ಭಾನುವಾರ, ಜುಲೈ 3, 2022
24 °C
ಫಿನ್ಲೆಂಡ್‌ ದೇಶದ ಶಿಕ್ಷಣ ವ್ಯವಸ್ಥೆಗೆ ವಿಶ್ವಾಸವೇ ತಳಹದಿ

ಪುಟ್ಟ ರಾಷ್ಟ್ರದ ಶಿಕ್ಷಣದ ಪಾಠ

ಡಾ.ಎಚ್.ಬಿ. ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

ದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ರಚನೆಗೆ ಸಂಬಂಧಿಸಿದಂತೆ ಚರ್ಚೆ, ಕಾರ್ಯಾಗಾರಗಳು ಸಾಗಿವೆ. ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ...  ಹೀಗೆ ವಿವಿಧ ಹಂತಗಳಲ್ಲಿ ಜನಸಾಮಾನ್ಯರಿಂದ ಹಿಡಿದು ತಜ್ಞರವರೆಗೆ ಎಲ್ಲರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ  ಮೂಲಕ ನೀತಿ ರಚನೆಯ ಕಾರ್ಯ ಸಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಇತರೆ ರಾಷ್ಟ್ರಗಳಲ್ಲಿ ಶಿಕ್ಷಣ ಪದ್ಧತಿಯು ಹೇಗಿದೆಯೆಂಬ ಅಂಶವನ್ನು ಗಮನಿಸಿದರೆ ನಮ್ಮ ರಾಷ್ಟ್ರದ ಶಿಕ್ಷಣ ನೀತಿ ಇನ್ನಷ್ಟು ಅರ್ಥಪೂರ್ಣವಾಗಿ ರೂಪಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ  ಪುಟ್ಟ ರಾಷ್ಟ್ರ ಫಿನ್ಲೆಂಡ್‌ನಲ್ಲಿರುವ ಶಿಕ್ಷಣ ಪದ್ಧತಿ ಯಾವುದೇ ರಾಷ್ಟ್ರಕ್ಕೆ ಮಾದರಿಯಾಗಬಲ್ಲದು.ಶಿಕ್ಷಣ ಪದ್ಧತಿ, ಶಿಕ್ಷಣದ ಗುಣಮಟ್ಟದ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಸುದ್ದಿಯಲ್ಲಿರುವ ರಾಷ್ಟ್ರ ಫಿನ್ಲೆಂಡ್‌. ಕರ್ನಾಟಕದ ಜನಸಂಖ್ಯೆಯ ಶೇ 10ಕ್ಕಿಂತಲೂ ಕಡಿಮೆ ಜನಸಂಖ್ಯೆಯಿರುವ ಫಿನ್ಲೆಂಡ್‌, ವಿಶಿಷ್ಟ, ಮಕ್ಕಳ ಸ್ನೇಹಿ ಶಿಕ್ಷಣ ಪದ್ಧತಿಯನ್ನು ಹೊಂದಿದೆ. ವಿಶ್ವಸಂಸ್ಥೆ ಪ್ರಕಟಿ ಸುವ ಮಾನವ ಅಭಿವೃದ್ಧಿ ಸೂಚಕದಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವ ಈ ದೇಶದ ಸಾಕ್ಷರತೆ ಶೇ 100ರಷ್ಟಿದೆ. ಖಾಸಗಿ ಶಾಲೆಗಳು ಅತ್ಯಂತ ವಿರಳ ಸಂಖ್ಯೆಯಲ್ಲಿದ್ದು, ಖಾಸಗಿ ಶಾಲೆಯೂ ಸೇರಿದಂತೆ ಈ ದೇಶದ ಯಾವುದೇ ಶಾಲೆಯಲ್ಲಿ ಟ್ಯೂಷನ್ ಫೀ ಇಲ್ಲವೇ ಇಲ್ಲ. ಫಿನ್ಲೆಂಡ್‌ ಶಿಕ್ಷಣ ಪದ್ಧತಿಗೆ ಅಗತ್ಯ ಸುಧಾರಣೆಗಳನ್ನು ತರಲು 1920ರಿಂದಲೇ ದಿಟ್ಟ ಕ್ರಮಗಳನ್ನು ತೆಗೆದುಕೊ ಳ್ಳಲು ಆರಂಭಿಸಿತು. 