ಶುಕ್ರವಾರ, ಮೇ 7, 2021
25 °C

ಪುರಂದರ ನಮನ ಮಧುರ ಗಾಯನ

ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ನಾದ-ನೃತ್ಯ

ಬೆಂಗಳೂರು ಲಲಿತಕಲಾ ಪರಿಷತ್‌ನಲ್ಲಿ ಕಳೆದ ಶುಕ್ರವಾರ ಹಾಡಿದ ಸುಬ್ಬಲಕ್ಷ್ಮೀ ಕೃಷ್ಣಮೂರ್ತಿ ವೃತ್ತಿಯಲ್ಲಿ ವಿಜ್ಞಾನಿ. ಬಾಹ್ಯಾಕಾಶ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಬಾಲ್ಯದಿಂದಲೂ ಸಂಗೀತಾಭ್ಯಾಸ ಮಾಡುತ್ತಿರುವ ಕಲಾವಿದೆ. ಕೆಲಕಾಲದಿಂದ ಎಂ.ಎಸ್. ಶೀಲಾ ಅವರಿಂದ ಪ್ರೌಢ ಶಿಕ್ಷಣ ಪಡೆಯುತ್ತಿದ್ದಾರೆ. ನಾಲ್ಕಾರು ಕಡೆ ಹಾಡಿರುವರಲ್ಲದೆ ಕೇರಳ ಸಂಗೀತ ನಾಟಕ ಅಕಾಡೆಮಿಯಿಂದ ಬಹುಮಾನವನ್ನೂ ಗಳಿಸಿದ್ದಾರೆ.ಸುಬ್ಬಲಕ್ಷ್ಮಿಯವರು ಪ್ರಸ್ತುತ ಕಾರ್ಯಕ್ರಮದಲ್ಲಿ ಭಿನ್ನ ವಾಗ್ಗೇಯಕಾರರ, ವಿಭಿನ್ನ ಭಾಷೆಗಳ ರಾಮನ ಮೇಲಿನ ರಚನೆಗಳನ್ನು ಪ್ರಸ್ತುತ ಪಡಿಸಿದರು. ಸಂಸ್ಕೃತ, ಕನ್ನಡ, ತೆಲುಗು, ತಮಿಳು ಭಾಷೆಗಳ ರಾಮನ ಮೇಲಿನ ಉತ್ತಮ ಕೃತಿಗಳನ್ನು ಮಾಧುರವಾಗಿ ಸಾದರ ಪಡಿಸಿದರು.

 

ಪುರಂದರ ದಾಸ, ತ್ಯಾಗರಾಜ, ಸದಾಶಿವ ಬ್ರಹ್ಮೇಂದ್ರ, ಭದ್ರಾಚಲ ರಾಂದಾಸ್, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಮುಂತಾದವರ ಸುಂದರ ಕೃತಿಗಳು ಕಛೇರಿಯ ಸ್ವಾರಸ್ಯವನ್ನು ಇಮ್ಮಡಿಗೊಳಿಸಿದವು. ಕೇಳುಗರಿಗೆ ಪ್ರಿಯವಾದ ಕೀರ್ತನೆಗಳಲ್ಲಿ `ಬ್ರೋಚೇವಾರೆವರುರಾ~ ಸಹ ಒಂದು. ಸರ್ವಕಾಲಕ್ಕೂ ಮೋಹಕವಾದ ಮೋಹನ ರಾಗವನ್ನು ಕ್ರಮಬದ್ಧವಾಗಿ ಬೆಳೆಸಿ ರಾಗದ ಸುಂದರ ಚಿತ್ರ ಬಿಡಿಸಿದರು.

