ಭಾನುವಾರ, ಏಪ್ರಿಲ್ 18, 2021
33 °C

ಪರಿಶಿಷ್ಟರ ಸಭೆಗೆ ಜನಪ್ರತಿನಿಧಿಗಳ ಗೈರು: ಆಕ್ರೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗೆ ಜನಪ್ರತಿನಿಧಿಗಳು ಗೈರು ಹಾಜರಿ, ಪರಿಶಿಷ್ಟ ಮುಖಂಡರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.ಸಭೆ ನಡೆಯುವ ಬಗ್ಗೆ ನ. 8ರಂದೇ ಜನಪ್ರತಿನಿಧಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಆದರೂ, ಜನಪ್ರತಿನಿಧಿಗಳು ಸಭೆಗೆ ಗೈರು ಹಾಜರಾಗಿದ್ದಾರೆ. ಕಳೆದ ಸಭೆಯಲ್ಲೂ ಇದೇ ರೀತಿ ಆಗಿತ್ತು. ಆಗ ಸಭೆಯನ್ನು ಮುಂದೂಡಲಾಗಿತ್ತು. ಜನಪ್ರತಿನಿಧಿಗಳು ಪ್ರತಿಬಾರಿಯೂ ನಿರ್ಲಕ್ಷ್ಯ ವಹಿಸಿದಲ್ಲಿ ಪರಿಶಿಷ್ಟರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದು ಮುಖಂಡರು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರನ್ನು ಕಟುವಾಗಿ ಪ್ರಶ್ನಿಸಿದರು.ಜಿಲ್ಲಾಧಿಕಾರಿ ಪಟ್ಟಣಶೆಟ್ಟಿ ಮಾತನಾಡಿ, ಜನಪ್ರತಿನಿಧಿಗಳ ಗೈರು ಹಾಜರಿ ಕುರಿತು ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತರುತ್ತೇನೆ. ನ. 3ರಂದು ಸಭೆ ನಿಗದಿಯಾಗಿತ್ತು. ಆಗ ಸಿಎಂ ಅವರ ಕಾರ್ಯಕ್ರಮದಿಂದಾಗಿ ಸಭೆ ಮುಂದೂಡಲಾಗಿತ್ತು. ಈ ಬಾರಿ ನ. 17ರಂದು ಸಭೆ ನಿಗದಿಪಡಿಸಲಾಗಿತ್ತು.

 