1920ರಲ್ಲಿ ಶಿಕ್ಷಣದ ಕುರಿತ ಪ್ರಥಮ ರಾಷ್ಟ್ರೀಯ ಕಾನೂನು ರೂಪಿಸಿ, ಜಾರಿಗೊಳಿಸಿತು. ಬಳಿಕ 1980ರಲ್ಲಿ ದೂರದೃಷ್ಟಿಯುಳ್ಳ ಶಿಕ್ಷಣ ನೀತಿಯನ್ನು ಜಾರಿಗೊಳಿಸಿತು. ಹೀಗಾಗಿ ನೀತಿ, ಕಾರ್ಯಕ್ರಮಗಳಲ್ಲಿ ಪದೇ ಪದೇ  ಮಾರ್ಪಾಡುಗಳನ್ನು ತರುವ ಅಗತ್ಯ ಎದು ರಾಗಲಿಲ್ಲ.  ಈ ಕಾಣ್ಕೆಯ ಸಾಕಾರಕ್ಕೆ ವ್ಯವಸ್ಥಿತವಾದ ಕಾರ್ಯನೀತಿ ಜಾರಿ ಮೂಲಕ ಸುಭದ್ರ ಶಿಕ್ಷಣ ವ್ಯವಸ್ಥೆ ಯನ್ನು ಯಶಸ್ವಿಯಾಗಿ ಕಟ್ಟಿಕೊಂಡಿದೆ. ಜ್ಞಾನಾಧಾರಿತ ಆರ್ಥಿಕತೆ, ಸಂಶೋಧನೆ, ಅಭಿವೃದ್ಧಿಗಾಗಿ ಅತಿಹೆಚ್ಚು ಹೂಡಿಕೆ ಈ ದೇಶದ ಶಿಕ್ಷಣ ಪದ್ಧತಿಗೆ ಪೂರಕವಾಗಿದೆ. ಭಾರತ, ಅಮೆರಿಕ ಸೇರಿದಂತೆ ಹೆಚ್ಚಿನ ರಾಷ್ಟ್ರಗಳ ನಂಬಿಕೆಯು ಮಕ್ಕಳು ಹೆಚ್ಚು ಹೆಚ್ಚು ಕಲಿಕೆಯಲ್ಲಿ ನಿರತರಾಗಿರಬೇಕೆಂಬುದಾಗಿದೆ. ಇದರ ಜತೆ ಈ ದೇಶಗಳಲ್ಲಿ ಶಿಕ್ಷಕರ ಬಿಡುವಿಲ್ಲದ ಬೋಧನಾ ಕಾರ್ಯಚಟುವಟಿಕೆ, ಮಕ್ಕಳನ್ನು ಬೆಂಬಲಿಸಲು ಪೋಷಕರ ದಣಿವರಿಯದ ಶ್ರಮ, ಇಲಾಖೆಯ ಅಧಿಕಾರಿಗಳ ನಿರಂತರ ಸಭೆಗಳು, ಮಕ್ಕಳಿಗೆ ನಿರಂತರ ಪರೀಕ್ಷೆಗಳು, ಶೈಕ್ಷಣಿಕ ತಪಾಸಣೆ– ಶಾಲಾ ಭೇಟಿ, ವೈವಿಧ್ಯಮಯ ಕಾರ್ಯಕ್ರಮ ಇತ್ಯಾದಿಗ ಳಿಂದ ದೇಶದ ಶಿಕ್ಷಣ ವ್ಯವಸ್ಥೆ ಶಾಲೆಗಳಿಂದ ಹಿಡಿದು, ರಾಷ್ಟ್ರ ಹಂತದ ಕಚೇರಿಗಳವರೆಗೆ ನಿರಂತರವಾಗಿ ತುರ್ತು ಪರಿಸ್ಥಿತಿಯ ರೀತಿಯ ಸನ್ನಿವೇಶಗಳಿಂದ ಕಾರ್ಯನಿರ್ವ ಹಿಸುವುದನ್ನು ಗಮನಿಸಬಹುದಾಗಿದೆ.ಆದರೆ, ಫಿನ್ಲೆಂಡ್‌ ನಲ್ಲಿ ಇವೆಲ್ಲವೂ ತದ್ವಿರುದ್ಧವೆಂಬಂತಿವೆ. ಈ ದೇಶವು ಕಡಿಮೆಯೇ ಹೆಚ್ಚು ಎಂಬ ಮೌಲ್ಯವನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡಿದೆ. ಈ ಮೌಲ್ಯ ಬರೀ ಶಿಕ್ಷಣ ಕ್ಷೇತ್ರಕ್ಕಷ್ಟೆ ಸೀಮಿತವಾಗಿಲ್ಲ.  