ಸೋಮವಾರ, ಜನವರಿ 27, 2020
20 °C

ಪಕ್ಷಿ ಜಗತ್ತಿನ ವಾಸ್ತುಶಿಲ್ಪ

–ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

ಬೆನ್ನು, ರೆಕ್ಕೆ, ತಲೆಯ ಮೇಲೆ ಗಾಢ ಹಸಿರುಬಣ್ಣ. ಹಂಚಿಕಡ್ಡಿಗಳಿಗಿಂತ ತೆಳ್ಳಗಿರುವ ಕಾಲುಗಳು. ಹಣೆಯಲ್ಲಿ ಇಟ್ಟಿಗೆಗೆಂಪು ಪಟ್ಟಿ. ಸೂಕ್ಷ್ಮವಾದ ರೆಕ್ಕೆಗಳು. ಕುಳಿತಲ್ಲಿ ಕೂರದೆ ರೆಂಬೆಯಿಂದ ರೆಂಬೆಗೆ ಜಿಗಿಯುವ ಹಸಿರು ಟುವ್ವಿ ಹಕ್ಕಿ (ಟೈಲರ್‌ ಬರ್ಡ್). ಮನೆಯ ಮುಂದಿನ ಹೂದೋಟ, ಉದ್ಯಾನಗಳಲ್ಲಿ ನಿತ್ಯವೂ ಕಣ್ಣಿಗೆ ಬೀಳುವ ಇದು ಕೀಟಭಕ್ಷಕ ಪಕ್ಷಿ. ಕನ್ನಡದಲ್ಲಿ ಇದಕ್ಕೆ ‘ದರ್ಜಿ ಹಕ್ಕಿ’ ಅಥವಾ ‘ಸಿಂಪಿಗ’ ಎನ್ನುವ ಸೊಗಸಾದ ಹೆಸರುಗಳಿವೆ. ಈ ಚಿಕ್ಕ ಹಕ್ಕಿಯ ಕೊರಳಿನಿಂದ ಹೊರಬರುವ ಸಿಳ್ಳಿನ ರಾಗಾಲಾಪನೆ ಮೋಡಿ ಮಾಡುತ್ತದೆ. ಇದಕ್ಕೆ ಚಿಮ್ಮಟದಂತಹ ಕೊಕ್ಕಿದೆ. ಅದನ್ನು ಬಳಸಿ ಗೂಡುಕಟ್ಟುವ ಇದರ ಕಲೆಗಾರಿಕೆ ವಿಜ್ಞಾನಿಗಳ ತಂತ್ರಜ್ಞಾನ, ಕಲಾವಿದನ ಸೋಪಜ್ಞತೆಗೆ ಸವಾಲಾಗಿದೆ.ಈ ಹಕ್ಕಿ ಗೂಡುಕಟ್ಟಲು ಹಸಿರು ಗಿಡಗಳನ್ನೇ ಆರಿಸಿಕೊಳ್ಳುತ್ತದೆ. ಎಲೆಗಳನ್ನು ಹೊಲೆದು ಗೂಡನ್ನು ಜೋಳಿಗೆ ಆಕಾರದಲ್ಲಿ ಹೊಲೆಯುತ್ತದೆ. ಅದರೊಳಗೆ ಬೂರುಗದಂತಹ ಮೆತ್ತನೆಯ ಪದಾರ್ಥ ತುಂಬಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ವಿಶ್ವದಲ್ಲಿ ತನ್ನ ಕಲಾತ್ಮಕತೆಯಿಂದ ಗೂಡು ಕಟ್ಟುವಲ್ಲಿ ಪ್ರಸಿದ್ಧಿ ಪಡೆದಿರುವ ಎರಡು ಹಕ್ಕಿಗಳಲ್ಲಿ ಟುವ್ವಿ ಹಕ್ಕಿಯೂ ಒಂದಾಗಿದೆ. ಇನ್ನೊಂದು ಗೀಜಗ.ವಂಶಾಭಿವೃದ್ಧಿ ನಡವಳಿಕೆಯಲ್ಲಿ ಪಕ್ಷಿಗಳು ಯಾವ ಜೀವಿಗಿಂತಲೂ ಕಡಿಮೆಯಲ್ಲ. ಕೆಲವು ಕೀಟ, ಉರಗ, ಸಸ್ತನಿಗಳು ಗೂಡುಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತವೆ. ಆದರೆ, ಗೂಡು ಕಟ್ಟುವಲ್ಲಿ ಪಕ್ಷಿಗಳಿಗೆ ಇರುವಷ್ಟು ಕೌಶಲ, ಜಾಣ್ಮೆ ಅವುಗಳಿಗೆ ಇಲ್ಲ. ವಾಸ್ತುಶಿಲ್ಪಿಯ ತಲೆಯಲ್ಲಿ ಹುದುಗಿರುವ ಚಾಕಚಕ್ಯತೆಗಿಂತಲೂ ಮಿಗಿಲಾದ ಬುದ್ಧಿ ಪುಟ್ಟತಲೆಯ ಈ ಹಕ್ಕಿಗಳದು.