ಬುಧವಾರ, ಮೇ 18, 2022
23 °C
ನಾದದ ಬೆನ್ನೇರಿ...

ಪರಂಪರೆಯ ಸಂಗೀತ ಈ ಶಾಲೆಯ ಮಂತ್ರ

-ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಜೀವನಶೈಲಿಯ ಬದಲಾವಣೆ, ಪಾಶ್ಚಾತ್ಯರ ಅನುಕರಣೆ, ಪಾಶ್ಚಾತ್ಯದ ಸಂಗೀತದ ಸೆಳೆತ ಇವೆಲ್ಲವುಗಳಿಂದ ನಮ್ಮ ಭಾರತೀಯ ಪರಂಪರೆಯ ಸಂಗೀತ ಇಂದಿನ ಪೀಳಿಗೆಯ ಮಕ್ಕಳನ್ನು ಸೆಳೆಯುತ್ತಿಲ್ಲ ಎಂಬ ಆತಂಕ ಇತ್ತೀಚೆಗೆ ನಗರದಲ್ಲಿ ನಡೆದ ಒಂದು `ಸಂಗೀತ ಸಂವಾದ'ದಲ್ಲಿ ವ್ಯಕ್ತವಾಯಿತು.

ಆದರೆ ಜಯನಗರದಲ್ಲಿರುವ `ಗೂಂಜನ್ ಸಂಗೀತ ಕಲಾಕೇಂದ್ರ'ಕ್ಕೆ ಒಮ್ಮೆ ಭೇಟಿ ನೀಡಿದರೆ ಈ ಆತಂಕ ಸದ್ದಿಲ್ಲದೆ ಮರೆಯಾಗುತ್ತದೆ. ಏಕೆಂದರೆ ಇಲ್ಲಿ ಶಾಸ್ತ್ರೀಯ ಸಂಗೀತ ಕಲಿಯುವ ಮಕ್ಕಳ ಸಂಖ್ಯೆ 300ಕ್ಕೂ ಹೆಚ್ಚು.ಅದೂ ಹಿಂದೂಸ್ತಾನಿ ಗಾಯನ, ಹಾರ್ಮೋನಿಯಂ, ಬಾನ್ಸುರಿ, ಕೀಬೋರ್ಡ್, ತಬಲಾ, ಲಘುಸಂಗೀತ, ಡ್ರಾಯಿಂಗ್, ಪೇಂಟಿಂಗ್ ತರಗತಿಗಳಲ್ಲಿ ಮಕ್ಕಳು ಲವಲವಿಕೆಯಿಂದ ಕಲಿಯುವುದು ನೋಡಿದರೆ ಇಂದಿನದ್ದಲ್ಲ, ಮುಂದಿನ ಪೀಳಿಗೆಯಲ್ಲೂ ನಮ್ಮ ನೆಲದ ಸಾಂಸ್ಕೃತಿಕ ಸೊಗಡು, ಶಾಸ್ತ್ರೀಯ ಸಂಗೀತದ ಘಮಲು ಲವಲೇಶವೂ ಕಡಿಮೆಯಾಗದು ಎಂಬುದು ವೇದ್ಯವಾಗುತ್ತದೆ. ಗೂಂಜನ್ ಹಿಂದೂಸ್ತಾನಿ ಸಂಗೀತ ಕಲಾಕೇಂದ್ರ ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿದೆ. ಗಾಯಕ ಎಂ.ವಿ. ಹೆಗಡೆ ಈ ಸಂಸ್ಥೆಯ ಪ್ರಾಂಶುಪಾಲರು. ಕಳೆದ 10 ವರ್ಷಗಳಿಂದ ಇಲ್ಲಿ ಸಂಗೀತ ಹೇಳಿಕೊಡಲಾಗುತ್ತಿದೆ. ಹಾಗೆ ನೋಡಿದರೆ ಈ ಸಂಗೀತ ಶಾಲೆ ಆರಂಭವಾದದ್ದು ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ; ಅದೂ 2002ರಲ್ಲಿ, ಸರಸ್ವತಿ ಕಲಾಕೇಂದ್ರ ಎಂಬ ಹೆಸರಿನಲ್ಲಿ. ಅದಾಗಿ ಇದೇ ಶಾಲೆಯ ಶಾಖೆ ಬೆಂಗಳೂರಿನಲ್ಲಿ ಆರಂಭವಾಯಿತು. ಅಲ್ಲಿಯೂ ಈಗ ಸಂಗೀತ ತರಗತಿಗಳು ನಡೆಯುತ್ತಿವೆ.“ಈ ಶಾಲೆಯಲ್ಲಿ ಕಲಿತ ಮಕ್ಕಳು ರಾಜ್ಯಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಟೀವಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಪ್ರಸ್ತುತ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಇಲ್ಲಿನ ಮಕ್ಕಳಿಗೆ ಸಂಗೀತದ ಜತೆಗೆ `ಸೌಂಡ್ ಕಲ್ಚರ್' ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರ ನಡೆಸುವ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗೆ ಕುಳಿತ ಬಹುತೇಕ ಎಲ್ಲ ಮಕ್ಕಳೂ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾಗುತ್ತಿದ್ದಾರೆ” ಎಂದು ಹೇಳುತ್ತಾರೆ ಎಂ.ವಿ. ಹೆಗಡೆ.ಪ್ರತಿ ತಿಂಗಳೂ ಬೈಠಕ್