ಆ ದೇಶದ ಜನರ ಜೀವನ ಮೌಲ್ಯವೇ ಆಗಿದೆ. ಅಲ್ಲಿನ ಜನರದು ಸರಳ ಜೀವನ. ಈ ದೇಶದ ಸಂಸ್ಕೃತಿಯಲ್ಲಿಯೇ ಓದುವ, ಅಧ್ಯಯನ ಕೈಗೊಳ್ಳುವ ಶೈಕ್ಷಣಿಕ ವಾತಾವರಣ ಹಾಸುಹೊಕ್ಕಾಗಿದೆ. ವಿಶ್ವದಲ್ಲಿಯೇ ಅತ್ಯುತ್ತಮವಾಗಿ ಓದುವ ಮಕ್ಕಳು ಫಿನ್ನಿಷ್ ಮಕ್ಕಳಾಗಿರುವುದೇ ಇದಕ್ಕೆ ಸಾಕ್ಷಿ. ಅಲ್ಲಿ  ಮಗುವಿನ ಜನನವಾಗುತ್ತಿದ್ದಂತೆಯೇ ಹೆರಿಗೆ ಕಿಟ್ ಜತೆ ಮೂರು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.ಮಕ್ಕಳ ಜನನದಿಂದ ಪ್ರಾರಂಭವಾಗುವ ಈ ಪುಸ್ತಕ ಸಂಸ್ಕೃತಿ ಅವರ ಜೀವನ ಪರ್ಯಂತ ಮುಂದುವರಿಯುತ್ತದೆ. ಮಕ್ಕಳು ಎಂಟು ತಿಂಗಳಿನಿಂದ ಐದು ವರ್ಷದವರೆಗೆ ಸರ್ಕಾರದಿಂದ ಉಚಿತವಾಗಿ ದೊರೆಯುವ ಬಾಲ್ಯಪೂರ್ವ ಆರೈಕೆಯನ್ನು ಪಡೆಯುತ್ತಾರೆ. ಆರರಿಂದ ಏಳನೇ ವಯಸ್ಸಿನವರೆಗೆ ಶಾಲಾಪೂರ್ವ ಶಿಕ್ಷಣ ಪಡೆಯುತ್ತಾರೆ.ಏಳರಿಂದ 17ನೇ ವರ್ಷದವರೆಗೆ ಕಡ್ಡಾಯ ಸಮಗ್ರ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಾರೆ. 10ನೇ ತರಗತಿಯಿಂದ 12ನೇ ತರಗತಿವರೆಗೆ ಶೈಕ್ಷಣಿಕವಾಗಿ ಮುಂದುವರಿಯಲು ಇಚ್ಛಿಸುವವರು ಉನ್ನತ ಪ್ರೌಢ ಶಿಕ್ಷಣ ಹಂತಕ್ಕೂ, ವೃತ್ತಿಯ ಆಸಕ್ತಿಯಿರುವವರು ಪ್ರತ್ಯೇಕವಾದ ವೃತ್ತಿ ಶಿಕ್ಷಣ ಹಂತದಲ್ಲಿ ದಾಖಲಾಗಿ, ಕಲಿಯುತ್ತಾರೆ. ಈ ಪ್ರತ್ಯೇಕ ಮಾರ್ಗಗಳಲ್ಲಿ ಮುಂದೆ ಕಲಿಯಲಿಚ್ಛಿಸುವವರು ಉನ್ನತ ಹಂತದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಅಥವಾ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ.ಅಲ್ಲಿನ ಶಿಕ್ಷಣ ವ್ಯವಸ್ಥೆ ನಮ್ಮ ದೇಶದ ಮಕ್ಕಳು ಮತ್ತು ಶಿಕ್ಷಕರಿಗೂ ಹೊಂದಿಕೆಯಾಗುವ ರೀತಿಯಲ್ಲಿದೆ. ಮಕ್ಕಳು ಚೆನ್ನಾಗಿ  ನಿದ್ರೆ ಮಾಡಬೇಕೆಂಬ ಕಾರಣಕ್ಕೆ ಶಾಲೆಗಳನ್ನು ಬೆಳಿಗ್ಗೆ ಒಂಬತ್ತು ಗಂಟೆಗಿಂತ ಮೊದಲು ಪ್ರಾರಂಭಿಸುವಂ ತೆಯೇ ಇಲ್ಲ. ಒಂಬತ್ತಕ್ಕೆ   ಪ್ರಾರಂಭಿಸಿದರೂ ಮಧ್ಯಾಹ್ನ ಎರಡು ಗಂಟೆಗೇ ಶಾಲೆಗಳು ಮುಕ್ತಾಯವಾಗುತ್ತವೆ. ಹೆಚ್ಚೆಂದರೆ ದಿನಕ್ಕೆ ತಲಾ 75 ನಿಮಿಷಗಳ ಮೂರು ಅಥವಾ ನಾಲ್ಕು ಪೀರಿಯಡ್‌ಗಳು ಇರುತ್ತವೆ.