ಪಕ್ಷಿಗಳು ಅತಿಹೆಚ್ಚು ಉಷ್ಣದೇಹಿಗಳು. ದೇಹದ ಉಷ್ಣತೆ ಕಾಯ್ದುಕೊಂಡು ಮೊಟ್ಟೆಗಳಿಗೆ ಬೆಚ್ಚನೆಯ ಕಾವು ಕೊಡಲು ಹಾಗೂ ಮರಿಗಳ ರಕ್ಷಣೆಗಾಗಿ ಗೂಡು ಕಟ್ಟಿಕೊಳ್ಳುತ್ತವೆ. ಸೂರು ಭದ್ರವಾಗಿದ್ದಾಗಲಷ್ಟೇ ಸಂತಾನಾಭಿವೃದ್ಧಿ ಸಾಧ್ಯ ಎಂಬ ತಿಳಿವಳಿಕೆ ಅವುಗಳದು.ವೈರಿಗಳಿಂದ ರಕ್ಷಣೆ, ಪ್ರಾಕೃತಿಕ ಏರುಪೇರಿಗೆ ಹೊಂದಿಕೊಂಡು ಸಾಗಲು ಗೂಡು ಅವಶ್ಯ. ಈ ಗೂಡು ಹುಟ್ಟುವ ಹಕ್ಕಿಮರಿಗಳಿಗೆ ಬದುಕಿನ ಪಾಠ ಹೇಳಿಕೊಡುವ ಶಾಲೆಯೂ ಹೌದು. ಇಲ್ಲಿ ಜೀವನದ ನೋವು, ನಲಿವು, ಆಕ್ರಂದನವನ್ನು ಕಾಣಬಹುದು. ಕಾವು ಪಡೆಯುವ ಮೊಟ್ಟೆ, ನಂತರ ಗುಟುಕು ಪಡೆದು ಹಕ್ಕಿಮರಿಯ ರೂಪದಲ್ಲಿ ಜೀವವೊಂದು ಕಣ್ತೆರೆಯುವ ಸೃಷ್ಟಿಯ ಕೌತುಕ ಸಹ ಗೂಡಿನಲ್ಲಿ ಅಡಗಿದೆ. ಪ್ರಾಕೃತಿಕ ವಿಕೋಪಕ್ಕೆ ಗೂಡು ಸಿಲುಕುವ ದಾರುಣ ಚಿತ್ರಗಳೂ ಇವೆ. ಗೂಡಿನಲ್ಲಿರುವ ಹುಲ್ಲು–ಕಡ್ಡಿಗಳು ಸಂತಾನಾಭಿವೃದ್ಧಿಯ ಜೊತೆಗೆ ದಾರುಣದ ಕಥನವೊಂದಕ್ಕೂ ಸಾಕ್ಷಿಯಾಗಿ ನಿಲ್ಲುತ್ತವೆ.ನೆಲೆಗೆ ಪೆಟ್ಟು

ಪಕ್ಷಿಗಳ ದೇಹ ಸ್ವರೂಪಕ್ಕೆ ಮಿತಿ ಇದೆ. ಹೀಗಾಗಿ, ಅವುಗಳು ಜೀವಿಸುವ ಪರಿಸರ ಬದಲಾದಾಗ ದಾರಿತಪ್ಪುವುದು ಸಹಜ. ಆದರೆ, ಬದಲಾದ ಪರಿಸರಕ್ಕೆ ಹೊಂದಿಕೊಂಡು ಜೀವಿಸುವ ಛಾತಿ ಅವುಗಳಿಗಿದೆ. ಇತ್ತೀಚೆಗೆ ಅರಣ್ಯ, ಬಂಜರು ಪ್ರದೇಶವನ್ನು ಜಮೀನುಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಸದ್ದಿಲ್ಲದೆ ಸಾಗಿದೆ. ನಗರೀಕರಣದ ವ್ಯಾಮೋಹದಿಂದ ಹಕ್ಕಿಗಳ ನೆಲೆಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮನುಷ್ಯ ವಾಸಿಸುವ ಆಸುಪಾಸಿನಲ್ಲಿ ಕೆಲವು ಪಕ್ಷಿಗಳು ನೆಲೆ ಭದ್ರಪಡಿಸಿಕೊಳ್ಳುತ್ತಿವೆ. ಮನುಷ್ಯ ಸೃಷ್ಟಿಸುವ ಕಂಟಕಗಳ ವಿರುದ್ಧ ಜಯಿಸುವ ಸಾಮರ್ಥ್ಯ ದಕ್ಕಿಸಿಕೊಳ್ಳಲು ಸೆಣಸಾಟ ನಡೆಸುತ್ತಿವೆ. ಕೆಲವು ಪಕ್ಷಿಗಳು ಇದರಲ್ಲಿ ಯಶಸ್ಸು ಕಂಡಿವೆ.