`ಇಲ್ಲಿನ ಸಂಗೀತ ವಿದ್ಯಾರ್ಥಿಗಳಿಗೆ ಸಭಾ ಗಾನದ ಪರಿಚಯ ಆಗಲೆಂದು ಪ್ರತಿ ತಿಂಗಳೂ ಬೈಠಕ್ ನಡೆಸಲಾಗುತ್ತದೆ. ವೇದಿಕೆಯಲ್ಲಿ ಹಾಡುವ ರೀತಿ ಮತ್ತು ಸಾಥಿಯೊಂದಿಗೆ ಕಛೇರಿ ಕೊಡುವ ಪ್ರಾಯೋಗಿಕ ತರಬೇತಿ ಇದರಿಂದ ಸಿಕ್ಕಿದಂತಾಗುತ್ತದೆ.

ಪ್ರತಿವರ್ಷ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಿ ಪ್ರತಿ ವಿದ್ಯಾರ್ಥಿಗೂ ವೇದಿಕೆಯಲ್ಲಿ ಹಾಡುವ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ ಅತಿಥಿ ಕಲಾವಿದರನ್ನು ಕರೆಸಿ ಅವರ ಸಂಗೀತ ಕಾರ್ಯಕ್ರಮ ಕೇಳುವ ಅವಕಾಶ ಕಲ್ಪಿಸಲಾಗುತ್ತಿದೆ' ಎಂದು ವಿವರ ನೀಡುತ್ತಾರೆ ಗಾಯಕ ಎಂ.ವಿ. ಹೆಗಡೆ.ಮಕ್ಕಳಲ್ಲಿ ಸಂಗೀತದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಮತ್ತು ಹೆಚ್ಚು ಹೆಚ್ಚು ಸಂಗೀತ ಕಡೆಗೆ ಒಲವು ತೋರಿಸುವ ಸಲುವಾಗಿ ಈ ಕಲಾಕೇಂದ್ರದ ಮಕ್ಕಳೇ ಹಾಡಿರುವ `ನಾದ ರಂಜಿನಿ' ಎಂಬ ಸೀಡಿ ಬಿಡುಗಡೆ ಮಾಡಲಾಗಿದೆ.ಗೂಂಜನ್ ಕಲಾಕೇಂದ್ರದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಎಂ.ವಿ. ಹೆಗಡೆ ಅವರು ಕಲಿಸುವರು. ಇವರು ಹಿಂದೂಸ್ತಾನಿ ಗಾಯಕ ಎಂ.ಪಿ. ಹೆಗಡೆ ಅವರಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಸಂಗೀತ ಕಲಿತವರು. ನಾಡಿನ ಅನೇಕ ಕಡೆಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಇವರು ಹಾಡಿರುವ ಶಾಸ್ತ್ರೀಯ ಮತ್ತು ಭಜನ್ ಸೀಡಿಗಳು ಸಂಗೀತ ಪ್ರಿಯರ ಮನ ತಣಿಸಿವೆ.ಇದೇ ಸಂಗೀತ ಶಾಲೆಯಲ್ಲಿ ಜ್ಯೋತಿ ಹೆಗಡೆ ಹಾರ್ಮೋನಿಯಂ ಕಲಿಸುತ್ತಾರೆ. ಇವರೂ ಗಾಯಕ ಎಂ.ಪಿ. ಹೆಗಡೆ ಅವರಲ್ಲಿ ಸಂಗೀತಾಭ್ಯಾಸ ಮಾಡಿದವರು. ಅನೇಕ ಕಛೇರಿಗಳಲ್ಲಿ ಹಾರ್ಮೋನಿಯಂ ಸಾಥಿ ನೀಡಿದ ಹೆಗ್ಗಳಿಕೆ ಇವರದು. ಚಿತ್ರಕಲೆಯನ್ನು ಸತೀಶ್ ಯಲ್ಲಾಪುರ ಅವರಲ್ಲಿ ಕಲಿತಿದ್ದು ಇದೀಗ ಗೂಂಜನ್ ಕಲಾಕೇಂದ್ರದಲ್ಲಿ ಚಿತ್ರಕಲಾ ತರಗತಿಯನ್ನೂ ನಡೆಸುತ್ತಾರೆ.