ಈ ಪೀರಿಯಡ್‌ಗಳ ನಡುವೆಯೂ ಮಕ್ಕಳಿಗೆ ವಿರಮಿಸಲು ಬಿಡುವು ಇರುತ್ತದೆ. ಶಿಕ್ಷಕರು  ಬೋಧನಾ ಕಾರ್ಯಗಳನ್ನು ಆರಾಮಾಗಿ ನಿರ್ವಹಿಸುತ್ತಾರೆ. ಶಿಕ್ಷಕರಿಗೆ ತಾವು ಬೋಧಿಸುವ ಪೀರಿಯಡ್ ದಿನದಲ್ಲಿ ತಡವಾಗಿ ಆರಂಭವಾಗುವಂತಿದ್ದರೆ ಶಾಲೆಗೆ ನಿಧಾನವಾಗಿ, ಆ  ಸಮಯಕ್ಕೇ  ಹಾಜರಾಗಬಹುದು. ಇನ್ನೊಂದು ಪ್ರಮುಖವಾದ ಅಂಶವೆಂದರೆ ಆ ದೇಶದಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತ 1:20 ಅಥವಾ 25  ಇದೆ. ಪ್ರಾಥಮಿಕ ಶಾಲೆಯಲ್ಲಿ ಒಬ್ಬನೇ ಶಿಕ್ಷಕ ನಿರಂತರ ಆರು ವರ್ಷಗಳ ಅವಧಿಗೆ ಅದೇ ಗುಂಪಿನ ವಿದ್ಯಾರ್ಥಿಗಳಿಗೆ ಬೋಧಿಸುವ ವ್ಯವಸ್ಥೆಯಿದೆ. ವಿದ್ಯಾರ್ಥಿಗಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋದಂತೆಲ್ಲಾ ಅದೇ ಶಿಕ್ಷಕ ನಂತರದ ತರಗತಿಗಳಲ್ಲಿಯೂ ಶಿಕ್ಷಕನಾಗಿ ಮುಂದುವರಿಯುತ್ತಾನೆ.ಇದರಿಂದ ಒತ್ತಡವಿಲ್ಲದೆ ಶಿಕ್ಷಕರು  ತಮ್ಮ ಬೋಧನಾ ಕೆಲಸ ಮುಂದುವರಿಸುತ್ತಾರೆ. ವಿದ್ಯಾರ್ಥಿಯ ಮಿತಿ–ಸಾಮರ್ಥ್ಯ ಅರಿಯಲು, ಅವರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಲು ಇದರಿಂದ  ಸಾಧ್ಯವಾಗುತ್ತದೆ. ಪ್ರಾಥಮಿಕ ಶಾಲಾ ಹಂತದ ಬೋಧನೆಯಲ್ಲಿ ಆಸಕ್ತಿಯಿರುವ ಪ್ರತಿಭಾವಂತ, ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ಉತ್ತಮ  ವೇತನ ನೀಡಲಾಗುತ್ತದೆ. ಪಠ್ಯಕ್ರಮ ಹೊರೆಯೆನಿಸದು.  ಕಲಿಸಬೇಕಾದ ವಿಷಯಗಳು ಕಡಿಮೆ.ಆದರೆ ಆಸಕ್ತಿದಾಯಕವಾಗಿರುವಂತೆ ರೂಪಿಸಲಾಗಿದೆ. ಪಠ್ಯಕ್ರಮದ ಆಯ್ಕೆ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಶಾಲೆಗಳಿಗೆ ಸ್ವಾಯತ್ತತೆ ಇದೆ. ಇಡೀ ಶಿಕ್ಷಣ ವ್ಯವಸ್ಥೆಗೆ  ವಿಶ್ವಾಸವೇ ತಳಹದಿ.  ಶಿಕ್ಷಕರು ಕಾರ್ಯನಿರ್ವಹಿಸುತ್ತಾರೊ ಇಲ್ಲವೊ ಎಂಬುದನ್ನು ನೋಡಲು ಬಿಗಿ ನಿಯಮಗಳಾಗಲಿ, ತಪಾಸಣೆಗಳಾಗಲಿ ಇರುವುದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಈ ಹೊತ್ತಿನಲ್ಲಿ ಕೆಲವು ಮೂಲ ಪಾಠಗಳನ್ನು ಫಿನ್ಲೆಂಡ್‌ನಿಂದ ನಾವು ಪಡೆಯಬಹುದು. ಉತ್ತಮ ಶಿಕ್ಷಕರ ನೇಮಕ, ಪಠ್ಯಪುಸ್ತಕದ ಹೊರೆ ಇಳಿಕೆ, ಶಾಲೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ  ನೀಡಿಕೆ,  ಖಾಸಗಿ ಶಾಲೆಗಳ ಮೇಲೆ ನಿಯಂ ತ್ರಣ, ವೃತ್ತಿ ಶಿಕ್ಷಣಕ್ಕೆ ಒತ್ತು  ಮುಂತಾದ ಅಂಶಗಳನ್ನು  ಅಳವಡಿಸಿಕೊಳ್ಳಲು ಯೋಚಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.