ಈ ನಿಟ್ಟಿನಲ್ಲಿ ಗುಬ್ಬಚ್ಚಿ (ಸ್ಲ್ಪಾರೋ), ಮಡಿವಾಳ (ಮ್ಯಾಗ್‌ ಪೈ ರಾಬಿನ್), ಪಿಕರಾಳದಂತಹ (ಬುಲ್‌ಬುಲ್‌) ಪಕ್ಷಿಗಳನ್ನು ಹೆಸರಿಸಬಹುದು.ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಮನೆಗಳ ಮುಂಭಾಗ ಗುಬ್ಬಚ್ಚಿಗಳ ಚೀಂವ್‌... ಚೀಂವ್‌... ಕಲರವ ಹೆಚ್ಚಾಗಿತ್ತು. ನೀರು ಸೇದುವ ಬಾವಿಯಲ್ಲಿನ ಕಲ್ಲಿನ ಪೊಟರೆ, ಮನೆಯ ಹೆಂಚಿನ ಸಂದಿಯಲ್ಲಿ ಗೂಡುಕಟ್ಟಿ ಮರಿ ಮಾಡುತ್ತಿದ್ದವು. ಈಗ ಎಲ್ಲೆಡೆ ಕಾಂಕ್ರಿಟ್ ಕಟ್ಟಡಗಳದ್ದೇ ಕಾರುಬಾರು. ಈ ಕಟ್ಟಡಗಳ ಸಂದುಗೊಂದು, ತಾರಸಿಯಲ್ಲಿ ಸಂಗ್ರಹಿಸಿಟ್ಟಿರುವ ಸಾಮಗ್ರಿಗಳನ್ನು ಆಶ್ರಯಿಸಿ ಗೂಡುಕಟ್ಟುವ ಸ್ಥಿತಿ ಗುಬ್ಬಚ್ಚಿಗಳಿಗೆ ಎದುರಾಗಿದೆ.ಮಡಿವಾಳ ಹಕ್ಕಿ ಕೂಡ ಗೂಡುಕಟ್ಟಲು ಗುಬ್ಬಚ್ಚಿಯ ಮಾದರಿ ಅನುಸರಿಸುತ್ತಿದೆ. ಪಿಕರಾಳ ಮನೆ ಮುಂದಿನ ಹೂದೋಟದಲ್ಲಿ ಬೆಳೆದಿರುವ ಗಿಡಗಳಲ್ಲಿ ಬಟ್ಟಲಾಕಾರದ ಗೂಡು ಕಟ್ಟುತ್ತದೆ. ಪಕ್ಷಿಗಳಿಗೆ ಶತ್ರುಬಾಧೆ ಸಾಮಾನ್ಯ. ಶತ್ರು ಕಾಟ ಎದುರಿಸಲು ಸಾಮರ್ಥ್ಯ ಇಲ್ಲದ ಕೆಲವು ಹಕ್ಕಿಗಳು ಮನುಷ್ಯನ ಸಾಮೀಪ್ಯದಲ್ಲಿ ಗೂಡು ಕಟ್ಟುತ್ತವೆ. ಇದರಿಂದ ಹಾವು ಸೇರಿದಂತೆ ಇತರೇ ಶತ್ರುಗಳ ಕಾಟದಿಂದ ಅವುಗಳಿಗೆ ರಕ್ಷಣೆ ಸಿಗುತ್ತದೆ.ಸೌಂದರ್ಯ ಪ್ರಜ್ಞೆ

ಪಕ್ಷಿ ಪ್ರಪಂಚದಲ್ಲಿ ತನ್ನ ಗೂಡಿನಿಂದ ಗುರುತಿಸಿಕೊಳ್ಳುವ ಪಕ್ಷಿಯೆಂದರೆ ಗೀಜಗ ಹಕ್ಕಿ (ಬಾಯಾ ವೀವರ್‌). ಇದು ಗುಬ್ಬಚ್ಚಿಯಷ್ಟು ಗಾತ್ರದಲ್ಲಿರುತ್ತದೆ. ಗೂಡು ಕಟ್ಟುವುದು ಮಾತ್ರ ಗಂಡು ಗೀಜಗ. ಆ ವೇಳೆ ಇದರ ಎದೆ, ನೆತ್ತಿಯ ಮೇಲೆ ಹೊನ್ನಿನ ಹಳದಿ ಬಣ್ಣ ಮೂಡುತ್ತದೆ.ಮೊದಲ ಮಳೆ ಸುರಿದಾಗ ಭೂರಮೆ ತಂಪಾಗುತ್ತಾಳೆ. ಆಗ ಹುಲ್ಲು ಮೊಳೆಯುತ್ತದೆ. ಗೂಡುಕಟ್ಟುವ ಗೀಜಗನ ಕಾರ್ಯ ಕೂಡ ಆರಂಭಗೊಳ್ಳುತ್ತದೆ. ಗಿಡದ ಮೇಲ್ಭಾಗದಲ್ಲಿ ಬಟ್ಟಿ ಪಾತ್ರೆ ಅಥವಾ ಹೂಜಿಯಾಕಾರದ ಗೂಡುಕಟ್ಟುವ ಕೆಲಸ ಶುರುವಾಗುತ್ತದೆ.

