ಮಂಗಳವಾರ, ಏಪ್ರಿಲ್ 20, 2021
32 °C

ಪಾಕ್ ಸರಣಿ ಕಷ್ಟ ಆದರೂ ಆಡಲೇಬೇಕು: ದೋನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಸಾಕಷ್ಟು ಬಿಗುವಿನ ಅಂತರರಾಷ್ಟ್ರೀಯ ಕ್ರಿಕೆಟ್ ಕಾರ್ಯಕ್ರಮದ ನಡುವೆ ಈಗ ಪಾಕಿಸ್ತಾನ ವಿರುದ್ಧದ ಸರಣಿಯೂ ಸೇರಿಕೊಂಡಿದೆ. ಆದ್ದರಿಂದ ಕಷ್ಟವಾಗುವುದು ಸಹಜ. ಆದರೂ ಆಡಲೇಬೇಕು...

-ಹೀಗೆಂದು ಹೇಳಿದ್ದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ. ಶ್ರೀಲಂಕಾ ಪ್ರವಾಸಕ್ಕೆ ಹೊರಡುವ ಮುನ್ನ ಇಲ್ಲಿ ತಾಲೀಮು ನಡೆಸುತ್ತಿರುವ ಭಾರತ ತಂಡದ ಮಂಗಳವಾರದ ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಉತ್ತಮ ಪ್ರದರ್ಶನ ನೀಡಲೇಬೇಕು. ಅಂಥ ಮಹತ್ವದ ಸರಣಿ ಅದು. ಆದರೆ ಈಗಿರುವ ಕಾರ್ಯಕ್ರಮದ ನಡುವೆ ವಿರಾಮವೇ ಇಲ್ಲದಂತೆ ಮತ್ತೊಂದು ಮಹತ್ವದ ಹೋರಾಟಕ್ಕೆ ಸಜ್ಜಾಗುವುದು ದೊಡ್ಡ ಸವಾಲು ಎಂದು ವಿವರಿಸಿದರು `ಮಹಿ.

ಡಿಸೆಂಬರ್ ಹಾಗೂ ಜನವರಿಯಲ್ಲಿ ಪಾಕಿಸ್ತಾನದ ಎದುರು ಮೂರು ಏಕದಿನ ಹಾಗೂ ಎರಡು ಟ್ವೆಂಟಿ-20 ಪಂದ್ಯಗಳನ್ನು ಆಡುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರೂ `ಆಡಲೇಬೇಕು ಅನ್ಯಮಾರ್ಗವೇ ಇಲ್ಲ~ ಎಂದು ತಮ್ಮ ಅಸಹಾಯಕ ಸ್ಥಿತಿಯನ್ನು ಪದಗಳಾಗಿ ಜೋಡಿಸಿಟ್ಟರು.

`ನಾವು ವೃತ್ತಿಪರ ಕ್ರಿಕೆಟಿಗರು. ಒತ್ತಡವನ್ನು ಸಹಿಸಿಕೊಳ್ಳಬೇಕು. ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಬೇಕು. ಅದು ಅನಿವಾರ್ಯವೂ ಆಗಿದೆ. ಹೆಚ್ಚು ಪಂದ್ಯಗಳನ್ನು ಆಡಲು ಮಾನಸಿಕವಾಗಿ ಸಜ್ಜಾಗುವುದು ಮಾತ್ರ ಮುಂದಿರುವ ಒಂದೇ ಮಾರ್ಗ. ಈ ವಿಷಯದಲ್ಲಿ ಸಹಾನುಭೂತಿಯನ್ನು ನಿರೀಕ್ಷೆ ಮಾಡಲಾಗದು~ ಎಂದು ಹೇಳಿದರು.

`ದೇಶವನ್ನು ಪ್ರತಿನಿಧಿಸುತ್ತಿದ್ದೇವೆ. ನಮ್ಮ ಮೇಲಿನ ಜವಾಬ್ದಾರಿಯೂ ದೊಡ್ಡದು. ಈ ಕ್ರಿಕೆಟ್ ಋತು ಸವಾಲಿನದ್ದು. ಗಟ್ಟಿಯಾಗಿರಬೇಕು-ದಿಟ್ಟತನದಿಂದ ಆಡಬೇಕು. ಅದೊಂದೇ ಉದ್ದೇಶ. ಬೇರೆ ಮಾತಿಗೆ ಅವಕಾಶವೇ ಇಲ್ಲ~ ಎಂದ ದೋನಿ `ಈ ಋತುವಿನ ಕಾರ್ಯಾಚರಣೆಯನ್ನು ಶ್ರೀಲಂಕಾದಲ್ಲಿ ಆರಂಭಿಸುತ್ತಿದ್ದೇವೆ. ವಿಜಯದೊಂದಿಗೆ ಮೊದಲ ಹೆಜ್ಜೆ ಇಡುವುದು ನಮ್ಮ ಗುರಿ~ ಎಂದು ತಿಳಿಸಿದರು.

`ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಶ್ರೀಲಂಕಾದಲ್ಲಿಯೇ ಟ್ವೆಂಟಿ-20 ವಿಶ್ವಕಪ್ ನಡೆಯಲಿದೆ. ಅದಕ್ಕೂ ಮುನ್ನ ಆ ದೇಶದಲ್ಲಿ ಆಡುವುದು ಪ್ರಯೋಜನಕಾರಿ~ ಎಂದ ಮಹಿ `ಲಂಕಾದಲ್ಲಿ ಒಂದೇ ಕಡೆಗೆ ಎಲ್ಲ ಪಂದ್ಯಗಳನ್ನು ಆಡುತ್ತಿಲ್ಲ. ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಪ್ರಯಾಣ ಮಾಡುವುದೂ ಪ್ರಯಾಸ. ಆದರೂ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಉತ್ತಮ ಪ್ರದರ್ಶನ ನೀಡುತ್ತೇವೆ~ ಎಂದು ವಿಶ್ವಾಸದಿಂದ ನುಡಿದರು.

ಪ್ರದರ್ಶನ ಮಟ್ಟ ಹೆಚ್ಚಾಗುವಲ್ಲಿ ನಾಯಕನ ಪಾತ್ರವೇನು ಎಂದು ಕೇಳಿದಾಗ `ಯಾವುದೇ ತಂಡದ ನೇತೃತ್ವ ವಹಿಸಿದರೂ ಲಭ್ಯವಿರುವ ಆಟಗಾರರ ಬಲದಿಂದಲೇ ಮುಂದೆ ಸಾಗಬೇಕು. ಈ ಹಂತದಲ್ಲಿ ವೈಯಕ್ತಿಕ ಕೊಡುಗೆಯೂ ಮಹತ್ವದ್ದಾಗುತ್ತದೆ. ಬೌಲರ್‌ಗಳು ಪ್ರಭಾವಿ ಆಗಬೇಕು. ಬ್ಯಾಟ್ಸ್‌ಮನ್‌ಗಳು ಜೊತೆಯಾಟ ಬೆಳೆಸಬೇಕು. ಅದರ ಹೊರತಾಗಿ ಯಶಸ್ಸು ಸಾಧ್ಯವಾಗದು~ ಎಂದರು.

`ಲಂಕಾ ವಿರುದ್ಧದ ಸರಣಿಯ ಯೋಜನೆ ಏನೆಂದು ಇಲ್ಲಿ ಹೇಳಲು ಆಗದು. ಆದರೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆ ಈ ಮೂರೂ ವಿಭಾಗದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಬೇಕೆಂದು ಮಾತ್ರ ಹೇಳಬಲ್ಲೆ~ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.