 

ತ್ಯಾಗರಾಜರ ಕುಮಾರಿಯ ವಿವಾಹ ಸಂದರ್ಭದಲ್ಲಿ ಕೋದಂಡರಾಮನ ಸುಂದರವಾದ ಚಿತ್ರವನ್ನು ಅವರ ಶಿಷ್ಯರಾದ ಲಾಲಾಜಪೇಟೆ ವೆಂಕಟರಮಣ ಭಾಗವತರು ಉಡುಗೊರೆಯಾಗಿ ನೀಡಿದರು.ಆ ಚಿತ್ರವನ್ನು ದರ್ಶಿಸಿದ ತ್ಯಾಗರಾಜರು ಪುಳಕಿತರಾಗಿ, ಭಾವಪರವಶರಾಗಿ ಈ ಕೃತಿಯನ್ನು ಹಾಡಿದರು. ಸ್ವರ ಪ್ರಸ್ತಾರವು ಹಸನಾಗಿದ್ದರೂ ಒಂದು ಸಮ ಪ್ರಮಾಣದಲ್ಲಿ ನೆರವಲ್ ಸೇರಿದ್ದರೆ ಪರಿಣಾಮ ಇನ್ನೂ ಗಾಢವಾಗುತ್ತಿತ್ತು. ಕೇಳತಿ ಮಮ ಹೃದಯೆ, ರಾಮ ಮಂತ್ರವ ಜಪಿಸೊ, ಪಲುಕು ಬಂಗಾರ, ಕರುಣಾ ಜಲದೇ ದಾಶರಥೆ, ಮರಿವೇರೆ ಮುಂತಾದ ಕೃತಿಗಳನ್ನು ತಮ್ಮ ಉತ್ತಮ ಕಂಠದಿಂದ ಹಾಡಿದರು. ನಮ್ಮ ವಾಗ್ಗೇಯಕಾರರು ಕಂಡಿರುವ ರಾಮನ ವೈವಿಧ್ಯಮಯ ಚಿತ್ರವನ್ನು ಬಿಡಿಸುವುದರಲ್ಲಿ ಸುಬ್ಬಲಕ್ಷ್ಮಿ ಬಹುತೇಕ ಯಶಸ್ವಿಯಾದರು.ಹೆಚ್ಚಿನ ಅನುಭವದಿಂದ ಅವರ ಸಂಗೀತ ಇನ್ನೂ ಉನ್ನತಿಗೆ ಏರಬಹುದು. ಪಿಟೀಲಿನಲ್ಲಿ ಎಸ್. ಯಶಸ್ವಿ, ಮೃದಂಗದಲ್ಲಿ ಬಿ. ಧ್ರುವರಾಜ್ ಹಾಗೂ ಮೋರ್ಚಿಂಗ್‌ನಲ್ಲಿ ಎಲ್. ಭೀಮಾಚಾರ್ ಉತ್ತಮ ನೆರವಿತ್ತರು.ಗಾಢ ಪರಿಣಾಮದ ವೀಣೆ

ಶೇಷಾದ್ರಿಪುರಂ ರಾಮ ಸೇವಾ ಸಮಿತಿಯಲ್ಲಿ ವೀಣೆ ನುಡಿಸಿದ ಜಯಂತಿ ಕುಮರೇಶ್ ಕಲಾಭಿಮಾನಿಗಳಿಗೆ ಸುಪರಿಚಿತರೇ! ತನ್ನ ಪ್ರಖರ ವಾದನದಿಂದ ಜಯಂತಿ ಗಣ್ಯ ಸ್ಥಾನವನ್ನು ಗಳಿಸಿದ್ದಾರೆ. ಪ್ರಖ್ಯಾತ ಸಂಗೀತ ಮನೆತನದಿಂದ ಬಂದು, ತನ್ನ ಸಾಧನೆ-ಪ್ರತಿಭೆಗಳಿಂದ ಚಿಕ್ಕ ವಯಸ್ಸಿನಲ್ಲೇ ಪ್ರತಿಷ್ಠಿತ ಸ್ಥಾನ ಸಂಪಾದಿಸಿದ್ದಾರೆ.ಪ್ರಾರಂಭದ ವರ್ಣದಿಂದಲೇ (ಲಾಲ್‌ಗುಡಿ ಜಯರಾಮನ್) ಸಭೆಯ ಸಂಪೂರ್ಣ ಗಮನವನ್ನು ಜಯಂತಿ ಹಿಡಿದಿಟ್ಟುಕೊಳ್ಳುವುದರಲ್ಲಿ ಯಶಸ್ವಿಯಾದರು. ಸಾಮಾನ್ಯವಾದ ರಘುನಾಯಕ ಕೃತಿಗೆ ಕಿರು ಸ್ವರಪ್ರಸ್ತಾರ ಮಾಡಿ, ಇನ್ನೊಂದು ಹೃದಯಂಗಮ ಕೀರ್ತನೆ ಮೇರು ಸಮಾನ ತೆಗೆದುಕೊಂಡರು.ಈ ರಚನೆಯಲ್ಲಿ ತ್ಯಾಗರಾಜರ ಭಾವನಾ ಸೌಂದರ್ಯ, ಮಧುರಾನುಭೂತಿ, ಲಕ್ಷ್ಯಸಿದ್ದಿಗಳು ಹೃದಯಂಗಮವಾಗಿ ವರ್ಣಿತವಾಗಿದೆ. ಶ್ರೀರಂಜನಿ ರಾಗದ ಪರಿಚಿತ ಕೃತಿಗಳಲ್ಲಿ  ಬ್ರೋಚೇವಾರೆವರೇ ರಘುಪತೇ ಸಹ ಒಂದು.ಪೂರ್ವಿಕಲ್ಯಾಣಿ ಆಲಾಪನೆಯಲ್ಲಿ ಜೀವಸ್ವರಗಳನ್ನು ಮೀಟುತ್ತಾ ಸಬಲ ಸಂಗತಿಗಳಿಂದ ರಾಗವನ್ನು ಕಟ್ಟಿದ ಬಗೆಯಲ್ಲೇ ಒಂದು ಗಾಢತೆ ಇತ್ತು. ಘನವಾದ ಶಂಕರಾಭರಣ ರಾಗವನ್ನು ಕ್ರಮಬದ್ಧವಾಗಿ ಆಲಾಪಿಸಿ ಕೃತಿಗೆ ಸರಿದರು. ಭಕ್ತಿ ಬಿಚ್ಚಮೀಯವೇ ಕೃತಿಯಲ್ಲಿ ತ್ಯಾಗರಾಜರು ರಾಮಭಕ್ತಿ ಎಂಬ ಭಿಕ್ಷೆಯನ್ನು ಬೇಡಿದ್ದಾರೆ.ಪ್ರಖರ ಮೀಟು, ಸುನಾದ ಹಾಗೂ ಪರಿಣಾಮಕಾರಿ ನಿರೂಪಣೆಗಳಿಂದ ಜಯಂತಿ ಕುಮರೇಶನ್ ವೀಣೆ ಸಭೆಯ ಗೌರವಕ್ಕೆ ಪಾತ್ರವಾಯಿತು. ಈ ಗೌರವದಲ್ಲಿ ಲಯವಾದ್ಯಗಾರರೂ (ಅರ್ಜುನ್ ಕುಮಾರ್ ಮತ್ತು ಗುರುಪ್ರಸನ್ನ) ಪಾಲ್ಗೊಂಡರು.ಪುರಂದರ ನಮನ