ಭತ್ತದ ಗರಿ, ನಾರು, ಹುಲ್ಲಿನಿಂದ ಮರದ ಕೊಂಬೆಗಳನ್ನು ಹೆಣೆಯುತ್ತದೆ. ನೀರಿನ ಆಸರೆ ಇರುವ ಕೆರೆ, ಬಾವಿ, ಭತ್ತದ ಗದ್ದೆಗಳ ಬಳಿಯಲ್ಲಿಯೇ ಈ ಹಕ್ಕಿ ಗೂಡು ಕಟ್ಟುವುದು ವಿಶೇಷ. ಬಾವಿಯ ಅಂಚಿಗೆ  ಹೊಂದಿಕೊಂಡಂತೆ ಕೆಳಭಾಗಕ್ಕೆ ಬಾಗಿರುವ ಮರ–ಗಿಡಗಳ ರೆಂಬೆಗಳ ತುದಿಯಲ್ಲಿ ಗೂಡು ನಿರ್ಮಾಣ ಮಾಡುತ್ತದೆ.ಗೀಜಗ ಒಂದೇ ಬಾರಿಗೆ ಗೂಡುಕಟ್ಟಿ ಮುಗಿಸುವುದಿಲ್ಲ. ಅರ್ಧಕ್ಕೆ ಗೂಡು ಕಟ್ಟಿದ ವೇಳೆ ಹೆಣ್ಣು ಹಕ್ಕಿ ಅಲ್ಲಿಗೆ ಬರುತ್ತದೆ. ಆಗ ಗಂಡು ಅದನ್ನು ಆಕರ್ಷಿಸಲು ರೆಕ್ಕೆಬಿಚ್ಚಿ ಪಟಪಟನೆ ನರ್ತಿಸುತ್ತದೆ. ಆ ಗೂಡಿನಲ್ಲಿ ಹೆಣ್ಣು ಕುಳಿತರೆ ಮಾತ್ರವೇ ಅದನ್ನು ಪೂರ್ಣಗೊಳಿಸುತ್ತದೆ. ಇಲ್ಲವಾದರೆ, ಮತ್ತೊಂದು ಗೂಡು ನಿರ್ಮಿಸಲು ಮುಂದಾಗುತ್ತದೆ. ಹೀಗಾಗಿಯೇ, ಮರಗಳಲ್ಲಿ ಗೀಜಗನ ಗೂಡುಗಳು ಅಪೂರ್ಣಗೊಂಡಿರುವುದನ್ನು ಕಾಣಬಹುದು.ಬಾವಿಗಳಲ್ಲಿ ನೀರಿಗೆ ತಾಗದಿರುವ ಮರ–ಗಿಡಗಳ ಕೊಂಬೆಗಳನ್ನು ಆಯ್ದುಕೊಂಡು ಗೂಡು ಕಟ್ಟುವುದರ ಕೌಶಲದ ಹಿಂದೆ ಶತ್ರುಬಾಧೆಗೆ ಕಡಿವಾಣ ಹಾಕುವ ಗೀಜಗನ ತಂತ್ರಗಾರಿಕೆ ಗಮನಾರ್ಹ. ಅವುಗಳ ಮೊಟ್ಟೆ ಮೇಲೆ ಶತ್ರುಗಳ ಕಣ್ಣುಬಿದ್ದರೂ ಗೂಡಿನತ್ತ ಹೋಗಲು ವೈರಿ ಪ್ರಾಣಿಗೆ ಧೈರ್ಯ ಸಾಲುವುದಿಲ್ಲ. ನೀರಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಭೀತಿ ಶತ್ರುಗಳಿಗೆ ಕಾಡುವುದು ಸಹಜ.ತನ್ನ ವಿಶಿಷ್ಟ ಬಾಲದಿಂದ ಗಮನಸೆಳೆಯುವ ಪಕ್ಷಿಯೆಂದರೆ ಬಾಲದಂಡೆ ಹಕ್ಕಿ (ಪ್ಯಾರಡೈಸ್‌ ಫ್ಲೈ ಕ್ಯಾಚರ್‌). ಇದನ್ನು ರಾಜಹಕ್ಕಿ ಎಂದೂ ಕರೆಯುತ್ತಾರೆ. ಇದರಲ್ಲಿ ಎರಡು ಪ್ರಭೇದಗಳಿವೆ. ಒಂದು ಕಪ್ಪುತಲೆಯ ಸಂಪೂರ್ಣ ಬಿಳಿಮೈ ಹಕ್ಕಿ (ಏಷಿಯನ್‌ ಪ್ಯಾರಡೈಸ್‌ ಫ್ಲೈ ಕ್ಯಾಚರ್‌). ಇನ್ನೊಂದು ನಸುಕೆಂಪು ಬಣ್ಣದ ಹಕ್ಕಿ. ಇದು ವಲಸೆ ಹೋಗುವುದಿಲ್ಲ. ಆದರೆ, ಬಿಳಿ ಬಾಲದಂಡೆ ಹಕ್ಕಿ ಶ್ರೀಲಂಕಾದಿಂದ ಪ್ರತಿ ಚಳಿಗಾಲದ ವೇಳೆ ಕನ್ನಡ ನಾಡಿಗೆ ವಲಸೆ ಬರುತ್ತದೆ. ಮಳೆಗಾಲದ ವೇಳೆಗೆ ತನ್ನ ತವರು ನಾಡಿಗೆ ಪಯಣಿಸುತ್ತದೆ.