ಗುರುವಾರ , ಫೆಬ್ರವರಿ 25, 2021
27 °C

ಪರಾಕು ಪಂಪು!

-ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಪರಾಕು ಪಂಪು!

ಸೌಮ್ಯ ಸ್ವಭಾವದ ಮಗ ಚಿತ್ರರಂಗ ಪ್ರವೇಶಿಸಿದರೆ ಹಳ್ಳ ಹಿಡಿಯುತ್ತಾನೆ ಎಂಬ ಆತಂಕ. ಮನೆಯವರ ಜತೆ ಹೆಚ್ಚು ಮಾತನಾಡದವನು ಚಿತ್ರಯಾನದಲ್ಲಿ ಯಶಸ್ಸು ಸಾಧಿಸುವುದಾದರೂ ಹೇಗೆ ಎನ್ನುವ ಅಳುಕು. ಎಷ್ಟೇ ಮನವೊಲಿಸಿ ಮಣಿಸಲು ಯತ್ನಿಸಿದರೂ ಹುಡುಗ ಬಗ್ಗದಿದ್ದಾಗ ಕೊನೆಗೆ ಪೋಷಕರು ಒಡ್ಡಿದ್ದು- `ಸಿನಿಮಾಗೆ ಹೋದರೆ ಮದುವೆ ಮಾಡುತ್ತೀವಿ' ಎನ್ನುವ ಬೆದರಿಕೆ.  ಆದರೆ ಕೊನೆಗೂ ಗೆದ್ದಿದ್ದು ಆ ಹುಡುಗನ ಹಟ.`ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿಲ್ ಅವರ ಬದುಕಿನಲ್ಲಿ ಇಂತಹ ಹಲವು ಸಿಂಪಲ್ ಸ್ಟೋರಿಗಳಿವೆ. ಆ ಸ್ಟೋರಿಗಳಲ್ಲಿನ ಖುಷಿ, ಬೇಸರ ಇತ್ಯಾದಿ ಅನುಭವಗಳೇ ಅವರಲ್ಲಿ ಹೊಸತನ ಮೂಡಿಸುತ್ತಿವೆ. ಆ ಹೊಸತನದ ಮೊದಲ ಪ್ರತಿಬಿಂಬ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'. ಕಲಾತ್ಮಕ ಮನಸ್ಸಿನ ಸುನಿಲ್ ಈಗ ಶ್ರೀನಗರ ಕಿಟ್ಟಿ ಅವರನ್ನು ಮುಖ್ಯಪಾತ್ರಕ್ಕೆ ಆರಿಸಿ `ಬಹುಪರಾಕ್' ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರ ವ್ಯಾಪಾರಿ ದೃಷ್ಟಿಕೋನದ್ದಾದರೂ ಕಲಾತ್ಮಕ ಟಚ್ ನೀಡುವ ಯತ್ನವಿದೆಯಂತೆ. ನಿವೃತ್ತ ಸಬ್‌ಇನ್‌ಸ್ಪೆಕ್ಟರ್ ಪುತ್ರ ಸುನಿಲ್ ಓದಿದ್ದು ಬಿಎಸ್.