ಸೋಮವಾರ, ಜನವರಿ 20, 2020
26 °C
facebook ಟೂರಿಸಂ

ಪರಿಸರ ಪ್ರವಾಸೋದ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜವಾಬ್ದಾರಿ ಅರಿತ ಚಾರಣಿಗರು ನಾವು. ಪ್ರಕೃತಿಯ ಅಂದ ಕೆಡಿಸಲ್ಲ, ಪ್ಲಾಸ್ಟಿಕ್ ಎಸೆಯಲ್ಲ. ನಮ್ಮ ತಂಡ - ಕಾಡಿನ ಮೂಲೆ ಮೂಲೆಯನ್ನೂ ಅರಿತಿರುವ, ಕಾಡಿನ ಮಧ್ಯೆಯೇ ಜೀವಿಸುವ -ಓಬಯ್ಯ ಜೊತೆ..’ಸಿವಿಲ್ ಎಂಜಿನಿಯರ್ ಪ್ರಮೋದ್ ಪೈಲೂರು ಅವರ ಈ ಸ್ಟೇಟಸ್ ಮೆಸೇಜ್‌ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ಫೇಸ್‌ಬುಕ್ ಮೂಲಕ ಛಾಯಾಗ್ರಹಣ ಹಾಗೂ ಪರಿಸರ ಪ್ರವಾಸೋದ್ಯಮ ಪರಿಚಯಿಸುತ್ತಿರುವ ಪ್ರಮೋದ್ ಮತ್ತು ಗೆಳೆಯರಿಗೆ ಈ ಪ್ರತಿಕ್ರಿಯೆಗಳು ‘ಎನರ್ಜಿ’ ತುಂಬುತ್ತಿವೆ, ಅಷ್ಟೇ ಆತಂಕಪಡುವಂತೆ ಮಾಡುತ್ತಿವೆ.‘ಫೇಸ್‌ಬುಕ್‌ನಲ್ಲಿ ಕಾಮೆಂಟ್‌ಗಳನ್ನು ನೋಡಿದಾಗ ಖುಷಿಯಾಗುತ್ತದೆ. ಒಂದು ರೀತಿ ಫೇಸ್‌ಬುಕ್ ಮೂಲಕ ನಮ್ಮೂರ ಪ್ರವಾಸಿ ತಾಣಗಳ ಪರಿಚಯ ಖುಷಿ ಕೊಡುತ್ತೆ. ಆದರೆ, ಆ ಚಿತ್ರ ನೋಡಿಕೊಂಡು, ಅಡ್ರಸ್ ಹಿಡಿದು, ಇಲ್ಲಿಗೆ ಬಂದು, ಪ್ಲಾಸ್ಟಿಕ್ ಚೀಲ, ಬಿಯರ್ ಬಾಟಲಿಗಳನ್ನು ಹಾಕಿ, ಇಡೀ ವಾತಾವರಣವನ್ನೇ ಹಾಳು ಮಾಡುತ್ತಾರಲ್ಲಾ ಎಂಬ ಭಯವೂ ಮತ್ತೊಂದೆಡೆ ಕಾಡುತ್ತದೆ’ ಎಂಬುದು ಪ್ರಮೋದ್ ಅಳಲು.ಸುಳ್ಯ ಸಮೀಪದ ದೊಡ್ಡ ತೋಟದ ನಿವಾಸಿ ಪ್ರಮೋದ್ ಪೈಲೂರು ‘ಖುಷಿ-ಆತಂಕ’ಗಳ ವೈರುಧ್ಯದ ನಡುವೆಯೇ ಫೇಸ್‌ಬುಕ್ ಮೂಲಕ ಎರಡು ವರ್ಷಗಳಿಂದ ಪಶ್ಚಿಮ ಘಟ್ಟ, ಚಾರ್ಮಾಡಿ, ಶಿರಾಡಿ ಘಾಟಿ ಪ್ರದೇಶಗಳ ಪರಿಸರ ತಾಣಗಳನ್ನು ಪರಿಚಯಿಸುತ್ತಿದ್ದಾರೆ. ಸಿವಿಲ್ ಎಂಜಿನಿಯರ್ ಆಗಿರುವ ಪ್ರಮೋದ್ ಮೂಲತಃ ಕೃಷಿಕರು. ಕೃಷಿ ಮಾಡಿಕೊಂಡೇ ಬಿಡುವಿನ ವೇಳೆಯಲ್ಲಿ ಪ್ರೀತಿಯ ಬುಲೆಟ್‌ನಲ್ಲಿ ಗುಡ್ಡ, ಬೆಟ್ಟ, ನದಿ, ಸರೋವರಗಳನ್ನು ಸುತ್ತಾಡುತ್ತಾರೆ. ಪರಿಸರ ಎಂದರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿ. ಛಾಯಾಗ್ರಹಣ ಆ ಪ್ರೀತಿಯ ಒಂದು ಭಾಗ. ಪರಿಸರ ಪ್ರಿಯ ಚಾರಣ ಇವರ ಹವ್ಯಾಸ. ಇದಕ್ಕಾಗಿ ‘ಚಾರ್ಮಾಡಿ’ ಎಂಬ ಪುಟ್ಟ ಚಾರಣ ತಂಡ ಕಟ್ಟಿಕೊಂಡಿದ್ದಾರೆ. ಜೈಮಿನಿ ಉಬರಡ್ಕ ವಿನ್ಯಾಸ, ಸುದೇಶ್ ನಾ ದೇರಾಜೆ, ಮೈತ್ರೀಯ ಎಂಬ ಗೆಳೆಯರು ತಂಡದಲ್ಲಿದ್ದಾರೆ. ಇವರೆಲ್ಲ ಗುಡ್ಡ-ಬೆಟ್ಟ, ನದಿ-ಕಾಡು ಸುತ್ತಾಡುತ್ತಲೇ ಅದ್ಭುತವೆನಿಸುವ ರಮ್ಯತಾಣಗಳನ್ನು ಕ್ಲಿಕ್ಕಿಸುತ್ತಾ, ಅಲ್ಲಿನ ಜೀವವೈವಿಧ್ಯವನ್ನು ದಾಖಲಿಸುತ್ತಾರೆ. ಕ್ಲಿಕ್ಕಿಸಿದ ಚಿತ್ರಗಳನ್ನು ಫೇಸ್‌ಬುಕ್ ಅಕೌಂಟ್‌ಗೆ ಪೇರಿಸುತ್ತಾರೆ (ಅಪ್‌ಡೇಟ್). ಒಂದೊಂದು ಪ್ರವಾಸಿ ತಾಣದ ಬಗ್ಗೆಯೂ ಬರೆದಾಗ, ದೂರದ ಊರುಗಳಿಂದ ನೂರಾರು ಪ್ರವಾಸಿಗರು ಆ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಉಳಿದವರಿಗೆ ಆ ತಾಣಗಳನ್ನು ಪರಿಚಯಿಸುತ್ತಾರೆ. ‘ಇದೆಲ್ಲ ಸರಿ, ಆದರೆ ಇಂಥ ಜಾಲತಾಣಗಳಿಗೆ ಐಟಿ-ಬಿಟಿ ಉದ್ಯೋಗಿಗಳೇ ಹೆಚ್ಚು ಭೇಟಿ ನೀಡುತ್ತಾರೆ. ಇವರಲ್ಲಿ ಶೇ. 3 ರಿಂದ 5ರಷ್ಟು ಮಂದಿಗೆ ಮಾತ್ರ ಪರಿಸರ ಕಾಳಜಿ. ಉಳಿದವರಿಗೆ ಇವೆಲ್ಲ ಮೋಜಿನ ತಾಣಗಳು. ಅಂಥ ಪ್ರವಾಸಿಗರೆಲ್ಲ, ಹಸಿರು ತಾಣಗಳಲ್ಲಿ ಪ್ಲಾಸ್ಟಿಕ್ ಎಸೆದು, ಮದ್ಯದ ಬಾಟಲಿಗಳನ್ನು ಚೆಲ್ಲಾಡಿ, ವಾತಾವರಣವನ್ನೇ ಹಾಳು ಮಾಡುತ್ತಾರೆ. ಹೀಗಾಗಿ ಫೇಸ್‌ಬುಕ್‌ನಲ್ಲಿ ತಾಣಗಳ ಪೂರ್ಣ ವಿವರ ಬರೆಯುವುದನ್ನು ಬಿಟ್ಟಿದ್ದೇನೆ’ ಎನ್ನುತ್ತಾರೆ ಪ್ರಮೋದ್.