ಗುರುವಾರ , ಜೂನ್ 24, 2021
23 °C
ಚುನಾವಣಾ ಚುಟಕು

ಪತಿಗೆ ಪತ್ನಿ ಸವಾಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಒಡಿಶಾ ಮಾಜಿ ಮುಖ್ಯಮಂತ್ರಿ ಗಿರಿಧರ್‌ ಗಮಾಂಗ್‌ ಅವರು ಈ ಬಾರಿಯ ಲೋಕಸಭೆಯಲ್ಲಿ ತಮ್ಮ ಪತ್ನಿ, ಹಾಲಿ ಸಂಸದೆ ಹೇಮಾ ಗಮಾಂಗ್‌ ವಿರುದ್ಧವೇ ಸ್ಪರ್ಧಿಸ­ಲಿ­ದ್ದಾರೆ. ಯಾಕೆಂದರೆ  ಹೇಮಾ, ಅವರು  ಶನಿವಾರ ಕಾಂಗ್ರೆಸ್‌ ತೊರೆದು ಬಿಜು ಜನತಾ ದಳ (ಬಿಜೆಡಿ) ಸೇರಿ­ದ್ದಾರೆ.ಹೇಮಾ ಅವರು ಕೊರಾಪತ್‌ ಕ್ಷೇತ್ರದಿಂದ ಬಿಜೆಡಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದೇ ಕ್ಷೇತ್ರದಿಂದ ಅವರ ಪತಿ ಗಿರಿಧರ್‌ ಗಮಾಂಗ್‌ ಅವರು ಕಾಂಗ್ರೆಸ್‌ನಿಂದ ಪುನರಾಯ್ಕೆ ಬಯಸಿದ್ದಾರೆ. ಗಿರಿಧರ್‌ ಅವರು 1972ರಿಂದ 1998ರ ವರೆಗೆ ಸತತವಾಗಿ ಎಂಟು ಬಾರಿ ಈ ಕ್ಷೇತ್ರ­ದಿಂದ ಆಯ್ಕೆಯಾಗಿರುವ ದಾಖಲೆ ಇದೆ. ಈ ಚುನಾವಣೆಯಲ್ಲಿ ಗಿರಿಧರ್‌ ಅವರಿಗೆ ಅವರ ಪತ್ನಿ ಹೇಮಾ ಸವಾಲೊಡ್ಡಿದ್ದಾರೆ.ಕಾಂಗ್ರೆಸ್‌ಗೆ ವ್ಯತಿರಿಕ್ತ ಸನ್ನಿವೇಶ: ಚಾಕೋ

ಕೊಚ್ಚಿ (ಪಿಟಿಐ):
ಹಲವು ರೀತಿಯ ಹಗರಣಗಳಿಂದಾಗಿ ಕಾಂಗ್ರೆಸ್‌ ಲೋಕಸಭೆ ಚುನಾವಣೆಗೆ ಮುನ್ನ ವ್ಯತಿರಿಕ್ತ ಸನ್ನಿವೇಶ ಎದುರಿಸುತ್ತಿದೆ  ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಪಿ.ಸಿ. ಚಾಕೋ ಹೇಳಿದ್ದಾರೆ.ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಹಗರಣಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಸಂವಾದ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶನಿವಾರ  ಇಲ್ಲಿ ಟೀಕಿಸಿದ್ದಾರೆ.ಸೋನಿ ಸೂರಿಗೆ ಎಎಪಿ ಟಿಕೆಟ್‌