ಸಿ ಬಯೋಟೆಕ್. ವ್ಯಾಸಂಗದ ನಂತರ ಒಂದೂವರೆ ವರ್ಷ ಮೆಡಿಕಲ್ ರೆಪ್ ಮತ್ತು ಖಾಸಗಿ ಕಂಪೆನಿಗಳಲ್ಲಿ ಸೇಲ್ಸ್ ಮ್ಯೋನೇಜರ್ ಆಗಿ ಅನುಭವ ಪಡೆದರೂ ಚಿತ್ರರಂಗಕ್ಕೆ ಸೆಳೆದದ್ದು ಅವರ ಬರವಣಿಗೆ. ಬಾಲ್ಯದ ದಿನಗಳಲ್ಲಿಯೇ ಕಥೆ, ಕವಿತೆ ಬರೆಯುವ ಹವ್ಯಾಸವುಳ್ಳ ಸುನಿಲ್‌ಗೆ ವೇದಿಕೆ ಎಂದರೆ ಭಯ. ಕಾಲೇಜು ದಿನಗಳಲ್ಲಿ ಸಿನಿಮಾ ಹಾಡುಗಳನ್ನು ಬರೆಯುವ ತುಡಿತವಿತ್ತು.2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸುನಿಲ್ ಮೊದಲು ಆಕ್ಷನ್, ಕಟ್ ಹೇಳಿದ್ದು ನಿರ್ದೇಶಕ ದಿನೇಶ್ ಬಾಬು ಅವರ ಬಳಿ. ಬಾಬು ಅವರ `ಜನುಮ ಜನುಮ' (ಬಿಡುಗಡೆಯಾಗಿಲ್ಲ) ಚಿತ್ರದ ಸಹ ನಿರ್ದೇಶಕ. ನಂತರ `ಸ್ಕೂಲ್ ಮಾಸ್ಟರ್', `ಜನುಮದ ಗೆಳತಿ', `ಜನ್ಮಾ', `ತಾರೆ' ಚಿತ್ರಗಳ ಸಹ ನಿರ್ದೇಶನದ ಮೂಲಕ ಪಕ್ವವಾಗುತ್ತಾ ಸಾಗಿದರು. ಸಹ ನಿರ್ದೇಶನದ ಜತೆ ಜತೆಯಲ್ಲಿಯೇ ತಮ್ಮ ಸುತ್ತಮುತ್ತಲಿನ ಸನ್ನಿವೇಶಗಳನ್ನು ಕಿರುಚಿತ್ರಗಳಲ್ಲಿ ಹಿಡಿದಿಟ್ಟರು. `ನನ್ನ ನಾ ಕಂಡಂತೆ', `ಸೂಸೈಡ್', `ಸ್ವೀಟ್ ಹಾರ್ಟ್', `ಹೆಡ್‌ಲೈನ್' ಮತ್ತಿತರ ಕಿರುಚಿತ್ರಗಳು ಅವರ ಕ್ರಿಯಾಶೀಲ ಮನಸ್ಸಿನ ಪ್ರತೀಕಗಳು. `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿದ್ಧವಾಗಿದ್ದು `ಮೈರಾವಣ' ನಾಟಕದ ಪ್ರಭಾವದಿಂದ. ರಾವಣ ಸೀತೆಯನ್ನು ಅಪಹರಿಸಲು ಋಷಿಯ ವೇಷಕ್ಕೆ ಪರಕಾಯ ಪ್ರವೇಶ ಮಾಡಿದಂತೆ ಎರಡು ಪಾತ್ರಗಳ ಮೂಲಕ ಮತ್ತೆರಡು ಪಾತ್ರಗಳನ್ನು ಸೃಷ್ಟಿಸುವ ಆಲೋಚನೆ ಸುನಿಲ್ ಅವರಲ್ಲಿ ಮೊಳೆಯಿತು.ರೀಮೇಕ್ ಚಿತ್ರ ಸಂಸ್ಕೃತಿಯನ್ನು ವಿರೋಧಿಸುವ ಸುನಿಲ್ ಅವರಿಗೆ ಸೃಜನಶೀಲವಾಗಿಯೇ ಹೊಸ ಕಥೆಗಳನ್ನು ಕಟ್ಟುವ ಉತ್ಸಾಹ. `ಖುಷಿಖುಷಿಯಲ್ಲಿ', `ಗತವೈಭವ' ಎಂಬ ಚಿತ್ರಗಳಿಗೆ ಈಗಾಗಲೇ ಕಥೆ ಹೆಣೆದಿದ್ದಾರೆ. `ಗೆಳತಿಗೊಂದು ಪತ್ರ' ಎನ್ನುವ ಕಥೆ ಆಕಾರ ಪಡೆದಿದ್ದು, ಶಿವರಾಜ್ ಕುಮಾರ್‌ಗೆ ಪತ್ರ ಬರೆಯುವ ಪಾತ್ರ ನೀಡುವ ಯೋಚನೆ ಇದೆಯಂತೆ.