‘ಕುಮಾರ ಪರ್ವತ, ಚಾರ್ಮಾಡಿ ಘಾಟಿ, ಶಿರಾಡಿ ಘಾಟಿಯಲ್ಲಿರುವ ಅಪರೂಪದ ತಾಣಗಳ ಚಿತ್ರಗಳನ್ನು ಪ್ರಕಟಿಸಿದಾಗ ‘ವಾರಂತ್ಯದ ಪ್ರವಾಸಿಗರ’ ಸಂಖ್ಯೆಯೇನೋ ಹೆಚ್ಚಾಯಿತು. ಆದರೆ ಆ ತಾಣಗಳಲ್ಲಿ ಮಾಡಿದ ಅನಾಹುತಗಳು ಬಹಳ ನೋವುಂಟುಮಾಡಿತು. ಬಾಟಲಿ, ಪ್ಲಾಸ್ಟಿಕ್ ಚೀಲ, ಪೇಪರ್ ಬಳಕೆ ಅನಿವಾರ್ಯ, ನಿಜ. ಆದರೆ ಅವುಗಳನ್ನು ವಿಲೇವಾರಿ ಮಾಡುವುದು ಪ್ರವಾಸಿಗರದ್ದೇ ಜವಾಬ್ದಾರಿ ಎಂಬುದು ಗೊತ್ತಾಗೇಕು ಎಂದು ಕಡ್ಡಿ ತುಂಡಾದಂತೆ ನುಡಿಯುತ್ತಾರೆ ಪ್ರಮೋದ್.‘ಪ್ರವಾಸಕ್ಕೆ ಹೋಗುವವರು ಖಾಲಿ ಚೀಲ ಕೊಂಡೊಯ್ದು, ಬಳಸಿ ಬಿಸಾಡಿದ ಎಲ್ಲ ವಸ್ತುಗಳನ್ನು ಕೈ ಚೀಲದಲ್ಲಿ ಸಂಗ್ರಹಿಸಿಕೊಂಡು ತಂದು, ಸಮೀಪದ ಪಟ್ಟಣಗಳಲ್ಲಿರುವ ಕಸದ ತೊಟ್ಟಿಗಳಲ್ಲಿ ಹಾಕಬೇಕು. ನಮ್ಮ ತಂಡ, ಈ ಕೆಲಸ ಮಾಡುತ್ತಿದೆ. ಫೇಸ್‌ಬುಕ್ ಮೂಲಕವೇ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಪ್ರಮೋದ್.ಸ್ಥಳೀಯವಾಗಿರುವ ಅರಣ್ಯ ಇಲಾಖೆ, ನಗರಸಭೆ, ಪುರಸಭೆಗಳಿರುವ ಪ್ರದೇಶದಲ್ಲಿ ತ್ಯಾಜ್ಯಗಳ ಸ್ವಚ್ಛತೆ ಸಾಧ್ಯವಾಗುತ್ತದೆ. ಆದರೆ ಮಾನವರಹಿತ (ಅನ್‌ಮ್ಯಾನ್ಡ್) ಅರಣ್ಯ ಪ್ರದೇಶಗಳಲ್ಲಿ ಇಂಥ ತ್ಯಾಜ್ಯಗಳಿದ್ದರೆ ಪ್ರಾಣಿಗಳಿಗೆ ಅಪಾಯವಾಗುತ್ತದೆ. ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎನ್ನುವುದು ಅವರ ಕಾಳಜಿ. ಪ್ರಮೋದ್ ಪೈಲೂರು ಫೇಸ್ ಬುಕ್ ಅಕೌಂಟ್; http://www.pramodpailoor.com, pramodpailoor@facebook.com

 

ಪ್ರತಿಕ್ರಿಯಿಸಿ (+)