಲರಿಬ್ಬರಿಗೆ ಮತ್ತು ರಾಜ್ಯದ ಅಡ್ವಕೆಟ್ ಜನರಲ್ ಅವರಿಗೆ  ಪ್ರಕರಣದ ಕುರಿತು ಪರಿಶೀಲಿಸಲು ಸೂಚಿಸಲಾಗಿದೆ.  ಅವರ ವರದಿಯನ್ನು ಕ್ಯಾಬಿನೆಟ್‌ನಲ್ಲಿಟ್ಟು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಅಕ್ರಮ ಗಣಿಗಾರಿಕೆ ಆರೋಪಪಟ್ಟಿಯಲ್ಲಿ ಸಚಿವ ಸೋಮಣ್ಣ ಅವರ ಪುತ್ರನ ಹೆಸರಿದೆಯೇ ಹೊರತು ಅವರ ಹೆಸರು ಇಲ್ಲ. ಈ ವಿಚಾರದಲ್ಲಿ ಅವರ ಬಗ್ಗೆ ವಿನಾ ಕಾರಣ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.   

ರಾಜ್ಯದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಒಂದೂವರೆ ಲಕ್ಷ ಮಂದಿ ಬೀದಿಪಾಲಾಗಿದ್ದಾರೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.