ಈ ಎರಡು ಹಕ್ಕಿಗಳು ತಮ್ಮ ಗೂಡು ಅಲಂಕರಿಸುವ ಬಗೆಯಿಂದ ಗಮನ ಸೆಳೆಯುತ್ತವೆ. ಮರದಲ್ಲಿ ಎರಡು ಒಣಕಡ್ಡಿ ಅಪ್ಪಿ ಹಿಡಿದಂತೆ ಸಮತೋಲನ ಕಾಯ್ದುಕೊಂಡು ಬಟ್ಟಲಾಕಾರದ ಗೂಡು ನಿರ್ಮಿಸುತ್ತವೆ. ಗೂಡಿನ ಹೊರಮೈಗೆ ಜೇಡದ ಮೊಟ್ಟೆಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಜೋಡಿಸುತ್ತವೆ. ಇವುಗಳ ಗೂಡಿನ ತಂತ್ರಗಾರಿಕೆ ನಿಗೂಢವಾದುದು.ಬಿಳಿಗಲ್ಲದ ನೆಲಸಿಳ್ಳಾರ(ವೈಟ್‌ ಥ್ರೋಟೆಡ್‌ ಗೌ್ರಂಡ್‌ ಥ್ರಶ್‌) ಗೂಡು ಮರದ ಹಸಿರಿನೊಂದಿಗೆ ಸಮ್ಮಿಳಿತಗೊಂಡಿರುತ್ತದೆ. ರೆಂಬೆಯ ನಡುವೆ ತೆರೆದ ಬಟ್ಟಲಿನಂತೆ ಗೂಡು ನಿರ್ಮಿಸುತ್ತದೆ. ಗೂಡಿನ ಹೊರಮೈಗೆ ಪಾಚಿಯ ಲೇಪನ ಮಾಡುತ್ತದೆ. ಮರದ ಹಚ್ಚಹಸಿರಿನ ನಡುವೆ ಈ ಹಕ್ಕಿಯ ಗೂಡು ಗುರುತಿಸುವುದು ಕಷ್ಟಕರ.ಹಕ್ಕಿಗಳಿಗೆ ಹವಾಮಾನ ವೈಪರೀತ್ಯ, ಋತುಮಾನದ ಬದಲಾವಣೆ ಗ್ರಹಿಸುವ ಶಕ್ತಿಯಿದೆ. ಪರಿಸರದ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಸಹ ಇದೆ. ಹೊಲ, ಗದ್ದೆ, ತೋಟದತ್ತ ಹೋದಾಗ ಮರವನ್ನು ಕಟಕಟ... ಶಬ್ದ ಮಾಡುತ್ತಾ ಅಸಾಧ್ಯ ವೇಗದಲ್ಲಿ ಕೊಕ್ಕಿನಿಂದ ಕುಟುಕಿ ತೂತು ಮಾಡುವ ಮರಕುಟಿಗ ( ಉಡ್‌ ಫೆಕರ್‌) ಹಕ್ಕಿಯನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಬಡಗಿಗಳ ಕುಶಲತೆ ಮೀರಿಸುವ ಶಕ್ತಿ ಈ ಪಕ್ಷಿಗಿದೆ. ಇದು ಮಳೆಗಾಲ ಮುಗಿದ ತಕ್ಷಣ ಗೂಡು ಕಟ್ಟಲು ಆರಂಭಿಸುತ್ತದೆ. ಮರದ ತುದಿಯಿಂದ ನೀರು ಬಂದರೂ ಗೂಡಿನೊಳಗೆ ಒಳನುಸುಳದಂತೆ ಕೋನ ಹಾಗೂ ದಿಕ್ಕನ್ನು ಗಮನದಲ್ಲಿಟ್ಟುಕೊಂಡು ಗೂಡು ಕಟ್ಟುತ್ತದೆ. ಮರಕುಟಿಗದಲ್ಲಿ ಹಲವು ಪ್ರಭೇದಗಳಿವೆ.ಮನುಷ್ಯ ಸಹಜೀವನ ನಡೆಸುವುದು ಕಷ್ಟಕರ. ಆದರೆ, ಪರಿಸರ ಸಾಮರಸ್ಯ ಬೆಳೆಸಿಕೊಂಡಿರುವ ಕೆಲವು ಹಕ್ಕಿಗಳಿವೆ. ಇದಕ್ಕೆ ಕಂದು ಮರಕುಟಿಗ (ರೂಫಸ್‌ ಉಡ್‌ ಫೆಕರ್‌) ನಿದರ್ಶನ. ಇದರ ಗೂಡು ತುಂಬಾ ಬೆರಗು ಮೂಡಿಸುತ್ತದೆ. ಕೊಂಚ ಕೆಣಕಿದರೆ ರೌದ್ರಾವತಾರ ತಳೆದು ಯುದ್ಧಕ್ಕೆ ನಿಲ್ಲುವ ಕ್ರಿಮ್ಯಾಟೋಗ್ಯಾಸ್ಟರ್‌ ಇರುವೆ ಗೂಡಿನಲ್ಲಿ ರಂಧ್ರ ಕೊರೆದು, ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಇರುವೆಗಳ ಗೂಡು