ಸೋಮವಾರ, ಏಪ್ರಿಲ್ 19, 2021
23 °C

ಪಿಯು ಉಪನ್ಯಾಸಕರಿಂದ ಮೌಲ್ಯಮಾಪನ ಬಹಿಷ್ಕಾರ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ವೇತನ ನೀಡಿಕೆಯಲ್ಲಿ ತಾರತಮ್ಯ ನಡೆದಿದ್ದು, ಕೂಡಲೇ ಮಧ್ಯಂತರ ಪರಿಹಾರ ನೀಡಬೇಕು. ಹಾಗೆಯೇ ಉಪನ್ಯಾಸಕರ ಹುದ್ದೆಯನ್ನು 1ನೇ ದರ್ಜೆಗೆ ಸೇರಿಸಬೇಕು. ಇಲ್ಲದಿದ್ದಲ್ಲಿ ಶುಕ್ರವಾರದಿಂದ (ಏ. 8) ಆರಂಭವಾಗುವ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಲಾಗುವುದು’ ಎಂದು ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಎಚ್ಚರಿಕೆ ನೀಡಿದೆ.ನಗರದಲ್ಲಿ ಬುಧವಾರ ಪತಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ‘ರಾಜ್ಯ ಸರ್ಕಾರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ವೇತನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. 12 ವರ್ಷಗಳಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳಾಗಲೀ, ಶಿಕ್ಷಣ ಸಚಿವರಾಗಲೀ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.‘4ನೇ ವೇತನ ಆಯೋಗದಲ್ಲಿ 2ನೇ ದರ್ಜೆಯ ಅಧಿಕಾರಿಗಳನ್ನು ಮೊದಲನೇ ದರ್ಜೆಗೆ ಸೇರಿಸಿ ವೇತನ ಪರಿಷ್ಕರಣೆ ಮಾಡಲಾಗಿದೆ. ಆದರೆ ಪದವಿ ಪೂರ್ವ ಉಪನ್ಯಾಸಕರಿಗೆ ಯಾವುದೇ ಬಡ್ತಿಯಾಗಲಿ, ವೇತನ ಪರಿಷ್ಕರಣೆಯಾಗಲಿ ಮಾಡಿಲ್ಲ. ಒಮ್ಮೆ ಉಪನ್ಯಾಸಕರಾಗಿ ನೇಮಕವಾದವರು ಯಾವುದೇ ಬಡ್ತಿ ದೊರೆಯದೆ ಹಾಗೆಯೇ ನಿವೃತ್ತಿಯಾಗುತ್ತಿದ್ದಾರೆ’ ಎಂದರು.‘ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಪದವಿ ಪೂರ್ವ ಉಪನ್ಯಾಸಕರು ರೂ 30 ಸಾವಿರ ವೇತನ ಪಡೆಯುತ್ತಿದ್ದಾರೆ. ರಾಜ್ಯದ ಉಪನ್ಯಾಸಕರ ವೇತನಕ್ಕೆ ಹೋಲಿಸಿದರೆ ರೂ 10 ಸಾವಿರದಷ್ಟು ಅಂತರವಿದೆ. ನೆರೆ ರಾಜ್ಯಗಳ ಮಾದರಿಯಲ್ಲಿ ವೇತನ ನಿಗದಿ ಮಾಡಬೇಕು’ ಎಂದು ಕೋರಿದರು.ಸಂಘದ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹಮದ್ ಮಾತನಾಡಿ,  ‘ಬೇಡಿಕೆ ಪೂರೈಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ಹಿಂದೆ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ  ಸರ್ಕಾರ ಯಾವುದೇ ಬೇಡಿಕೆಗೆ ಸ್ಪಂದಿಸಿಲ್ಲ. ನೂತನವಾಗಿ ನೇಮಕವಾದ ಉಪನ್ಯಾಸಕರಿಗೂ ಈಗಾಗಲೇ ಸೇವೆಯಲ್ಲಿರುವ ಉಪನ್ಯಾಸಕರಿಗೂ ವೇತನದಲ್ಲಿ ಸುಮಾರು ರೂ 10 ಸಾವಿರ ತಾರತಮ್ಯವಿದೆ. ಸರ್ಕಾರ ಬೇಡಿಕೆಗೆ ಮಣಿಯದಿದ್ದರೆ ರಾಜ್ಯದಲ್ಲಿರುವ 44 ಪರೀಕ್ಷಾ ಕೇಂದ್ರಗಳಲ್ಲಿ ಮೌಲ್ಯಮಾಪನ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲು ಎಲ್ಲಾ ಉಪನ್ಯಾಕರು ಸಹಮತ ಸೂಚಿಸಿದ್ದಾರೆ’ ಎಂದು ಹೇಳಿದರು.‘ಸರ್ಕಾರ ವೇತನ ಪರಿಷ್ಕರಣೆಗೆ ಪ್ರತ್ಯೇಕ ಸಮಿತಿ ರಚನೆ ಮಾಡಬೇಕು. ಅರೆಕಾಲಿಕ ಉಪನ್ಯಾಸಕರು ಸಲ್ಲಿಸಿದ ಹಿಂದಿನ ಸೇವೆಯನ್ನು ನಿವೃತ್ತಿಗೆ ಪರಿಗಣಿಸಬೇಕು. ಎಂ.ಫಿಲ್ ಮತ್ತು ಪಿಎಚ್.ಡಿ ಪದವಿ ಪಡೆದ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು’ ಎಂದು ಸಂಘದ ಕಾರ್ಯಾಧ್ಯಕ್ಷ ಎಸ್.ಎಚ್. ಪ್ರಕಾಶ್ ಅಗ್ರಹಿಸಿದರು. ಉಪಾಧ್ಯಕ್ಷ ನಾರಾಯಣಪ್ಪ, ಸಂಘಟನಾ ಕಾರ್ಯದರ್ಶಿ ಶಿವರಾವ ಮಾಲೀಪಾಟೀಲ, ಕೋಶಾಧ್ಯಕ್ಷೆ ವಿಜಯಾ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.