`ಲವ್ ಸ್ಟೋರಿ'ಯ ಯಶಸ್ಸು ಮತ್ತು ಚಿತ್ರ ನಿರ್ಮಾಣಕ್ಕೆ ಎದುರಿಸಿದ ಸಮಸ್ಯೆಗಳು ಅವರನ್ನು ನಿರ್ದೇಶಕನ ಪಾತ್ರದ ಜತೆಗೆ ನಿರ್ಮಾಪಕನಾಗಲೂ ಪ್ರೇರೇಪಿಸಿವೆ. ದೇವಸ್ಥಾನದಲ್ಲಿ ಸಿಕ್ಕ ಪ್ರಸಾದವನ್ನು ಅಲ್ಲಿಯೇ ಹಂಚಬೇಕು ಎಂಬಂಥ  ಮನಸ್ಥಿತಿ ಅವರದ್ದು. `ಬಜಾರ್', `ಉಳಿದವರು ಕಂಡಂತೆ' ಚಿತ್ರಗಳಿಗೆ ಹಣ ಹೂಡುತ್ತಿದ್ದಾರೆ. `ಬಜಾರ್' ಕಡಿಮೆ ಬಜೆಟ್‌ನ ಚಿತ್ರ. `ಉಳಿದವರು ಕಂಡಂತೆ' ಭಾರಿ ಮೊತ್ತ ಅಪೇಕ್ಷಿಸುವ ಚಿತ್ರ. ಕಥನ ಕಲೆಯನ್ನು ಚೆನ್ನಾಗಿ ಬಲ್ಲ ಸುನಿಲ್‌ಗೆ ಕಡಿಮೆ ಹಣದಲ್ಲಿ ಉತ್ತಮ ಚಿತ್ರಗಳನ್ನು ನೀಡುವ ಬಯಕೆ. ಚಿಕ್ಕದಾಗಿರುವ, ವಿಶಿಷ್ಟವಾದ, ಜನರಲ್ಲಿ ಆಪ್ತಭಾವ ಮೂಡಿಸುವ ಕಥೆಗಳನ್ನು ಹೊಸೆದು ಚಿತ್ರ ಕಟ್ಟುವ ತುಡಿತ.  `ಹೊಸತನದ ಕಥೆಗಳನ್ನು ಜನ ಸ್ವೀಕರಿಸುತ್ತಾರೆ. ಸ್ಟಾರ್ ನಟರ ನಾಯಕತ್ವದಲ್ಲಿ ಸಿನಿಮಾ ಮಾಡುವುದು ನನ್ನ ಕನಸಲ್ಲ. ಕಥೆಯಲ್ಲಿ ಹೊಸತನವಿರಬೇಕು' ಎನ್ನುವ ಸುನಿಲ್‌ಗೆ ತಮ್ಮ ಚಿತ್ರಗಳನ್ನು ರಾಜ್ಯದ ಗಡಿದಾಟಿಸುವ ಆಸೆ. `ನಮ್ಮ ಸಿನಿಮಾಗಳು ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುವುದರಿಂದ ಹೆಚ್ಚು ಆದಾಯ ಸಾಧ್ಯ. ಸಿನಿಮಾವನ್ನು ಸಿದ್ಧಪಡಿಸಿದರೂ ಜನರಿಗೆ ಸೂಕ್ತವಾಗಿ ತಲುಪಿಸಲು ಸಾಧ್ಯವಾಗುವುದಿಲ್ಲವಲ್ಲ' ಎಂದು ಬೇಸರ ತೋಡಿಕೊಳ್ಳುವ ಅವರು ಖುದ್ದು ವಿತರಕರಾಗಲು ನಿರ್ಧರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.