ಗೋಳಾಕಾರವಾಗಿರುತ್ತದೆ. ಪಕ್ಷಿಯ ಕುಟುಂಬಕ್ಕೆ ಇರುವೆಗಳು ಯಾವುದೇ ಅಡ್ಡಿ ಮಾಡುವುದಿಲ್ಲ. ಹಕ್ಕಿಮರಿಗಳಿಗೆ ಇರುವೆಗಳು ಪ್ರತಿರೋಧ ಒಡ್ಡುವುದಿಲ್ಲ. ಜತೆಗೆ, ಅವುಗಳಿಗೆ ಆಹಾರವೂ ಅಲ್ಲಿಯೇ ಸಿಗುತ್ತದೆ. ಇರುವೆ ಮತ್ತು ಪಕ್ಷಿಯ ಸಹಜೀವನ ಅಚ್ಚರಿ ತರುತ್ತದೆ.ಕೆಲವು ಹಕ್ಕಿಗಳಿಗೆ ನೀರು, ಜೌಗು ಪ್ರದೇಶವೇ ಆಶ್ರಯ ತಾಣ. ತನ್ನ ಉದ್ದ ಕಾಲುಗಳಿಂದ ಗಮನ ಸೆಳೆಯುವ ಹಕ್ಕಿಯೆಂದರೆ ರಾಜಹಂಸ (ರೋಸ್‌ ಪ್ಲೆಮಿಂಗೊ). ಗುಲಾಬಿ ಕೆಂಪು, ಬಿಳಿಮಿಶ್ರಿತ ಈ ಪಕ್ಷಿಗಳು ಕೆರೆ, ಜಲಾಶಯದ ಹಿನ್ನೀರಿನಲ್ಲಿ ಗುಂಪಾಗಿ ನೀರಿನಲ್ಲಿ ಕೊಕ್ಕಿನಿಂದ ಕೆಸರನ್ನು ಜರಡಿಯಾಡುತ್ತವೆ. ನೀರಿನಲ್ಲಿರುವ ಅತಿಸೂಕ್ಷ್ಮ ಜೀವಿಗಳನ್ನು ಹಿಡಿದು ತಿನ್ನುತ್ತವೆ. ಇವು ನೆಲಮಟ್ಟದಲ್ಲಿ ಮಣ್ಣಿನ ಗುಡ್ಡೆಗಳನ್ನು ರಚಿಸಿಕೊಂಡು ಗೂಡು ನಿರ್ಮಿಸಿ ಮೊಟ್ಟೆ ಇಡುತ್ತವೆ.ಕೆರೆಯ ಅಂಚಿಗೆ ಹೋದ ವೇಳೆ ನೀರಿನಲ್ಲಿ ತಲೆ ಮುಳುಗಿಸುತ್ತ ಅಂಜಿಕೆಯಿಂದ ದೂರ ಸಾಗುವ ಗುಳುಮುಳುಕ (ಲಿಟಲ್‌ ಜೆರೇಬ್‌) ಹಕ್ಕಿ ಎಲ್ಲರಿಗೂ ಚಿರಪರಿಚಿತ. ಇದು ತೇಲುವ ಕಟ್ಟಿಗೆಗಳ ಮೇಲೆ ಗೂಡು ಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತದೆ.ಚರ್ಲೆ ಅಥವಾ ಸರಳೆ (ಗಡ್ವಾಲ್‌), ಕೆಬ್ಬೆ ಚರ್ಲೆ (ವೈಟ್‌ ಐಡ್‌ ಪೊಕಾರ್ಡ್), ಹುಂಡುಕೋಳಿ (ವೈಟ್‌ ಬ್ರೆಸ್ಟೆಡ್‌ ವಾಟರ್‌ಹೆನ್‌), ನೀಲಿನಾಮಗೋಳಿ (ಪರ್ಪಲ್‌ ಮೂರ್‌ಹೆನ್‌) ಕೆರೆಯ ದಡದಲ್ಲಿರುವ ಜೊಂಡಿನಲ್ಲಿ ಗೂಡುಕಟ್ಟಿ ಮೊಟ್ಟೆ ಇಡುತ್ತವೆ.ಕನ್ನಡ ನಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಬೂದು ಬಣ್ಣದ ಕಾಡುಕೋಳಿ (ಗ್ರೇ ಜಂಗಲ್‌ ಫೌಲ್‌), ಗೌಜಿಗನ ಹಕ್ಕಿ (ಗ್ರೇ ಪಾಟ್ರಿಡ್ಜ್‌), ಬಟೇರ (ಕಾಮನ್ ಗ್ರೇ ಕ್ವಿಲ್‌) ನೆಲದಲ್ಲಿ ಹುಲ್ಲು ಒಟ್ಟುಮಾಡಿ ಗೂಡು ಕಟ್ಟುತ್ತವೆ. ಮರಿಗಳು ಮೊಟ್ಟೆಯೊಡೆದು ಹೊರಬಂದ ಬಳಿಕ ಅಮ್ಮನೊಂದಿಗೆ ಕೆಲವೇ ದಿನಗಳಲ್ಲಿ ಹೆಜ್ಜೆ ಹಾಕುತ್ತವೆ. ಹೀಗಾಗಿ, ಈ ಹಕ್ಕಿಗಳು ಭದ್ರವಾದ ಗೂಡು ನಿರ್ಮಿಸುವುದಿಲ್ಲ.ಗೂಡು ಕಟ್ಟುವುದೇ ಬರೊಲ್ಲ!