ನಾಗರಾಜ ಹೆಗಡೆ ತಬಲಾ ಶಿಕ್ಷಕ. ಇವರೂ ತಬಲಾದಲ್ಲಿ ವಿದ್ವತ್ ಮಾಡಿದ್ದು, ನಾಡಿನ ಅನೇಕ ಹಿರಿಯ ಕಲಾವಿದರಿಗೆ ತಬಲಾ ಸಾಥಿ ನೀಡಿದ್ದಾರೆ. ಇವರು ಗೂಂಜನ್ ಕಲಾ ಕೇಂದ್ರದಲ್ಲಿ ಹಲವಾರು ಮಕ್ಕಳಿಗೆ ತಬಲಾ ಹೇಳಿಕೊಡುತ್ತಿದ್ದಾರೆ.`ಇದೇ ಸಂಗೀತ ಶಾಲೆಯಲ್ಲಿ ಕಲಿಯುತ್ತಿರುವ ಸೌಮ್ಯಾ ಪ್ರಸಾದ್, ಶರತ್ ಮಂಜಿತ್ತಾಯ, ಸುಶೀಲ ನಾಡಿಗೇರ್, ಅಂಜಲಿ ಪೈ, ದೀಪ್ತಿ ಕುಲಕರ್ಣಿ, ವಿವೇಕ್, ನಾಗೇಂದ್ರ ಭಟ್ ಮುಂತಾದವರು ಸ್ವತಂತ್ರವಾಗಿ ಕಛೇರಿ ಕೊಡುವಷ್ಟು ಪಳಗಿದ್ದು ಸಾಕಷ್ಟು ಕಛೇರಿಗಳನ್ನೂ ನೀಡಿದ್ದಾರೆ. ಇದೇ ಸಂಗೀತ ಶಾಲೆಯಲ್ಲಿ ಕಲಿಯುತ್ತಿರುವ ಅಂಜನಾ ಪದ್ಮನಾಭನ್, ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಐದನೇ ತರಗತಿ ವಿದ್ಯಾರ್ಥಿನಿ.

ಅಂಜನಾ ಸುಮಾರು ಹತ್ತು ತಿಂಗಳ ಕಾಲ ವಿದುಷಿ ಅಖಿಲಾ ಭೂಪತಿ ಬಳಿ ಕರ್ನಾಟಕ ಸಂಗೀತವನ್ನೂ ಕಲಿತಿದ್ದಾಳೆ. ಅದಾಗಿ ಕಳೆದ ಐದು ವರ್ಷಗಳಿಂದ ಗೂಂಜನ್ ಸಂಗೀತ ಶಾಲೆಯಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದಾಳೆ. ರಾಷ್ಟ್ರಮಟ್ಟ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲೂ ಈಕೆ ಮಿಂಚಿದ್ದಾಳೆ' ಎಂದು ವಿವರ ನೀಡುತ್ತಾರೆ ಪಂ. ಎಂ.ವಿ. ಹೆಗಡೆ.ವಿಳಾಸ: ಎಂ.ವಿ. ಹೆಗಡೆ, ಗೂಂಜನ್ ಕಲಾಕೇಂದ್ರ, 11ನೇ ಮುಖ್ಯರಸ್ತೆ, ನಾಲ್ಕನೇ ಟಿ ಬ್ಲಾಕ್, ಪ್ರಧಾನ ಅಂಚೆ ಕಚೇರಿ ಸಮೀಪ, ಜಯನಗರ, ಬೆಂಗಳೂರು. ಫೋನ್: 94487 80601.