ನವದೆಹಲಿ (ಪಿಟಿಐ):
ಆಮ್‌ ಆದ್ಮಿ ಪಕ್ಷವು (ಎಎಪಿ) ಲೋಕಸಭಾ ಚುನಾ­ವಣೆಗೆ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.55 ಲೋಕಸಭಾ ಸ್ಥಾನಗಳಿಗೆ ಎಎಪಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಆದಿವಾಸಿ ಕಾರ್ಯಕರ್ತೆ ಸೋನಿ ಸೂರಿ ಛತ್ತೀಸಗಡ ಬಸ್ತಾರ್‌ನಿಂದ ಸ್ಪರ್ಧಿಸಲಿ­ದ್ದಾರೆ. ಉತ್ತರ ಪ್ರದೇಶದ ಗಜಿಯಾ­ಬಾದ್‌ನಿಂದ ಹಿರಿಯ ನಾಯಕಿ ಶಾಜಿಯಾ ಇಲ್ಮಿ ಕಣಕ್ಕಿಳಿಯಲಿದ್ದಾರೆ.ಮೀಸಾಗೆ ಜಾಮೀನು ಮಂಜೂರು

ಪಟ್ನಾ (ಪಿಟಿಐ):
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ)  ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಹಿರಿಯ ಪುತ್ರಿ ಹಾಗೂ ಪಾಟಲೀಪುತ್ರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಮೀಸಾ ಭಾರತಿ ಅವರಿಗೆ ಶನಿವಾರ ಜಾಮೀನು ಮಂಜೂರಾಗಿದೆ.ಅನುಮತಿ ಪಡೆಯದೇ ರೋಡ್‌ ಷೋ ಮಾಡಿದ್ದಕ್ಕಾಗಿ ಮಾರ್ಚ್‌ 10ರಂದು ಮೀಸಾ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ದಾನಾಪುರದ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಜ್‌ ವಿಜಯ್‌ ಕೃಷ್ಣಾ ಸಿಂಗ್‌ ಅವರು ಮೀಸಾ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.ಮೀರಾ ವಿರುದ್ಧ ಜೆಡಿಯುನ ರಾಮಯ್ಯ

ನವದೆಹಲಿ (ಪಿಟಿಐ):
ಬಿಹಾರದ ಆಡಳಿತ ಚುಕ್ಕಾಣಿ ಹಿಡಿದಿರುವ ಜನತಾದಳ (ಸಂಯುಕ್ತ) (ಜೆಡಿಯು), ಏಪ್ರಿಲ್‌ 10ರಂದು ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಗಾಗಿ ಬಿಹಾರ ಹಾಗೂ ಇತರ ಮೂರು ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಬಿಹಾರದ ಸಸಾರಾಂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಲೋಕಸಭಾ ಸ್ಪೀಕರ್‌ ಮೀರಾಕುಮಾರ್‌ ವಿರುದ್ಧ ಮಾಜಿ ಅಧಿಕಾರಿ ಕೆ.ಪಿ ರಾಮಯ್ಯ ಅವರನ್ನು ಜೆಡಿಯು ಕಣಕ್ಕಿಳಿಸಿದೆ.ನಾರಾಯಣ ಸ್ವಾಮಿಗೆ ಟಿಕೆಟ್‌: ಪ್ರತಿಭಟನೆ

ಪುದುಚೇರಿ (ಪಿಟಿಐ):
ಕೇಂದ್ರ ಸಚಿವ ವಿ.ನಾರಾಯಣ ಸ್ವಾಮಿ ಅವರಿಗೆ ಮತ್ತೆ ಪುದುಚೇರಿ ಕ್ಷೇತ್ರದಿಂದ ಟಿಕೆಟ್‌ ನೀಡಿರು­ವು­ದಕ್ಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ.ಟಿಕೆಟ್‌ ನೀಡಿರುವುದನ್ನು ಪ್ರತಿಭಟಿಸಿ­ರುವ ಕಾಂಗ್ರೆಸ್‌ನ ವಿವಿಧ ಘಟಕಗಳ ಮುಖಂಡರು, ಪಕ್ಷಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ, ತುರ್ತು ಸಭೆ ಕರೆದು ಮುಖಂಡರು ಚರ್ಚಿಸಿದ್ದಾರೆ. ಮನಸೋ ಇಚ್ಛೆಯಾಗಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮದಲ್ಲಿ ನಾರಾಯಣ ಸ್ವಾಮಿ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.