ಈ ಬಾರಿಯೂ ಸಿಎಂ ಭೇಟಿ ನಿಮಿತ್ತ ಸಭೆಯನ್ನು 15ರಂದೇ ಕರೆಯಲಾಗಿದೆ. ಇದಕ್ಕೆ ಮುಖಂಡರು ಸಹಕರಿಸಬೇಕು. ಜನಪ್ರತಿನಿಧಿಗಳ ಗೈರುಹಾಜರಿಯ ಕಾರಣದಿಂದಾಗಿ ಸಭೆ ಪದೇಪದೇ ಮುಂದೂಡುವುದು ಸಲ್ಲ. ಸಭೆ ಮುಂದೂಡುವುದರಿಂದ ಸಮಸ್ಯೆಗಳು ಬಾಕಿ ಉಳಿಯುತ್ತವೆ. ಅಲ್ಲದೇ, ಈ ಸಭೆಗೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಾಗಿದ್ದಾರೆ ಎಂದು ಸಮಜಾಯಿಷಿ ನೀಡಿದರು.ಇದಕ್ಕೆ ಮುಖಂಡರು ಒಪ್ಪಿಗೆ ಸೂಚಿಸಿದ ಮೇರೆಗೆ ಸಭೆ ನಡೆಸಲಾಯಿತು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪಿ.ಕೆ. ಮಹಾಂತೇಶ್ ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ಜ. 1ರಿಂದ ಸೆ. 30, 2012ರ ತನಕ ಒಟ್ಟು 34 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪೊಲೀಸರು 24 ಪ್ರಕರಣಗಳನ್ನು ತನಿಖೆ ಮಾಡಿ ವರದಿ ನೀಡಿದ್ದಾರೆ. 10 ಪ್ರಕರಣಗಳು ತನಿಖಾ ಹಂತದಲ್ಲಿವೆ. 22 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಒಟ್ಟು 37 ವ್ಯಕ್ತಿಗಳಿಗೆ ರೂ 9ಲಕ್ಷ 50 ಸಾವಿರ ಮೊತ್ತ ಪರಿಹಾರ ನೀಡಲಾಗಿದೆ. ನ್ಯಾಯಾಲಯದಲ್ಲಿ ಜ. 1ರಿಂದ ಸೆ. 30ರತನಕ ಒಟ್ಟು 68 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. 18 ಪ್ರಕರಣಗಳು ಖುಲಾಸೆಯಲ್ಲಿ ಅಂತ್ಯಗೊಂಡಿವೆ. 19 ಪ್ರಕರಣಗಳು ವಿಲೇವಾರಿಯಾಗಿವೆ ಇನ್ನು 49 ಪ್ರಕರಣಗಳು ಬಾಕಿ ಇವೆ. ಸೆಪ್ಟೆಂಬರ್ ತಿಂಗಳಲ್ಲಿ ಐಜಿ ಮಟ್ಟದಲ್ಲಿ 4 ಪ್ರಕರಣಗಳು, ಸರ್ಕಾರಕ್ಕೆ 1 ಪ್ರಕರಣ, 6 ಪ್ರಕರಣ ಚಾರ್ಚ್‌ಶೀಟ್ ಆಗಿವೆ ಹಾಗೂ ಮೂರು ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.ದಲಿತ ಸಂಘರ್ಷ ಸಮಿತಿ (ಬಿ. ಕೃಷ್ಣಪ್ಪ ಬಣ) ರಾಜ್ಯ ಸಂಘಟನಾ ಸಂಚಾಲಕ ಆಲೂರು ನಿಂಗರಾಜ್ ಮಾತನಾಡಿ, ಜಿಲ್ಲೆಯ ಆಲೂರು, ಬೇವಿನಹಳ್ಳಿ ತಾಂಡಾ, ನಗತಿಕಟ್ಟೆ, ಫಣಿಯಾಪುರ ಸೇರಿದಂತೆ ಇತರೆಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ದೂರಿದರು.ಸುಪ್ರೀಂಕೋರ್ಟ್ ನಿರ್ದೇಶನದಂತೆ ಸುರಕ್ಷಿತ ವಲಯದಲ್ಲಿ ಗಣಿಗಾರಿಕೆ ನಡೆಸಬೇಕು. ಜಿಲ್ಲೆಯಲ್ಲಿ ಹರಿಹರ ಹೊರತುಪಡಿಸಿ ಉಳಿದ 5 ತಾಲ್ಲೂಕುಗಳ ಸುರಕ್ಷಿತವಲಯದಲ್ಲಿ ಗಣಿಗಾರಿಕೆ ನಡೆಸಬಹುದು. ಈ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಕೂಡಾ ಆಗಿದೆ. ಜಿಲೆಯಲ್ಲಿ ಒಟ್ಟು 70 ಸ್ಟೋನ್ ಕ್ರಷರ್ಸ್‌ಗಳಿವೆ. ಅವರಿಗೆ ಈಗಾಗಲೇ ಸುರಕ್ಷಿತವಲಯಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಕ್ರಷರ್ಸ್‌ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ವಿವರಿಸಿದರು.ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಬ್ ಇನ್‌ಸ್ಪೆಕ್ಟರ್ ಶಮೀಮ್ ಪಾಷಾ, ರೇಷ್ಮಾ, ಷಡಾಕ್ಷರಪ್ಪ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಲ್ಲೇಶ್, ಸುರೇಶ್ ದೊಡ್ಮನಿ, ರಮೇಶ್‌ನಾಯ್ಕ, ಬಿ.ಎಂ. ಸತೀಶ್, ಹಾಜರಿದ್ದರು.ಜಾತಿ ಪ್ರಮಾಣಪತ್ರ: ಕಾರ್ಯಾಗಾರಕ್ಕೆ ಸೂಚನೆ

ದಾವಣಗೆರೆ: ಜಾತಿ ಪ್ರಮಾಣಪತ್ರ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡಲು ಒಂದು ದಿನದ ಕಾರ್ಯಾಗಾರ ಏರ್ಪಡಿಸಲು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪಿ.ಕೆ. ಮಹಾಂತೇಶ್ ಅವರಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿರುವವ ಸಂಖ್ಯೆ ಹೆಚ್ಚಾಗಿದೆ. ತಹಶೀಲ್ದಾರ್ ಸೂಕ್ತ ಪರಿಶೀಲನೆ ನಡೆಸಿ, ಪ್ರಮಾಣಪತ್ರ ನೀಡಬೇಕು. ವ್ಯಕ್ತಿಯ ಮೂಲ ತಾಲ್ಲೂಕಿನಲ್ಲೇ ಪ್ರಮಾಣಪತ್ರ ಪಡೆಯಬೇಕು. ಅಲೆಮಾರಿಗಳಿಂದಾಗಿ ಪ್ರಮಾಣಪತ್ರದಲ್ಲಿ ಹಲವು ಗೊಂದಲವುಂಟಾಗುತ್ತಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಬ್ ಇನ್‌ಸ್ಪೆಕ್ಟರ್ ಶಮೀಮ್ ಪಾಷಾ ಸಭೆಯ ಗಮನಕ್ಕೆ ತಂದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸರ್ಕಾರದ ಸುತ್ತೋಲೆಯಂತೆಯೇ ಜಾತಿ ಪ್ರಮಾಣಪತ್ರ ನೀಡಬೇಕು. ಈ ಕುರಿತು ಅಧಿಕಾರಿಗಳಿಗೆ ತಿಳಿವಳಿಕೆ ನೀಡಲು ಕಾರ್ಯಾಗಾರ ನಡೆಸಲಾಗುವುದು. ಇದರಿಂದ ಸುಳ್ಳು ಪ್ರಮಾಣಪತ್ರ ಪಡೆಯುವುದನ್ನು ತಪ್ಪಿಸಬಹುದು ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.