ಕೆಲವು ಹಕ್ಕಿಗಳು ಸಿಕ್ಕಾಪಟ್ಟೆ ಸೋಮಾರಿಗಳು. ಆದರೆ, ತನ್ನ ಸಂತಾನಾಭಿವೃದ್ಧಿ ಮಾಡುವ ಜಾಣ್ಮೆ ಅವುಗಳಿಗೆ ಇದೆ. ಇಂತಹ ಪರಪುಟ್ಟ ಹಕ್ಕಿಗೆ ಕೋಗಿಲೆ ಉತ್ತಮ ನಿದರ್ಶನ. ನಾದೋಪಾಸಕರಿಗೆ ಅಚ್ಚುಮೆಚ್ಚಾದ ಇದು ಗೂಡುಕಟ್ಟುವ ಕುಶಲತೆ ಮಾತ್ರ ಕಲಿತಿಲ್ಲ.ಚೊಟ್ಟಿ ಕೋಗಿಲೆಯು ಕಾಗೆ, ದಾಸ ಮಗರೆ (ಬ್ಲೂ ಜೇ) ಗೂಡಿನಲ್ಲಿ ಮೊಟ್ಟೆ ಇಡುತ್ತದೆ. ಇದು ಮೊಟ್ಟೆ ಇಡುವುದರಲ್ಲಿ ಶಿಸ್ತು ರೂಢಿಸಿಕೊಂಡಿಲ್ಲ. ಮೂರದಿಂದ ನಾಲ್ಕು ದಿನಗಳ ಅಂತರದಲ್ಲಿ ಒಂದೊಂದು ಮೊಟ್ಟೆ ಇಡುತ್ತದೆ. ಒಂದೊಂದು ಗೂಡಿನಲ್ಲಿಯೂ ಒಂದು ಮೊಟ್ಟೆ ಇಡುತ್ತದೆ. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಒಂದು ಗೂಡು ನಾಶವಾದರೆ ಇನ್ನೊಂದು ಗೂಡಿನಲ್ಲಿರುವ ಮೊಟ್ಟೆಯಿಂದಲಾದರೂ ವಂಶ ಬೆಳೆಯಲಿ ಎನ್ನುವ ಬುದ್ಧಿವಂತಿಕೆ ಅದರದು.ಮೊಟ್ಟೆ ಇಡುವಲ್ಲಿಯೂ ಕೋಗಿಲೆ ಜಾಣ್ಮೆ ಪ್ರದರ್ಶಿಸುತ್ತದೆ. ಕಾಗೆ ಗೂಡಿನ ಬಳಿಗೆ ಬರುವ ಗಂಡು ಕೋಗಿಲೆ ದಾಳಿ ಮಾಡುವ ರೀತಿಯಲ್ಲಿ ವರ್ತಿಸುತ್ತದೆ. ಆಗ ಗೂಡಿನ ಕಾವಲಿಗಿರುವ ಹೆಣ್ಣು ಕಾಗೆ ಅದನ್ನು ಅಟ್ಟಿಸಿಕೊಂಡು ಹೋಗುತ್ತದೆ. ಗಂಡು ಕೋಗಿಲೆ ಬಹುದೂರದವರೆಗೆ ಕಾಗೆಯನ್ನು ಕರೆದೊಯ್ಯುತ್ತದೆ. ಅದೇ ವೇಳೆ ಹೆಣ್ಣು ಕೋಗಿಲೆ ಕಾಗೆ ಗೂಡಿನಲ್ಲಿ ಮೊಟ್ಟೆ ಇಡುತ್ತದೆ. ಮರಳಿ ಗೂಡಿನತ್ತ ಬಂದ ಕಾಗೆ, ಕೋಗಿಲೆ ಮೊಟ್ಟೆಯೂ ತನ್ನದೆಂದು ಭಾವಿಸಿ ಕಾವು ಕೊಡುತ್ತದೆ.ಪರಸ್ಪರ ಅವಲಂಬನೆ

