ಶನಿವಾರ, ಮೇ 15, 2021
25 °C

ಪದಾಧಿಕಾರಿಗಳಿಗೆ ತರಬೇತಿ, ಮತದಾರರ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಕ್ಷದ ಬೂತ್ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಪದಾಧಿಕಾರಿಗಳಿಗೆ ಇದೇ 15ರ ನಂತರ ತರಬೇತಿ ಶಿಬಿರ ಆಯೋಜಿಸಲು ಕೆಪಿಸಿಸಿ ನಿರ್ಧರಿಸಿದೆ. ಅಲ್ಲದೆ, ಅಕ್ಟೋಬರ್ 2ರ ನಂತರ ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ `ಮತದಾರರೊಂದಿಗೆ ಮುಖಾಮುಖಿ~ ಕಾರ್ಯಕ್ರಮ ಆರಂಭಿಸಲೂ ಪಕ್ಷ ನಿರ್ಧರಿಸಿದೆ.ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಬಿ.ಎಲ್. ಶಂಕರ್, `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮದ ಸಂಚಾಲಕ ಕಾಗೋಡು ತಿಮ್ಮಪ್ಪ ಮತ್ತು ಮಾಜಿ ಶಾಸಕ ಎನ್.ಎಸ್. ಬೋಸರಾಜು ಈ ವಿಷಯ ತಿಳಿಸಿದರು.`ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜನರಿಗೆ ಕಾಂಗ್ರೆಸ್ ಪಕ್ಷ ಏಕೆ ಅಗತ್ಯ ಎಂಬ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ತರಬೇತಿ ಶಿಬಿರ ನಡೆಯಲಿದೆ. ಮಾಜಿ ಶಾಸಕ ಮಹಿಮಾ ಪಟೇಲ್ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ವಿ.ಆರ್. ಸುದರ್ಶನ್, ಡಾ. ಕೃಪಾ ಆಳ್ವ ಮತ್ತಿತರರು ಈ ಶಿಬಿರದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ~ ಎಂದು ಶಂಕರ್ ತಿಳಿಸಿದರು.ಮತದಾರರೊಂದಿಗೆ ಮುಖಾಮುಖಿ: ಅಕ್ಟೋಬರ್ 2ರಿಂದ ಪಕ್ಷದ ಮುಖಂಡರು ರಾಜ್ಯದ ಎಲ್ಲ ಮತಗಟ್ಟೆಗಳಿಗೆ ತೆರಳಿ ಅಲ್ಲಿನ ಮತದಾರರನ್ನು ಭೇಟಿಮಾಡಿ, ಪಂಚಾಯಿತಿ ಮತ್ತು ವಾರ್ಡ್ ಮಟ್ಟದ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಇದು ಮೂರು ತಿಂಗಳ ಕಾರ್ಯಕ್ರಮ. ಕಾರ್ಯಕರ್ತರನ್ನು ಆಧರಿಸಿದ ಪಕ್ಷವನ್ನಾಗಿ ಬೆಳೆಸುವ ಉದ್ದೇಶ ಈ ಕಾರ್ಯಕ್ರಮಕ್ಕಿದೆ ಎಂದು ತಿಳಿಸಿದರು.ಇನ್ನು ಮುಂದೆ ಪಕ್ಷ ದೊಡ್ಡ ಪ್ರಮಾಣದ ಸಭೆ, ಸಮಾರಂಭಗಳನ್ನು ಆಯೋಜಿಸುವುದಕ್ಕಿಂತ ಜನಸಾಮಾನ್ಯರನ್ನು ನೇರವಾಗಿ ಭೇಟಿಮಾಡಲು ಹೆಚ್ಚಿನ ಆದ್ಯತೆ ನೀಡಲಿದೆ ಎಂದರು.ಸಮಾರೋಪ:
`ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮದ ಸಮಾರೋಪ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಇದೇ 12ರಂದು ನಡೆಯಲಿದೆ. ಅದೇ ದಿನ ಸಂಜೆ ಕೊಪ್ಪಳದಲ್ಲಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯ ಚಾಲನೆ ಪಡೆಯಲಿದೆ ಎಂದು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.