ಗುರುವಾರ , ಫೆಬ್ರವರಿ 25, 2021
17 °C
ವಿವಾದ ಪರಿಹಾರ ಸಂಕಲ್ಪ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಅಭಿಮತ

ಪರ್ಯಾಯ ವ್ಯವಸ್ಥೆಯಿಂದ ಪ್ರಕರಣ ತ್ವರಿತ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ಯಾಯ ವ್ಯವಸ್ಥೆಯಿಂದ ಪ್ರಕರಣ ತ್ವರಿತ ಇತ್ಯರ್ಥ

ಚಿತ್ರದುರ್ಗ: ನ್ಯಾಯಾಲಯದಲ್ಲಿ 10 ವರ್ಷ ಅಲೆದಾಡುವ ಬದಲು ಕೇವಲ 10 ದಿನದೊಳಗೆ ಪಂಚಾಯ್ತಿ, ಸಂಧಾನ, ಮಧ್ಯಸ್ಥಿಕೆ ಹಾಗೂ ಲೋಕ್‌ಅದಾಲತ್ ಮೂಲಕ ಎರಡು ಕಡೆಯವರು ಸಮಸ್ಯೆಗಳನ್ನು ಬಹುಬೇಗ ಬಗೆಹರಿಸಿಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಸಲಹೆ ನೀಡಿದರು.ನಗರದ ವಕೀಲರ ಜಿಲ್ಲಾ ಸಭಾಂಗಣದಲ್ಲಿ ಶನಿವಾರ ಅಂತರರಾಷ್ಟ್ರೀಯ ಪರ್ಯಾಯ ವಿವಾದ ಸಂಕಲ್ಪ ಕೇಂದ್ರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಪರ್ಯಾಯ ವಿವಾದ ಪರಿಹಾರ ಸಂಕಲ್ಪ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಸುಮಾರು 3.20 ಕೋಟಿ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ. ಮಿತಿಮೀರಿದ ಜನಸಂಖ್ಯೆ ಹಾಗೂ ಅತಿಯಾದ ಭ್ರಷ್ಟಾಚಾರವು ಇದಕ್ಕೆ ಕಾರಣವಾಗಿದೆ. ನಮ್ಮಲ್ಲಿ 10 ಸಾವಿರ ಪ್ರಕರಣಗಳಲ್ಲಿ 100 ಪ್ರಕರಣ ಮಾತ್ರ ಮಧ್ಯಸ್ಥಿಕೆ ಹಾಗೂ ರಾಜಿ ಸಂಧಾನದ ಮೂಲಕ ಹೊರಗಡೆ ಇತ್ಯರ್ಥವಾಗುತ್ತವೆ. ಆದರೆ, ಅಮೆರಿಕಾದಲ್ಲಿ 100ಕ್ಕೆ ಶೇ 95ರಷ್ಟು ಮಧ್ಯಸ್ಥಿಕೆಗಾರರ ಮೂಲಕ ಸಂಧಾನದಲ್ಲಿ ಪ್ರಕರಣಗಳು ರಾಜಿಯಾಗುವುದನ್ನು ಕಾಣಬಹುದು. ನಮ್ಮಲೂ ಕೂಡ ಈ ವ್ಯವಸ್ಥೆಗೆ ಹೊಂದಿಕೊಂಡು ಪರ್ಯಾಯವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.ಕೆಲವರು ಕೋಪದಿಂದ, ಇನ್ನು ಕೆಲವರು ದ್ವೇಷದಿಂದ ಕೋರ್ಟ್‌ಗಳಲ್ಲಿ ಪ್ರಕರಣ ದಾಖಲಿಸುತ್ತಾರೆ. ಇದರಿಂದಾಗಿ ನ್ಯಾಯಾಲಯದಲ್ಲಿ ಎರಡು ಕಡೆಯವರು ಬಹುಬೇಗ ಸೋಲನ್ನು ಒಪ್ಪಿಕೊಳ್ಳದ ಕಾರಣ ವರ್ಷಗಟ್ಟಲೇ ಮುಂದುವರಿಯುತ್ತಾ ಹೋಗುತ್ತದೆ. ಆದ್ದರಿಂದ ಪರ್ಯಾಯ ವ್ಯವಸ್ಥೆಯೊಂದೇ, ಉತ್ತಮ ಮಾರ್ಗ. ಈಗಾಗಲೇ ಪರ್ಯಾಯ ವ್ಯವಸ್ಥೆ ವಿಚಾರವಾಗಿ ಚರ್ಚೆಗಳು ನಡೆಯುತ್ತಿದ್ದು, ಅದರ ಮೂಲ ಅರ್ಥ ಮಾಡಿಕೊಂಡಾಗ ಮಾತ್ರ ಸಫಲತೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ್ ಹರೀಶ್ ಕುಮಾರ್ ಮಾತನಾಡಿ, ದೇಶದಲ್ಲಿ ಬ್ರಿಟಿಷರು ಪ್ರಾರಂಭಿಸಿದ ನ್ಯಾಯಾಂಗ ವ್ಯವಸ್ಥೆ ಮುಂದುವರಿಸಿಕೊಂಡು ಬಂದಿದೆ. ಇದರಿಂದಾಚೆಗೂ ಕೂಡ ನ್ಯಾಯ ಪಡೆಯಬಹುದು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಒಂದು ಸಮಸ್ಯೆಗೆ ನಾನಾ ರೀತಿಯ ಪರ್ಯಾಯ ವ್ಯವಸ್ಥೆ ಕೊಡಲು ಸಾಧ್ಯವಿದೆ. ಅದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.`ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಇತ್ಯರ್ಥವಾಗಲು ವಿಳಂಬ ಆಗುತ್ತಿದೆ ಎನ್ನುವುದಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿರುತ್ತವೆ. ಆದರೆ, ವಿಳಂಬವಾಗಲು ಸೂಕ್ತ ಕಾರಣಗಳನ್ನು ಮಾಧ್ಯಮದವರು ತಿಳಿದುಕೊಳ್ಳಬೇಕು. `ಪ್ರಕರಣ ಇತ್ಯರ್ಥ ವಿಳಂಬಕ್ಕೆ ಕಾರಣಗಳನ್ನೂ ಮಾಧ್ಯಮದಲ್ಲಿ ಪ್ರಕಟಿಸಬೇಕು' ಎಂದರು.`ಪರ್ಯಾಯ ವಿವಾದ ಪರಿಹಾರ ಸಂಕಲ್ಪ' ಕಾರ್ಯಕ್ರಮದ ಅಡಿ ಪಂಚಾಯ್ತಿ, ಸಂಧಾನ, ಮಧ್ಯಸ್ಥಿಕೆ ಹಾಗೂ ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲು ಎಡಿಆರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೋರ್ಟ್ ಮೆಟ್ಟಿಲೇರಿರುವವರು ಇಂಥ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಜಿಲ್ಲಾಧಿಕಾರಿ ಇಕ್ಕೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಐಸಿಎಡಿಆರ್‌ನ ಸಹಾಯಕ ಕಾರ್ಯದರ್ಶಿ ಸುಂದರೇಶ್ ಹಾಜರಿದ್ದರು. ವಕೀಲರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಅಶೋಕ್ ಸ್ವಾಗತಿಸಿದರು. ವಕೀಲರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವು ಯಾದವ್ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.