ಭೀಮನಕಟ್ಟೆ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಆಶ್ರಯದಲ್ಲಿ ಪುರಂದರ ನಮನ ಹಾಗೂ ದಶಮಾನೋತ್ಸವ ಸಮಾರಂಭಗಳು ದೊಡ್ಡಬೊಮ್ಮಸಂದ್ರದ ಮಠದ ಆವರಣದಲ್ಲಿ ಶನಿವಾರದವರೆಗೆ (ಏ.28) ನಡೆಯಲಿದೆ.ನಗರದ ವಿವಿಧ ಮಂಡಳಿಗಳಿಂದ ಭಜನೆ, ಸಂಗೀತ (ಕರ್ನಾಟಕ, ಹಿಂದೂಸ್ತಾನಿ, ಸುಗಮ) ಸ್ಪರ್ಧೆಗಳು, ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ವರ್ಷದ ಭೀಮಸೇತು ಪುರಂದರ ಪ್ರಶಸ್ತಿಯನ್ನು ಪುತ್ತೂರು ನರಸಿಂಹ ನಾಯಕ್ (ಗಾಯಕರು), ಪ್ರೊ. ಎ.ವಿ. ನಾವಡ (ಸಂಶೋಧಕರು), ಡಾ. ಅನಸೂಯಾದೇವಿ (ದಾಸ ಸಾಹಿತ್ಯ) ಮತ್ತು ಭಾಸ್ಕರ ಶಾಸ್ತ್ರಿ (ಹರಿದಾಸ ಪ್ರಚಾರಕರು)   ಅವರುಗಳಿಗೆ ಶ್ರಿ ರಘುಮಾನ್ಯತೀರ್ಥ ಶ್ರಿಪಾದಂಗಳವರು ಮಂಗಳವಾರ ಪ್ರದಾನ ಮಾಡಿದರು.ನಂತರ ನಡೆದ ಹರಿದಾಸ ಝೇಂಕಾರ  ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಪುತ್ತೂರು ನರಸಿಂಹ ನಾಯಕ್ ಹರಿದಾಸರ ಪದಗಳನ್ನು ಭಕ್ತಿಭಾವದಿಂದ ಹಾಡಿದರು.ಶ್ರಿಪಾದರಾಜರು, ಕನಕದಾಸರು, ಪುರಂದರದಾಸರು, ಗೋಪಾಲದಾಸರು ಮುಂತಾದವರ ದೇವರನಾಮಗಳನ್ನು ಆಯ್ದುದು ಸಂದರ್ಭೋಚಿತವಾಗಿತ್ತು. ಪ್ರಾರಂಭಕ್ಕೆ `ರಥವನೇರಿದ ರಾಘವೇಂದ್ರ~ ಉಚಿತವಾಗಿತ್ತು. ಹಾಗೆಯೇ `ಬಂದಾನೊ ರಾಘವೇಂದ್ರ~ ಭಾವಪೂರ್ಣವಾಗಿ ಹೊಮ್ಮಿತು. ಒಂದು ಸ್ವಾರಸ್ಯಕರ ಅರ್ಥವುಳ್ಳ  ಇಕೊ ನೋಡಿ ಚಿಕ್ಕ ಹನುಮಂತ  ಸಭೆಗೆ ಇಷ್ಟವಾದುದು ಸಹಜವೇ.ಇನ್ನೊಂದು ಅರ್ಥಪೂರ್ಣ ಪದ `ಬಂದೆ ಯಾತಕಮ್ಮ ಲಕುಮಿ~ ಸಹ ಕಾರ್ಯಕ್ರಮಕ್ಕೆ ಒಳ್ಳೆಯ ಸೇರ್ಪಡೆ. ಮುಂದಿನ ಪದಕ್ಕೆ ಮುನ್ನುಡಿಯಾಗಿ ಮಾಡಿದ ಆಲಾಪನೆ ನರಸಿಂಹ ನಾಯಕರ ಸಿರಿಕಂಠವನ್ನು ಹೊರಚೆಲ್ಲಿತು. `ಕಂಡೆ ಕಂಡೆ ನಾ ನರಸಿಂಹನ~- ಪದದಲ್ಲಿ ಅರ್ಥಕ್ಕೆ ತಕ್ಕನಾಗಿ ವೀರ್ಯವತ್ತಾಗಿ ಹಾಡಿದ್ದು ಚೆನ್ನಿತ್ತು.

 

ಗಾಯನಕ್ಕೆ ತಕ್ಕನಾಗಿ ವಾದ್ಯದವರೂ (ವಸಂತ ಕುಂಬ್ಳೆ ಕೀಬೋರ್ಡ್, ಜಯತೀರ್ಥ ತಬಲ ಹಾಗೂ ವೆಂಕಟೇಶ ಪುರೋಹಿತ್ ತಾಳ) ಮೇಳೈಸಿ, ಕಾರ್ಯಕ್ರಮ ಗಾಢ ಪ್ರಭಾವ ಬೀರಿತು.

-

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.