ಬಯಲು ಪ್ರದೇಶದಲ್ಲಿ ಸಹಜವಾಗಿ ಕಣ್ಣಿಗೆ ಬೀಳುವ ಹಕ್ಕಿಗಳಲ್ಲಿ ಕಾಜಾಣವೂ (ಡ್ರೋಂಗ್ರೊ) ಒಂದಾಗಿದೆ. ಇದು ಕೋಪಿಷ್ಠ ಹಕ್ಕಿ, ಧೈರ್ಯಶಾಲಿಯೂ ಹೌದು. ಎತ್ತರದ ಮರಗಳ ಕವಲುಗಳಲ್ಲಿ ಬೇರು, ನಾರು, ಹುಲ್ಲಿನಿಂದ ಬಟ್ಟಲಿನಾಕಾರದಲ್ಲಿ ಗೂಡು ಕಟ್ಟುತ್ತದೆ. ಶತ್ರು ಪಕ್ಷಿ ಎಷ್ಟೇ ದೊಡ್ಡದಿದ್ದರೂ ತನಗೆ ತೊಂದರೆ ಕೊಟ್ಟರೆ ದಾಳಿಗೆ ಮುಂದಾಗುತ್ತದೆ.ಶತ್ರುಗಳ ಕಾಟ ತಡೆಯಲು ಶಕ್ತಿ ಇಲ್ಲದ ಸಣ್ಣ ಹಕ್ಕಿಗಳು ಕಾಜಾಣ ಗೂಡು ಕಟ್ಟಿರುವ ಮರಗಳಲ್ಲಿಯೇ ಗೂಡು ನಿರ್ಮಿಸಿ ಶತ್ರುಗಳಿಂದ ರಕ್ಷಣೆ ಪಡೆಯುತ್ತವೆ. ಕರಿತಲೆಯ ಹೊನ್ನಕ್ಕಿ (ಬ್ಲಾಕ್‌ ಹೆಡೆಡ್‌ ಓರಿಯಲ್‌) ಸೇರಿದಂತೆ ಸಣ್ಣಹಕ್ಕಿಗಳು ಕಾಜಾಣ ಕಟ್ಟಿರುವ ಮರದಲ್ಲಿಯೇ ಗೂಡು ನಿರ್ಮಿಸಿಕೊಂಡು ಶತ್ರುಬಾಧೆಯಿಂದ ರಕ್ಷಣೆ ಪಡೆಯುತ್ತವೆ.ಆಕಾಶಗುಬ್ಬಿಗಳು (ಸ್ವಿಫ್ಟ್‌) ಕಟ್ಟುವ ಗೂಡುಗಳು ವಿಶಿಷ್ಟವಾಗಿರುತ್ತದೆ. ಘನೀಭವಿಸುವ ತಮ್ಮ ಜೊಲ್ಲಿನಿಂದ ಗೂಡು ನಿರ್ಮಿಸುತ್ತವೆ. ಮರಿ ಮಾಡುವ ವೇಳೆ ಅವುಗಳ ಬಾಯಲ್ಲಿ ಅಂಟಾದ ಜೊಲ್ಲು ಒಸರುತ್ತದೆ. ಗಾಳಿಯಲ್ಲಿ ತೇಲಾಡುವ ಕಸಕಡ್ಡಿಗಳನ್ನು ಮಿಶ್ರಣ ಮಾಡಿ ಗೂಡು ರಚಿಸುತ್ತವೆ. ದೊಡ್ಡ ಸೇತುವೆಗಳ ಅಡಿಯಲ್ಲಿ, ಹಳೆಯದಾದ ಎತ್ತರದ ದೇಗುಲ, ಚರ್ಚ್‌ಗಳ ಛಾವಣಿಗಳಲ್ಲಿ ಸಾಮೂಹಿಕವಾಗಿ ಗೂಡು ನಿರ್ಮಿಸುತ್ತವೆ.ಪಕ್ಷಿಗಳ ಗೂಡುಗಳು ಅವುಗಳ ಸಂತಾನದ ಅಭೀಪ್ಸೆಯನ್ನು ವ್ಯಕ್ತಪಡಿಸುವುದರ ಜೊತೆಗೆ ತಮ್ಮ ಕುಟುಂಬವನ್ನು ಜತನ ಮಾಡುವ ಕಾಳಜಿಯನ್ನೂ ಸೂಚಿಸುತ್ತವೆ. ಕಲಾದೃಷ್ಟಿಯಿಂದಲೂ ಈ ಗೂಡುಗಳ ರಚನೆ ಬೆರಗುಗೊಳಿಸುವಂತಹದ್ದು. ವಂಶಾಭಿವೃದ್ಧಿಯ ಹಂಬಲ, ಕುಟುಂಬದ ಕಾಳಜಿ ಹಾಗೂ ಇವುಗಳಿಗೆ ಪೂರಕವಾಗಿ ಮನೆಯನ್ನು ನಿರ್ಮಿಸುವುದು ಮನುಷ್ಯ ಸಮಾಜದ ಲಕ್ಷಣಗಳೂ ಹೌದು. ಕಲಾಸ್ಪರ್ಶ ಹೊಂದಿರುವ, ವಿಶಿಷ್ಟ ರಚನೆಯ ಗೂಡುಗಳ ‘ಪಕ್ಷಿಜಗತ್ತಿನ ವಾಸ್ತುಶಿಲ್ಪ’ದಲ್ಲಿ ಅತ್ಯಂತ ಆಧುನಿಕರಿಗೂ ಪಾಠಗಳು ಇದ್ದಂತಿವೆ.

ಪ್ರತಿಕ್ರಿಯಿಸಿ (+)