ಸೆಳೆದ `ಸ ರೆ ಗ ಮ' ನಾದ

`ಮೂರು ವರ್ಷದ ಪುಟ್ಟ ಮಗುವಾಗಿರುವಾಗಲೇ ಶ್ಲೋಕ ಹೇಳಲಾರಂಭಿಸಿದೆ. ಅಲ್ಲಿಂದ ಸಂಗೀತ ಕಲಿಯುವ ಆಸೆ ಉಂಟಾಗಿ ಅಮ್ಮನ ಬಳಿ ಕೇಳಿದಾಗ ಅಮ್ಮ ಗೂಂಜನ್ ಕಲಾಕೇಂದ್ರಕ್ಕೆ ಕರೆದುಕೊಂಡು ಹೋದರು. ಅಲ್ಲಿ ನನ್ನಂತೇ ಇರುವ ಪುಟಾಣಿಗಳು `ಸರೆಗಮಪದನಿ' ಹೇಳುವಾಗ ಮತ್ತಷ್ಟು ಖುಷಿಯಾಯಿತು. ಆಗಲೇ ಅಲ್ಲಿ ಸಂಗೀತಕ್ಕೆ ಸೇರಿದೆ.

ಕಳೆದ ಮೂರು ವರ್ಷಗಳಿಂದ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದೇನೆ. ಅನೇಕ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದೇನೆ..' ಎನ್ನುತ್ತಾ ತನ್ನ ಸಂಗೀತದ ಆಸಕ್ತಿಯನ್ನೂ, ಆರಂಭವನ್ನೂ ವಿವರಿಸುತ್ತಾಳೆ ಪುಟಾಣಿ ಅಂಜಲಿ ಪೈ.ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಮೂರನೇ ತರಗತಿ ಕಲಿಯುತ್ತಿರುವ ಅಂಜಲಿ ಪೈ ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ಹಿಂದೂಸ್ತಾನಿ ಸಂಗೀತದ ಜತೆಗೆ ಸುಗಮ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಈಗಾಗಲೇ ರಿಯಾಲಿಟಿ ಶೋ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿಯೂ ಭಾಗವಹಿಸಿರುವ ಅಂಜಲಿ ಅನೇಕ ಬಹುಮಾನಗಳನ್ನೂ ಪಡೆದಿದ್ದಾಳೆ.

ಛೋಟಾ ಖ್ಯಾಲ್ ಹಾಡಲು ಇಷ್ಟ'

`ಹಿಂದೂಸ್ತಾನಿ ಸಂಗೀತದ ಛೋಟಾಖ್ಯಾಲ್ ಹಾಡುವುದೆಂದರೆ ನನಗೆ ತುಂಬ ಇಷ್ಟ. ನಮ್ಮದೇ ಆದ ಒಂದು ಸ್ವತಂತ್ರ ಶೈಲಿಯನ್ನು ರೂಢಿಸಿಕೊಳ್ಳಿ ಎಂದು ನನ್ನ ಗುರು ಎಂ.ವಿ.ಹೆಗಡೆ ಅವರು ಹುರಿದುಂಬಿಸುತ್ತಾರೆ. ಶಾಸ್ತ್ರೀಯ ಹಾಡುಗಾರಿಕೆ ಜತೆಗೆ ಕಳೆದ ಒಂದು ವರ್ಷದಿಂದ ತಬಲಾವನ್ನೂ ಅಭ್ಯಾಸ ಮಾಡುತ್ತಿದ್ದೇನೆ' ಎನ್ನುತ್ತಾರೆ ಕಳೆದ ನಾಲ್ಕು ವರ್ಷಗಳಿಂದ ಸಂಗೀತ ಕಲಿಯುತ್ತಿರುವ ಸಾಫ್ಟ್‌ವೇರ್ ಎಂಜಿನಿಯರ್ ಶರತ್ ಮಂಜಿತ್ತಾಯ.`ನಾನು ಕಳೆದ ನಾಲ್ಕು ವರ್ಷಗಳಿಂದ ಈ ಸಂಗೀತ ಶಾಲೆಯಲ್ಲಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದು, ಸಂಗೀತವನ್ನು ಮಾನಸಿಕ ನೆಮ್ಮದಿ ಮತ್ತು ಖುಷಿಗಾಗಿ ಕಲಿಯುತ್ತಿದ್ದೇನೆ. ನಾನು ಓದಿದ್ದು ಕಂಪ್ಯೂಟರ್ ಎಂಜಿನಿಯರಿಂಗ್, ಸದ್ಯ ಮೈಂಡ್‌ಟ್ರೀ ಕನ್ಸಲ್ಟೆನ್ಸಿ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.

ನಮ್ಮ ಮನೆಯಲ್ಲಿ ಸಂಗೀತದ ಯಾವುದೇ ಹಿನ್ನೆಲೆಯಿರದಿದ್ದರೂ ಸಂಗೀತದ ಮೇಲೆ ಆಸಕ್ತಿಯಿಂದಾಗಿ ಗುರು ಎಂ.ವಿ. ಹೆಗಡೆ ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದೇನೆ' ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.